ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಮಾನವೀಯ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಒತ್ತಾಯಿಸಿದ್ದಾರೆ.
ಕಪಿಲ್ ದೇವ್ ಸೇರಿದಂತೆ 22 ಮಂದಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದಿದ್ದು, ಇಮ್ರಾನ್ ಖಾನ್ ಅವರ ವೈದ್ಯಕೀಯ ಚಿಕಿತ್ಸೆ ಹಾಗೂ ಕುಟುಂಬ ಸದಸ್ಯರ ಭೇಟಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶಗಳನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮನವಿ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣಗಳು ಅಥವಾ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದ್ದಲ್ಲ. ಜೈಲಿನಲ್ಲಿರುವ ವ್ಯಕ್ತಿಯ ಮೂಲಭೂತ ಆರೋಗ್ಯ ಮತ್ತು ಮಾನವೀಯ ಹಕ್ಕುಗಳ ದೃಷ್ಟಿಯಿಂದ ಈ ಮನವಿ ಮಾಡಲಾಗಿದೆ ಎಂದು ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್, “ಕಾನೂನು ಎಲ್ಲರಿಗೂ ಒಂದೇ. ಆದರೆ ಜೈಲಿನಲ್ಲಿರುವ ವ್ಯಕ್ತಿಗೆ ಉತ್ತಮ ಚಿಕಿತ್ಸೆ ನೀಡುವುದನ್ನು ತಡೆಯಲು ಯಾವುದೇ ಕಾರಣವಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
“ಅವರು ಹಿಂದೆ ಪ್ರಧಾನಿಯಾಗಿದ್ದರು ಎಂಬ ಕಾರಣಕ್ಕೆ ವಿಶೇಷ ಸೌಲಭ್ಯ ಕೇಳುತ್ತಿಲ್ಲ. ಆದರೆ ಅವರನ್ನು ಇರಿಸಿರುವ ಸ್ಥಳದ ಪರಿಸ್ಥಿತಿ ಹಾಗೂ ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಸಾಕಷ್ಟು ಉತ್ತಮವಾಗಿರಬೇಕು. ಒಬ್ಬ ವ್ಯಕ್ತಿಗೆ ನೀಡಬೇಕಾದ ಕನಿಷ್ಠ ಸೌಲಭ್ಯಗಳಾದರೂ ಅವರಿಗೆ ದೊರೆಯಬೇಕು” ಎಂದು ಕಪಿಲ್ ಹೇಳಿದರು.
ಇಮ್ರಾನ್ ಖಾನ್ ಅವರ ವಿರುದ್ಧದ ಪ್ರಕರಣಗಳ ಸರಿ-ತಪ್ಪುಗಳ ಕುರಿತು ತಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದ ಕಪಿಲ್, ಕ್ರಿಕೆಟ್ ಸಮುದಾಯದ ಮನವಿ ಅವರ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದರು.
“ಕ್ರಿಕೆಟ್ ಆಟಗಾರನಾಗಿ ನಾವು ಪಾಕಿಸ್ತಾನವನ್ನು ಕೇಳಬಹುದು, ಮನವಿ ಮಾಡಬಹುದು. ಅವರಿಗೆ ಉತ್ತಮ ಚಿಕಿತ್ಸೆ ನೀಡಿ. ಕಾನೂನು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವರಿಗೆ ಉತ್ತಮ ವೈದ್ಯಕೀಯ ಆರೈಕೆ ನೀಡಬಹುದು” ಎಂದು ಅವರು ಹೇಳಿದರು.
ಇಮ್ರಾನ್ ಖಾನ್ ತಪ್ಪು ಮಾಡಿದ್ದಾರೆ ಅಥವಾ ಮಾಡಿಲ್ಲ ಎಂಬುದರ ಬಗ್ಗೆ ತಾವು ಮಾತನಾಡುತ್ತಿಲ್ಲ. ಅವರ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ಹೊಂದಿರುವುದಾಗಿ ಕಪಿಲ್ ಸ್ಪಷ್ಟಪಡಿಸಿದರು.
ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತವಾಗಿದ್ದು, ಅವರ ಬಲಗಣ್ಣಿನ ದೃಷ್ಟಿ ಕಡಿಮೆಯಾಗಿದೆ ಅಥವಾ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬ ವರದಿಗಳೂ ಹರಿದಾಡಿವೆ.
ಇದನ್ನೂ ಓದಿ: ಇಮ್ರಾನ್ ಖಾನ್ ಬಂಧನ; ಪಾಕಿಸ್ತಾನದಾದ್ಯಂತ ಭುಗಿಲೆದ್ದ ಆಕ್ರೋಶ
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೂಚಿಸಿರುವ ವೈದ್ಯಕೀಯ ಮಂಡಳಿಯಿಂದ ಸ್ವತಂತ್ರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮಾಜಿ ಕ್ರಿಕೆಟ್ ನಾಯಕರು ಒತ್ತಾಯಿಸಿದ್ದಾರೆ. ಈ ವೈದ್ಯಕೀಯ ಮಂಡಳಿಯಲ್ಲಿ ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರನ್ನೂ ಒಳಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅವರಿಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಮಾಜಿ ಕ್ರಿಕೆಟ್ ನಾಯಕರ ಒತ್ತಾಯ.
ಈ ಮೂಲಕ ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಎದುರಾಳಿಗಳಾಗಿದ್ದ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಜಗತ್ತಿನ ಪ್ರಮುಖ ಮುಖಗಳು, ಇದೀಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯ ಆರೋಗ್ಯದ ವಿಚಾರದಲ್ಲಿ ಮಾನವೀಯ ದೃಷ್ಟಿಕೋನದಿಂದ ಧ್ವನಿ ಎತ್ತಿದ್ದಾರೆ.




