ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚುವುದು ಮತ್ತು ಪ್ರಮುಖ ಹಡಗು ಮಾರ್ಗದ ನಿಯಂತ್ರಣ ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ. ಇದರ ನಡುವೆಯೂ ವಾಷಿಂಗ್ಟನ್‌ನ ಮಾತುಕತೆಯ ಹೇಳಿಕೆಗಳನ್ನು ಬಹಿರಂಗವಾಗಿ ತಳ್ಳಿಹಾಕಿರುವ ಟೆಹ್ರಾನ್, ಉಭಯ ದೇಶಗಳ ನಡುವೆ ಒಪ್ಪಂದದ ಯಾವುದೇ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಇಂಡಿಯಾ ಟುಡೆ ವರದಿ ತಿಳಿಸಿದೆ.
‘ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, ಉಭಯ ದೇಶಗಳ ನಡುವೆ ಪರೋಕ್ಷ ಮಾತುಕತೆಗಳ ಲಕ್ಷಣಗಳು ಕಂಡುಬರುತ್ತಿದ್ದರೂ, ಕದನ ವಿರಾಮ ಒಪ್ಪಂದಕ್ಕೆ ಮರಳಲು ಇರಾನ್ ಅತ್ಯಂತ ಕಠಿಣ ನಿಲುವು ತಳೆದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೇಶದ ನಾಯಕತ್ವದಲ್ಲಿ ತನ್ನ ಹಿಡಿತ ಸಾಧಿಸಿದ್ದು, ಈ ಬೇಡಿಕೆಗಳನ್ನು ಮುಂದಿಡುತ್ತಿದೆ.
ಕಠಿಣ ಸಾರ್ವಜನಿಕ ನಿಲುವಿನ ಹೊರತಾಗಿಯೂ, ಖಾಸಗಿಯಾಗಿ ಟೆಹ್ರಾನ್ ಕೆಲವು ರಿಯಾಯಿತಿಗಳನ್ನು ತೋರುತ್ತಿರುವ ಲಕ್ಷಣಗಳಿವೆ. ಚಾನೆಲ್ 12 ವರದಿಯ ಪ್ರಕಾರ, ಇರಾನ್ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಐದು ವರ್ಷಗಳ ಕಾಲ ಸ್ಥಗಿತಗೊಳಿಸಲು ಮತ್ತು ಯುರೇನಿಯಂ ಪುಷ್ಟೀಕರಣದ ಮಟ್ಟವನ್ನು ಕಡಿಮೆ ಮಾಡಲು ಪರಿಗಣಿಸುವ ಸಾಧ್ಯತೆಯಿದೆ. ಅಲ್ಲದೆ, ಶೇ. 60ರಷ್ಟು ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನುಗಳ ಬಗ್ಗೆ ಚರ್ಚಿಸಲು ಹಾಗೂ ಉಳಿದ ಸೆಂಟ್ರಿಫ್ಯೂಜ್‌ಗಳ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ತಪಾಸಣೆಗೆ ಅವಕಾಶ ನೀಡಲೂ ಮುಂದಾಗಬಹುದು. ಇದರ ಜೊತೆಗೆ, ವಿಶಾಲವಾದ ಒಪ್ಪಂದದ ಭಾಗವಾಗಿ ಹೆಜ್ಬೊಲ್ಲಾ, ಹಮಾಸ್ ಮತ್ತು ಇರಾಕಿ ಉಗ್ರಗಾಮಿ ಗುಂಪುಗಳಂತಹ ಪ್ರಾದೇಶಿಕ ಪ್ರಾಕ್ಸಿ ಗುಂಪುಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಲೂ ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ಮತ್ತೊಂದೆಡೆ, ಇರಾನ್ ಸೇನಾ ವಕ್ತಾರ ಇಬ್ರಾಹಿಂ ಜುಲ್ಫಖಾರಿ ಅಮೆರಿಕದ ನಾಯಕತ್ವವನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ. ಅಮೆರಿಕ ತನ್ನೊಂದಿಗೆ ತಾನೇ ಮಾತುಕತೆ ನಡೆಸುತ್ತಿದೆ ಎಂದು ಟೀಕಿಸಿರುವ ಅವರು, ನಿಮ್ಮ ಆಂತರಿಕ ಹೋರಾಟವು ನಿಮ್ಮೊಂದಿಗೆ ನೀವೇ ಮಾತುಕತೆ ನಡೆಸುವ ಹಂತಕ್ಕೆ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ.
“ನಮ್ಮಂತವರು ನಿಮ್ಮಂತವರೊಂದಿಗೆ ಎಂದಿಗೂ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಪ್ರಾದೇಶಿಕ ಭದ್ರತೆಯನ್ನು ಇರಾನ್ ಸಶಸ್ತ್ರ ಪಡೆಗಳೇ ಖಾತರಿಪಡಿಸುತ್ತವೆ ಎಂಬುದನ್ನು ವಾಷಿಂಗ್ಟನ್ ಒಪ್ಪಿಕೊಳ್ಳುವವರೆಗೆ ಅಮೆರಿಕದ ಹೂಡಿಕೆಗಳು ಮತ್ತು ಯುದ್ಧಪೂರ್ವದ ಇಂಧನ ಬೆಲೆಗಳು ಮರಳಿ ಬರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಬಹಿರಂಗವಾಗಿ ಕಠಿಣ ಬೇಡಿಕೆಗಳು ಹಾಗೂ ಖಾಸಗಿಯಾಗಿ ರಿಯಾಯಿತಿಗಳ ಇಂತಹ ವ್ಯತಿರಿಕ್ತ ಸಂಕೇತಗಳು ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳ ಸಂಕೀರ್ಣತೆಯನ್ನು ಎತ್ತಿ ತೋರಿಸುತ್ತಿವೆ.
ಇದನ್ನು ಓದಿದ್ದೀರಾ? ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ
ಕದನ ವಿರಾಮಕ್ಕೆ ಸಮ್ಮತಿಸಲು ಇರಾನ್ ಅಮೆರಿಕದ ಮುಂದೆ ಪ್ರಮುಖವಾಗಿ ಹಲವು ಕಠಿಣ ಷರತ್ತುಗಳನ್ನು ಇಟ್ಟಿದೆ. ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ಮುಚ್ಚಬೇಕು, ಯುದ್ಧದಿಂದಾದ ಹಾನಿಗೆ ಸೂಕ್ತ ಆರ್ಥಿಕ ಪರಿಹಾರವನ್ನು ನೀಡಬೇಕು ಹಾಗೂ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಇದರ ಜೊತೆಗೆ, ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಪರಿಣಾಮಕಾರಿಯಾಗಿ ಇರಾನ್ ನಿಯಂತ್ರಣಕ್ಕೆ ತರುವ ಹೊಸ ವ್ಯವಸ್ಥೆ ಜಾರಿಯಾಗಬೇಕು ಮತ್ತು ಅಲ್ಲಿ ಹಾದುಹೋಗುವ ಹಡಗುಗಳಿಂದ ಸುಂಕ ವಸೂಲಿ ಮಾಡಲು ಇರಾನ್‌ಗೆ ಅವಕಾಶ ನೀಡುವ ಚೌಕಟ್ಟನ್ನು ರೂಪಿಸಬೇಕು ಎಂದು ಒತ್ತಾಯಿಸಿದೆ.
ಅಲ್ಲದೆ, ಭವಿಷ್ಯದಲ್ಲಿ ಮತ್ತೆ ಯುದ್ಧ ಅಥವಾ ಹಗೆತನ ಆರಂಭವಾಗುವುದಿಲ್ಲ ಎಂಬುದಕ್ಕೆ ದೃಢವಾದ ಖಾತರಿ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸಂಘರ್ಷವನ್ನು ಕೊನೆಗೊಳಿಸುವ ಯಾವುದೇ ಒಪ್ಪಂದದ ಭಾಗವಾಗಿ ಇರಾನ್ ಮೇಲಿರುವ ಎಲ್ಲಾ ರೀತಿಯ ಆರ್ಥಿಕ ದಿಗ್ಬಂಧನಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಇರಾನ್ ತನ್ನ ಷರತ್ತುಗಳಲ್ಲಿ ಕಟ್ಟುನಿಟ್ಟಾಗಿ ಆಗ್ರಹಿಸಿದೆ.




