ಸರ್ಕಾರಿ ಅಧಿಕಾರಿಯೊಬ್ಬರು ಆದಾಯದ ಮೂಲಗಳಿಗೆ ಹೋಲಿಸಿದರೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಮಖಂಡಿ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಸಂಜೀವ ಹಿಪ್ಪರಗಿ ಅವರಿಗೆ ಸೇರಿದ ನಿವಾಸಗಳು ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಯ ಆಸ್ತಿಯ ಮೂಲ, ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಜಮಖಂಡಿಯ ಕುಡಚಿ ರಸ್ತೆಯ ವಿಜಯನಗರದಲ್ಲಿರುವ ಸಂಜೀವ ಹಿಪ್ಪರಗಿ ಅವರ ನಿವಾಸ, ಮೈಗೂರ ರಸ್ತೆಯಲ್ಲಿರುವ ಅವರ ತಂದೆಯ ಮನೆ ಹಾಗೂ ತಾಲೂಕು ಪಂಚಾಯಿತಿ ಕಚೇರಿಯಲ್ಲಿರುವ ಅವರ ಕೊಠಡಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮನೆಗಳಲ್ಲಿದ್ದ ಆಸ್ತಿ ಸಂಬಂಧಿತ ದಾಖಲೆಗಳು, ನಗದು, ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನು ಪರಿಶೀಲಿಸಿ ಮಾಹಿತಿ ದಾಖಲಿಸಿಕೊಂಡಿದ್ದಾರೆ.
ಇದರೊಂದಿಗೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿಯೂ ಅಧಿಕಾರಿಗಳು ಹಲವು ಕಡತಗಳು ಹಾಗೂ ಸೇವಾ ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಕಚೇರಿಯ ವಿವಿಧ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಸಂಜೀವ ಹಿಪ್ಪರಗಿ ಅವರ ಕರ್ತವ್ಯ ನಿರ್ವಹಣೆ ಮತ್ತು ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ.
ಬುಧವಾರ ಬೆಳಗ್ಗಿನಿಂದ ಆರಂಭವಾದ ಪರಿಶೀಲನಾ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿದಿತ್ತು. ಅಧಿಕಾರಿಗಳು ಸಂಗ್ರಹಿಸಿದ ದಾಖಲೆಗಳು ಹಾಗೂ ಮಾಹಿತಿಗಳ ಆಧಾರದಲ್ಲಿ ಮುಂದಿನ ತನಿಖೆ ಕೈಗೊಳ್ಳುವ ಸಾಧ್ಯತೆಯಿದೆ.
ಲೋಕಾಯುಕ್ತ ಎಸ್‌ಪಿ ಮಹಾನಿಂಗ ನಂದಗಾಂವಿ, ಡಿಎಸ್‌ಪಿಗಳಾದ ಸುರೇಶ ರೆಡ್ಡಿ, ವೆಂಕಟೇಶ ಯಡಹಳ್ಳಿ, ಡಿ.ಎಸ್. ಪಾಟೀಲ, ಸಿಪಿಐಗಳಾದ ಮಲ್ಲಿಕಾರ್ಜುನ ಬಿರಾದಾರ, ಶೈಲಾ ಪ್ಯಾಟಿಶೆಟ್ಟಿ, ಸುನೀಲ ಮೇಗಿನಮನಿ, ನಿರಂಜನ ಪಾಟೀಲ ಸೇರಿದಂತೆ ಮೂರು ಜಿಲ್ಲೆಗಳಿಂದ ಆಗಮಿಸಿದ್ದ 30ಕ್ಕೂ ಅಧಿಕ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



