ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುತೂಹಲ ಮೂಡಿಸಿರುವ ಮಿಷಿಗನ್ ರಾಜ್ಯದ ಸೆನೇಟ್ ಸ್ಪರ್ಧೆಯು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಈಜಿಪ್ಟ್ ಮೂಲದ ಖ್ಯಾತ ಎಪಿಡೆಮಿಯಾಲಜಿಸ್ಟ್ ಮತ್ತು ಸಾರ್ವಜನಿಕ ಆರೋಗ್ಯ ನಿರ್ವಾಹಕರಾದ ಡಾ. ಅಬ್ದುಲ್ ಎಲ್-ಸಯದ್ ಅಮೆರಿಕದ ಮೊದಲ ಮುಸ್ಲಿಂ ಸೆನೇಟರ್ ಆಗುವ ಸ್ಪರ್ಧೆಯಲ್ಲಿದ್ದಾರೆ. ತೀವ್ರ ರಾಜಕೀಯ ಮತ್ತು ಕೋಮು ಧ್ರುವೀಕರಣದ ಅಡೆತಡೆಗಳನ್ನು ಮೀರಿ ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ರಿಪಬ್ಲಿಕನ್ ಎದುರಾಳಿಯನ್ನು ಸೋಲಿಸುವ ಹಾದಿಯಲ್ಲಿದ್ದಾರೆ.
ಈ ಚುನಾವಣೆಯಲ್ಲಿ ಡಾ. ಅಬ್ದುಲ್ ಎಲ್-ಸಯದ್ ಅವರು ಎದುರಿಸುತ್ತಿರುವ ಸವಾಲುಗಳು ಸಾಮಾನ್ಯವಾದುದಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂ ಧರ್ಮ ವಿರೋಧಿ ಪ್ರಚೋದನಕಾರಿ ಹೇಳಿಕೆಗಳು ಮತ್ತು ಕಠಿಣ ವಾಗ್ದಾಳಿಗಳ ನಡುವೆಯೂ ಅಬ್ದುಲ್ ತಮ್ಮ ಪ್ರಚಾರವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಗೆದ್ದ ಭಾರತೀಯ ಮೊದಲ ಮುಸ್ಲಿಂ
ಅಷ್ಟೇ ಅಲ್ಲದೆ, ಅವರ ವಿರುದ್ಧದ ಪ್ರಚಾರ ಕಾರ್ಯಗಳಿಗಾಗಿಯೇ ಸುಮಾರು 270 ಮಿಲಿಯನ್ ಡಾಲರ್ ಹಣದ ಹೊಳೆಯನ್ನೇ ಹರಿಸಲಾಗಿದೆ. ಇಷ್ಟೊಂದು ಪ್ರಮಾಣದ ಬೃಹತ್ ಹಣಕಾಸಿನ ಬಲ ಮತ್ತು ರಾಜಕೀಯ ವಿರೋಧಿಗಳ ಅಪಪ್ರಚಾರದ ನಡುವೆಯೂ ಅಬ್ದುಲ್ ಎಲ್-ಸಯದ್ ಅವರು ಜನಾನುರಾಗಿಯಾಗಿ ಮುನ್ನಡೆ ಸಾಧಿಸುತ್ತಿರುವುದು ಗಮನಾರ್ಹವಾಗಿದೆ.
ಕನ್ನಡಿಗರಿಗೆ ಹೆಮ್ಮೆಯ ನಂಟು ಡಾ ಅಬ್ದುಲ್ ಎಲ್-ಸಯದ್
ಈ ಚುನಾವಣೆಯ ಮತ್ತೊಂದು ವಿಶೇಷ ಮತ್ತು ಕನ್ನಡಿಗರು ಹೆಮ್ಮೆಪಡಬೇಕಾದ ಸಂಗತಿಯೆಂದರೆ, ಡಾ. ಅಬ್ದುಲ್ ಎಲ್-ಸಯದ್ ಅವರ ಪತ್ನಿ ಡಾ. ಸಾರಾ ಜುಕಾಕು. ಖ್ಯಾತ ಮನೋವೈದ್ಯೆಯಾಗಿ ಯಶಸ್ವಿ ವೃತ್ತಿಜೀವನ ನಡೆಸುತ್ತಿರುವ ಡಾ. ಸಾರಾ ಜುಕಾಕು ಅವರ ತಂದೆ-ತಾಯಿ ಮೂಲತಃ ಕರ್ನಾಟಕದ ಕರಾವಳಿ ಭಾಗದ ಭಟ್ಕಳದವರು.
ಡಾ. ಸಾರಾ ಅವರ ತಂದೆ ಭಾರತದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಬಳಿಕ ನೆಫ್ರಾಲಜಿಸ್ಟ್ ಆಗಿ ವೃತ್ತಿ ಮುಂದುವರೆಸಿದರು. ಸಾರಾ ಅವರ ಕುಟುಂಬ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿತ್ತು. ಡಾ. ಸಾರಾ ಅವರು ಅಮೆರಿಕದಲ್ಲೇ ಬೆಳೆದು, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದಿದ್ದಾರೆ.
ಡಾ. ಅಬ್ದುಲ್ ಮತ್ತು ಡಾ. ಸಾರಾ ಅವರು ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಪದವಿ ಕಲಿಯುವಾಗ ಪರಿಚಯಗೊಂಡು, 2006ರಲ್ಲಿ ವಿವಾಹವಾದರು. ಈ ದಂಪತಿಗೆ ಎಮಿಲಿ ಮತ್ತು ಸೆರೀನ್ ಎಂಬಿಬ್ಬರು ಹೆಣ್ಣುಮಕ್ಕಳಿದ್ದಾರೆ. ವೈದ್ಯಕೀಯ ಕುಟುಂಬದಿಂದ ಬಂದ ಡಾ. ಸಾರಾ ಅವರು ಅರ್ಬೋರ್, ಮಿಷಿಗನ್‌ನಲ್ಲಿ ತಮ್ಮದೇ ಆದ ಮನೋವೈದ್ಯಕೀಯ ಕ್ಲಿನಿಕ್ ಅನ್ನು ಮುನ್ನಡೆಸುತ್ತಿದ್ದಾರೆ.
ಅಮೆರಿಕದ ಸೆನೇಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು
ಒಂದು ವೇಳೆ ನವೆಂಬರ್ 3 ರ ಚುನಾವಣೆಯಲ್ಲಿ ಡಾ. ಅಬ್ದುಲ್ ಎಲ್-ಸಯದ್ ವಿಜಯಶಾಲಿಯಾದರೆ, ಅವರು ಅಮೆರಿಕದ ಸೆನೇಟ್ ಇತಿಹಾಸದಲ್ಲಿಯೇ ಮೊದಲ ಮುಸ್ಲಿಂ ಸೆನೇಟರ್ ಎಂಬ ಹೆಗ್ಗಳಿಗೆ ಪಾತ್ರರಾಗಲಿದ್ದಾರೆ. ಪ್ರಗತಿಪರ ಡೆಮಾಕ್ರಟಿಕ್ ನಾಯಕರಾಗಿರುವ ಅಬ್ದುಲ್ ಎಲ್-ಸಯದ್ ಅವರು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡುತ್ತಿದ್ದು, ‘ಮೆಡಿಕೇರ್ ಫಾರ್ ಆಲ್’ (Medicare for All) ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ವಲಸಿಗರ ಹಕ್ಕುಗಳ ಪರವಾಗಿ ಮತ್ತು ಪ್ರಸ್ತುತ ವ್ಯವಸ್ಥೆಯಲ್ಲಿ ದೃಢವಾದ ಸುಧಾರಣೆಗಳಿಗಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ.




