ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರಿಗೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಮರು ಸಮನ್ಸ್ ಜಾರಿ ಮಾಡಿದೆ. ಪ್ರಕರಣದ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ನಟಿಗೆ ಸೂಚಿಸಲಾಗಿದ್ದು, ವಿಚಾರಣೆಗೆ ಗೈರಾಗಿದ್ದಕ್ಕಾಗಿ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ (ನವೆಂಬರ್ 2) ಪ್ರಕರಣದ ವಿಚಾರಣೆ ನಡೆದ ವೇಳೆ ನೋರಾ ಫತೇಹಿ ಅವರ ಪರ ವಕೀಲರು ಹಾಜರಾಗಿ, ನಟಿಗೆ ಇಂದಿನ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ವಿಶೇಷ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಅವರು ನಟಿಯ ನಡೆಯನ್ನು ಕಟುವಾಗಿ ವಿಮರ್ಶಿಸಿದರು.
ಇದನ್ನೂ ಓದಿ: ʼಸೆರಗ ಸರ್ಸೆʼ ಹಾಡು ವಿವಾದ: ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಸಂಜಯ್ ದತ್
“ನೋರಾ ಫತೇಹಿ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದು, ಅವರು ಇಂದು ಕೋರ್ಟ್‌ಗೆ ಹಾಜರಾಗಬೇಕಿತ್ತು. ಅವರ ನಡೆ ಸೂಕ್ತವಾಗಿಲ್ಲ. ನ್ಯಾಯಾಲಯದ ನಡಾವಳಿಗಳನ್ನು ಅತ್ಯಂತ ಹಗುರವಾಗಿ ಅಥವಾ ನಿರ್ಲಕ್ಷ್ಯದಿಂದ ಕಾಣಬೇಡಿ,” ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಅರ್ಜಿ ವಜಾಗೊಳಿಸಿದ ನ್ಯಾಯಾಲಯವು ನವೆಂಬರ್ 6ರಂದು ಯಾವುದೇ ಕಾರಣಕ್ಕೂ ತಪ್ಪದೇ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಸಾಕ್ಷಿ ನುಡಿಯುವಂತೆ ನಟಿಗೆ ನೂತನ ಸಮನ್ಸ್ ಜಾರಿಗೊಳಿಸಿದೆ.
ಖ್ಯಾತ ಉದ್ಯಮಿಗಳನ್ನು ವಂಚಿಸಿ ರೂ. 200 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ ಆರೋಪ ಹೊತ್ತಿರುವ ಕುಖ್ಯಾತ ವಂಚಕ ಸುಕೇಶ್ ಚಂದ್ರಶೇಖರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ದೆಹಲಿ ಪೊಲೀಸರ ವಿಶೇಷ ವಿಭಾಗ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ ನೋರಾ ಫತೇಹಿ ಅವರನ್ನು 3ನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ‘ಸಾಕ್ಷಿ’ ಎಂದು ಹೆಸರಿಸಲಾಗಿದೆ.
ತನಿಖಾ ಸಂಸ್ಥೆಗಳ ವಿಚಾರಣೆ ವೇಳೆ ನೋರಾ ಫತೇಹಿ ಅವರು, ಸುಕೇಶ್ ಚಂದ್ರಶೇಖರ್ ಜತೆ ನೇರ ಸಂಪರ್ಕದಲ್ಲಿರಲಿಲ್ಲ, ಬದಲಿಗೆ ಆತನ ಹೆಂಡತಿ ಲೀನಾ ಮರಿಯಾ ಪೌಲ್ ಮೂಲಕ ಪರಿಚಯವಾಗಿದ್ದಾಗಿ ಹೇಳಿಕೆ ನೀಡಿದ್ದರು. ಚೆನ್ನೈನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿದ್ದಾಗ ಸುಕೇಶ್ ಬದಿಯಿಂದ ತಮಗೆ ತಲುಪಿದ್ದ ಐಷಾರಾಮಿ ಬಿಎಂಡಬ್ಲ್ಯೂ ಕಾರು ಮತ್ತು ಉಡುಗೊರೆಗಳ ಕುರಿತು ತನಿಖಾಧಿಕಾರಿಗಳು ಈಗಾಗಲೇ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.




