ಹಾಲಿನ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಮೇಲೆ ಸರ್ಕಾರ ಮತ್ತಷ್ಟು ಆರ್ಥಿಕ ಹೊರೆ ಹೇರುತ್ತಿರುವುದು ಖಂಡನೀಯ ಎಂದರು.
ಹಾಲಿನ ದರವನ್ನು ರೂ.8 ವರೆಗೆ ಹೆಚ್ಚಿಸಿರುವ ನಿರ್ಧಾರದಿಂದ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇ.15ರಿಂದ 20ರಷ್ಟು ಹೆಚ್ಚಿಸಿದರೆ ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರ ಮೇಲೆ ಹೊರೆ ಹಾಕಬಾರದು. ಸಾರಿಗೆ ಸಂಸ್ಥೆಗಳು ಮತ್ತು ಕೆಎಂಎಫ್‌ನ ಆರ್ಥಿಕ ಸ್ಥಿತಿ ಸುಧಾರಿಸಲು ಆಡಳಿತಾತ್ಮಕ ವೆಚ್ಚ ನಿಯಂತ್ರಣ, ಹಣಕಾಸಿನ ಸೋರಿಕೆ ತಡೆ ಹಾಗೂ ಪಾರದರ್ಶಕ ಆದಾಯದ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಬೇಕು. ಸಾರ್ವಜನಿಕರ ಬದುಕಿಗೆ ಹೊರೆಯಾಗುವ ಬೆಲೆ ಏರಿಕೆ ನಿರ್ಧಾರಗಳನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.





