ಭಾರತದ ರಾಜಕೀಯ ಇತಿಹಾಸದಲ್ಲಿ ಬಿಹಾರ ಒಂದು ವಿಶಿಷ್ಟ ರಾಜ್ಯ. ಸಮಾಜವಾದ, ಹಿಂದುಳಿದ ವರ್ಗಗಳ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ನೆಲೆಯಾಗಿತ್ತು. ಇದು ಕೇವಲ ಒಂದು ರಾಜ್ಯವಲ್ಲ, ಸಮಾಜವಾದಿ ಚಿಂತನೆಯ ತಾಯಿ ನೆಲ. ಜಯಪ್ರಕಾಶ್ ನಾರಾಯಣ್, ರಾಮ್ಮನೋಹರ್ ಲೋಹಿಯಾ ಅವರ ಆಲೋಚನೆಗಳಿಂದ ರೂಪುಗೊಂಡ ರಾಜಕೀಯ ನೆಲೆ. ಆದರೆ, ಇಂದಿನ ಬಿಹಾರ ರಾಜಕೀಯ ನೋಡಿದರೆ, ಆ ಮೌಲ್ಯಗಳು ಎಲ್ಲಿ ಹೋಗಿವೆ ಎಂಬ ಪ್ರಶ್ನೆ ಬರುವುದು ಸಹಜ.
ಬಿಹಾರದ ರಾಜಕಾರಣದಲ್ಲಿ ಮಂಗಳವಾರ (ಏ.14) ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುಮಾರು ಎರಡು ದಶಕಗಳ ಕಾಲ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಹಾರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇಂದು (ಏ.15) ಪಾಟ್ನಾದ ಲೋಕಭವನದಲ್ಲಿ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಸಾಮ್ರಾಟ್ ಚೌಧರಿ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಈ ಮೂಲಕ ಸಾಮ್ರಾಟ್ ಚೌಧರಿ ಬಿಹಾರದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಬಿಹಾರದಲ್ಲಿ ಬಿಜೆಪಿ ಪರ್ವ | ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕಾರ
ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರನ್ನು ಕಳೆದ ವಾರ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣ ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ, ಈ ಬೆಳವಣಿಗೆ ನಡೆದಿದೆ. ಇದರೊಂದಿಗೆ ಬಿಹಾರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಜೊತೆಗೆ ಸುದೀರ್ಘ ಅವಧಿಗೆ ಅಧಿಕಾರ ಹಿಡಿದಿದ್ದ ʼನಿತೀಶ್ ಯುಗʼ ಕೂಡ ಅಂತ್ಯವಾಗಲಿದೆ.
ಯಾರು ಈ ಸಾಮ್ರಾಟ್ ಚೌಧರಿ?
ಹಿಂದುಳಿದ ಕೊಯೆರಿ ಸಮುದಾಯಕ್ಕೆ ಸೇರಿದ, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದ 57 ವರ್ಷದ ಸಾಮ್ರಾಟ್ ಚೌಧರಿ ಅವರ ತಂದೆ ಶಕುನಿ ಚೌಧರಿ ತಾರಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು. ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಡೀ ಕುಟುಂಬವೇ ರಾಜಕೀಯ ಹಿನ್ನೆಲೆಯದ್ದು.
ಸಾಮ್ರಾಟ್ ಚೌಧರಿ ಅವರು ರಾಜಕಾರಣವನ್ನು ಆರಂಭ ಮಾಡಿದ್ದು 1999ರಲ್ಲಿ. ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು, 2000ರಲ್ಲಿ ಖಗರಿಯಾ ಜಿಲ್ಲೆಯ ಪರರ್ಬಟ್ಟಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ರಾಬ್ರಿ ದೇವಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಅರ್ಹ ವಯಸ್ಸು ಇಲ್ಲ ಎಂಬ ಆರೋಪ ಕೇಳಿ ಬಂದ ಕಾರಣ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು.
ನಂತರ 2014ರಲ್ಲಿ ʼಆರ್ಜೆಡಿʼಯನ್ನು ತೊರೆದು ಜೆಡಿಯು ಸೇರಿದ ಸಾಮ್ರಾಟ್ ಅವರು, ಜಿತನ್ ರಾಮ್ ಮಾಂಝಿ ಅವರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 2018 ರಲ್ಲಿ ಬಿಜೆಪಿಯನ್ನು ಸೇರಿದರು. ಅವರು ಬಿಜೆಪಿ ಸೇರಿದ ಆರಂಭದಲ್ಲೇ, ಚೌಧರಿ ಅವರನ್ನು ಬಿಜೆಪಿಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. 2023ರಲ್ಲಿ ಬಿಹಾರದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. 2024ರಲ್ಲಿ ನಿತೀಶ್ ಕುಮಾರ್ ಅವರು ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಾಗ, ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು.
ಕೊಲೆ ಆರೋಪಿಯಾಗಿದ್ದ ಸಾಮ್ರಾಟ್
ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಹೆಸರು ಘೋಷಣೆಯಾಗುತ್ತಿದ್ದಂತೆ, ಅವರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಸಾಮಾಜಿಕ ಜಾಳತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಏಳು ಕೊಲೆಗಳ ಆರೋಪಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ಮಣೆ ಹಾಕಿದೆ. 1995ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಇವರ ತಂದೆ ಶಕುನಿ ಚೌಧರಿ ಹೆಸರಿನೊಂದಿಗೆ ರಾಕೇಶ್ ಕುಮಾರ್ ಅಲಿಯಾಸ್ ಸಾಮ್ರಾಟ್ ಚೌಧರಿ ಅವರು ಹೆಸರೂ ಕೂಡ ತಳುಕುಹಾಕಿಕೊಂಡಿತ್ತು. ಹೀಗಾಗಿ ಕೊಲೆ ಪ್ರಕರಣದ ಆರೋಪವನ್ನು ಕೂಡ ಹೊತ್ತಿದ್ದಾರೆ.
1995ರಲ್ಲಿ ತರಾಪುರ ಹತ್ಯಕಾಂಡದಲ್ಲಿ ಏಳು ಜನರ ಕೊಲೆಗೆ ಸಂಬಂಧಿಸಿದಂತೆ ಸಾಮ್ರಾಟ್ ಚೌಧರಿ ಅವರ ಮೇಲೆ ಕೇಸ್ ದಾಖಲಿಸಲಾಗಿತ್ತು. 1995ರಲ್ಲಿ ಬಿಹಾರದ ಮುಂಗೇರ್ ಜಿಲ್ಲೆಯ ತರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಮತ ಎಣಿಕೆ ದಿನ ಕಾಂಗ್ರೆಸ್ ಅಭ್ಯರ್ಥಿ ಸಚ್ಚಿದಾನಂದ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಖರಗ್ಪುರಕ್ಕೆ ಹೋಗುವ ವೇಳೆ ಅವರು ಮೇಲೆ ಹಲ್ಲೆ ನಡೆಸಲಾಯಿತು. ಸಚ್ಚಿದಾನಂದ್ ಸಿಂಗ್ ಸೇರಿದಂತೆ ಅವರ ಜೊತೆಗಿದ್ದ 5 ರಿಂದ 6 ಜನರು ಸಾವನ್ನಪ್ಪಿದರು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಯಿತು. ಆ ಘಟನೆಗೆ ಸಂಬಂದಪಟ್ಟಂತೆ ಕೇಸ್ ನಂ. 44/1995 ರಲ್ಲಿ ಚೌಧರಿ ಕುಟುಂಬದ 23 ಮಂದಿಯನ್ನು ಸಹ ಬಂಧಿಸಲಾಯಿತು. ಸಾಮ್ರಾಟ್ ಚೌಧರಿ ಅವರು 89 ದಿನಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಯಾದರು.
ವಯಸ್ಸಿನ ವಿವಾದ
1999 ರಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಆಡಳಿತಾವಧಿಯಲ್ಲಿ ಕಾರಿನೊಳಗೆ ಶಿಲ್ಪಿ ಜೈನ್ ಮತ್ತು ಗೌತಮ್ ಸಿಂಗ್ ಅವರ ಶವಗಳು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ನಂತರ, ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಹಸ್ತಾಂತರಿಸಲಾಯಿತು. 1995 ರಲ್ಲಿ ತಾರಾಪುರದಲ್ಲಿ ಕೊಲೆಯಾದ ಏಳು ಜನರೂ ಕುಶ್ವಾಹ ಜಾತಿಗೆ ಸೇರಿದ್ದವರು. ಈ ಪ್ರಕರಣ ಸಂಖ್ಯೆ 44/1995 ರಲ್ಲಿ, ಶಕುನಿ ಚೌಧರಿಯ ಮಗ ರಾಕೇಶ್ ಕುಮಾರ್ (ಸಾಮ್ರಾಟ್ ಚೌಧರಿ) ಮೇ 1, 1981 ರಂದು ಜನಿಸಿದ್ದರು ಎಂದು ಹೇಳುವ ನಕಲಿ ದಾಖಲೆಗಳನ್ನು ಇದೇ ಚೌಧರಿ ಮ್ಯಾಜಿಸ್ಟ್ರೇಟ್ ಗೆ ಸಲ್ಲಿಸಿ ಜಾಮೀನನ್ನ ಪಡೆದಿದ್ದರು.
ಆದರೆ ಇಲ್ಲಿ ಇನ್ನೊಂದು ವಿಚಾರ ಇದೆ. 2020 ರಲ್ಲಿ, ಚೌಧರಿ ಅವರು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ವಯಸ್ಸು 51 ಎಂದು ಉಲ್ಲೇಖಿಸಿದ್ದಾರೆ. ಅಂದರೆ 1995 ರಲ್ಲಿ ಅವರಿಗೆ 26 ವರ್ಷ ವಯಸ್ಸಾಗಿತ್ತು. ಹಾಗಾಗಿ ಅವರನ್ನ ಬಂಧಿಸಿ ನ್ಯಾಯಾಲಯದ ತೀರ್ಪು ಬರುವ ತನಕ ಜೈಲಿನಲ್ಲಿ ಇರಿಸಬೇಕು ಅಂತ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಈ ಹಿಂದೆಯೇ ಆರೋಪಿಸಿದ್ದರು.
ಬಿಜೆಪಿಗೆ ಕೊಲೆ ಆರೋಪಿಗಳೇ ಬೇಕೆ?
ಬಿಜೆಪಿಯ ರಾಜಕಾರಣದಲ್ಲಿ ಒಂದು ದೊಡ್ಡ ಸಮಸ್ಯೆ ಎಂದರೆ ಅತ್ಯಾಚಾರ, ಕೊಲೆಯಂತಹ ಆರೋಪಗಳು ಇದ್ದರೂ ಅಧಿಕಾರ ಸಿಗುತ್ತದೆ. ಅದಕ್ಕೆ ಹೊಸ ಸೇರ್ಪಡೆ ಬಿಹಾರದಲ್ಲಿ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ.
ಬಹುಪಾಲು ಪ್ರಕರಣಗಳಲ್ಲಿ ಆರೋಪಿಗಳು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಪಕ್ಷಗಳು ಅವರನ್ನು ಟಿಕೆಟ್ ಕೊಡುತ್ತವೆ, ನಂತರ ಅವರು ಸಚಿವ ಸ್ಥಾನಗಳಿಗೂ ಏರುತ್ತಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷವೇ, ಆರೋಪಿಗಳನ್ನು ಪ್ರೋತ್ಸಾಹಿಸುತ್ತಿದೆ ಅನ್ನೋದು ವಿಪರ್ಯಾಸ.
ಈಗ ಬಿಜೆಪಿ ಸೇರುವವರಿಗೆ ಒಂದು ಧೈರ್ಯ ಬಂದಿದೆ. ಯಾವುದೇ ಅಪರಾಧ ಇದ್ದರೂ ರಾಜಕೀಯದಲ್ಲಿ ಬೆಳೆಯಬಹುದು ಅಂತ. ಇದಕ್ಕೆ ಅನೇಕ ಉದಾಹರಣೆಗಳಿವೆ. ಲೈಂಗಿಕ ಆರೋಪ ಹೊತ್ತಿರುವ ಬ್ರಿಜ್ಭೂಷಣ್ ಶರಣ್ ಸಿಂಗ್, ಕರ್ನಾಟಕದಲ್ಲಿಯೇ ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಲೈಂಗಿಕ ಪ್ರಕರಣದ ಆರೋಪಿ ಮುನಿರತ್ನ… ಹೀಗೆ ಬಿಜೆಪಿಯಲ್ಲಿ ಆರೋಪಿಗಳ ಪಟ್ಟಿ ದೊಡ್ಡದಿದೆ. ಇದರ ಮೂಲಕ ರಾಜಕೀಯದಲ್ಲಿ ನೈತಿಕತೆ ಉಳಿದಿದೆಯೇ? ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ.





