ಬೆಂಗಳೂರು ನಗರದ ಹೊರವಲಯದಲ್ಲಿ 9 ಕೋಟಿ ರೂಪಾಯಿ ನಗದು ಹಣವನ್ನು ಸಾಗಿಸುತ್ತಿದ್ದವರನ್ನು ಪೊಲೀಸರು ತಡೆ ಹಿಡಿದು, ಹಣ ಸಾಗಿಸುತ್ತಿದ್ದ ಕ್ರೆಟಾ ಕಾರನ್ನು ಜಪ್ತಿ ಮಾಡಿದ್ದಾರೆ. ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಬೆಂಗಳೂರಿನಿಂದ ಹ್ಯುಂಡೈ ಕ್ರೆಟಾ ಕಾರು ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ದಾಟಿದ ಬಳಿಕ ಸಿಗ್ನಲ್ ಬಳಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಪೊಲೀಸರು ಕಾರನ್ನು ತಡೆದರು. ನಂತರ ಕಾರು ಹಾಗೂ ಅದರಲ್ಲಿದ್ದ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಯೂನಿಟ್-22ರ ಉಪನಿರ್ದೇಶಕ ಜಗದೀಶ್ ಅವರಿಂದ ಆಗಸ್ಟ್ 18ರಂದು ಪೊಲೀಸರಿಗೆ ಈ ಕುರಿತ ಮಾಹಿತಿ ಲಭಿಸಿತ್ತು. KL 20 T 8629 ನೋಂದಣಿ ಸಂಖ್ಯೆಯ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಸುಳಿವಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಇವರಲ್ಲಿ ಒಬ್ಬನನ್ನು ತಮಿಳುನಾಡಿನ ತೂತ್ತುಕುಡಿಯ ಸಿಂಧು ಜ್ಯುವೆಲ್ಲರ್ಸ್ ಜೊತೆ ನಂಟಿರುವ 42 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ. ಎರಡನೇ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ಇಬ್ಬರನ್ನೂ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಕಾರನ್ನು ಪರಿಶೀಲಿಸಿದಾಗ, ಸೂಟ್‌ಕೇಸ್‌ನಲ್ಲಿ 500 ರೂ ಮುಖಬೆಲೆಯ 9 ಕೋಟಿ ನಗದು ಪತ್ತೆಯಾಗಿದ್ದು, ನಂತರ ತಮಿಳುನಾಡಿನಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ನಡೆಸಿದ ಹೆಚ್ಚಿನ ಶೋಧದಲ್ಲಿ 1.3 ಕೋಟಿ ರೂ ಹೆಚ್ಚುವರಿ ಕಳ್ಳ ಹಣ ಪತ್ತೆಯಾಗಿದೆ.
ಶಂಕಿತರ ಜಾಡು ಹಿಡಿದು, ಹಣದ ಮೂಲವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.




