ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2026-27 ನೇ ಸಾಲಿನ ಸಾಮಾನ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಸೆಪ್ಟೆಂಬರ್ 4ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಪ್ಪಳ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶಾನುಸಾರ 2026-27ನೇ ಸಾಲಿನಲ್ಲಿ ಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ನೋಂದಾಯಿತ ಸಂಘ ಸಂಸ್ಥೆ ಹಾಗೂ ಟ್ರಸ್ಟ್ ಗಳಿಗೆ ಧನಸಹಾಯ ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ, ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಸೇವಾಸಿಂಧು ಮುಖಾಂತರ ಅರ್ಜಿಗಳನ್ನು ಜುಲೈ 22 ರಿಂದ ಆಗಸ್ಟ್ 20 ವರೆಗೆ ಕಾಲಾವಕಾಶ ನೀಡಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಆದ್ರೀಗ ಯೋಜನೆಗಳಿಗೆ ಅರ್ಜಿ ಸಲ್ಲಿಕೆಯ ಕಾಲಾವಧಿಯನ್ನು ಆಗಸ್ಟ್ 21 ರಿಂದ ಸಪ್ಟೆಂಬರ್ 4 ವರೆಗೆ 15 ದಿನಗಳು ಕಾಲ ವಿಸ್ತರಿಸಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ನೀಡಲಾಗಿದ್ದು, ಸಂಘ ಸಂಸ್ಥೆಗಳು ಹಾಗೂ ಕಲಾವಿದರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಇಲಾಖೆ ಕರೆ ನೀಡಿದೆ.




