ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಜಗಳ ಹೊಸದೇನಲ್ಲ. ಆದರೆ, ಇತ್ತೀಚೆಗೆ ಬಾಡಿಗೆದಾರನೊಬ್ಬ ತಾನು ಮನೆ ಖಾಲಿ ಮಾಡುವಾಗ ಮಾಲೀಕನಿಂದ ಎದುರಿಸಿದ ಕಿರುಕುಳ ಹಾಗೂ ಮುಂಗಡ ಹಣ (ಅಡ್ವಾನ್ಸ್) ಕಡಿತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಥೆ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
“ನನ್ನ ಮನೆ ಮಾಲೀಕ ಕೇವಲ 20 ತಿಂಗಳಲ್ಲಿ ‘ಬರ್ತ್‌ಡೇ ಫ್ರೆಂಡ್’ನಿಂದ ‘ವಿಶ್ವಸಂಸ್ಥೆಯ ಆಡಿಟರ್’ ಮಟ್ಟಕ್ಕೆ ಬದಲಾದರು” ಎಂದು ಈತ ತನ್ನ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾನೆ. ಸುಮಾರು 20 ತಿಂಗಳ ಹಿಂದೆ 1 ಬಿಎಚ್‌ಕೆ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದ ಈತ, ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಯಾವುದೇ ತೊಂದರೆಯಿಲ್ಲದೆ ವಾಸವಿದ್ದ. ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮಾಲೀಕ ಕೂಡ ವಾಸವಿದ್ದ ಕಾರಣ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ಪರಸ್ಪರ ಮಕ್ಕಳ ಹುಟ್ಟುಹಬ್ಬದ ಆಚರಣೆಗಳಲ್ಲಿ ಪಾಲ್ಗೊಂಡು, ಕೇಕ್ ಹಂಚಿಕೊಂಡು ಅತ್ಯಂತ ನಂಬಿಕೆಯಿಂದಿದ್ದರು.
ಆದರೆ, ಮನೆ ಖಾಲಿ ಮಾಡುವಾಗ ಈ ಎಲ್ಲ ಬಾಂಧವ್ಯ ಇದ್ದಕ್ಕಿದ್ದಂತೆ ಮರೆಯಾಗಿದೆ. ಮನೆಯಲ್ಲಿ ಯಾವುದೇ ಪಾರ್ಟಿ ಮಾಡಿಲ್ಲ, ದೊಡ್ಡ ಹಾನಿಯೂ ಆಗಿಲ್ಲ. ಕೇವಲ ಸಣ್ಣಪುಟ್ಟ ಹಾನಿಯಾಗಿತ್ತು. ಆದರೂ ಪ್ರಕ್ರಿಯೆ ಸುಗಮವಾಗಿರಲಿ ಎಂದು ಬಾಡಿಗೆದಾರನೇ ಖುದ್ದಾಗಿ ಪೇಂಟಿಂಗ್ ಮತ್ತು ಡೀಪ್ ಕ್ಲೀನಿಂಗ್‌ಗಾಗಿ 8 ರಿಂದ 10 ಸಾವಿರ ರೂಪಾಯಿಗಳ ಅಂದಾಜು ವೆಚ್ಚವನ್ನು ಮಾಲೀಕರಿಗೆ ಮುಂಚಿತವಾಗಿಯೇ ತಿಳಿಸಿದ್ದ. ಆದರೆ ಕೀ ಹಸ್ತಾಂತರಿಸಿದ ಬಳಿಕ ಮಾಲೀಕರು ಹೊಸ ಲೆಕ್ಕಾಚಾರ ಶುರು ಮಾಡಿದ್ದಾರೆ.
ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ
“ಇನ್ಸ್‌ಪೆಕ್ಷನ್ ಟೀಮ್” (ಪರಿಶೀಲನಾ ತಂಡ) ಬರಲಿದೆ, “ವಿವರವಾದ ಮೌಲ್ಯಮಾಪನ” ನಡೆಯಲಿದೆ ಎಂದು ಹೇಳಿ ಠೇವಣಿ ಕಡಿತಗೊಳಿಸಲು 10-15 ದಿನ ಕಾಯುವಂತೆ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ಬಾಡಿಗೆದಾರ, “ಕ್ಷಮಿಸಿ ಬ್ರದರ್, ಇದು ಕೇವಲ 1 ಬಿಎಚ್‌ಕೆ ಮನೆ, ಇಸ್ರೋದ (ISRO) ಉಡಾವಣಾ ಪೂರ್ವ ಆಡಿಟ್ ಅಲ್ಲ” ಎಂದು ತೀವ್ರವಾಗಿ ವ್ಯಂಗ್ಯವಾಡಿದ್ದಾನೆ.
ಬಾಡಿಗೆದಾರ ಒಟ್ಟು 1 ಲಕ್ಷ ರೂ. ಮುಂಗಡ ಪಾವತಿಸಿದ್ದು, ಈಗ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ 20 ಸಾವಿರಕ್ಕೂ ಅಧಿಕ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ಮಾಲೀಕರು ಹೇಳಿದ್ದಾರೆ. ಕೀಗಳನ್ನು ಈಗಾಗಲೇ ಕೊಟ್ಟಿದ್ದು, ಮನೆಯನ್ನು ಒಮ್ಮೆ ಪರಿಶೀಲಿಸಲಾಗಿದೆ. ಹೀಗಿರುವಾಗ ಮತ್ತೊಮ್ಮೆ ಪರಿಶೀಲಿಸುವ ಅಗತ್ಯವೇನಿದೆ? ಇದೇನೋ ಬಹು-ಹಂತದ ಬಿಲ್ಲಿಂಗ್ ಪ್ರಕ್ರಿಯೆಯಂತೆ ಭಾಸವಾಗುತ್ತಿದ್ದು, ಇನ್ಸ್‌ಪೆಕ್ಷನ್ ವರದಿಗಾಗಿ ಬೋರ್ಡ್ ಎಕ್ಸಾಮ್ ರಿಸಲ್ಟ್‌ಗಾಗಿ ಕಾಯುವಂತೆ ಕಾಯುತ್ತಿದ್ದೇನೆ ಎಂದು ಆತ ಅಳಲು ತೋಡಿಕೊಂಡಿದ್ದಾನೆ.
ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ತಾವು ಎದುರಿಸಿದ ಇಂತಹದ್ದೇ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮನೆ ಮಾಲೀಕರು ವಾಸವಿರುವಾಗ ಎಷ್ಟೇ ಒಳ್ಳೆಯವರಂತೆ ವರ್ತಿಸಿದರೂ, ಮನೆ ಬಿಡುವಾಗ ಠೇವಣಿ ಹಣ ಕೇಳಿದರೆ ಅಸಲಿ ಬಣ್ಣ ತೋರಿಸುತ್ತಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




