2024 ನವೆಂಬರ್ನಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಭರತ ಬೊಮ್ಮಾಯಿ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಗೆಲ್ಲಿಸಿದ ಮಾದರಿಯ ಚುನಾವಣೆ ತಂತ್ರಗಳನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ
ಬಾಗಲಕೋಟೆ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನೆತ್ತಿ ಸುಡುವ ಕಡುಬಿಸಿಲಿನ ನಡುವೆಯೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹಳ್ಳಿಗಳು, ಪಟ್ಟಣಗಳು ಮತ್ತು ನಗರದಲ್ಲಿ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ.
ಚುನಾವಣೆಗೆ ಮುಂಚೆ ಸ್ವಪಕ್ಷದಲ್ಲೇ ಉತ್ತರಕ್ಕೊಬ್ಬರು ದಕ್ಷಿಣಕ್ಕೊಬ್ಬರು ಮುಖ ತಿರುಗಿಸುತ್ತಿದ್ದವರೆಲ್ಲ ಈಗ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಗ್ಗಟ್ಟಿನಿಂದ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಬೆವರು ಸುರಿಸಿ ಮತ ಕೇಳುತ್ತಿದ್ದಾರೆ. ಈ ಉಪಚುನಾವಣೆ ರಾಜಕೀಯವಾಗಿ ಮಹತ್ವದ್ದಾಗಿರುವುದರಿಂದ ಪಕ್ಷದ ಪರ ನಿಯತ್ತಿನಿಂದ ಕೆಲಸ ಮಾಡದಿರುವವರ ಮೇಲೆ ಎರಡು ಪಕ್ಷಗಳಲ್ಲಿಯೂ ಹದ್ದಿನ ಕಣ್ಣುಗಳ ಕಾವಲು ಇದೆ.
ಒಳ ಒಪ್ಪಂದ ಮಾಡಿಕೊಂಡು ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರೆಂದು ಕಂಡುಬಂದರೆ ತಮ್ಮ ರಾಜಕೀಯ ಭವಿಷ್ಯ ಕರಾಳವಾಗಬಹುದು ಎಂಬ ಭಯದಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ರೀತಿ ಅನುಮಾನಕ್ಕೆ ಆಸ್ಪದವಾಗದಂತೆ ನಿಷ್ಠೆಯಿಂದ ತಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವ ಅನಿವಾರ್ಯತೆ ಇದೆ. ಎರಡೂ ಪಕ್ಷಗಳ ಸ್ಟಾರ್ ಕ್ಯಾಂಪೇನರ್ಗಳು ಚುನಾವಣೆ ಉಸ್ತುವಾರಿಗಳು ಬಾಗಲಕೋಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಚುನಾವಣೆ ಪ್ರಚಾರ ಆರಂಭವಾದ ನಂತರದ ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ಪಿ.ರಾಜೀವ, ಎಂ ಡಿ ಲಕ್ಷ್ಮಿನಾರಾಯಣ ಪ್ರಚಾರಕ್ಕೆ ಬಂದು ಹೋಗಿದ್ದಾರೆ. ಸ್ಥಳೀಯ ಸಂಸದ ಪಿ ಸಿ ಗದ್ದಿಗೌಡರ, ನಾರಾಯಣಸಾ ಭಾಂಡಗೆ, ಎಂಎಲ್ ಸಿ ಪಿ ಎಚ್ ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ಟಿ ಪಾಟೀಲ ಸೇರಿದಂತೆ ಆ ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಛಲವಾದಿ ನಾರಾಯಣಸ್ವಾಮಿ ಮುಂತಾದ ನಾಯಕರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಆ ಪಕ್ಷದ ಸ್ಟಾರ್ ಕ್ಯಾಂಪೇನರ್ಗಳು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಮೊದಲ ದಿನದಿಂದಲೂ ಪ್ರಚಾರದಲ್ಲಿ ತೊಡಗಿದ್ದಾರೆ. ಶಾಸಕ ಜೆ ಟಿ ಪಾಟೀಲ, ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಸಂಯುಕ್ತ ಪಾಟೀಲ, ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ರಮೇಶ್ ಬದ್ನೂರ, ಚಂದ್ರಶೇಖರ ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಮುಂತಾದ ಕಾಂಗ್ರೆಸ್ ಪಕ್ಷದ ದೊಡ್ಡವರು ಸಣ್ಢವರೆಲ್ಲರೂ ತಮ್ಮ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರ ಮತ ಯಾಚನೆಯಲ್ಲಿ ನಿರತರಾಗಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ ಪರವಾಗಿ ಹಳ್ಳಿಗಳಲ್ಲಿ ಮತ ಯಾಚನೆ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ ಕ್ಷೇತ್ರಕ್ಕೆ ಬಂದಿದ್ದಾರೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಆಗಮಿಸಿದ್ದು, ಹಳ್ಳಿಗಳು, ಪಟ್ಟಣಗಳಲ್ಲಿ ಐದು ದಿನ ಪ್ರಚಾರ ಮತ್ತು ನಗರದಲ್ಲಿ ರೋಡ್ ಶೋ ಮಾಡುವ ಟಿಪಿ ಬಂದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದಂತೆ ಕಂಡುಬಂದಿದೆ. ಚುನಾವಣೆ ಚಾಣಕ್ಯ ಎಂದೇ ಹೆಸರಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿರುವುದು ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಎಚ್ ಕೆ ಪಾಟೀಲ ಸ್ಟಾರ್ ಪ್ರಚಾರಕರಾಗಿ ಕ್ಷೇತ್ರಕ್ಕೆ ಬರುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಾಗಲಕೋಟೆ ಕ್ಷೇತ್ರಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಹಾಗೂ ಜಾರಕಿಹೊಳಿ ಅವರ ಚುನಾವಣೆ ರಣತಂತ್ರದ ಮೇಲೆ ಕಾಂಗ್ರೆಸ್ಸಿಗರು ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಸಿಎಂ ಐದು ದಿನ ಪ್ರಚಾರಕ್ಕೆ ಬಂದಿರುವುದು ತುಂಬಾ ಮಹತ್ವದ್ದಾಗಿದೆ. ಅವರ ಬಲಗೈ ಬಂಟನಾಗಿದ್ದ ಹುಲ್ಲಪ್ಪ ಮೇಟಿ ಅವರ ಕ್ಷೇತ್ರದ ಚುನಾವಣೆ ಇದು. ಸಿಎಂ ತಾವೇ ಮುಂದೆ ನಿಂತು ಉಮೇಶ್ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದಾರೆ. ಈ ಕ್ಷೇತ್ರ ಗೆಲ್ಲಲೇಬೇಕಾದ ಸವಾಲು ಸಿದ್ದರಾಮಯ್ಯ ಅವರ ಮುಂದೆ ಇದೆ.
“2017 ಏಪ್ರಿಲ್ 9ರಂದು ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಅಲ್ಲೇ ಬಿಡಾರ ಹೂಡಿ ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೃಷ್ಣಮೂರ್ತಿ ಗೆಲುವಿಗೆ ಅನುಸರಿಸಿದ ಚುನಾವಣೆ ತಂತ್ರಗಳನ್ನು ಬಾಗಲಕೋಟೆ ಕ್ಷೇತ್ರದಲ್ಲಿಯೂ ಅನುಸರಿಸಿ ತಮ್ಮ ಶಿಷ್ಯನ ಮಗನನ್ನು ಗೆಲ್ಲಿಸಲು ಸಿಎಂ ವ್ಯವಸ್ಥಿತ ಪ್ಲ್ಯಾನ್ ಮಾಡಿದ್ದಾರೆ” ಎಂದು ಕಾಂಗ್ರೆಸ್ ಕಾರ್ಯಕರ್ತರು ಆಶಾಭಾವನೆಯಲ್ಲಿದ್ದಾರೆ.
ಇದನ್ನೂ ಓದಿದ್ದೀರಾ? ಬಾಗಲಕೋಟೆ ವಿಧಾನಸಭೆ ಉಪಚುನಾವಣೆ: ಮತದಾರರಿಗೆ ಸಿಎಂ ಮನವಿ
2024 ನವೆಂಬರ್ನಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಭರತ ಬೊಮ್ಮಾಯಿ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಗೆಲ್ಲಿಸಿದ ಮಾದರಿಯ ಚುನಾವಣೆ ತಂತ್ರಗಳನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಲು ಹುರುಪಿನಲ್ಲಿದ್ದಾರೆ. ಎರಡೂ ಪಕ್ಷಗಳಲ್ಲಿ ರಣೋತ್ಸಾಹ ಇರುವುದರಿಂದ ಚುನಾವಣೆ ಕಣ ಮುಂದಿನ ದಿನಗಳಲ್ಲಿ ಇನ್ನಷ್ಟು ರಂಗೇರುವ ಸಾಧ್ಯತೆ ಇದೆ.

ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ



