ಬೆಂಗಳೂರು, ಏಪ್ರಿಲ್ 1: ಪ್ರಸ್ತುತ ನಗರದಲ್ಲಿ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಳಿಸಿರುವ ರಾಜರಾಜೇಶ್ವರಿ ನಗರ ಮತ್ತು ದೊಮ್ಮಸಂದ್ರದ ಫ್ಲೈಓವರ್ ಯೋಜನೆಗಳನ್ನು ಸೇರಿದಂತೆ, ನಗರಾಭಿವೃದ್ಧಿ ಪ್ರಾಧಿಕಾರವು ಕೈಗೊಳ್ಳಲು ಉದ್ದೇಶಿಸಿರುವ ಅನೇಕ ಯೋಜನೆಗಳನ್ನು ಅಸಂಬದ್ಧ/ಅರ್ಥಹೀನ ಎಂದು ವಿರೋಧಿಸಿ, ಗ್ರೀನ್‌ಪೀಸ್ ಇಂಡಿಯಾ ಮತ್ತು ಬೆಂಗಳೂರು ರೈಸಿಂಗ್ ಅಭಿಯಾನದ ಭಾಗವಾಗಿರುವ ಹಲವು ನಾಗರಿಕ ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ಇಂದು ಪ್ರತಿಭಟನೆ ನಡೆಸಿದವು.
ಪ್ರತಿಭಟನಾಕಾರರು ಈ ಯೋಜನೆಗಳನ್ನು “ಮೂರ್ಖ ಯೋಜನೆಗಳು” ಎಂದು ಘೋಷಿಸುತ್ತ, ಯೋಜನಾಸ್ಥಳಗಳ ಸಮೀಪ ಪ್ರತಿಭಟಿಸಿ ಈ ಕುರಿತು ಸಾರ್ವಜನಿಕರ ಗಮನ ಸೆಳೆದರು. ನಾಲ್ಕು ವರ್ಷಕ್ಕೂ ಹೆಚ್ಚುಕಾಲದಿಂದ ಸ್ಥಗಿತಗೊಂಡಿರುವ ರಾಜರಾಜೇಶ್ವರಿ ನಗರದ ಕಮಾನಿನ ಬಳಿಯ ಫ್ಲೈಓವರ್ ಮತ್ತು ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೊಮ್ಮಸಂದ್ರ ಫ್ಲೈಓವರ್ ಯೋಜನೆಗಳು ಬೃಹತ್ ಯೋಜನೆಗಳು ಪೂರ್ಣವಾಗದೆ ನಗರದ ದೈನಂದಿನ ಜೀವನಕ್ಕೆ ಹೇಗೆ ಅಡ್ಡಿಯಾಗಿವೆ ಎಂಬುದರ ಕುರಿತು ಪ್ರತಿಭಟನೆಯಲ್ಲಿ ವಿವರಿಸಲಾಯಿತು. ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ ಕನ್‌ವೆನ್‌ಷನ್ ಸೆಂಟರ್ ನಿರ್ಮಾಣಕ್ಕಾಗಿ ನಗರ ತನ್ನ ಪ್ರಮುಖ ಅರಣ್ಯಪ್ರದೇಶವನ್ನೇ ಕಳೆದುಕೊಳ್ಳುವ ಸಾಧ್ಯತೆಯ ಕುರಿತು ಪ್ರತಿಭಟನೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರೀನ್‌ಪೀಸ್ ಇಂಡಿಯಾದ ಹವಾಮಾನ ಮತ್ತು ಇಂಧನ ವಿಭಾಗದ ಕ್ಯಾಂಪೇನರ್ ಅಮೃತಾ ಎಸ್.ಎನ್. “ ‘ಮೂರ್ಖʼ ಯೋಜನೆಗಳು ಎಂದರೆ, ದೈನಂದಿನ ಜನಜೀವನಕ್ಕೆ ಅಡ್ಡಿ ಉಂಟುಮಾಡುವ, ವಿಳಂಬಗತಿಯಲ್ಲಿ ಸಾಗುವ, ಭರಿಸಲಾಗದ ವೆಚ್ಚಗಳ ಹೊರೆಯಿಂದ ಕೂಡಿರುವ, ಇನ್ನೂ ಪೂರ್ಣಗೊಳ್ಳದ ಅಥವಾ ಉದ್ಧೇಶಿತ ಸಮಸ್ಯೆಗಳನ್ನೇ ಪರಿಹರಿಸಲು ವಿಫಲವಾಗುವ ಯೋಜನೆಗಳಾಗಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆಗೆ ಉಮೇದುವಾರ ಅಭ್ಯರ್ಥಿಗಳು, ನಾಗರಿಕರು ವಿರೋಧಿಸುತ್ತಿರುವ ಈ ಸಮಸ್ಯೆಗಳನ್ನು ಚುನಾವಣೆಗೆ ಮುನ್ನವೇ ಬಗೆಹರಿಸಬೇಕು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಗೆಪಾಟಲಾಗವುದನ್ನು ತಡೆಯಬೇಕು” ಎಂದು ಹೇಳಿದರು.
ನಗರದಾದ್ಯಂತ ನಡೆಸಲಾದ ಈ ಪ್ರತಿಭಟನೆಗಳು ಕಳೆದ ದಶಕದ ಅಭಿವೃದ್ಧಿ ಮಾದರಿಯ ವಿರುದ್ಧದ ಪ್ರತಿರೋಧವಾಗಿದ್ದು, ಈ ಮಾದರಿಗಳು ಪಾದಚಾರಿ ಮಾರ್ಗ, ಉಸಿರಾಡಲು ಶುದ್ಧ ಗಾಳಿ ಮತ್ತು ನಗರದ ಕಡಿಮೆಯಾಗುತ್ತಿರುವ “ಹಸಿರು-ನೀಲಿ” (ಕೆರೆಗಳು ಮತ್ತು ಉದ್ಯಾನಗಳು) ಪ್ರದೇಶಗಳಿಗಿಂತ ಫ್ಲೈಓವರ್‌ಗಳು ಮತ್ತು ರಸ್ತೆ ವಿಸ್ತರಣೆಗಳಿಗೆ ಆದ್ಯತೆ ನೀಡಿದ್ದನ್ನು ಪ್ರಶ್ನಿಸಿದವು.
ಮಲ್ಲೇಶ್ವರಂ ಪ್ರದೇಶದಲ್ಲಿ ಯೋಜಿಸಲಾಗಿರುವ ಅವಿವೇಕದ ಯೋಜನೆಯ ಕುರಿತು ಮಾತನಾಡುತ್ತ ಮಲ್ಲೇಶ್ವರಂ ಸೋಶಿಯಲ್ ಸದಸ್ಯರಾದ ಕೌಸ್ತುಭ್ ರಾವ್ “ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಮತ್ತು ಜೀವ ವೈವಿಧ್ಯತೆಗೆ ಪ್ರಾಧಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನಗರದಲ್ಲಿ ಈಗಿರುವ ಹಸಿರು ಆವರಣವನ್ನು ರಕ್ಷಿಸುವುದು ಮೊದಲ ಹೆಜ್ಜೆಯಾಗಬೇಕು. ನಿಷ್ಕ್ರಿಯಗೊಂಡಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಸಮೀಪದ ದಟ್ಟ ಅರಣ್ಯ ಪರಿಸರವು ಎಲ್ಲ ವರ್ಗದ ಜನರಿಗೆ ಉಪಯುಕ್ತವಾಗುವ ಸಾರ್ವಜನಿಕ ಬಳಕೆಯ ಸ್ಥಳವಾಗಬಹುದು. ಇದನ್ನು ಕನ್‌ವೆನ್‌ಷನ್ ಸೆಂಟರ್ ಆಗಿ ಪರಿವರ್ತಿಸುವುದು ಕೇವಲ ಕೆಲವೇ ವರ್ಗಗಳಿಗೆ ಉಪಯುಕ್ತವಾಗುತ್ತದೆ. ಇದು ಟ್ರಾಫಿಕ್, ಮಾಲಿನ್ಯ ಮತ್ತು ನಗರದ ತಾಪಮಾನವನ್ನು ಹೆಚ್ಚಿಸುತ್ತದೆಯೇ ಹೊರತು, ಜನರಿಗೆ ಬೇಕಾದ ಸಾರ್ವಜನಿಕ ಹಸಿರು ಸ್ಥಳಗಳ ಕೊರತೆಯನ್ನು ಬಗೆಹರಿಸುವುದಿಲ್ಲ” ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.

ಈ ಅಭಿಯಾನವು ಕಳೆದ ಕೆಲವು ತಿಂಗಳಿನಿಂದ ನಗರದಲ್ಲಿ ಹಲವು ನಾಗರಿಕ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಳೆಯ ನಿವಾಸಿಗಳು ಮತ್ತು ಹೊಸ ನಿವಾಸಿಗಳನ್ನು ಒಳಗೊಂಡಂತೆ ನಡೆಸಲಾದ “ಇಮ್ಯಾಜಿನೇರಿಯಂ”ಗಳ ಮುಂದುವರಿದ ಭಾಗವಾಗಿದೆ—ಈ ಕಾರ್ಯಾಗಾರಗಳಲ್ಲಿ ಸರ್ಕಾರದ ದೃಷ್ಟಿಕೋನ (ಸಂಪನ್ಮೂಲ ಹೆಚ್ಚು ಬಳಸುವ ಬೃಹತ್ ಕಾಂಕ್ರೀಟ್ ನಿರ್ಮಾಣಗಳು ಮತ್ತು ಆ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವ ಭರವಸೆ) ಹಾಗು ನಾಗರಿಕರ ದೃಷ್ಟಿಕೋನ (ನೆರಳು ತುಂಬಿದ, ಪರಸ್ಪರ ಸಂಪರ್ಕ ಹೊಂದಿದ ನಗರ— “ಕೊನೆಯ ನಿಲ್ದಾಣ”ದಿಂದ ಮನೆಗೆ ನಡೆದು ಸಾಗುವ ಕಷ್ಟಕರವಲ್ಲದ ಹಾದಿ) ಇವುಗಳಿಗಿರುವ ವ್ಯತ್ಯಾಸವನ್ನು ತಿಳಿಸಲಾಯಿತು.
ಬೆಂಗಳೂರು ರೈಸಿಂಗ್ ಕುರಿತು: ಬೆಂಗಳೂರು ರೈಸಿಂಗ್ ನಗರದ ನಾಗರಿಕರ ನೇತೃತ್ವದ ಚಳುವಳಿಯಾಗಿದ್ದು, ಗ್ರೀನ್‌ಪೀಸ್ ಇಂಡಿಯಾ ಮತ್ತು ವಿವಿಧ ನಾಗರಿಕ ಸಂಘಟನೆಗಳ ಬೆಂಬಲ ಹೊಂದಿದೆ. ಇದು ನಗರದ ನಗರಾಭಿವೃದ್ಧಿ ಯೋಜನೆಯನ್ನು ದುರ್ಬಲರು ಮತ್ತು ದಿನನಿತ್ಯ ಬಳಕೆದಾರರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿ ಮರುರೂಪಿಸಲು, ಉದ್ದೇಶಿಸಿದೆ.
ಹೆಚ್ಚಿನ ವಿವರಗಳಿಗೆ:
ನಿಬೇದಿತಾ ಸಾಹಾ, ಮೀಡಿಯಾ ಆಫೀಸರ್, ಗ್ರೀನ್‌ಪೀಸ್ ಇಂಡಿಯಾ
ಫೋನ್: +91 7045066118 | ಇಮೇಲ್: [email protected]
ಅಮೃತಾ ಎಸ್.ಎನ್., ಹವಾಮಾನ ಮತ್ತು ಇಂಧನ ಕ್ಯಾಂಪೇನರ್, ಗ್ರೀನ್‌ಪೀಸ್ ಇಂಡಿಯಾ
ಫೋನ್: 8304010458 | ಇಮೇಲ್: [email protected]




