‘ಲಾಟರಿ ಕಿಂಗ್’ ಎಂದೇ ಹೆಸರುವಾಸಿಯಾಗಿರುವ ಸಾಂಟಿಯಾಗೋ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ (Future Gaming and Hotel Services) ಕಂಪನಿ ಒಟ್ಟು 1,368 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಕೊಟ್ಟಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ 542 ಕೋಟಿ ರೂ, ಡಿಎಂಕೆ ಪಕ್ಷಕ್ಕೆ 509 ಕೋಟಿ, ವೈಎಸ್‌ಆರ್‌ಸಿಪಿ (YSRCP) 154 ಕೋಟಿ, ಬಿಜೆಪಿಗೆ 100 ಕೋಟಿ ಹಾಗೂ ಕಾಂಗ್ರೆಸ್‌ಗೆ 50 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸುವ ಮೂಲಕ ದೇಣಿಗೆಯನ್ನು ನೀಡಿದೆ. ಈಗ ತಮಿಳುನಾಡು, ಪುದುಚೆರಿ ಚುನಾವಣೆಯಲ್ಲೂ ಸಾಂಟಿಯಾಗೋ ಮಾರ್ಟಿನ್ ಅವರ ಕುಟುಂಬ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕುಟುಂಬದ ಮೂವರು ಚುನಾವಣಾ ಕಣದಲ್ಲಿ ತಮ್ಮದೇ ಹಣ ಬಲ, ರಾಜಕೀಯ ಬಲದೊಂದಿಗೆ ಬೇರೆ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಅವರನ್ನು ಲಾಲ್ಗುಡಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಆಡಳಿತರೂಢ ಡಿಎಂಕೆ ಪಕ್ಷದ ಭದ್ರಕೋಟೆಗಳಲ್ಲಿ ಒಂದಾಗಿರುವ ಈ ಕ್ಷೇತ್ರದಲ್ಲಿ ಶ್ರೀಮಂತ ಕುಟುಂಬದಿಂದ ಬಂದ ಲೀಮಾ ರೋಸ್ ಮಾರ್ಟಿನ್ ಅವರನ್ನು ಸ್ಪರ್ಧೆಗಳಿಸಿ, ಮತದಾನದ ಪರೀಕ್ಷೆಯನ್ನು ಎಐಎಡಿಎಂಕೆ ಎದುರುಗಾಣುತ್ತಿದೆ. ಈ ಕ್ಷೇತ್ರದಲ್ಲಿ ಎಐಎಡಿಎಂಕೆ ಪಕ್ಷ ಕೊನೆಯ ಬಾರಿಗೆ ಗೆದ್ದಿದ್ದು ಎರಡು ದಶಕಗಳ ಹಿಂದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಐಜೆಕೆ (ಇಂಡಿಯಾ ಜನನಾಯಕ ಕಚ್ಚಿ)ಪಕ್ಷದಲ್ಲಿ 14 ವರ್ಷಗಳ ಕಾಲ ಸದಸ್ಯತ್ವ ಹೊಂದಿದ್ದ ಲೀಮಾ, ಇತ್ತೀಚೆಗೆ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಪಕ್ಷದ ಮಹಿಳಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಲೀಮಾ ಅವರನ್ನು ನೇಮಿಸಿದ್ದರು.
ಸಾಂಟಿಯಾಗೋ ಮಾರ್ಟಿನ್ ಮತ್ತು ಲೀಮಾ ದಂಪತಿಗಳ ಮಗ ಚಾರ್ಲ್ಸ್, ಪುದುಚೆರಿಯಲ್ಲಿ ತಮ್ಮದೇ ಸ್ವಂತ ಪಕ್ಷ ಲಚ್ಚಿಯಾ ಜನನಾಯಕ ಕಚ್ಚಿ (ಎಲ್.ಜೆ.ಕೆ) ಅನ್ನು ಸ್ಥಾಪಿಸಿ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಪುದುಚೇರಿಯನ್ನು ಸಿಂಗಾಪುರ ಮತ್ತು ಹಾಂಗ್ ಕಾಂಗ್ನಂತೆ ಅಭಿವೃದ್ಧಿಪಡಿಸಲು ಬಯಸುತ್ತಿರುವುದಾಗಿ ಹೇಳುತ್ತಿರುವ ಜೋಸ್ ಚಾರ್ಲ್ಸ್ ಮಾರ್ಟಿನ್, ಎನ್ಆರ್ ಕಾಂಗ್ರೆಸ್ ಪಕ್ಷದ ಎದುರು ತೊಡೆ ತಟ್ಟಿದ್ದಾರೆ. ಆದರೆ, ಎನ್ಆರ್ ಕಾಂಗ್ರೆಸ್ ಕೂಡ ಎನ್ಡಿಎ ಮೈತ್ರಿ ಪಕ್ಷ ಎನ್ನುವುದು ಇಲ್ಲಿ ಮುಖ್ಯಾಂಶ. ಇದೇ ಕಾರಣಕ್ಕಾಗಿ ಚಾರ್ಲ್ಸ್ ಅವರ ಎಲ್.ಜೆ.ಕೆ ಪಕ್ಷವನ್ನು ಎನ್‌ಡಿಎ ಮೈತ್ರಿಗೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಎನ್ಆರ್ ಕಾಂಗ್ರೆಸ್ ಪ್ರತಿಪಾದಿಸಿತ್ತು. ಆದರೇ, ಬಿಜೆಪಿ ಇದನ್ನು ವಿರೋಧಿಸಿ NDA ಮೈತ್ರಿಗೆ ಸೇರ್ಪಡೆ ಮಾಡಿಕೊಂಡಿರುವುದು ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಎಫ್‌ಸಿಆರ್‌ಎ ತಿದ್ದುಪಡಿ: ಸ್ವಯಂಸೇವಾ ಸಂಸ್ಥೆಗಳು, ಕ್ರೈಸ್ತ ಸಮುದಾಯದ ಕೊರಳಿಗೆ ಕುಣಿಕೆಯಾದ ಕಾಯ್ದೆ
ʼಶ್ರೀಮಂತ ಕುಟುಂಬʼವೊಂದು ಪುದುಚೆರಿಯನ್ನು ವಶಕ್ಕೆ ಪಡೆದುಕೊಳ್ಳುವುದಕ್ಕೆ ಈ ಮೈತ್ರಿ ಪೂರಕವಾಗಲಿದೆ ಎನ್ನುವ ಅಭಿಪ್ರಾಯ ಸ್ವತಃ ಎನ್ಆರ್ ಕಾಂಗ್ರೆಸ್ ಪಕ್ಷದಿಂದಲೇ ವ್ಯಕ್ತವಾಗುತ್ತಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ. ಇದೇ ಕಾರಣಕ್ಕೆ ಇಲ್ಲಿ ರಾಜಕೀಯ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತರೂಢ ಎನ್ಆರ್ ಕಾಂಗ್ರೆಸ್ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿತ್ತು. ಅನೇಕ ಸುತ್ತಿನ ಮಾತುಕತೆಯ ಬಳಿಕ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿದೆ. ಚಾರ್ಲ್ಸ್ ನೇತೃತ್ವದ ಪಕ್ಷ ಬಿಜೆಪಿಯ ‘ಬಿ ಟೀಮ್’ ಆಗಿದ್ದು, ದೀರ್ಘಾವಧಿಯಲ್ಲಿ ಬಿಜೆಪಿಗೆ ಲಾಭವಾಗುವಂತೆ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸುತ್ತಿದ್ದಾರೆ ಎಂಬ ಟೀಕೆಯೂ ಇದೆ.
ಇನ್ನು, ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಮಾರ್ಟಿನ್ ಕುಟುಂಬದ ಮತ್ತೊಬ್ಬ ಪ್ರಮುಖ ವ್ಯಕ್ತಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್, ಅವರು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಪರ್ಯಾಯ ರಾಜಕೀಯವನ್ನು ನೀಡುವುದಾಗಿ ಚುನಾವಣಾ ಕಣಕ್ಕೆ ಇಳಿದ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಒಬ್ಬ ಅನುಭವಿ ಚುನಾವಣಾ ತಂತ್ರಜ್ಞನಾಗಿಯೂ ಗುರುತಿಸಿಕೊಂಡಿರುವ ಅರ್ಜುನ್ ಡಿಎಂಕೆ ಜೊತೆ ಈ ಹಿಂದೆ ಕೆಲಸ ಮಾಡಿದ್ದರು ಮತ್ತು ವಿಸಿಕೆ ಜೊತೆ ಕೆಲಸ ಮಾಡಿದ್ದರು. ಈಗ ಟಿವಿಕೆ ಪಕ್ಷದೊಂದಿಗೆ ತಮ್ಮ ಕೈ ಜೋಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಟಿವಿಕೆ ಅಭ್ಯರ್ಥಿಯಾಗಿ ವಿಲ್ಲಿವಕ್ಕಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ತಮಿಳುನಾಡು ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಗಳಲ್ಲಿ ಹಣದ ಬಲದಿಂದಲೇ ಮೂರು ಪಕ್ಷಗಳೊಂದಿಗೆ ಕೈ ಜೋಡಿಸಿರುವ ಲಾಟರಿ ದೊರೆ ಮಾರ್ಟಿನ್ ಕುಟಂಬದ ಸದಸ್ಯರು ಈ ಬಾರಿ ಚುನಾವಣೆಯಲ್ಲಿ ಹಣದ ಬಲದಿಂದ ಯಾವ ರೀತಿಯಲ್ಲಿ ಮತದಾರರನ್ನು ಸೆಳೆಯುವಲ್ಲಿ ಪ್ರಭಾವ ಬೀರುತ್ತಾರೆ ಎನ್ನುವುದು ಕುತೂಹಲವಾಗಿದೆ. ಈ ನಡವೆ ಮಾರ್ಟಿನ್ ಅವರ ಗ್ರೂಪ್ ಆಫ್ ಕಂಪೆನಿ ಜಾರಿ ನಿರ್ದೇಶನಾಲಯದಿಂದ ತನಿಖೆ/ವಿಚಾರಣೆಯನ್ನು ಎದುರಿಸುತ್ತಿದೆ ಎನ್ನುವುದು ಕೂಡ ಇಲ್ಲಿ ಪ್ರಮುಖಾಂಶ.
ಏಪ್ರಿಲ್ 9 ರಂದು ಪುದುಚೇರಿಯಲ್ಲಿ ಮತ್ತು ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಮೇ 4 ರಂದು ಫಲಿತಾಂಶ ಹೊರಬೀಳಲಿದೆ.




