ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ ಬ್ಯಾರಿ ಭಾಷೆಯನ್ನೇ ಮಾತನಾಡುವ ಮೂಲಕ ಮಾತೃ ಭಾಷೆ ಸಂಸ್ಕೃತಿಯನ್ನು ಉಳಿಸುವಂತಾಗಬೇಕು. ಅದಕ್ಕೆ ಪಾಲಕರು ಆಧ್ಯತೆ ನೀಡಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್ ಹೇಳಿದರು.
ಬೆಂಗಳೂರಿನ ಹಮೀದ್ ಶಾ ಕಾಂಪ್ಲೆಕ್ಸ್‌ನ ಉರ್ದು ಸಭಾಂಗಣದಲ್ಲಿ ಬೆಂಗಳೂರಿನ ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್ (ಎಂಎಂವೈಸಿ)ನ ಸಹಯೋಗದೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ‘ಬ್ಯಾರಿ ಭಾಷಾ ದಿನ’ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷಾ ದಿನಾಚರಣೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇದೇ ವೇಳೆ, ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ (ರಿ)ಬೆಂಗಳೂರು ಸಂಘಟನೆಯ ಉಪಾಧ್ಯಕ್ಷ ಬಿ.ಎಂ ಉಮರ್ ಹಾಜಿ ಅಕಾಡೆಮಿಯ ʼಬೆಲ್ಕಿರಿʼ ದ್ವೈಮಾಸಿಕ 10ನೇ ಸಂಚಿಕೆ ಬಿಡುಗಡೆ ಗೊಳಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ, ಕವಿ ಅನ್ಸಾರ್ ಕಾಟಿಪಳ್ಳ ರಚಿಸಿ, ಅಶ್ರಫ್ ಅಪೋಲೊ ಹಾಡಿರುವ ಬ್ಯಾರಿ ಭಾಷಾ ದಿನಾಚರಣೆಯ ʼನಙ ಬ್ಯಾರಿಙ, ನಙ ಬ್ಯಾರಿಙ ವಿಶೇಷ ಹಾಡನ್ನು ಬೆಂಗಳೂರಿನ ಬ್ಯಾರೀಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಖಲಂದರ್ ಕೊಯಿಲ ಬಿಡುಗಡೆ ಗೊಳಿಸಿದರು.
ಬ್ಯಾರೀಸ್ ಬ್ಯುಸಿನೆಸ್ ಫೋರಂ ಬೆಂಗಳೂರು ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ಬೆಂಗಳೂರು ಬ್ಯಾರಿ ಜಮಾತ್ ಕನಕನಗರ, ಆರ್.ಟಿ. ನಗರ ಇದರ ಅಧ್ಯಕ್ಷ ಸವಾದ್ ಮುಹಮ್ಮದ್ ಕುಂಞಿ ಹಾಗೂ ಕಾರ್ಯಕ್ರಮದ ಸದಸ್ಯೆ ಸಂಚಾಲಕಿ, ಬೆಲ್ಕಿರಿ ಮಾಸಿಕದ ಸಂಪಾದಕಿ ಹಫ್ಸಾ ಬಾನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್ನ ಅಧ್ಯಕ್ಷ ಅಬೂಬಕ್ಕರ್ ಹೆಚ್. ಸ್ವಾಗತಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶಮೀರ್ ಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು. ಹಮೀದ್ ಹಸನ್ ಮಾಡೂರು ಧನ್ಯವಾದವಿತ್ತರು. ಅಕಾಡೆಮಿ ಸದಸ್ಯರಾದ ಬಿ.ಎಸ್. ಮುಹಮ್ಮದ್, ತಾಜುದ್ದೀನ್ ಅಮ್ಮುಂಜೆ, ಶಮೀರಾ ಜಹಾನ್ ಉಪಸ್ಥಿತರಿದ್ದರು.



