ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಚೀನಾದ ಶೆನ್‌ಜೆನ್ ನಗರದಲ್ಲಿ ತಮ್ಮ ಮೊದಲ ಐತಿಹಾಸಿಕ ತ್ರಿಪಕ್ಷೀಯ ಸಭೆಯನ್ನು ನಡೆಸಿದರು. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನೇಪಥ್ಯದಲ್ಲಿ ಮಾತುಕತೆ ನಡೆದಿದೆ.
ಸುಮಾರು 60 ರಿಂದ 90 ನಿಮಿಷಗಳ ಕಾಲ ನಡೆದ ಈ ಮಹತ್ವದ ಮಾತುಕತೆಯ ನಂತರ, ಮೂವರೂ ನಾಯಕರು ಜಂಟಿಯಾಗಿ ‘ಶಾಂತಿಯತ್ತ ಘೋಷಣೆ’ (Declaration Toward Peace) ದಾಖಲೆಗೆ ಸಹಿ ಹಾಕಿದರು. ಈ ಮೂಲಕ ಜಾಗತಿಕ ಭದ್ರತೆ ಮತ್ತು ಸ್ಥಿರತೆಗಾಗಿ ನಾಲ್ಕು ಪ್ರಮುಖ ಪ್ರತಿಜ್ಞೆಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: AI ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ
ನಾಲ್ಕು ಪ್ರಮುಖ ಪ್ರತಿಜ್ಞೆಗಳು ಯಾವುವು?
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕಾಯಂ ಸದಸ್ಯ ರಾಷ್ಟ್ರಗಳಾಗಿ ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು, ಜಾಗತಿಕ ಸವಾಲುಗಳಿಗೆ ವಿಶ್ವಸಂಸ್ಥೆಯು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುವಂತೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯ ತನ್ನ ಮೂಲ ಧ್ಯೇಯಕ್ಕೆ ಬದ್ಧವಾಗಿರುವಂತೆ ಅದರಲ್ಲಿ ಸುಧಾರಣೆ ತರಲು ಬದ್ಧವಾಗಿವೆ.
- ಎಲ್ಲಾ ರಾಷ್ಟ್ರಗಳ ಹಿತದೃಷ್ಟಿಯಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಮೂರೂ ದೇಶಗಳು ಯೋಜಿಸಿವೆ. ಜಾಗತಿಕ ಇಂಧನ ಹರಿವಿನ ಸ್ಥಿರತೆಯ ಮಹತ್ವವನ್ನು ನಾಯಕರು ಪುನರುಚ್ಚರಿಸಿದ್ದಾರೆ.
- ರಾಜ್ಯದ ಸಮ್ಮತಿ ಮತ್ತು ಸರ್ಕಾರಿ ಅಧಿಕಾರಿಗಳ ವಿನಾಯಿತಿ ತತ್ವಗಳಿಗೆ ಪರಮೋಚ್ಚ ಗೌರವ ನೀಡಬೇಕು ಎಂದು ಮೂವರು ರಾಷ್ಟ್ರಾಧ್ಯಕ್ಷರೂ ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಮತ್ತು ಅಂತಹ ಇತರ ಸಂಸ್ಥೆಗಳು ತಮ್ಮ ನ್ಯಾಯವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಹಮತ ವ್ಯಕ್ತಪಡಿಸಲಾಗಿದೆ.
- “ಪರಮಾಣು ಯುದ್ಧವನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಮತ್ತು ಅದನ್ನು ಎಂದಿಗೂ ಮಾಡಬಾರದು” ಎಂದು ಮೂವರು ನಾಯಕರು ಪುನರುಚ್ಚರಿಸಿದ್ದಾರೆ. ಪರಮಾಣು ಅಪಾಯಗಳನ್ನು ತಗ್ಗಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಮೂರೂ ರಾಷ್ಟ್ರಗಳು ನಿರಂತರ ಸಂವಾದ ನಡೆಸಲಿವೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, “ನಾವು ನಿಜವಾಗಿಯೂ ಇತಿಹಾಸ ನಿರ್ಮಿಸುತ್ತಿದ್ದೇವೆ. ಜಗತ್ತಿನ ಅತಿ ದೊಡ್ಡ ಪರಮಾಣು ಶಕ್ತಿಗಳಾದ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಭೂಮಿಯ ಮೇಲಿನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಹಾಗೂ ಅವುಗಳ ಬಳಕೆಯ ಅಪಾಯವನ್ನು ತಗ್ಗಿಸುವ ಬಗ್ಗೆ ಚರ್ಚಿಸಲು ವಿಶಿಷ್ಟ ಸ್ಥಾನದಲ್ಲಿವೆ” ಎಂದಿದ್ದಾರೆ.
ಈ ಶೃಂಗಸಭೆಯನ್ನು “ಅಭೂತಪೂರ್ವ ಮಹತ್ವದ್ದು” ಎಂದು ಬಣ್ಣಿಸಿದ ಚೀನಾ ಅಧ್ಯಕ್ಷ ಕ್ಸಿ, ಮಹಾಶಕ್ತಿಗಳು ಸಾಮರಸ್ಯದಿಂದ ಬಾಳಿದಾಗ ಮಾತ್ರ ಜಗತ್ತು ಶಾಂತಿಯಿಂದಿರಲು ಸಾಧ್ಯ. ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಿ ನಾಶಪಡಿಸಬೇಕು ಎಂದು ಹೇಳಿದ್ದಾರೆ.
ಉಕ್ರೇನ್ ಸಂಘರ್ಷ ಸೇರಿದಂತೆ ಪ್ರಾದೇಶಿಕ ವಿವಾದಗಳನ್ನು ಬಗೆಹರಿಸುವಲ್ಲಿ ಮೂರೂ ದೇಶಗಳಿಗೆ ಅನೇಕ ಸಮಾನ ಹಿತಾಸಕ್ತಿಗಳಿವೆ ಮತ್ತು ಅಂತಾರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪುಟಿನ್ ತಿಳಿಸಿದ್ದಾರೆ.



