2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವುದು ಸಂತ್ರಸ್ತೆಯ ಬದುಕಿನಲ್ಲಿ ಮತ್ತೆ ಭೀತಿಯ ಬಿರುಗಾಳಿ ಎಬ್ಬಿಸಿದೆ. ಒಂದೆಡೆ ಅಪರಾಧಿಗಳಿಗೆ ರಾಜಕೀಯ ವೇದಿಕೆಗಳಲ್ಲಿ ಹೂಮಾಲೆ ಹಾಕಿ ಸನ್ಮಾನಿಸುವ ಪ್ರವೃತ್ತಿ, ಮತ್ತೊಂದೆಡೆ ಜೀವಭಯದಿಂದ ಊರು ಬಿಡಬೇಕಾದ ಬಿಲ್ಕಿಸ್ ಬಾನೋವಿನಂತಹ ಸಂತ್ರಸ್ತೆಯರು.
ದೇಶದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ದೀರ್ಘ, ಯಾತನಾಕಾರಿ ಕಾನೂನು ಹೋರಾಟಗಳಲ್ಲಿ ಗುಜರಾತ್ನ ಬಿಲ್ಕಿಸ್ ಬಾನೋ ಪ್ರಕರಣವು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. 2002ರ ಮಾರ್ಚ್ ತಿಂಗಳಲ್ಲಿ ನಡೆದ ಕೋಮು ಗಲಭೆಯ ಕ್ರೌರ್ಯಕ್ಕೆ ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 19 ವರ್ಷದ ಗರ್ಭಿಣಿ ಯುವತಿ ಬಿಲ್ಕಿಸ್ ಬಾನೋ. ಕಳೆದ 24 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಲೇ ಇದ್ದಾರೆ. ಒಮ್ಮೆ ನ್ಯಾಯ ಸಿಕ್ಕಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ, ಈ ವ್ಯವಸ್ಥೆಯು ಮತ್ತೊಂದು ದಿಕ್ಕಿನಿಂದ ಕೊಟ್ಟ ನ್ಯಾಯವನ್ನು ಕಿತ್ತು, ಕುಟುಂಬವನ್ನು ಭೀತಿಯ ಕೂಪಕ್ಕೆ ದೂಕುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ. ಇದರಿಂದಾಗಿ ಬಿಲ್ಕಿಸ್ ಬಾನೋ ಅವರ ಗಾಯದ ಮೇಲೆ ಮತ್ತೊಮ್ಮೆ ಬರೆ ಎಳೆದಂತಾಗಿದೆ.
ಕಣ್ಣೆದುರೇ ತಮ್ಮ ಮೂರು ವರ್ಷದ ಕಂದಮ್ಮನನ್ನು ಬರ್ಬರವಾಗಿ ಕೊಂದ, ಐದು ತಿಂಗಳ ಗರ್ಭಿಣಿಯಾಗಿದ್ದ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆ ದುಷ್ಕರ್ಮಿಗಳು ಜೈಲಿನಿಂದ ಹೊರಬರುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಬಿಲ್ಕಿಸ್ ಬಾನೋ ತಮ್ಮ ಕುಟುಂಬ ಸಮೇತ ಗುಜರಾತ್ ತೊರೆಯುವಂತಾಗಿದೆ. ಬಿಲ್ಕಿಸ್ ಅವರೇ ಹೇಳುವಂತೆ, ಅವರಿಗೆ ಕನಿಷ್ಠ ನೋಟಿಸ್ ಕೂಡ ನೀಡದೆ, ನನ್ನ ವಾದವನ್ನು ಆಲಿಸದೆ ಅಪರಾಧಿಗಳಿಗೆ ಜಾಮೀನು ನೀಡಲಾಗಿದೆ!
ಒಂದೆಡೆ ಬಿಜೆಪಿ ನಾಯಕರು ಇಂತಹ ಅತ್ಯಾಚಾರ ಅಪರಾಧಿಗಳಿಗೆ ಹೂಮಾಲೆ ಹಾಕಿ, ಸಂಸ್ಕಾರವಂತರು ಎಂದು ಕೊಂಡಾಡುತ್ತಿದ್ದಾರೆ. ಇನ್ನೊಂದೆಡೆ ಸಂತ್ರಸ್ತರು ಜೀವಭಯದಿಂದ ತಲೆಮರೆಸಿಕೊಂಡು ಬದುಕುವ ದುಸ್ಥಿತಿಯಿದೆ. ಇದು ದೇಶದ ಪ್ರಜಾಪ್ರಭುತ್ವ ಮತ್ತು ನ್ಯಾಯವ್ಯವಸ್ಥೆಯ ಮುಂದೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ
2002ರ ಆ ಕರಾಳ ದಿನ: ನಡೆದಿದ್ದೇನು? ಬಿಲ್ಕಿಸ್ ಕಾನೂನು ಸಮರ
ಅದು 2002ರ ಫೆಬ್ರವರಿ 27. ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ಬೆನ್ನಲ್ಲೇ ಇಡೀ ಗುಜರಾತ್ ಕೋಮು ಗಲಭೆಯ ಜ್ವಾಲೆಯಲ್ಲಿ ಹೊತ್ತಿ ಉರಿಯಿತು. ದಾಹೋದ್ ಜಿಲ್ಲೆಯ ರಾಧಿಕಪುರ ಗ್ರಾಮದ ನಿವಾಸಿಯಾಗಿದ್ದ 19 ವರ್ಷದ ಬಿಲ್ಕಿಸ್ ಬಾನೋ ಅವರು ಆ ಸಮಯದಲ್ಲಿ ಐದು ತಿಂಗಳ ಗರ್ಭಿಣಿ. ಗಲಭೆಕೋರರ ದಾಳಿಯಿಂದ ತಪ್ಪಿಸಿಕೊಳ್ಳಲು ಬಿಲ್ಕಿಸ್ ಬಾನೋ, ಅವರ ಮೂರು ವರ್ಷದ ಮಗಳು ಸಾಲೇಹಾ, ತಾಯಿ, ಸೋದರ ಸಂಬಂಧಿಗಳು ಸೇರಿದಂತೆ ಕುಟುಂಬದ 17 ಮಂದಿ ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟು ಓಡಿದ್ದರು.
2002ರ ಮಾರ್ಚ್ 3ರಂದು ಈ ಕುಟುಂಬವು ಚಪ್ಪರ್ವಾಡ್ ಗ್ರಾಮದ ಬಳಿ ಅಡಗಿಕೊಂಡಿದ್ದರು. ಅಂದು ಕುಡುಗೋಲು, ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದ 20-30 ಮಂದಿಯ ಉದ್ರಿಕ್ತ ಗುಂಪು ಇವರ ಮೇಲೆ ಎರಗಿತ್ತು. ಈ ಭೀಕರ ದಾಳಿಯಲ್ಲಿ ಬಿಲ್ಕಿಸ್ ಬಾನೋ, ಅವರ ತಾಯಿ ಮತ್ತು ಎರಡು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಸೋದರ ಸಂಬಂಧಿ ಶಮೀಮ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.
ಅಷ್ಟೇ ಅಲ್ಲದೆ, ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಾಲೇಹಾಳನ್ನು ತಾಯಿಯ ಕೈಯಿಂದ ಕಿತ್ತುಕೊಂಡ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಎರಡು ದಿನದ ಹಸುಗೂಸು ಸೇರಿದಂತೆ ಕುಟುಂಬದ 14 ಮಂದಿ ಕೊಲೆಯಾದರು. ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಿಲ್ಕಿಸ್ ಬಾನೋ ಸತ್ತಿದ್ದಾರೆಂದು ಭಾವಿಸಿದ ದಾಳಿಕೋರರು ಅಲ್ಲಿಂದ ತೆರಳಿದ್ದರು. ಸುಮಾರು ಮೂರು ಗಂಟೆಗಳ ನಂತರ ಪ್ರಜ್ಞೆ ಮರಳಿದ ಬಿಲ್ಕಿಸ್, ಬಟ್ಟೆಯೂ ಇಲ್ಲದ ಸ್ಥಿತಿಯಲ್ಲಿ ಬುಡಕಟ್ಟು ಮಹಿಳೆಯೊಬ್ಬರ ಸಹಾಯ ಪಡೆದು ಪೊಲೀಸ್ ಠಾಣೆ ತಲುಪಿದ್ದರು. ಅಂದಿನಿಂದ ನಿರಂತರವಾಗಿ ಹೋರಾಟದ ಹಾದಿಯಲ್ಲಿ ಬಿಲ್ಕಿಸ್ ಬಾನೋ ಸಾಗುತ್ತಿದ್ದಾರೆ.
ಬಿಲ್ಕಿಸ್ ಬಾನೋ ಅವರ ನ್ಯಾಯದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ; ಪ್ರತಿ ಹೆಜ್ಜೆಯಲ್ಲೂ ಸರ್ಕಾರಿ ವ್ಯವಸ್ಥೆ, ಪೊಲೀಸರು ಮತ್ತು ವೈದ್ಯರ ಸಾಕ್ಷ್ಯ ನಾಶದ ವಿರುದ್ಧ ಅವರು ಹೋರಾಡಬೇಕಾಯಿತು. ಘಟನೆಯ ನಂತರ ಗೋಧ್ರಾ ಪೊಲೀಸರು ಆರೋಪಿಗಳ ಪತ್ತೆಯಾಗಿಲ್ಲ ಎಂದು ಸುಳ್ಳು ವರದಿ ಸಲ್ಲಿಸಿದ್ದರು. ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಾಕ್ಷ್ಯಗಳಿದ್ದರೂ ಪೊಲೀಸರ ವರದಿಯನ್ನು ಅಂಗೀಕರಿಸಿ ಪ್ರಕರಣವನ್ನು ಮುಚ್ಚಿಹಾಕಿತ್ತು.
ಅದಾದ ಬಳಿಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ನೆರವಿನೊಂದಿಗೆ ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿತು. ಸಿಬಿಐ ತಂಡವು ಸಾಮೂಹಿಕ ಸಮಾಧಿಗಳನ್ನು ಅಗೆದು ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಿತು. ಗುಜರಾತ್ನಲ್ಲಿ ತಮಗೆ ಜೀವಬೆದರಿಕೆ ಇದೆ ಮತ್ತು ನಿಷ್ಪಕ್ಷಪಾತ ವಿಚಾರಣೆ ನಡೆಯುವುದಿಲ್ಲ ಎಂದು ಬಿಲ್ಕಿಸ್ ಕೋರಿದ ಮೇರೆಗೆ, 2004ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿತು.
ಇದನ್ನೂ ಓದಿ: ಇಂದು ಬಿಲ್ಕಿಸ್ ಬಾನೊ, ನಾಳೆ ಇನ್ಯಾರೋ, ಕಾರಣಕೊಡಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಛಾಟಿ
2008ರ ಜನವರಿ 21ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಯನ್ನು ದೋಷಿ ಎಂದು ಘೋಷಿಸಿತು. 2017ರ ಮೇ 4ರಂದು ಬಾಂಬೆ ಹೈಕೋರ್ಟ್ 11 ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು. ಅಷ್ಟೇ ಅಲ್ಲದೆ, ಈ ಹಿಂದೆ ಖುಲಾಸೆಯಾಗಿದ್ದ ಐವರು ಗುಜರಾತ್ ಪೊಲೀಸರು ಮತ್ತು ಇಬ್ಬರು ಸರ್ಕಾರಿ ವೈದ್ಯರನ್ನೂ ಸಾಕ್ಷ್ಯ ನಾಶದ ಅಪರಾಧದಡಿ ದೋಷಿಗಳೆಂದು ಘೋಷಿಸಿತು.
2019ರ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಬಿಲ್ಕಿಸ್ ಬಾನೋ ಅವರಿಗೆ 50 ಲಕ್ಷ ರೂ. ಪರಿಹಾರ, ಸರ್ಕಾರಿ ಉದ್ಯೋಗ ಮತ್ತು ಅವರು ಬಯಸಿದ ಸ್ಥಳದಲ್ಲಿ ವಸತಿ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಆದೇಶಿಸಿತು. ಆದರೆ 2022ರ ಆಗಸ್ಟ್ 15ರಂದು (ಸ್ವಾತಂತ್ರ್ಯ ದಿನದಂದು) ಗುಜರಾತ್ನ ಬಿಜೆಪಿ ಸರ್ಕಾರವು ತನ್ನ 1992ರ ಹಳೆಯ ಕ್ಷಮಾದಾನ ನೀತಿಯನ್ನು ಬಳಸಿಕೊಂಡು ಎಲ್ಲಾ 11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಿತು!
2024ರ ಜನವರಿ 8ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಅವಧಿಪೂರ್ವ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಎಲ್ಲ 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಿತು. ಪೀಠವು “ಶಿಕ್ಷೆ ವಿಧಿಸಿದ್ದು ಮಹಾರಾಷ್ಟ್ರದ ನ್ಯಾಯಾಲಯವಾಗಿರುವುದರಿಂದ ಕ್ಷಮಾದಾನ ನೀಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ; ಗುಜರಾತ್ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ” ಎಂದು ತೀರ್ಪು ನೀಡಿತು. ಆಗ ದೇಶಾದ್ಯಂತ ನ್ಯಾಯಾಂಗದ ಬಗ್ಗೆ ದೊಡ್ಡ ಭರವಸೆ ಮೂಡಿತ್ತು.
ಆದರೆ, 2026ರ ಅಕ್ಟೋಬರ್ 28ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ವಿಭಾಗೀಯ ಪೀಠವು ನೀಡಿದ ಆದೇಶವು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಪ್ರಕರಣದ 11 ಅಪರಾಧಿಗಳ ಪೈಕಿ ಬಿಪಿನ್ಚಂದ್ರ ಕನೈಯಾಲಾಲ್ ಜೋಶಿ (ಲಾಲಾ ಡಾಕ್ಟರ್) ಮತ್ತು ಪ್ರದೀಪ್ ರಮಣ್ಲಾಲ್ ಮೋಧಿಯಾ ಎಂಬ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ, ಅವರಿಗೆ ಜಾಮೀನು ಮಂಜೂರು ಮಾಡಿದೆ.
ಇಬ್ಬರೂ ಅಪರಾಧಿಗಳು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ. ಅಪರಾಧಿಗಳಲ್ಲಿ ಒಬ್ಬರಾದ ಬಿಪಿನ್ಚಂದ್ರ ಜೋಶಿ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಪ್ರದೀಪ್ ಮೋಧಿಯಾ ಅವರ ಹೆಸರು ಆರಂಭಿಕ ಎಫ್ಐಆರ್ನಲ್ಲಿ ಇರಲಿಲ್ಲ, ಘಟನೆ ನಡೆದ ಸುಮಾರು ಮೂರು ವರ್ಷಗಳ ನಂತರ ಅವರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. 2017ರ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇವರು ಸಲ್ಲಿಸಿರುವ ಮೇಲ್ಮನವಿಯಲ್ಲಿ ಕಾನೂನು ಮತ್ತು ವಾಸ್ತವಾಂಶಗಳ ಕುರಿತು ವಿಚಾರಣೆ ನಡೆಸಬೇಕಾದ ಅಂಶಗಳಿವೆ ಎಂದು ಹೇಳುತ್ತಾ ಪೀಠ ಜಾಮೀನು ನೀಡಿ, ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಆದರೆ ವಿಚಾರಣೆಯೂ ಇಲ್ಲದೆ, ಜಾಮೀನೂ ಇಲ್ಲದೆ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನೂ ಈಗ ಎತ್ತಬೇಕಾಗುತ್ತದೆ?
ಅಪರಾಧಿಗಳಿಗೆ ಜಾಮೀನು ನೀಡಿದ ಈ ಆದೇಶದ ವಿರುದ್ಧ ಕಾನೂನು ತಜ್ಞರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಹತ್ಯೆಯಂತಹ ಘೋರ ಅಪರಾಧದಲ್ಲಿ ಶಿಕ್ಷೆ ಅಮಾನತುಗೊಳಿಸುವಾಗ, ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರಿಗೆ ಕನಿಷ್ಠ ನೋಟಿಸ್ ನೀಡಿ, ಅವರ ವಾದವನ್ನು ಆಲಿಸದಿರುವುದು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಅಲ್ಲದೆ, ಈ ಆದೇಶವನ್ನೇ ಆಧಾರವಾಗಿಟ್ಟುಕೊಂಡು ಉಳಿದ 9 ಅಪರಾಧಿಗಳು ಸಹ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
ಇದನ್ನೂ ಓದಿ: “ಕಷ್ಟಪಟ್ಟು ಹೋರಾಡಿ ಗಳಿಸಿಕೊಂಡ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ” : ಬಿಲ್ಕಿಸ್ ಬಾನೋ
ಭೀತಿಯಲ್ಲಿ ಬದುಕು: ಮತ್ತೆ ಪಲಾಯನ
ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿರುವ ಆದೇಶ ಹೊರಬಿದ್ದ ಬೆನ್ನಲ್ಲೇ, ಬಿಲ್ಕಿಸ್ ಬಾನೋ ಮತ್ತು ಅವರ ಪತಿ ಯಾಕೂಬ್ ರಸೂಲ್ ಅವರು ತಮ್ಮ ಮಕ್ಕಳೊಂದಿಗೆ ಗುಜರಾತ್ನ ತಮ್ಮ ನಿವಾಸವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. 2002ರ ಗಲಭೆಯ ನಂತರ ಸುಮಾರು ಆರು ವರ್ಷಗಳ ಕಾಲ ಅವರು 20ಕ್ಕೂ ಹೆಚ್ಚು ಬಾರಿ ಮನೆ ಬದಲಾಯಿಸಿ ಅಜ್ಞಾತವಾಸ ಅನುಭವಿಸಿದ್ದರು. 2022ರಲ್ಲಿ ಅಪರಾಧಿಗಳು ಬಿಡುಗಡೆಯಾದಾಗಲೂ ಇದೇ ರೀತಿ ಊರು ಬಿಟ್ಟಿದ್ದರು. ಇದೀಗ 2026ರ ನವೆಂಬರ್ನಲ್ಲಿ ಮತ್ತೊಮ್ಮೆ ಅದೇ ಪಲಾಯನದ ಪರಿಸ್ಥಿತಿ ಎದುರಾಗಿದೆ.
ಈ ಬೆಳವಣಿಗೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಬಿಲ್ಕಿಸ್ ಬಾನೋ, ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಭಾವನಾತ್ಮಕ ಹೇಳಿಕೆಯಲ್ಲಿ ಹೀಗೆಂದಿದ್ದಾರೆ: “ನನ್ನ ಕಣ್ಣೀರು ಇನ್ನೂ ಆರಿಲ್ಲ. 19ನೇ ವಯಸ್ಸಿನಲ್ಲಿ ನನ್ನ ಮಗು, ನನ್ನ ಕುಟುಂಬ, ನನ್ನ ಬದುಕನ್ನೇ ಕಳೆದುಕೊಂಡೆ. 24 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನಾನು ಹೋರಾಡಿ ಗೆದ್ದ ನ್ಯಾಯವನ್ನೇ ಇಂದು ಮತ್ತೆ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಕಾಡುತ್ತಿದೆ. ಸುಪ್ರೀಂ ಕೋರ್ಟ್ ನನ್ನ ಅಪರಾಧಿಗಳ ಶಿಕ್ಷೆಯನ್ನು ಅಮಾನತುಗೊಳಿಸುವ ಮುನ್ನ ನನಗೆ ಕನಿಷ್ಠ ಮಾಹಿತಿಯನ್ನೂ ನೀಡಲಿಲ್ಲವೇಕೆ? ನ್ಯಾಯಾಲಯದಲ್ಲಿ ನನ್ನ ಧ್ವನಿಯನ್ನು ಆಲಿಸಲಿಲ್ಲವೇಕೆ? ನನಗೆ ನನ್ನ ಮಕ್ಕಳ, ಕುಟುಂಬದ ಸುರಕ್ಷತೆಯ ಭಯ ಮತ್ತೆ ಕಾಡುತ್ತಿದೆ.”
ಇಲ್ಲಿ ಬಿಲ್ಕಿಸ್ ಬಾನೋ ಪ್ರಕರಣವು ಕೇವಲ ಒಂದು ಕಾನೂನು ಹೋರಾಟವಾಗಿ ಉಳಿದಿಲ್ಲ; ಅದು ದೇಶದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೋಮು ಹಿಂಸಾಚಾರದ ಅಪರಾಧಿಗಳಿಗೆ ಸಿಗುತ್ತಿರುವ ರಾಜಕೀಯ ಬೆಂಬಲದ ಸಂಕೇತವಾಗಿ ಮಾರ್ಪಟ್ಟಿದೆ. 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಈ 11 ಅಪರಾಧಿಗಳನ್ನು ಬಿಡುಗಡೆ ಮಾಡಿದಾಗ, ಸಂಘಪರಿವಾರ ಕಚೇರಿಯಲ್ಲಿ ಅವರಿಗೆ ಹೂಮಾಲೆ ಹಾಕಿ, ಸಿಹಿ ತಿನ್ನಿಸಿ, ಪಾದ ಮುಟ್ಟಿ ನಮಸ್ಕರಿಸಿ ವೀರರಂತೆ ಸ್ವಾಗತಿಸಿತ್ತು. 2023ರ ಮಾರ್ಚ್ನಲ್ಲಿ ಈ ಪ್ರಕರಣದ ಅಪರಾಧಿ ಶೈಲೇಶ್ ಭಟ್, ಗುಜರಾತ್ನ ದಾಹೋದ್ ಬಿಜೆಪಿ ಸಂಸದ ಜಸ್ವಂತ್ಸಿನ್ಹ್ ಭಾಭೋರ್ ಮತ್ತು ಶಾಸಕ ಶೈಲೇಶ್ ಭಾಭೋರ್ ಅವರೊಂದಿಗೆ ಸರ್ಕಾರಿ ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದು, ಬಿಜೆಪಿ ಅತ್ಯಾಚಾರ ಅಪರಾಧಿಗಳಿಗೆ ಬೆಂಬಲ ನೀಡುವ ಕೀಳು ಸ್ಥಿತಿಗೆ ಇಳಿದಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು.
ಉನ್ನಾವೊ ಅತ್ಯಾಚಾರ ಪ್ರಕರಣ, ಕಥುವಾ ಅತ್ಯಾಚಾರ ಪ್ರಕರಣ, ಹತ್ರಾಸ್ ಪ್ರಕರಣ, ಅಂಕಿತಾ ಭಂಡಾರಿ ಹತ್ಯೆ ಪ್ರಕರಣ, ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣ – ಹೀಗೆ ಈ ಎಲ್ಲಾ ಪ್ರಕರಣಗಳು ಒಂದೇ ಸತ್ಯವನ್ನು ಸಾರಿ ಹೇಳುತ್ತವೆ. ಬಿಜೆಪಿಯ ರಾಜಕೀಯ ಅಧಿಕಾರ ಮತ್ತು ಸೈದ್ಧಾಂತಿಕ ಬೆಂಬಲವಿದ್ದರೆ ಎಂತಹದೇ ಘೋರ ಅಪರಾಧ ಎಸಗಿದವರೂ ರಾಜಾರೋಷವಾಗಿ ತಿರುಗಬಹುದು, ಸನ್ಮಾನಿಸಲ್ಪಡಬಹುದು. ಆದರೆ ನ್ಯಾಯ ಕೇಳುವ ಸಾಮಾನ್ಯ ಪ್ರಜೆ ಮತ್ತು ಸಂತ್ರಸ್ತ ಮಹಿಳೆ ಮಾತ್ರ ಜೀವಮಾನವಿಡೀ ಭಯದ ನೆರಳಿನಲ್ಲಿ ಬದುಕಬೇಕಾಗುತ್ತದೆ.
ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಕಾನೂನಿನ ತಾಂತ್ರಿಕ ಕಾರಣಗಳ ನೆಪದಲ್ಲಿ ಅಪರಾಧಿಗಳು ಒಬ್ಬೊಬ್ಬರಾಗಿ ಜೈಲಿನಿಂದ ಹೊರಬರುವಂತಾದರೆ, 24 ವರ್ಷಗಳ ಸುದೀರ್ಘ ಹೋರಾಟಕ್ಕೆ ಅರ್ಥವೇನು ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಅಷ್ಟಕ್ಕೂ ಅಪರಾಧಿಗಳಿಗೆ ಹೂಮಾಲೆ ಹಾಕುವ ಸಂಸ್ಕೃತಿ ಕೊನೆಗೊಂಡು, ಸಂತ್ರಸ್ತರಿಗೆ ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಾಣವಾದಾಗ ಮಾತ್ರ ಒಂದು ದೇಶ ನಾಗರಿಕ ಸಮಾಜವಾಗಲು ಸಾಧ್ಯ. ಬಿಲ್ಕಿಸ್ ಬಾನೋ ಅವರ ಪಲಾಯನ ನಿಂತು, ಅವರಿಗೆ ನಿಜವಾದ ನೆಮ್ಮದಿ ಮತ್ತು ಸಂಪೂರ್ಣ ನ್ಯಾಯ ಸಿಗುವ ದಿನಕ್ಕಾಗಿ ಪ್ರಜಾಪ್ರಭುತ್ವ ಪ್ರೇಮಿಗಳು ಎದುರು ನೋಡುವಂತಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.


