ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪದೋಷಗಳು ಮತ್ತು ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೂ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಎಂದಿಗೂ ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಬುಧವಾರ ಚಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರೊಂದಿಗಿನ ಸಂವಾದದಲ್ಲಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯವೈಖರಿಯ ಬಗ್ಗೆ ಇರುವ ಆರೋಪಗಳ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣೆ ಬಹಿಷ್ಕರಿಸುವ ಬಗ್ಗೆ ಚಿಂತಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಕೇರಳ ಚುನಾವಣೆ | ಪ್ರಧಾನಿ ಮೋದಿ, ವಿಜಯನ್ ‘ದುರಹಂಕಾರಿಗಳು’ ಎಂದ ರಾಹುಲ್ ಗಾಂಧಿ
“ನಮಗೆ ಭಾರತೀಯ ಪ್ರಜಾಪ್ರಭುತ್ವ ಅತ್ಯಂತ ಪವಿತ್ರವಾದದ್ದು. 100 ಅಥವಾ 300 ಪ್ರತಿಶತದಷ್ಟು ಖಚಿತ ಸಾಕ್ಷ್ಯಗಳಿಲ್ಲದೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಸಮಸ್ಯೆಯಿದೆ ಎಂದು ಹೇಳುವುದು ನನಗೂ ಕಷ್ಟಕರ. ಆದರೆ, ನಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ವಿರೋಧ ಪಕ್ಷಗಳು ನಿರ್ಧರಿಸಿದರೆ, ಆ ಕ್ಷಣವೇ ಭಾರತೀಯ ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತದೆ. ಜನರ ಮನಸ್ಸಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯೇ ಅಕ್ರಮ ಎನಿಸಿಕೊಳ್ಳುತ್ತದೆ. ನಾವು ಚುನಾವಣಾ ವ್ಯವಸ್ಥೆಯ ರಚನೆಯನ್ನು ಮುರಿಯಲು ಬಯಸುವುದಿಲ್ಲ,” ಎಂದು ರಾಹುಲ್ ವಿವರಿಸಿದರು.
ಚುನಾವಣಾ ಅಕ್ರಮಗಳಿಂದ ವಿರೋಧ ಪಕ್ಷಗಳಿಗೆ ಭಾರಿ ನಷ್ಟವಾಗುತ್ತಿದ್ದರೂ, ಉದ್ದೇಶಪೂರ್ವಕವಾಗಿಯೇ ಬಹಿಷ್ಕಾರದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು. “ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ ಎಂಬುದು ಭಾರತದ ಜನರಿಗೆ ಮನವರಿಕೆಯಾಗುವವರೆಗೂ ಚುನಾವಣಾ ಕಣದಲ್ಲಿ ಹೋರಾಡುತ್ತಾ, ನಡೆಯುತ್ತಿರುವ ಅಕ್ರಮಗಳನ್ನು ಜನರ ಮುಂದೆ ಬಯಲಿಗೆಳೆಯುವುದೇ ನಮ್ಮ ಕಾರ್ಯತಂತ್ರವಾಗಿದೆ,” ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದೇ ವೇಳೆ ಚುನಾವಣಾ ಆಯೋಗದ ಕುರಿತು ಗಂಭೀರ ಪ್ರತಿಪಾದನೆ ಮಾಡಿದ ರಾಹುಲ್ ಗಾಂಧಿ, “ಚುನಾವಣಾ ಆಯೋಗದ ಒಳಗಿನಿಂದಲೇ ನಮಗೆ ಈಗ ಮಾಹಿತಿಗಳು ಲಭ್ಯವಾಗುತ್ತಿವೆ. ‘ನೋಡಿ, ನಮಗೆ ಇನ್ನು ಮುಂದೆ ಹೀಗೆ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಆಯೋಗದ ಹಿರಿಯ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದ್ದರಿಂದ ಈ ವ್ಯವಸ್ಥೆ ಕುಸಿಯಲು ಹೆಚ್ಚು ಸಮಯ ಬೇಕಿಲ್ಲ,” ಎಂದರು. ಪ್ರಜಾಪ್ರಭುತ್ವ ವಿರೋಧಿ ಭಾರತವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಮಾತ್ರವಲ್ಲ, ಬಹುಸಂಖ್ಯಾತ ಭಾರತೀಯರೂ ಸಿದ್ಧರಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಮಂಗಳವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿಯೂ ರಾಹುಲ್ ಗಾಂಧಿ ‘ಮತ ಕಳ್ಳತನ’ ಮತ್ತು ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದರು. ರಾಹುಲ್ ಅವರ ಈ ಹೇಳಿಕೆಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಟೀಕಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರಜಾಪ್ರಭುತ್ವವನ್ನು ನಾಶಮಾಡಲು ಬಿಜೆಪಿಗೆ ಸುಲಭದ ಹಾದಿ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



