ದೇಶದ ಜೈವಿಕ ಸಂಪನ್ಮೂಲಗಳು ಮತ್ತು ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಜಾರಿಗೆ ತರಲಾದ ‘ರಾಷ್ಟ್ರೀಯ ಹಸಿರು ಭಾರತ ಅಭಿಯಾನ’ ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (PAC) ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಪಿಎಸಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ಕಳಪೆ ಸಾಧನೆಯ ಕುರಿತು ಇಡೀ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದರು.
ಭಾರತದ ಮಹಾಲೇಖಪಾಲರು ಮತ್ತು ಮಹಾನಿಯಂತ್ರಕರ (ಸಿಎಜಿ) 2026ರ ವರದಿ ಸಂಖ್ಯೆ 4ರಲ್ಲಿ ಉಲ್ಲೇಖಿಸಲಾದ ‘ಗ್ರೀನ್ ಇಂಡಿಯಾ ಮಿಷನ್‌ನ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ’ ಕುರಿತು ಸಮಿತಿಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ: ಕೆ ಸಿ ವೇಣುಗೋಪಾಲ್
“ಈ ಯೋಜನೆಯ ವೈಫಲ್ಯದ ಬಗ್ಗೆ ಸಮಿತಿಯ ಎಲ್ಲಾ ಸದಸ್ಯರು ತೀವ್ರ ಕಳವಳಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ಅಭಿಯಾನದಲ್ಲಿ ಏನೂ ನಡೆದಿಲ್ಲ. ಗ್ರೀನ್ ಇಂಡಿಯಾ ಮಿಷನ್ ಸಂಪೂರ್ಣ ವಿಫಲವಾಗಿದೆ,” ಎಂದು ವೇಣುಗೋಪಾಲ್ ನೇರವಾಗಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ದಿನೇ ದಿನೇ ಹದಗೆಡುತ್ತಿರುವ ವಾಯುಮಾಲಿನ್ಯದ ಪರಿಸ್ಥಿತಿಯ ಬಗ್ಗೆ ಸಮಿತಿಯ ಸದಸ್ಯರು ವಿಶೇಷ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಅಭಿಯಾನದ ಅಡಿಯಲ್ಲಿ ಅರಾವಳಿ ಪರ್ವತ ಶ್ರೇಣಿಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು; ಆದರೆ ಆ ನಿಟ್ಟಿನಲ್ಲಿ ಯೋಜನೆಯು ಇನ್ನೂ ಸರಿಯಾಗಿ ಕಾರ್ಯಾರಂಭವೇ ಮಾಡಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇನ್ನೆರಡು ತಿಂಗಳಲ್ಲಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವುದಾಗಿ ಸಚಿವಾಲಯದ ಕಾರ್ಯದರ್ಶಿಗಳು ಭರವಸೆ ನೀಡಿದ್ದರೂ, ಸಚಿವಾಲಯದ ಕ್ರಿಯಾ ಯೋಜನೆ ಮತ್ತು ವಿಳಂಬ ಧೋರಣೆಯ ಬಗ್ಗೆ ಸಮಿತಿಗೆ ತೃಪ್ತಿಯಾಗಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಸಿಎಜಿ ವರದಿಯ ಅಂಕಿಅಂಶಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಈ ಯೋಜನೆಯಡಿ ಕೇವಲ ಶೇ. 5ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಯೋಜನೆಗೆ ಅನುಮೋದಿಸಲಾಗಿದ್ದ ₹2,000 ಕೋಟಿ ಬಜೆಟ್ ಬೆಂಬಲ ಮತ್ತು ಹಣಕಾಸು ಆಯೋಗದ ₹400 ಕೋಟಿ ಅನುದಾನದ ಪೈಕಿ, 10 ವರ್ಷಗಳಲ್ಲಿ ಬಿಡುಗಡೆಯಾಗಿದ್ದು ಕೇವಲ ₹1,149.14 ಕೋಟಿ ಮಾತ್ರ. ಅಲ್ಲದೆ, CAMPA ಮತ್ತು ನರೇಗಾ (MGNREGS) ಯೋಜನೆಗಳೊಂದಿಗೆ ₹10,600 ಕೋಟಿ ಮೊತ್ತದ ಸಮನ್ವಯ ಸಾಧಿಸುವ ಗುರಿಯೂ ಈಡೇರಿಲ್ಲ ಎಂದು ವರದಿ ಬೆಟ್ಟು ಮಾಡಿದೆ.
ಹವಾಮಾನ ಬದಲಾವಣೆಯ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯ (NAPCC) ಎಂಟು ಪ್ರಮುಖ ಅಭಿಯಾನಗಳಲ್ಲಿ ಒಂದಾದ ‘ಗ್ರೀನ್ ಇಂಡಿಯಾ ಮಿಷನ್’ ಅನ್ನು 2014ರ ಫೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ಕೇವಲ ಸಸಿ ನೆಡುವುದಕ್ಕೆ ಸೀಮಿತವಾಗದೆ, ದೇಶದ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು, ಜೀವವೈವಿಧ್ಯ ಸಂರಕ್ಷಣೆ, ಮ್ಯಾಂಗ್ರೋವ್ ಕಾಡುಗಳು ಮತ್ತು ಜೌಗು ಪ್ರದೇಶಗಳ ರಕ್ಷಣೆ ಹಾಗೂ ಅರಣ್ಯವಲಂಬಿತ ಸಮುದಾಯಗಳ ಜೀವನೋಪಾಯವನ್ನು ಬಲಪಡಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.



