ನಿಮ್ಮ ಅಗ್ರ ನಾಲ್ವರು ಬೌಲರ್‌ಗಳಲ್ಲಿ ಸಿರಾಜ್‌ಗೆ ಸ್ಥಾನವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟ. ಆಯ್ಕೆಯಾದ ಬೌಲರ್‌ಗಳು ವಿಕೆಟ್ ಪಡೆಯುತ್ತಿಲ್ಲ ಎಂದಾಗಲಿ, ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ ಎಂದಾಗಲಿ ನಾನು ಹೇಳುತ್ತಿಲ್ಲ. ಆದರೆ ಇವತ್ತು ಮೊದಲ ಅವಧಿಯಲ್ಲಿ ಇನ್ನೂ ಒಂದಷ್ಟು ವಿಕೆಟ್‌ಗಳು ಬಿದ್ದಿದ್ದರೆ ಪಂದ್ಯದ ಚಿತ್ರಣವೇ ಬೇರೆಯಾಗಿರುತ್ತಿತ್ತು
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಮೊದಲ ಟೆಸ್ಟ್ ಗುರುವಾರ ವೆಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಆರಂಭವಾಯಿತು. ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಿತು*.
ಜಸ್‌ಪ್ರೀತ್ ಬುಮ್ರಾ, ಆಕಾಶ್ ದೀಪ್, ಅಂಶುಲ್ ಕಾಂಬೋಜ್ ಮತ್ತು ಪ್ರಸಿದ್ಧ್ ಕೃಷ್ಣ ಈ ನಾಲ್ವರು ವೇಗಿಗಳು. ಸ್ಪಿನ್ ಆಲ್‌ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದರು. ತೊಡೆಯ ಹಿಂಭಾಗದ ಸ್ನಾಯುವಿಗೆ ಗಾಯವಾಗಿದ್ದ ಪ್ರಸಿದ್ಧ್ ಕೃಷ್ಣ, ಆ ಗಾಯದ ಬಳಿಕ ನ್ಯೂಜಿಲೆಂಡ್‌ಗೆ ಆಗಮಿಸಿದ್ದರು.
ಆದರೆ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿಲ್ಲ. ಇದೇ ಪ್ರವಾಸದಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ ‘ಎ’ ಮತ್ತು ನ್ಯೂಜಿಲೆಂಡ್ ‘ಎ’ ತಂಡಗಳ ನಡುವೆ ನಡೆದ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲಿ ಸಿರಾಜ್ 118 ರನ್‌ಗೆ ನಾಲ್ಕು ವಿಕೆಟ್ ಪಡೆದಿದ್ದರು.
“ಸಿರಾಜ್ ಮತ್ತು ಗುರ್ನೂರ್ ಬ್ರಾರ್ ಇಬ್ಬರನ್ನೂ ಹೊರಗಿಡುವುದು ಬಹಳ ಕಷ್ಟದ ನಿರ್ಧಾರವಾಗಿತ್ತು” ಎಂದು ಟಾಸ್ ವೇಳೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಹೇಳಿದರು.
ಬುಧವಾರ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಸಿರಾಜ್ ಅವರನ್ನು ಶ್ಲಾಘಿಸಿದ್ದರು. ಆದರೆ ತಂಡದ ಆಯ್ಕೆ ಕುರಿತು “ನಾಳೆ ಏನಾಗುತ್ತದೆ ನೋಡೋಣ” ಎಂದಿದ್ದರು.
ಈಗ ಸಿರಾಜ್ ಅವರನ್ನು ಹೊರಗಿಟ್ಟ ನಿರ್ಧಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಕ್ರಿಕೆಟಿಗ ವಸೀಂ ಜಾಫರ್ ಮತ್ತು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವರು ಪ್ರತಿಕ್ರಿಯಿಸಿದ್ದಾರೆ.
ಗವಾಸ್ಕರ್ ಹೇಳಿದ್ದೇನು?
ಸೋನಿ ಸ್ಪೋರ್ಟ್ಸ್‌ನ ಚರ್ಚೆಯೊಂದರಲ್ಲಿ ಮಾತನಾಡಿದ ಗವಾಸ್ಕರ್, “ಅವರು ಟೆಸ್ಟ್ ತಂಡವನ್ನು ಬೇಗ ಸೇರಿಕೊಳ್ಳದಿದ್ದಾಗಲೇ ಇದರ ಸುಳಿವು ಸಿಕ್ಕಿತ್ತು. ಕೊನೆಯ ಏಕದಿನ ಪಂದ್ಯದಲ್ಲಿ ಅವರನ್ನು ಆಡಿಸಿದಾಗ, ಟೆಸ್ಟ್‌ನಲ್ಲೂ ಆಡಿಸುವ ಉದ್ದೇಶವಿರಬಹುದು ಎಂದುಕೊಂಡಿದ್ದೆ. ಆದರೆ ಈ ನಿರ್ಧಾರ ಅಚ್ಚರಿ ತಂದಿದೆ. ಅವರು ಭಾರತಕ್ಕೆ ನಿರಾಸೆ ಮೂಡಿಸಿದ್ದಾರೆ ಎಂದು ನನಗನಿಸುವುದಿಲ್ಲ. ಅವರು ಭಾರತವನ್ನು ಎಂದೂ ನಿರಾಸೆಗೊಳಿಸಿಲ್ಲ” ಎಂದರು.
ಸಿರಾಜ್ ಅವರನ್ನು ಕೈಬಿಡುವಷ್ಟು ಅವರ ಫಾರ್ಮ್ ಅಥವಾ ಬೌಲಿಂಗ್ ಲಯ ಕುಸಿದಿರಲಿಲ್ಲ ಎಂದೂ ಗವಾಸ್ಕರ್ ಹೇಳಿದರು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ನೆನಪಿಸಿಕೊಂಡ ಅವರು ಹೀಗೆಂದಿದ್ದಾರೆ:
“ಸಿರಾಜ್ ಬೌಲಿಂಗ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಅವರ ಲಯ ಚೆನ್ನಾಗಿದೆ. ಇತ್ತೀಚೆಗೆ ಅವರು ಆಡಿದ ಪಂದ್ಯಗಳನ್ನು ನಾನು ಗಮನಿಸಿದ ಮಟ್ಟಿಗೆ ಎಲ್ಲವೂ ಸರಿಯಾಗಿಯೇ ಇದೆ. ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರಿಗಿಂತ ಮೊದಲು ಆಯ್ಕೆಯಾದ ಆಟಗಾರರು ಉತ್ತಮ ಪ್ರದರ್ಶನ ನೀಡಲಿ ಎಂಬುದಷ್ಟೇ ನನ್ನ ಆಶಯ.
“ಪ್ರಸಿದ್ಧ್ ಕೃಷ್ಣ ಒಂದು ಅಥವಾ ಎರಡು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದರು. ಅಂಶುಲ್ ಕಾಂಬೋಜ್ ಮತ್ತು ಆಕಾಶ್ ದೀಪ್ ಅವರದ್ದೂ ಇದೇ ಕಥೆ. ಮತ್ತೊಂದೆಡೆ, ನಿಮ್ಮ ಅತ್ಯಂತ ಅನುಭವಿ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್ ಆಯ್ಕೆಗೆ ಲಭ್ಯವಿದ್ದರೂ ಅವರನ್ನು ಸೇರಿಸಿಕೊಂಡಿಲ್ಲ.
“ನಿಮ್ಮ ಅಗ್ರ ನಾಲ್ವರು ಬೌಲರ್‌ಗಳಲ್ಲಿ ಸಿರಾಜ್‌ಗೆ ಸ್ಥಾನವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟ. ಆಯ್ಕೆಯಾದ ಬೌಲರ್‌ಗಳು ವಿಕೆಟ್ ಪಡೆಯುತ್ತಿಲ್ಲ ಎಂದಾಗಲಿ, ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ ಎಂದಾಗಲಿ ನಾನು ಹೇಳುತ್ತಿಲ್ಲ. ಆದರೆ ಇವತ್ತು ಮೊದಲ ಅವಧಿಯಲ್ಲಿ ಇನ್ನೂ ಒಂದಷ್ಟು ವಿಕೆಟ್‌ಗಳು ಬಿದ್ದಿದ್ದರೆ ಪಂದ್ಯದ ಚಿತ್ರಣವೇ ಬೇರೆಯಾಗಿರುತ್ತಿತ್ತು.”

ಗುರುವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಒಂದು ಹಂತದಲ್ಲಿ ನ್ಯೂಜಿಲೆಂಡ್ ಕೇವಲ 70 ರನ್‌ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಘಾತದಿಂದ ಚೇತರಿಸಿಕೊಂಡ ನ್ಯೂಜಿಲೆಂಡ್, ಮೊದಲ ದಿನದ ಅಂತ್ಯಕ್ಕೆ ಐದು ವಿಕೆಟ್‌ಗೆ 243 ರನ್ ಗಳಿಸಿತು.
ಹೆನ್ರಿ ನಿಕೋಲ್ಸ್ 113 ರನ್ ಮತ್ತು ಗ್ಲೆನ್ ಫಿಲಿಪ್ಸ್ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದರೆ, ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ತಲಾ ಒಂದು ವಿಕೆಟ್ ಪಡೆದರು.
ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಸಿರಾಜ್ ಅವರನ್ನು ಹೊರಗಿಟ್ಟ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
“ಇದು ಬಹಳ ಮಹತ್ವದ ಪಂದ್ಯ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಿರ್ಣಾಯಕ ಪಂದ್ಯಗಳನ್ನು ಆಡುತ್ತಿರುವಾಗ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಿಂದ ಸಿರಾಜ್ ಅವರನ್ನು ಹೊರಗಿಟ್ಟದ್ದು ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದರು.
ವಸೀಂ ಜಾಫರ್, ಹರ್ಷ ಭೋಗ್ಲೆಯಿಂದಲೂ ಪ್ರಶ್ನೆ
ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ವಸೀಂ ಜಾಫರ್, ಆಡುವ ಹನ್ನೊಂದರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.
“ನ್ಯೂಜಿಲೆಂಡ್ ತಂಡದಲ್ಲಿ ಎಡಗೈ ಬ್ಯಾಟರ್‌ಗಳು ಇರುವುದರಿಂದ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ್ದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಸಿರಾಜ್ ಅವರನ್ನು ಹೊರಗಿಟ್ಟಿರುವುದು ಅಚ್ಚರಿ ತಂದಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

“ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಏಕಾಂಗಿಯಾಗಿ ಸಮಬಲಕ್ಕೆ ತಂದ ಆಟಗಾರ ಅವರು. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಲಯದಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಅವರೇ. ಬೌಲಿಂಗ್‌ಗೆ ಇಷ್ಟು ಅನುಕೂಲಕರ ಪರಿಸ್ಥಿತಿ ಇದ್ದರೂ ಅವರಿಗೆ ತಂಡದಲ್ಲಿ ಸ್ಥಾನವಿಲ್ಲವೇ?
“ಮೊದಲ ದಿನವೇ ಭಾರತಕ್ಕೆ ಸಿರಾಜ್ ಅವರ ಕೊರತೆ ಕಾಡುತ್ತಿದೆ. ಇಂಥ ಪರಿಸ್ಥಿತಿಗಳು ಸಿರಾಜ್‌ಗೆ ಹೇಳಿ ಮಾಡಿಸಿದಂತಿವೆ. ಅವರು ದಣಿವರಿಯದೆ ಅಷ್ಟೇ ಹುರುಪಿನಿಂದ ಬೌಲ್ ಮಾಡಿ ಬ್ಯಾಟರ್‌ಗಳನ್ನು ಸುಸ್ತಾಗಿಸುತ್ತಾರೆ. ಜೊತೆಯಾಟಗಳನ್ನು ಮುರಿಯುತ್ತಾರೆ. ಪಂದ್ಯದಲ್ಲಿ ಏನಾದರೊಂದು ಸಾಧಿಸಿ ತೋರಿಸುತ್ತಾರೆ. ಈ ನಿರ್ಧಾರವನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ!” ಎಂದು ಜಾಫರ್ ಬರೆದಿದ್ದಾರೆ.
ಕ್ರಿಕೆಟ್ ವಿಶ್ಲೇಷಕ ಹಾಗೂ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
“ಭಾರತ ಸಿರಾಜ್ ಅವರನ್ನು ಹೊರಗಿಟ್ಟಿರುವುದು ಅಚ್ಚರಿ ಮತ್ತು ನಿರಾಸೆ ಎರಡನ್ನೂ ತಂದಿದೆ. ತಂಡ ಅವರಿಗೆ ಯಾವ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ್ದಾರೆ. ಸಕಾರಾತ್ಮಕ ಮನೋಭಾವದಿಂದ ತಂಡಕ್ಕಾಗಿ ಆಡುವ ಅತ್ಯುತ್ತಮ ಆಟಗಾರ ಅವರು. ಕಾಂಬೋಜ್‌ಗೆ ಶುಭ ಹಾರೈಸೋಣ. ಈ ನಿರ್ಧಾರದ ಬಗ್ಗೆ ತಂಡದವರು ಸಿರಾಜ್ ಅವರೊಂದಿಗೆ ಮನಬಿಚ್ಚಿ, ಪ್ರಾಮಾಣಿಕವಾಗಿ ಮಾತನಾಡುತ್ತಾರೆ ಎಂದು ಆಶಿಸುತ್ತೇನೆ” ಎಂದು ಭೋಗ್ಲೆ ಬರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಏನೆಂದರು?
ಕೆಲವರು ತಂಡದ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿದರೆ, ಇನ್ನು ಕೆಲವರು ಪ್ರಸಿದ್ಧ್ ಕೃಷ್ಣ ಅವರ ಪ್ರದರ್ಶನವನ್ನು ಸಿರಾಜ್ ಅವರ ಪ್ರದರ್ಶನದೊಂದಿಗೆ ಹೋಲಿಸಿದ್ದಾರೆ.
“ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ಬಂದಾಗ ಭಾರತದ ಬೌಲಿಂಗ್ ಮಟ್ಟವೇ ಬದಲಾಗುತ್ತದೆ. ಆದರೆ ಉಳಿದ ಬೌಲರ್‌ಗಳು ಪ್ರತಿ ಓವರ್‌ಗೆ ಮೂರಕ್ಕಿಂತ ಕಡಿಮೆ ರನ್ ಬಿಟ್ಟುಕೊಡುತ್ತಿದ್ದರೆ, ಕೃಷ್ಣ ತಮ್ಮ ಎಂಟು ಓವರ್‌ಗಳಲ್ಲಿ ಪ್ರತಿ ಓವರ್‌ಗೆ ಸುಮಾರು ಐದು ರನ್ ಬಿಟ್ಟುಕೊಟ್ಟಿದ್ದಾರೆ” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ಸಿರಾಜ್ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯ ಆಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಾದರೂ ಅವಕಾಶ ಸಿಗುತ್ತದೆಯೇ ಎಂಬುದೂ ಖಚಿತವಿಲ್ಲ” ಎಂದು ಅವರು ಬರೆದಿದ್ದಾರೆ. ಈ ನಿರ್ಧಾರದ ಬಗ್ಗೆ ಕೋಚ್ ಗೌತಮ್ ಗಂಭೀರ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಸಿರಾಜ್ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಕ್ಕೆ ಮತ್ತೊಬ್ಬ ಬಳಕೆದಾರರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿದೇಶಿ ನೆಲದಲ್ಲಿ ಸಿರಾಜ್ ಹಲವು ಬಾರಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಿರುವಾಗ ಅವರಂತಹ ಅನುಭವಿ ಬೌಲರ್‌ನ್ನು ಹೊರಗಿಟ್ಟಿದ್ದು ಅರ್ಥವಾಗುತ್ತಿಲ್ಲ” ಎಂದು ಬರೆದಿದ್ದಾರೆ. ತಂಡದ ಆಡಳಿತದ ಈ ಆಯ್ಕೆ ನಿರಾಸೆ ಮೂಡಿಸಿದೆ ಎಂದೂ ಅವರು ಹೇಳಿದ್ದಾರೆ



