ರೋಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪು ನೀಡಿದೆ. ಮ್ಯಾನ್ಮಾರ್‌ನಲ್ಲಿ ಬೌದ್ಧರು ಬಹುಸಂಖ್ಯಾತರು.
ನಾನಾ ದೇಶಗಳ ಮೂಲದ 15 ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ. ನರಮೇಧ ಎಸಗಿದ್ದಕ್ಕೆ ದೇಶವೊಂದು ಹೊಣೆಯೆಂದು ಎಂದು ಘೋಷಿಸಿರುವುದು ಈ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲು.
ತೀರ್ಪಿನ ಸಾರಾಂಶವನ್ನು ಓದಿದ ನ್ಯಾಯಮೂರ್ತಿ ಯೂಜಿ ಇವಾಸಾವಾ, ರೋಹಿಂಗ್ಯಾ ಜನಸಂಖ್ಯೆಯ ಬಹುದೊಡ್ಡ ಭಾಗವನ್ನು ನಾಶಪಡಿಸುವ ಉದ್ದೇಶ ಮ್ಯಾನ್ಮಾರ್‌ಗೆ ಇತ್ತು ಎಂದು ಹೇಳಿದರು.
ಇದನ್ನೂ ಓದಿ: ಮ್ಯಾನ್ಮಾರ್ ಸೇನೆಯಿಂದ ಸಾವಿರಾರು ರೋಹಿಂಗ್ಯಾ ಮುಸ್ಲಿಮರ ಹತ್ಯೆ: ಅಂತಾರಾಷ್ಟ್ರೀಯ ನ್ಯಾಯಾಲಯ
ಮ್ಯಾನ್ಮಾರ್‌ನಲ್ಲಿ ನರಮೇಧಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಲಾಗಿದೆ. ನರಮೇಧದಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಲು, ಅವರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಶಿಕ್ಷಿಸಲು ಅಗತ್ಯ ಕ್ರಮಗಳನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದರು.
2017ರಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾವಿರಾರು ರೋಹಿಂಗ್ಯಾಗಳು ಪ್ರಾಣ ಕಳೆದುಕೊಂಡಿದ್ದರು. ಈ ಕಾರ್ಯಾಚರಣೆಯ ಬಳಿಕ ಏಳು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಮ್ಯಾನ್ಮಾರ್ ತೊರೆದು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಬೇಕಾಯಿತು.
ಗ್ಯಾಂಬಿಯಾ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದಿತ್ತು. ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದ ಮ್ಯಾನ್ಮಾರ್, ಸಶಸ್ತ್ರ ಗುಂಪುಗಳ ದಾಳಿಗೆ ತನ್ನ ಸೇನೆ ಪ್ರತಿಕ್ರಿಯಿಸುತ್ತಿತ್ತು ಎಂದು ವಾದಿಸಿತ್ತು.
ನರಮೇಧವನ್ನು ತಡೆಯುವ ಹೊಣೆಯನ್ನು ಮ್ಯಾನ್ಮಾರ್ ನಿಭಾಯಿಸಿಲ್ಲ. ಹೀಗಾಗಿ ರೋಹಿಂಗ್ಯಾ ಸಮುದಾಯಕ್ಕೆ ಮತ್ತು ಅದರ ಸದಸ್ಯರಿಗೆ ಪರಿಹಾರ ನೀಡುವ ಬಾಧ್ಯತೆ ಮ್ಯಾನ್ಮಾರ್‌ಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಪರಿಹಾರದ ಮೊತ್ತ ಎಷ್ಟಿರಬೇಕು, ಅದನ್ನು ಹೇಗೆ ನೀಡಬೇಕು ಮತ್ತು ಬೇರೆ ಯಾವ ರೂಪಗಳಲ್ಲಿ ನಷ್ಟವನ್ನು ಭರಿಸಬೇಕು ಎಂಬುದನ್ನು ಐಸಿಜೆ ನಿರ್ಧರಿಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಹ್ಯೂಮನ್ ರೈಟ್ಸ್ ವಾಚ್ ಪ್ರತಿಕ್ರಿಯೆ
ಮ್ಯಾನ್ಮಾರ್ ಸೇನೆ ದೀರ್ಘಕಾಲದಿಂದ ರೋಹಿಂಗ್ಯಾ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದೆ ಎಂಬುದನ್ನು ಐಸಿಜೆ ತೀರ್ಪು ಪುಷ್ಟೀಕರಿಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.
ಇದನ್ನೂ ಓದಿ: ಅಂಡಮಾನ್ ಸಮುದ್ರದಲ್ಲಿ ಮುಳುಗಿದ ನೌಕೆ: ರೋಹಿಂಗ್ಯಾ ನಿರಾಶ್ರಿತರು ಸೇರಿ 250ಕ್ಕೂ ಹೆಚ್ಚು ಮಂದಿ ನಾಪತ್ತೆ
“ಜಗತ್ತಿನಾದ್ಯಂತ ನರಸಂಹಾರ ಮತ್ತು ಇತರ ಗಂಭೀರ ಅಪರಾಧಗಳಿಗೆ ತುತ್ತಾದವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನಗಳಿಗೂ ಈ ತೀರ್ಪು ಮಹತ್ವದ ನಿದರ್ಶನವಾಗಿದೆ” ಎಂದು ಸಂಘಟನೆ ಪ್ರತಿಕ್ರಿಯಿಸಿದೆ.
ಮ್ಯಾನ್ಮಾರ್ ತ್ವರಿತವಾಗಿ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಮತ್ತು ರೋಹಿಂಗ್ಯಾ ಸಮುದಾಯದ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ರೋಹಿಂಗ್ಯಾ ನಿರಾಶ್ರಿತರು ಸ್ವಇಚ್ಛೆಯಿಂದ ಮತ್ತು ಸುರಕ್ಷಿತವಾಗಿ ಮ್ಯಾನ್ಮಾರ್‌ಗೆ ಮರಳಲು ಸಾಧ್ಯವಾಗುವಂತೆ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ.
ಐಸಿಜೆ ತೀರ್ಪು ಕೇವಲ ಸಾಂಕೇತಿಕ ಮಹತ್ವ ಮಾತ್ರದ್ದೇ?
ಈ ಹಿಂದೆ ಈ ನ್ಯಾಯಾಲಯ ಯಾವುದೇ ದೇಶವನ್ನು ನರಮೇಧಕ್ಕೆ ಹೊಣೆಯೆಂದು ಘೋಷಿಸಿರಲಿಲ್ಲ. ನರಮೇಧದಿಂದ ಬದುಕುಳಿದ ರೋಹಿಂಗ್ಯಾಗಳಿಗೆ ಮತ್ತು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಈ ತೀರ್ಪು ವಿಶೇಷ ಅರ್ಥ ನೀಡಿದೆ. ತಮ್ಮ ಮೇಲೆ ನಡೆದದ್ದು ನರಮೇಧ ಎಂಬುದಕ್ಕೆ ಅಂತಾರಾಷ್ಟ್ರೀಯವಾಗಿ ಅಧಿಕೃತ ಮಾನ್ಯತೆ ಸಿಕ್ಕಿದೆ.
ಕಾನೂನಿನ ದೃಷ್ಟಿಯಿಂದ ಈ ತೀರ್ಪು ಮ್ಯಾನ್ಮಾರ್‌ಗೆ ಮೂರು ಹೊಣೆಗಾರಿಕೆಗಳನ್ನು ವಿಧಿಸಿದೆ. ನರಮೇಧಕ್ಕೆ ಸಂಬಂಧಿಸಿದ ಕೃತ್ಯಗಳು ಇನ್ನೂ ನಡೆಯುತ್ತಿದ್ದರೆ ಅವುಗಳನ್ನು ತಕ್ಷಣವೇ ನಿಲ್ಲಿಸಬೇಕು, ಸಂತ್ರಸ್ತರಿಗೆ ಪರಿಹಾರ ನೀಡಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರಳಿ ಜರುಗುವುದಿಲ್ಲ ಎಂಬ ಖಾತರಿ ನೀಡಬೇಕು.
ಸೇನೆಯ ಜನರಲ್‌ಗಳನ್ನು ಜೈಲಿಗೆ ಕಳುಹಿಸುವ ಅಧಿಕಾರ ಐಸಿಜೆಗೆ ಇಲ್ಲ. ತನ್ನ ತೀರ್ಪುಗಳನ್ನು ನೇರವಾಗಿ ಜಾರಿಗೊಳಿಸುವ ವ್ಯವಸ್ಥೆಯೂ ಅದಕ್ಕಿಲ್ಲ. ತೀರ್ಪುಗಳ ಜಾರಿಗೆ ನ್ಯಾಯಾಲಯವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ರಾಜಕೀಯ ಒತ್ತಡವನ್ನು ಅವಲಂಬಿಸಿದೆ. ಹೀಗಾಗಿ ಅನೇಕ ರೋಹಿಂಗ್ಯಾಗಳ ಪಾಲಿಗೆ ಈ ತೀರ್ಪು ಸಾಂಕೇತಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಆದರೆ ತೀರ್ಪು ಬಂದ ಮಾತ್ರಕ್ಕೆ ಅವರು ಸುರಕ್ಷಿತವಾಗಿ ಮನೆಗೆ ಮರಳುವುದು ಖಚಿತವಾಗುವುದಿಲ್ಲ.
ಈ ತೀರ್ಪಿನ ಆಧಾರದಲ್ಲಿ ಮ್ಯಾನ್ಮಾರ್‌ನ ಸೇನಾ ಕಮಾಂಡರ್‌ಗಳನ್ನು ನೇರವಾಗಿ ಜೈಲಿಗೆ ಕಳುಹಿಸಲೂ ಸಾಧ್ಯವಿಲ್ಲ. ಐಸಿಜೆ ದೇಶಗಳ ಹೊಣೆಗಾರಿಕೆಯನ್ನು ನಿರ್ಧರಿಸುತ್ತದೆ. ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸುವುದು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ).
ಆದರೂ ಈ ತೀರ್ಪು ಪ್ರತ್ಯೇಕವಾಗಿ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಗಳಿಗೆ ಕಾನೂನು ಮತ್ತು ರಾಜತಾಂತ್ರಿಕ ಬಲ ನೀಡಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ತೀರ್ಪನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗೂ ಇದರಿಂದ ಬೆಂಬಲ ಸಿಗುವ ಸಾಧ್ಯತೆ ಇದೆ.



