ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ ಸಂಕೋಲೆಯೋ?

Date:

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ ಹಕ್ಕು, ಇನ್ನೊಂದೆಡೆ ಸಾರ್ವಜನಿಕ ಹಿತಾಸಕ್ತಿಯ ವರದಿಗಾರಿಕೆ....

ಡಿಜಿಟಲ್ ಯುಗದಲ್ಲಿ ಜನರ ವೈಯಕ್ತಿಕ ಮಾಹಿತಿಯೇ ಅಮೂಲ್ಯವಾದ ಸಂಪತ್ತು. ಗೌಪ್ಯ ಮಾಹಿತಿಗಳನ್ನು ಮುಂದಿಟ್ಟುಕೊಂಡು ಅದೆಷ್ಟೋ ದಂಧೆಗಳು ನಡೆಯುತ್ತಿವೆ, ದುರ್ಬಳಕೆಯೂ ತೀವ್ರವಾಗಿ ಹೆಚ್ಚಾಗಿದೆ. ಇದಕ್ಕೆ ನಾವು ತಡೆಯೊಡ್ಡುತ್ತೇವೆ ಎಂದು ಹೇಳಿಕೊಂಡು ಕೇಂದ್ರ ಸರ್ಕಾರ 2023ರ ಆಗಸ್ಟ್‌ನಲ್ಲಿ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ’ಯನ್ನು (Digital Personal Data Protection Act – DPDP Act) ಜಾರಿಗೆ ತಂದಿದೆ. ನಾಗರಿಕರ ಡಿಜಿಟಲ್ ಗೌಪ್ಯತೆಯನ್ನು ಕಾಪಾಡುವುದು ಮತ್ತು ದತ್ತಾಂಶ ಸಂಗ್ರಹಿಸುವ ಸಂಸ್ಥೆಗಳನ್ನು ಉತ್ತರದಾಯಿಯನ್ನಾಗಿ ಮಾಡುವುದು ಈ ಕಾಯ್ದೆಯ ಪ್ರಮುಖ ಉದ್ದೇಶ. 2017ರಲ್ಲಿ ಸುಪ್ರೀಂ ಕೋರ್ಟ್ ‘ಖಾಸಗಿತನವು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು’ (ಕೆ.ಎಸ್. ಪುಟ್ಟಸ್ವಾಮಿ ಪ್ರಕರಣ) ಎಂದು ನೀಡಿದ ಐತಿಹಾಸಿಕ ತೀರ್ಪಿನ ಆಶಯವನ್ನು ಈ ಕಾಯ್ದೆ ಎತ್ತಿಹಿಡಿಯುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

- Advertisement -

ಆದರೆ ಈ ಕಾಯ್ದೆಯು ದೇಶದ ಮಾಧ್ಯಮ ಲೋಕ, ಕಾನೂನು ತಜ್ಞರು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕಾಯ್ದೆ ಪರೋಕ್ಷವಾಗಿ ಸಂವಿಧಾನದ 19(1)(a) ವಿಧಿಯು ನೀಡುವ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹೇರುವ ನಿರ್ಬಂಧವೇ? ಸರ್ಕಾರ ಖಾಸಗಿತನದ ನೆಪ ಮುಂದಿಟ್ಟು ತನ್ನ ರೊಟ್ಟಿ ಸುಟ್ಟುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ. ಈ ಕಾಯ್ದೆ ಮುಖ್ಯವಾಗಿ ಒಬ್ಬ ವ್ಯಕ್ತಿಯ ಖಾಸಗಿತನದ ರಕ್ಷಣೆ ಎಲ್ಲಿ ಕೊನೆಯಾಗುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮ ಎಲ್ಲಿ ಆರಂಭವಾಗುತ್ತದೆ ಎಂಬ ತೆಳುವಾದ ಗೆರೆಯನ್ನು ಗುರುತಿಸುವ ವಿಚಾರದಲ್ಲಿ ಅಸ್ಪಷ್ಟತೆಯನ್ನು ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

ಇದನ್ನೂ ಓದಿ: ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಡಿಪಿಡಿಪಿ ಕಾಯ್ದೆ ಪ್ರಶ್ನಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಪತ್ರಿಕೋದ್ಯಮಕ್ಕೆ ನೀಡಲಾದ ‘ವಿನಾಯಿತಿ’ಯ ಸುತ್ತಲಿನ ಗೊಂದಲ

ಪ್ರಮುಖವಾಗಿ ಡಿಪಿಡಿಪಿ ಕಾಯ್ದೆಯ 17ನೇ ಸೆಕ್ಷನ್ ಅಡಿಯಲ್ಲಿ ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ದತ್ತಾಂಶ ಸಂಸ್ಕರಣೆಯ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಕಾಯ್ದೆಯ ಆರಂಭಿಕ ಕರಡು ಪ್ರತಿಗಳಲ್ಲಿ ‘ಪತ್ರಿಕೋದ್ಯಮದ ಉದ್ದೇಶಗಳಿಗಾಗಿ’ ಎಂಬ ಸ್ಪಷ್ಟ ವಿನಾಯಿತಿಯನ್ನು ಉಲ್ಲೇಖಿಸಲಾಗಿತ್ತು. ಆದರೆ, ಅಂತಿಮವಾಗಿ ಅಂಗೀಕಾರಗೊಂಡ 2023ರ ಕಾಯ್ದೆಯಲ್ಲಿ ‘ಪತ್ರಿಕೋದ್ಯಮ’ ಎಂಬ ಪದವನ್ನೇ ಕೈಬಿಡಲಾಗಿದೆ! ಬದಲಾಗಿ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಈ ಬದಲಾವಣೆಯು ತನಿಖಾ ಪತ್ರಿಕೋದ್ಯಮಕ್ಕೆ ದೊಡ್ಡ ಹೊಡೆತವಾಗುವುದು ಖಚಿತ. ಭ್ರಷ್ಟಾಚಾರ, ಹಗರಣಗಳು ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯುವ ಕಾರ್ಯವನ್ನು ತನಿಖಾ ವರದಿಗಾರರು ಮಾಡುತ್ತಾ ಬಂದಿದ್ದಾರೆ. ಈ ವೇಳೆ ಸಂಬಂಧಪಟ್ಟ ವ್ಯಕ್ತಿಗಳ ಅನುಮತಿ ಪಡೆಯುವುದು ಅಸಾಧ್ಯ. ಹೊಸ ಕಾಯ್ದೆಯ ಪ್ರಕಾರ, ವ್ಯಕ್ತಿಯ ಅನುಮತಿಯಿಲ್ಲದೆ ವೈಯಕ್ತಿಕ ದತ್ತಾಂಶವನ್ನು ಬಳಸಿದರೆ, ‘ದತ್ತಾಂಶ ಸಂರಕ್ಷಣಾ ಮಂಡಳಿ’ 250 ಕೋಟಿ ರೂಪಾಯಿಗಳವರೆಗೆ ಭಾರೀ ದಂಡ ವಿಧಿಸುವ ಅಧಿಕಾರ ಹೊಂದಿದೆ. ಇದು ಸಣ್ಣ ಮತ್ತು ಮಧ್ಯಮ ಮಾಧ್ಯಮ ಸಂಸ್ಥೆಗಳನ್ನು ಆರ್ಥಿಕವಾಗಿ ದಿವಾಳಿ ಮಾಡುವ ಅಸ್ತ್ರವಾಗುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟಕ್ಕೂ ನಿಮ್ಮ ಹಗರಣವನ್ನು ಬಯಲಿಗೆಳೆಯುತ್ತಿದ್ದೇವೆ ನೀವು ಅನುಮತಿ ನೀಡುತ್ತೀರಾ ಎಂದು ಕೇಳಲಾಗುತ್ತದೆಯೇ?

ಮಾಹಿತಿ ಹಕ್ಕು ಕಾಯ್ದೆ ಮೇಲೆ ಏನು ಪರಿಣಾಮ?

2005ರ ಮಾಹಿತಿ ಹಕ್ಕು ಕಾಯ್ದೆ ಪತ್ರಿಕಾ ಸ್ವಾತಂತ್ರ್ಯದ ಜೀವಾಳ. ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳು ನಡೆಸಿದ ದೀರ್ಘ ಹೋರಾಟದ ಪ್ರತಿಫಲ ಆರ್‌ಟಿಐ ಕಾಯ್ದೆ. ಈ ಕಾಯ್ದೆಗೆ ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44(3) ರ ಮೂಲಕ ತಿದ್ದುಪಡಿ ತರಲಾಗಿದೆ. ಈ ಹಿಂದೆ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(j) ಅಡಿಯಲ್ಲಿ, “ಸಾರ್ವಜನಿಕ ಹಿತಾಸಕ್ತಿ ಇದ್ದರೆ” ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ಅವಕಾಶವಿತ್ತು. ಆದರೆ, ಹೊಸ ತಿದ್ದುಪಡಿಯು ‘ಸಾರ್ವಜನಿಕ ಹಿತಾಸಕ್ತಿ’ ಎಂಬ ವಿನಾಯಿತಿಯನ್ನು ತೆಗೆದುಹಾಕಿ, ಯಾವುದೇ ರೀತಿಯ ‘ವೈಯಕ್ತಿಕ ಮಾಹಿತಿ’ಯನ್ನು ನೀಡುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.

ಇದನ್ನೂ ಓದಿ: ಭಾರತೀಯರ ಗೌಪ್ಯತೆಯ ಜೊತೆ ಚೆಲ್ಲಾಟ ಸಲ್ಲದು: ಮೆಟಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಹೀಗಾಗಿ ಸರ್ಕಾರಿ ಅಧಿಕಾರಿಗಳ ಆಸ್ತಿ ವಿವರ, ಭ್ರಷ್ಟಾಚಾರದ ಆರೋಪಗಳು ಅಥವಾ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆದಾರರ ಹಿನ್ನೆಲೆಯನ್ನು ಪತ್ರಕರ್ತರು ಆರ್‌ಟಿಐ ಮೂಲಕ ಪಡೆಯುವುದು ಇನ್ನು ಮುಂದೆ ಅಸಾಧ್ಯವಾಗಲಿದೆ. ಅಂದರೆ ನೀವು ಭ್ರಷ್ಟಾಚಾರ ಮಾಡುತ್ತಿರಿ, ನಾವು ಖಾಸಗಿತನದ ರಕ್ಷಣೆ ನೆಪದಲ್ಲಿ ನಿಮ್ಮ ಭ್ರಷ್ಟತೆ ದಾಖಲೆಯನ್ನು ಮುಚ್ಚಿಡುತ್ತೇವೆ ಎನ್ನುವುದೇ? ನೇರವಾಗಿ ಹೇಳುವುದಾದರೆ ‘ಸಾರ್ವಜನಿಕ ಹಿತಾಸಕ್ತಿ’ ಎಂಬ ವಿನಾಯಿತಿ ತೆಗೆದುಹಾಕಿರುವುದು ಪಾರದರ್ಶಕ ಆಡಳಿತ ಮತ್ತು ಪತ್ರಿಕೋದ್ಯಮದ ಮೂಲ ಆಶಯಕ್ಕೆ ವಿರುದ್ಧವಾಗಿದೆ.

ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ ನಡುವಿನ ತೆಳುವಾದ ಗೆರೆಯನ್ನು ಗುರುತಿಸುವ ವಿಚಾರದಲ್ಲಿ ಡಿಪಿಡಿಪಿ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಸ್ಫುಟ. ಆದರೆ ಕೇಂದ್ರ ಸರ್ಕಾರ ಮಾತ್ರ ಪತ್ರಕರ್ತರು ಯಾವುದೇ ವ್ಯಕ್ತಿಯ ಖಾಸಗಿ ಬದುಕಿಗೆ ಅನಗತ್ಯವಾಗಿ ಇಣುಕುವುದನ್ನು ತಡೆಯಲು ಈ ಕಾಯ್ದೆ ಸಹಕಾರಿಯಾಗಲಿದೆ ಎಂದು ಹೇಳಿಕೊಂಡಿದೆ. ಹಾಗೆಯೇ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ವರದಿ ಮಾಡಲು ಯಾವುದೇ ಅಡ್ಡಿಯಿಲ್ಲ. ಯುರೋಪಿನ ‘GDPR’ ಕಾಯ್ದೆಯ ಮಾದರಿಯಲ್ಲೇ ಭಾರತದ ಕಾಯ್ದೆಯನ್ನು ರೂಪಿಸಲಾಗಿದೆ ಎಂಬ ಸಮರ್ಥನೆಗಿಳಿದಿದೆ.

ಈ ವೇಳೆ ಕೇಂದ್ರ ಉಲ್ಲೇಖಿಸಿರುವ GDPR ಕಾಯ್ದೆಯತ್ತವೂ ನಾವು ಕಣ್ಣಾಯಿಸಬೇಕಾಗುತ್ತದೆ. ವಾಸ್ತವದಲ್ಲಿ ಯುರೋಪಿನ GDPR (General Data Protection Regulation) ಕಾಯ್ದೆಯ ಆರ್ಟಿಕಲ್ 85ರಲ್ಲಿ ಪತ್ರಿಕೋದ್ಯಮ, ಶೈಕ್ಷಣಿಕ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಸ್ಪಷ್ಟವಾದ ಸಾಂವಿಧಾನಿಕ ರಕ್ಷಣೆ ಹಾಗೂ ವಿನಾಯಿತಿಯನ್ನು ನೀಡುತ್ತದೆ. ಆದರೆ ಡಿಪಿಡಿಪಿ ಕಾಯ್ದೆಯಲ್ಲಿ ಅಂತಹ ಸ್ಪಷ್ಟತೆ ಇಲ್ಲ. ಅಲ್ಲದೆ, ಕಾಯ್ದೆಯಡಿ ರಚನೆಯಾಗುವ ‘ದತ್ತಾಂಶ ಸಂರಕ್ಷಣಾ ಮಂಡಳಿ’ಯ ಸದಸ್ಯರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಹೀಗಿರುವಾಗ ಸರ್ಕಾರದ ವಿರುದ್ಧ ವರದಿ ಮಾಡುವ ಮಾಧ್ಯಮಗಳ ಮೇಲೆ ಈ ಮಂಡಳಿ ಪಕ್ಷಪಾತದಿಂದ ವರ್ತಿಸುವ ಸಾಧ್ಯತೆ ಹೆಚ್ಚು. ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಚುನಾವಣಾ ಅಕ್ರಮಗಳನ್ನು, ಅವರ ಆಯ್ಕೆ ಯಾವ ರೀತಿ ಕೇಂದ್ರದ ಹತೋಟಿಯಲ್ಲೇ ನಡೆದಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಡಿಪಿಡಿಪಿ ಕಾಯ್ದೆಯು ನಾಗರಿಕರ ಡಿಜಿಟಲ್ ಗೌಪ್ಯತೆಯನ್ನು ರಕ್ಷಿಸುವ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯದ ನಿಯಂತ್ರಣದಂತೆ ಕಾಣುತ್ತದೆ. ಅಷ್ಟಕ್ಕೂ ಖಾಸಗಿತನದ ಹಕ್ಕು ಮತ್ತು ತಿಳಿಯುವ ಹಕ್ಕು (Right to Know) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಪತ್ರಿಕೋದ್ಯಮಕ್ಕೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ಅತ್ಯಗತ್ಯ. ಒಂದು ವೇಳೆ ‘ಖಾಸಗಿತನ’ ಎಂಬ ಗುರಾಣಿಯನ್ನು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗವನ್ನು ಮುಚ್ಚಿಡಲು ಬಳಸಿಕೊಂಡರೆ, ಅದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ । ಒಳ ಮೀಸಲಾತಿಯಿಂದ 101 ಜಾತಿಗಳಿಗೂ ಸಮಾನ ಅವಕಾಶ : ಸಚಿವ ಪಿ.ಎಂ. ನರೇಂದ್ರಸ್ವಾಮಿ

ಒಳ ಮೀಸಲಾತಿ ಅನುಷ್ಠಾನದಿಂದ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಯಾವುದೇ ರೀತಿ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ; ಜನರ ಕೈಯಲ್ಲಿ ಹಣ ಉಳಿಯುತ್ತಿದೆಯೇ?

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ...

ಉಳ್ಳಾಲ | ಉಳ್ಳಾಲದ ಅಬ್ದುಲ್ ರೆಹಮಾನ್‌ಗೆ ಚಿನ್ನದ ಪದಕ; ರಾಷ್ಟ್ರಮಟ್ಟಕ್ಕೆ ಆಯ್ಕೆ

ಧಾರವಾಡದ ಆರ್‌.ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ನವೆಂಬರ್‌ 14, 15 ರಂದು ನಡೆದ...

ಶಿವಮೊಗ್ಗ | ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ : ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಲಿ

ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸುವ ರಕ್ತ ವ್ಯರ್ಥವಾಗುವುದನ್ನು ತಡೆಗಟ್ಟಿ, ಸಮರ್ಪಕ ಬಳಕೆಯಾಗುವ ಕಡೆ...