2023ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತಾದ ವಿವಾದದಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಮೇ 3ರಂದು ಚುನಾವಣಾಧಿಕಾರಿ ನೀಡಿದ್ದ ಪರಿಷ್ಕೃತ ಆದೇಶವನ್ನು ತಡೆಹಿಡಿದಿರುವ ಸುಪ್ರೀಂ ಕೋರ್ಟ್, ಸದ್ಯಕ್ಕೆ ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಮಹತ್ವದ ಆದೇಶ ನೀಡಿದೆ.
2023ರ ಚುನಾವಣೆಯಲ್ಲಿ ರಾಜೇಗೌಡ ಅವರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳ ಮರು ಎಣಿಕೆ ಹಾಗೂ ಮರುಪರಿಶೀಲನೆಗೆ ಏಪ್ರಿಲ್ 6ರಂದು ಆದೇಶಿಸಿತ್ತು. ಅದರಂತೆ 2026ರ ಮೇ 3ರಂದು ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದ ಚುನಾವಣಾಧಿಕಾರಿ, ರಾಜೇಗೌಡರ 255 ಮತಗಳನ್ನು ಕಡಿತಗೊಳಿಸಿ ಜೀವರಾಜ್ ಅವರನ್ನು ವಿಜೇತರೆಂದು ಘೋಷಿಸಿದ್ದರು.
ಈ ಬೆಳವಣಿಗೆಯನ್ನು ಪ್ರಶ್ನಿಸಿ ರಾಜೇಗೌಡ ಅವರು ವಕೀಲ ತುಷಾರ್ ಗಿರಿ ಮೂಲಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. “ಹೈಕೋರ್ಟ್ ಕೇವಲ 279 ತಿರಸ್ಕೃತ ಮತಗಳನ್ನು ಪರಿಶೀಲಿಸಲು ಸೂಚಿಸಿತ್ತು. ಆದರೆ ಚುನಾವಣಾಧಿಕಾರಿಗಳು ತಮಗೆ ಚಲಾವಣೆಯಾಗಿದ್ದ 562 ಸಿಂಧು ಅಂಚೆ ಮತಗಳನ್ನು ಅಕ್ರಮವಾಗಿ ಮರುಪರಿಶೀಲಿಸಿದ್ದಾರೆ” ಎಂದು ರಾಜೇಗೌಡ ವಾದಿಸಿದ್ದರು. ವಾದ ಆಲಿಸಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾಗೂ ಶಾಸಕರಾಗಿ ರಾಜೇಗೌಡ ಅವರೇ ಮುಂದುವರಿಯುವಂತೆ ನಿರ್ದೇಶನ ನೀಡಿದೆ.




