ಉಡುಪಿ ನಗರದ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮೇ 9 ಮತ್ತು 10ರಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಘಟಕ ಆಯೋಜಿಸಿದ್ದ ಎರಡು ದಿನಗಳ “ಪರಿಸರ ಮತ್ತು ಶಿಕ್ಷಣ” ಸಮ್ಮೇಳನವು ಪರಿಸರ ಸಂರಕ್ಷಣೆ, ಜನಬದುಕಿನ ಶಿಕ್ಷಣ, ಮಕ್ಕಳ ಕಲಿಕೆ, ಸುಸ್ಥಿರ ಬದುಕು ಮತ್ತು ಸಾರ್ವಜನಿಕ ಶಿಕ್ಷಣದ ಬಿಕ್ಕಟ್ಟುಗಳ ಕುರಿತಾಗಿ ಗಂಭೀರ ಚಿಂತನೆಗೆ ವೇದಿಕೆಯಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಪರಿಸರ ಹೋರಾಟಗಾರರು, ಶಿಕ್ಷಣ ತಜ್ಞರು, ಲೇಖಕರು, ಕೃಷಿ ಸಾಧಕರು, ವಿದ್ಯಾರ್ಥಿಗಳು, ಕಲಾವಿದರು ಹಾಗೂ ವಿಜ್ಞಾನ ಚಿಂತಕರು ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಕಾರ್ಯಕ್ರಮದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ‘ಟೀಚರ್’ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕಾರ, ಭಾರತ ಜ್ಞಾನ ವಿಜ್ಞಾನ ಸಮಿತಿ ಒಂದು ಜನಚಳುವಳಿಯಾಗಿ ರೂಪುಗೊಂಡ ಸಂಘಟನೆಯಾಗಿದ್ದು, ವಿಜ್ಞಾನ ಸಾಕ್ಷರತೆ, ಸಂವಿಧಾನ ಸಾಕ್ಷರತೆ, ಮೂಲಭೂತ ಸಾಕ್ಷರತೆ ಮತ್ತು ಇತ್ತೀಚೆಗೆ ಕ್ಲೈಮೇಟ್ ಸಾಕ್ಷರತೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಭೋಪಾಲ್ ಅನಿಲ ದುರಂತದ ನಂತರ ವಿಜ್ಞಾನಿಗಳು, ಸಾಹಿತ್ಯಾಸಕ್ತರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಒಂದಾಗಿ ಇಂತಹ ಚಳುವಳಿಯ ಅಗತ್ಯವನ್ನು ಮನಗಂಡು ಸುಮಾರು 40 ವರ್ಷಗಳ ಹಿಂದೆ ಈ ಚಳುವಳಿಯನ್ನು ಆರಂಭಿಸಿದರು. ಕರ್ನಾಟಕದಲ್ಲಿ ವಿಜ್ಞಾನಿ ಸಿ. ಎನ್. ಆರ್. ರಾವ್ ಅವರ ನೇತೃತ್ವದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯ ಪ್ರಾರಂಭಗೊಂಡಿತು.
ಕಳೆದ ನಾಲ್ಕು ದಶಕಗಳಿಂದ ಈ ಸಂಘಟನೆ ಜನರ ನಡುವೆ ಚಳುವಳಿಯ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ, ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಪರಿಸರ ಮತ್ತು ಶಿಕ್ಷಣ ಕುರಿತ ಎರಡು ದಿನಗಳ ಸಮ್ಮೇಳನವನ್ನು ಇದೇ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ 200ಕ್ಕೂ ಹೆಚ್ಚು ಪ್ರತಿನಿಧಿಗಳು, ಶಿಕ್ಷಣ ತಜ್ಞರು ಹಾಗೂ ಪರಿಸರ ಹೋರಾಟಗಾರರು ಇದರಲ್ಲಿ ಭಾಗವಹಿಸಿದ್ದಾರೆ.

ಕ್ಲೈಮೇಟ್ ಸಾಕ್ಷರತೆ ಜನಚಳುವಳಿಯ ಸ್ವರೂಪ ಪಡೆಯಬೇಕಾದರೆ ಹಲವಾರು ಅಂಶಗಳನ್ನು ಗಮನಿಸಬೇಕಿದೆ. ಅದರಲ್ಲೂ ಸಂಪತ್ತಿನ ಹಂಚಿಕೆಯಲ್ಲಿ ಉಂಟಾಗಿರುವ ಭಾರೀ ಅಸಮಾನತೆ ಪ್ರಮುಖ ಸಮಸ್ಯೆಯಾಗಿದೆ. ಕೆಲವೇ ಮಂದಿ ಕಾರ್ಬನ್ ಹೊರಸೂಸುವಿಕೆಗೆ ಕಾರಣಕರ್ತರಾಗಿದ್ದರೂ, ಅದರ ಪರಿಣಾಮವನ್ನು ಅನುಭವಿಸುವವರು ಹೆಚ್ಚಿನ ಸಂಖ್ಯೆಯ ಬಡಜನರಾಗಿದ್ದಾರೆ. ಈ ಅನ್ಯಾಯವನ್ನು “ಕ್ಲೈಮೇಟ್ ನ್ಯಾಯ”ದ ಪ್ರಶ್ನೆಯಾಗಿ ಸರ್ಕಾರದ ಮಟ್ಟಕ್ಕೆ ತಲುಪಿಸುವ ಅಗತ್ಯವಿದೆ.

ಅಭಿವೃದ್ಧಿಯ ಕುರಿತ ಇಂದಿನ ಕಲ್ಪನೆಗಳನ್ನು ಮರುಪರಿಶೀಲಿಸಿ, ಜನರ ಭಾಗವಹಿಸುವಿಕೆ ಮತ್ತು ತೀರ್ಮಾನ ಪ್ರಕ್ರಿಯೆಯನ್ನು ಬಲಪಡಿಸುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯಾವುದೇ ಅಭಿವೃದ್ಧಿ ಯೋಜನೆ ಕೇವಲ ಮನುಷ್ಯ ಕೇಂದ್ರಿತವಾಗಿರದೆ, ಸಂಪೂರ್ಣ ಪರಿಸರ ಕೇಂದ್ರೀಕೃತವಾಗಿರಬೇಕು ಎಂಬ ಚಿಂತನೆಯೊಂದಿಗೆ ಈ “ಪರಿಸರ ಮತ್ತು ಶಿಕ್ಷಣ” ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳು, ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಹಾಗೂ ಜನರ ಅಭಿಪ್ರಾಯಗಳನ್ನು ಆಲಿಸುವ ಉದ್ದೇಶದಿಂದ ಸಂವಾದ ನಡೆಸುವುದು ಈ ಸಮ್ಮೇಳನದ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮೊದಲನೇ ದಿನದ ಸಮ್ಮೇಳನವನ್ನು ಉದ್ಘಾಟಿಸಿದ ಶಿವಮೊಗ್ಗದ ಪರಿಸರ ಹೋರಾಟಗಾರ ಹಾಗೂ ಲೇಖಕ ಅಖಿಲೇಶ ಚಿಪ್ಪಳಿ, ಪ್ರಕೃತಿ ಮಾನವನ ಅತಿಕ್ರಮಣದ ವಿರುದ್ಧ ನಿರಂತರ ಎಚ್ಚರಿಕೆ ನೀಡುತ್ತಿದ್ದರೂ ಸಮಾಜ ಅದನ್ನು ಕಡೆಗಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಪ್ರೊ. ಮಾಧವ ಗಾಡ್ಗೀಳ್ ಅವರನ್ನು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅವಹೇಳನಗೊಳಿಸಿದರೂ, ಕೇರಳ, ಕೊಡಗು, ಅಂಕೋಲ ಮತ್ತು ಶಿರೂರಿನ ಭೂಕುಸಿತ ದುರಂತಗಳು ಗಾಡ್ಗೀಳ್ ವರದಿಯ ಮಹತ್ವವನ್ನು ಮತ್ತೆ ನೆನಪಿಸಿವೆ ಎಂದರು. ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತ ಚರ್ಚೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಪ್ರಕೃತಿ ವಿರುದ್ಧದ ಅಭಿವೃದ್ಧಿ ಮಾದರಿಗಳನ್ನು ಪ್ರಶ್ನಿಸುವ ಅಗತ್ಯವಿದೆ ಎಂದು ಹೇಳಿದರು.
ಗಾಡ್ಗೀಳ್ ಅವರ ಪಶ್ಚಿಮ ಘಟ್ಟ ಅಧ್ಯಯನದ ಬಗ್ಗೆ ಮಾತನಾಡಿದ ಅಖಿಲೇಶ ಚಿಪ್ಪಳಿ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ ಅವರು ಪಶ್ಚಿಮ ಘಟ್ಟದ ಅಡಿವಾಸಿ ಸಮುದಾಯಗಳಾದ ಸೋಲಿಗರು, ಜೇನುಕುರುಬರು ಸೇರಿದಂತೆ ಸ್ಥಳೀಯರೊಂದಿಗೆ ಬೆರೆತು ಜೀವ ವೈವಿಧ್ಯತೆಯ ಸಮಗ್ರ ಅಧ್ಯಯನ ನಡೆಸಿದ್ದರು ಎಂದು ಸ್ಮರಿಸಿದರು. ಅವರು ನಿಧನರಾದಾಗ ರಾಷ್ಟ್ರದ ರಾಜಕೀಯ ನಾಯಕತ್ವದಿಂದ ಸಮರ್ಪಕ ಗೌರವ ವ್ಯಕ್ತವಾಗದಿರುವುದು ನೋವು ತಂದ ಸಂಗತಿ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಮಾತನಾಡಿ, ಇಂದಿನ ಅಭಿವೃದ್ಧಿ ಮಾದರಿ ಪರಿಸರ ನಾಶದೊಂದಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ಅಭಿವೃದ್ಧಿಗೆ ಹೊಸ ಅರ್ಥ ನೀಡಬೇಕಾಗಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸುವುದು ಅತ್ಯವಶ್ಯಕ ಎಂದು ಹೇಳಿದರು.

ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವಜ್ರಮುನಿ ಅವರು ಪ್ರೊ. ಮಾಧವ ಗಾಡ್ಗೀಳ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಹಿಸಿದ್ದರು. ಪರಿಸರ ಚಿಂತಕಿ ಮಮತಾ ರೈ ಮತ್ತು ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು. ಸಮಿತಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಪಟ್ಲಾ ಸ್ವಾಗತಿಸಿದರು.

“ಪ್ರೊ. ಮಾಧವ ಗಾಡ್ಗೀಳ್ ನೆನಪಿನ ಉಪನ್ಯಾಸ”ವನ್ನು ಖ್ಯಾತ ಪರಿಸರ ವಿಜ್ಞಾನಿ ಡಾ. ಸುಭಾಶ್ಚಂದ್ರನ್ ಎಂ.ಡಿ. ನಡೆಸಿಕೊಟ್ಟರು. ಗಾಡ್ಗೀಳ್ ಅವರನ್ನು “ಜನರ ಪರಿಸರ ವಿಜ್ಞಾನಿ” ಎಂದು ಬಣ್ಣಿಸಿದ ಅವರು, ದೇಶದಲ್ಲಿ ಪರಿಸರ ನಿರ್ವಹಣೆಯ ಕುರಿತ ಮೊದಲ ಸಮಗ್ರ ಅಧ್ಯಯನವನ್ನು ಗಾಡ್ಗೀಳ್ ನೇತೃತ್ವದಲ್ಲಿ ನಡೆಸಲಾಯಿತು ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ “ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್” ಸ್ಥಾಪಿಸಿದ ಗಾಡ್ಗೀಳ್ ಅವರು, ವೆಸ್ಟರ್ನ್ ಘಾಟ್ಸ್ ಇಕಾಲಜಿ ಎಕ್ಸ್‌ಪರ್ಟ್ ಪ್ಯಾನೆಲ್‌ನ ಮುಖ್ಯಸ್ಥರಾಗಿ 2011ರಲ್ಲಿ ಸಲ್ಲಿಸಿದ ವರದಿಯಲ್ಲಿ ಪಶ್ಚಿಮ ಘಟ್ಟದ 64 ಶೇಕಡಾ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಶಿಫಾರಸು ಮಾಡಿದ್ದರು ಎಂದು ವಿವರಿಸಿದರು.
2002ರ ಜೀವ ವೈವಿಧ್ಯ ಕಾನೂನು ಅನುಷ್ಠಾನಗೊಳ್ಳಲು ಗಾಡ್ಗೀಳ್ ಅವರ ಕೊಡುಗೆ ಮಹತ್ತರವಾಗಿತ್ತು. ಪಶ್ಚಿಮ ಘಟ್ಟವು ವಿಶ್ವದ 35 ಬಯೋಡೈವರ್ಸಿಟಿ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಅವರ ಪರಿಶ್ರಮವೇ ಕಾರಣ ಎಂದು ಡಾ. ಸುಭಾಶ್ಚಂದ್ರನ್ ಹೇಳಿದರು. ಕೊಡಗು, ಕರಾವಳಿ ಮತ್ತು ಮಲೆನಾಡಿನ ದೇವರಕಾಡುಗಳ ಕುರಿತು ನಡೆದ ಅಧ್ಯಯನ ಅನುಭವಗಳನ್ನು ಹಂಚಿಕೊಂಡ ಅವರು, ಪರಿಸರ ಸಂರಕ್ಷಣೆಯಲ್ಲಿ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳ ಪಾತ್ರದ ಮಹತ್ವವನ್ನು ಒತ್ತಿ ಹೇಳಿದರು. ಶಾಲಾ ಮಕ್ಕಳ ಮೂಲಕ ಸ್ಥಳೀಯ ಜೀವ ವೈವಿಧ್ಯ ದಾಖಲಿಸುವ ವಿಶೇಷ ಯೋಜನೆ ರೂಪಿಸಿದ್ದ ಗಾಡ್ಗೀಳ್ ಅವರ ಪ್ರಯತ್ನವನ್ನು ಅವರು ಸ್ಮರಿಸಿದರು.

ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ “ಕಾಡಿನ ಮಾತು ಕೇಳಿಸಿಕೊಳ್ಳುವ ಬಗೆ” ವಿಷಯವಾಗಿ ಮಾತನಾಡಿ, ಪರಿಸರದ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವ ಸುಶಿಕ್ಷಿತ ಜನಪ್ರತಿನಿಧಿಗಳ ಅಗತ್ಯವಿದೆ ಎಂದರು. ಹಕ್ಕಿಗಳ ಹಾಡು ಕೇಳದವರಿಗೆ ಅದರ ನೋವು ಅರ್ಥವಾಗುವುದಿಲ್ಲ ಎಂದು ಹೇಳಿದ ಅವರು, ಮಕ್ಕಳಿಗೆ ಪಠ್ಯಪುಸ್ತಕದ ಮೂಲಕವಲ್ಲ, ಪ್ರಕೃತಿಯ ಮಧ್ಯೆ ಕರೆದುಕೊಂಡು ಹೋಗಿ ಪರಿಸರ ಪರಿಚಯಿಸಬೇಕು ಎಂದರು. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಕೇವಲ ಪರೀಕ್ಷೆ ಮತ್ತು ಉತ್ತರ ಬರೆಯುವ ಮಟ್ಟಕ್ಕೆ ಸೀಮಿತಗೊಳಿಸಿದೆ ಎಂದು ಟೀಕಿಸಿದರು. ಮೊಬೈಲ್ ಫೋಟೋಗ್ರಫಿ ಮತ್ತು ವರ್ಚುವಲ್ ಜಗತ್ತು ಕ್ಷಣಿಕವಾದದ್ದಾಗಿದ್ದು, ಮಕ್ಕಳನ್ನು ನೈಜ ಪ್ರಪಂಚದತ್ತ ಕರೆತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಬಳಿಕ ಅವರೊಂದಿಗೆ ಸಂವಾದವೂ ನಡೆಯಿತು.
“ಹಸಿರು ಸಾಧಕರ ಯಶಸ್ಸಿನ ಕತೆಗಳು” ಅಧಿವೇಶನದಲ್ಲಿ ಸುಸ್ಥಿರ ಕೃಷಿ, ಕ್ರೈಮೇಟ್ ನ್ಯಾಯ, ತಳಿ ವೈವಿಧ್ಯ ಮತ್ತು ಸಾವಯವ ಕೃಷಿ ಕುರಿತ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಪ್ರೊ. ಶ್ರೀಕುಮಾರ್, ಆಸ್ಮಾಬಾನು, ಶಾನಾಡಿ ರಾಮಚಂದ್ರ ಭಟ್ ಮತ್ತು ನಿತಿನ್ ವಾಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು. “ಮಕ್ಕಳಿಗೆ ಹಕ್ಕಿಗಳನ್ನು ಪರಿಚಯಿಸೋಣ” ಕಾರ್ಯಕ್ರಮವೂ ವಿಶೇಷ ಗಮನಸೆಳೆಯಿತು.

ಸಮ್ಮೇಳನದ ಎರಡನೇ ದಿನ “ಶಾಲಾ ಶಿಕ್ಷಣದ ಸದ್ಯದ ಬಿಕ್ಕಟ್ಟುಗಳು” ವಿಷಯದ ಕುರಿತು ಸಮಾನ ಶಿಕ್ಷಣ ಹೋರಾಟಗಾರರಾದ ಬಿ. ಶ್ರೀಪಾದ್ ಭಟ್ ಮತ್ತು ಎಫ್.ಸಿ. ಚೇಗರೆಡ್ಡಿ ಮಾತನಾಡಿದರು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕೃತಗೊಂಡಿದೆ ಎಂದು ಹೇಳಿದರೂ, ಅದರ ಶಿಫಾರಸುಗಳು ಇನ್ನೂ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದುವರಿದಿವೆ ಎಂದು ಶ್ರೀಪಾದ್ ಭಟ್ ಅಭಿಪ್ರಾಯಪಟ್ಟರು. ರಾಜ್ಯ ಶಿಕ್ಷಣ ನೀತಿ ಇನ್ನೂ ರೂಪುಗೊಂಡಿಲ್ಲದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರ ಗೊಂದಲದಲ್ಲಿದೆ ಎಂದರು. ಶಿಕ್ಷಣದಲ್ಲಿ ಒಳಗೊಳ್ಳುವಿಕೆಯ ಕೊರತೆ ಇನ್ನೂ ದೊಡ್ಡ ಸಮಸ್ಯೆಯಾಗಿದ್ದು, ಅಂಬೇಡ್ಕರ್ ಕನಸಿನ ಸಬಲೀಕರಣ ಮತ್ತು ವಿಮೋಚನೆಯ ಶಿಕ್ಷಣ ವ್ಯವಸ್ಥೆ ಇನ್ನೂ ಸಾಕಾರವಾಗಿಲ್ಲ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ಮೂಲ ಸ್ತಂಭಗಳಾಗಿವೆ. ಶಿಕ್ಷಣ ನೀತಿಯ ಅರಿವು ಪೋಷಕರಲ್ಲಿಯೂ ಕೊರತೆಯಾಗಿರುವುದು ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು. ಶಿಕ್ಷಣ ಹಕ್ಕನ್ನು 0ರಿಂದ 18 ವರ್ಷಗಳವರೆಗೆ ವಿಸ್ತರಿಸಬೇಕು, ಶಾಲಾ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕು, ದ್ವಿಭಾಷಾ ನೀತಿಯಲ್ಲಿ ಸ್ಪಷ್ಟತೆ ಇರಬೇಕು ಹಾಗೂ ಶೋಷಿತ ಸಮುದಾಯಗಳಿಗೆ ಪ್ರತ್ಯೇಕ ಶಿಕ್ಷಣ ನೀತಿ ಅಗತ್ಯವಿದೆ ಎಂದು ಸಲಹೆ ನೀಡಿದರು.

“ಅನುಭವ ಕಲಿಕೆ ಮತ್ತು ತಂತ್ರಜ್ಞಾನ” ಅಧಿವೇಶನದಲ್ಲಿ ಅಭಿಷೇಕಾ ಕೃಷ್ಣಗೋಷಾಲ್ “ತರಗತಿಯೊಳಗೆ ಪ್ರಕೃತಿ ಪಾಠ” ಕುರಿತು ಮಾತನಾಡಿದರೆ, ಶಿಕ್ಷಣ ತಜ್ಞೆ ಶ್ರೀರಂಜಿನಿ ರಂಗನಾಥನ್ ತಂತ್ರಜ್ಞಾನ ಮತ್ತು ಅನುಭವ ಕಲಿಕೆಯ ಸಮತೋಲನದ ಅಗತ್ಯವನ್ನು ವಿವರಿಸಿದರು.

ನಂತರ ನಡೆದ “ಕಲಿಕೆ – ಒಂದು ಸಂವಾದ” ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಎಸ್‌ಎಂಎಸ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳು “ಕಿಟಕಿ ಪಕ್ಕ ನಿಂತ ಹುಡುಗಿ” ನಾಟಕವನ್ನು ಪ್ರದರ್ಶಿಸಿದರು. ಅನುಭವ ಕಲಿಕೆಯ ಮಹತ್ವವನ್ನು ಸಾರುವ ‘ತೊತ್ತೋಚಾನ್’ ಕೃತಿಯನ್ನು ಆಧರಿಸಿದ ಈ ನಾಟಕಕ್ಕೆ ಡಾ. ಶ್ರೀಪಾದ್ ಭಟ್ ನಿರ್ದೇಶನ ಮಾಡಿದ್ದಾರೆ. ಬಳಿಕ ನಡೆದ ಮಾತುಕತೆಯಲ್ಲಿ ಕವಯತ್ರಿ ಸುಧಾ ಆಡುಕಳ ಮತ್ತು ಡಾ. ಶ್ರೀಪಾದ್ ಭಟ್ ಶಿಕ್ಷಣ, ಕಲೆ ಮತ್ತು ಮಕ್ಕಳ ಭಾವಜಗತ್ತಿನ ಕುರಿತು ಚರ್ಚಿಸಿದರು.

ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಫಣಿರಾಜ್ “ಪರಿಸರ ಮತ್ತು ಶಿಕ್ಷಣ – ಜನರ ಪ್ರಣಾಳಿಕೆ” ವಿಷಯವಾಗಿ ಮಾತನಾಡಿ, ಬಂಡವಾಳಶಾಹಿ ಉತ್ಪಾದಿಸುವ ಸರಕು ಸಂಸ್ಕೃತಿ ಮಾನವ ಜೀವನವನ್ನು ಆವರಿಸಿಕೊಂಡಿದೆ ಎಂದು ಹೇಳಿದರು. ಪರಿಸರ ರಕ್ಷಣೆಯ ಹೋರಾಟವು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ವಿರುದ್ಧದ ಹೋರಾಟದೊಂದಿಗೆ ಜೋಡಿಸಬೇಕಾಗಿದೆ ಎಂದ ಅವರು, ಸಮಾನತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಜನಚಳುವಳಿಗಳು ಅಗತ್ಯವಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಪರಿಸರ ಸಂರಕ್ಷಣೆ, ಶಿಕ್ಷಣದ ಬಿಕ್ಕಟ್ಟು, ಮಕ್ಕಳ ಅನುಭವಾಧಾರಿತ ಕಲಿಕೆ, ತಂತ್ರಜ್ಞಾನ ಮತ್ತು ಪ್ರಕೃತಿಯ ಸಂಬಂಧ, ಸಾರ್ವಜನಿಕ ಶಿಕ್ಷಣದ ಭವಿಷ್ಯ ಸೇರಿದಂತೆ ಹಲವು ವಿಷಯಗಳ ಕುರಿತ ಚರ್ಚೆಗಳು ನಡೆಯುವ ಮೂಲಕ ಸಮಾಜಮುಖಿ ಪರ್ಯಾಯಗಳ ಕುರಿತು ಗಂಭೀರ ಚಿಂತನೆ ಮೂಡಿಸಲಾಯಿತು. ಎರಡು ದಿನಗಳ ಈ ಸಮ್ಮೇಳನವು ಪರಿಸರ ಮತ್ತು ಶಿಕ್ಷಣ ಕುರಿತ ಜನಪರ ಚಳುವಳಿಗಳಿಗೆ ಹೊಸ ಚೈತನ್ಯ ತುಂಬಿದ ಮಹತ್ವದ ವೇದಿಕೆಯಾಗಿ ಪರಿಣಮಿಸಿತು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ಕಾರ್ಯಕ್ರಮದ ಮಧ್ಯೆ ಹೋರಾಟದ ಹಾಡುಗಳು ಸಭಿಕರ ಗಮನ ಸೆಳೆದವು. ಮಂದಾರ್ಥಿಯ ಶ್ರೀನಿವಾಸ್ ಅವರ ಪಾರಂಪರಿಕ ವಸ್ತುಗಳ ಸಂಗ್ರಹ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ಸಾಹಿತ್ಯಾಸಕ್ತರಿಗಾಗಿ ಎರಡು ದಿನಗಳ ಕಾಲ ಪುಸ್ತಕ ಮಾರಾಟ ಹಾಗೂ ಪ್ರದರ್ಶನವೂ ಆಯೋಜಿಸಲಾಗಿತ್ತು.







ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.





