ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಖಲಾಗುವ ಗಂಭೀರ ಪ್ರಕರಣಗಳಿಗೂ ‘ಜಾಮೀನು ನಿಯಮ, ಜೈಲು ವಿನಾಯಿತಿ’ ಎಂಬ ಮೂಲಭೂತ ನ್ಯಾಯಿಕ ತತ್ವ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದೆಹಲಿ ಗಲಭೆ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಹಾಗೂ ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, ಈ ಹಿಂದೆ ತನ್ನದೇ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನ ಕುರಿತು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ಯೂನಿಯನ್ ಆಫ್ ಇಂಡಿಯಾ ವಿರುದ್ಧ ಕೆ.ಎ. ನಜೀಬ್’ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳಿದ್ದ ಹಿರಿಯ ಪೀಠ ನೀಡಿದ್ದ ತೀರ್ಪನ್ನು ಉಮರ್ ಖಾಲಿದ್ ಪ್ರಕರಣದಲ್ಲಿ ಕಡೆಗಣಿಸಲಾಗಿದೆ ಎಂದು ನ್ಯಾಯಾಲಯ ಆಕ್ಷೇಪಿಸಿದೆ. ವಿಚಾರಣೆಯು ಅನಿರ್ದಿಷ್ಟ ಕಾಲದವರೆಗೆ ವಿಳಂಬವಾದರೆ, ಎಷ್ಟೇ ಗಂಭೀರ ಪ್ರಕರಣವಾದರೂ ಸಂವಿಧಾನದ 21ನೇ ವಿಧಿಯಡಿ ಆರೋಪಿಗಳಿಗೆ ಶೀಘ್ರ ವಿಚಾರಣೆ ಮತ್ತು ಜಾಮೀನಿನ ಹಕ್ಕು ಇರುತ್ತದೆ ಎಂದು ನಜೀಬ್ ಪ್ರಕರಣದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಇಂತಹ ಮಹತ್ವದ ಹಿರಿಯ ಪೀಠದ ತೀರ್ಪನ್ನು ಸಣ್ಣ ಪೀಠಗಳು (ಇಬ್ಬರು ನ್ಯಾಯಮೂರ್ತಿಗಳ ಪೀಠ) ಕಡೆಗಣಿಸುವಂತಿಲ್ಲ. ಒಂದು ವೇಳೆ ಹಿರಿಯ ಪೀಠದ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ, ಅದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೇ ವಿನಃ, ನೇರವಾಗಿ ವಿರುದ್ಧ ತೀರ್ಪು ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪುನಲ್ಲಿ ತಿಳಿಸಿದೆ.
ಯುಎಪಿಎ ಅಡಿಯಲ್ಲಿ ಕಠಿಣ ನಿಲುವು ತಾಳಿ ಉಮರ್ ಖಾಲಿದ್ ಹಾಗೂ ಇತರರ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ಆಧಾರವಾಗಿದ್ದ ಸುಪ್ರೀಂ ಕೋರ್ಟ್‌ನ ಹಿಂದಿನ ದ್ವಿಸದಸ್ಯ ಪೀಠದ (ಮುಖ್ಯವಾಗಿ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ನೀಡಿದ್ದ) ತೀರ್ಪನ್ನು ಪ್ರಸ್ತುತ ಪೀಠವು ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ಅಸಹಿಷ್ಣುಗಳ ಬಾಯಿ ಮುಚ್ಚಿಸಿದ ಕಲಾಭಿವ್ಯಕ್ತಿ: ಝಾರ್ಖಂಡ್‌ನಲ್ಲಿ ಪ್ರೇಕ್ಷಕರ ಮನ ಸೂರೆಗೊಂಡ ‘ಸೆರಂಗ್’ ಸಿನೆಮಾ
ಜಮ್ಮು-ಕಾಶ್ಮೀರದ ಕುಪ್ವಾರ ಮೂಲದ ನಿವಾಸಿ ಸೈಯದ್ ಇಫ್ತಿಕರ್ ಆಂದ್ರಾಬಿ ಎಂಬುವವರಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ನಿರೀಕ್ಷಣೆಗಳನ್ನು ದಾಖಲಿಸಿದೆ. ನಾರ್ಕೋ-ಟೆರರಿಸಂ (ಮಾದಕ ದ್ರವ್ಯ ಸಾಗಾಟ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು) ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಆಂದ್ರಾಬಿ ಅವರನ್ನು 2020ರ ಜೂನ್ 11 ರಂದು ಬಂಧಿಸಿತ್ತು.
ಈ ಹಿಂದೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ, ಸುಮಾರು ಐದು ವರ್ಷಗಳಿಂದ ಅವರು ವಿಚಾರಣೆಯಿಲ್ಲದೆ ಜೈಲುವಾಸ ಅನುಭವಿಸುತ್ತಿದ್ದರು. ಇದೀಗ, ಆರೋಪಗಳು ಎಷ್ಟು ಗಂಭೀರವಾಗಿರುತ್ತವೆಯೋ, ವಿಚಾರಣೆಯೂ ಅಷ್ಟೇ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು, ಪಾಸ್‌ಪೋರ್ಟ್ ಒಪ್ಪಿಸುವಿಕೆ ಹಾಗೂ ಪೊಲೀಸ್ ತನಿಖೆಗೆ ಸಹಕರಿಸುವ ಷರತ್ತುಗಳ ಮೇಲೆ ಆಂದ್ರಾಬಿಗೆ ಜಾಮೀನು ಒದಗಿಸಿದೆ. ಆರೋಪಿ ಪರವಾಗಿ ಹಿರಿಯ ವಕೀಲ ಶಾದಾನ್ ಫರಾಸತ್ ಕಲಾಪದಲ್ಲಿ ವಾದ ಮಂಡಿಸಿದ್ದರು.
ಇದೇ ವೇಳೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಯುಎಪಿಎ ಪ್ರಕರಣಗಳಲ್ಲಿನ ತೀರಾ ಕಡಿಮೆ ಶಿಕ್ಷೆಯ ಪ್ರಮಾಣದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. 2019 ರಿಂದ 2023ರ ವರೆಗಿನ ದತ್ತಾಂಶಗಳ ಪ್ರಕಾರ, ದೇಶಾದ್ಯಂತ ಯುಎಪಿಎ ಅಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಪ್ರಮಾಣ ಕೇವಲ ಶೇಕಡಾ 1.5 ರಿಂದ 4 ರಷ್ಟು ಮಾತ್ರವಿದ್ದು, ಬರೋಬ್ಬರಿ 94 ರಿಂದ 98ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಯಾಗುತ್ತಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪ್ರಮಾಣ ಮತ್ತಷ್ಟು ಆಘಾತಕಾರಿಯಾಗಿದ್ದು, ಶಿಕ್ಷೆಯ ಪ್ರಮಾಣ ಶೇಕಡಾ 1ಕ್ಕಿಂತಲೂ ಕಡಿಮೆಯಿದೆ. 2019ರಲ್ಲಿ ಶಿಕ್ಷೆಯ ಪ್ರಮಾಣ ಶೂನ್ಯ (ಶೇ 0) ಇದ್ದರೆ, 2022ರಲ್ಲಿ ಗರಿಷ್ಠ ಶೇ 0.98 ದಾಖಲಾಗಿದೆ. ಅಂದರೆ, ಜಮ್ಮು ಕಾಶ್ಮೀರದಲ್ಲಿ ಯುಎಪಿಎ ಅಡಿ ಬಂಧಿತರಾದ ಆರೋಪಿಗಳು ನಿರ್ದೋಷಿಗಳಾಗಿ ಹೊರಬರುವ ಸಾಧ್ಯತೆಯೇ ಶೇಕಡಾ 99ರಷ್ಟಿದೆ ಎಂಬ ಬೆಚ್ಚಿಬೀಳಿಸುವ ಸತ್ಯವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಯ ಹಿಂದಿನ ಪ್ರಮುಖ ರೂವಾರಿ ಎಂಬ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಹಾಗೂ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು 202ರ ಸೆಪ್ಟೆಂಬರ್ 13 ರಂದು ಕಠಿಣ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ವೇಳೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ವ್ಯವಸ್ಥಿತವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಗಲಭೆಗೆ ಸಂಚು ರೂಪಿಸಿದ್ದಾರೆ ಎಂಬುದು ಅವರ ಮೇಲಿರುವ ಗಂಭೀರ ಆರೋಪವಾಗಿದೆ.
ಅಂದು ಬಂಧನಕ್ಕೊಳಗಾದ ಉಮರ್ ಖಾಲಿದ್ ಅವರು ಸರಿಸುಮಾರು ಐದುವರೆ ವರ್ಷಗಳಿಗೂ ಹೆಚ್ಚು ಕಾಲದಿಂದ (ಸುಮಾರು 68 ತಿಂಗಳುಗಳು ಅಥವಾ 2070ಕ್ಕೂ ಹೆಚ್ಚು ದಿನಗಳಿಂದ) ಜೈಲಿನಲ್ಲಿದ್ದಾರೆ; ಇಷ್ಟೊಂದು ಸುದೀರ್ಘ ಅವಧಿ ಕಳೆದರೂ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದೆ, ಹಲವು ಬಾರಿ ಜಾಮೀನು ಅರ್ಜಿಗಳು ತಿರಸ್ಕೃತಗೊಂಡು ಅವರು ಇಂದಿಗೂ ದೆಹಲಿಯ ತಿಹಾರ್ ಜೈಲಿನಲ್ಲಿಯೇ ಉಳಿಯುವಂತಾಗಿದೆ.




