ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಶಬ್ದದೊಳಗಣ ನಿಶ್ಶಬ್ದ
ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರಾ
ನಿಮ್ಮ ಶರಣ ಸಂಬಂಧ!
ಪದಾರ್ಥ:
ಪಾವಕ = ಬೆಂಕಿ
ಉದಕ = ನೀರು
ವಚನಾರ್ಥ:
ಇದು ಅಲ್ಲಮ ವಚನ ಸಂಪುಟದಲ್ಲಿ ಪ್ರಕಟಗೊಳ್ಳುವ ಪ್ರಪ್ರಥಮ ವಚನ. ಶರಣ ಮತ್ತು ದೈವದ ನಡುವೆ ಇರುವ ಸಂಬಂಧದ ಮೂಲ ಸ್ವರೂಪ ಹೇಗಿರುತ್ತದೆ ಎಂಬುದನ್ನು ನಾಲ್ಕು ಉಪಮೆಗಳ ಮೂಲಕ ಈ ವಚನದಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಸಲಾಗಿದೆ. ಕಲ್ಲುಗಳು ಒಂದನ್ನೊಂದು ಮಥಿಸಿದರೆ ಮಾತ್ರ ಬೆಂಕಿಯ ಕಿಡಿ ಕಂಡುಬರುತ್ತದೆ. ಅಲ್ಲಿಯವರೆಗೆ ಕಲ್ಲಿನೊಳಗಿರುವ ಕಿಡಿಯ ಅಂಶ ಸುಪ್ತವಾಗಿರುತ್ತದೆ. ಹಾಗೆ ಶರಣ ಸಂಬಂಧ. ನಿಶ್ಚಲವಾಗಿ ನಿಂತಿರುವ ಕೆರೆ ಅಥವಾ ಕೊಳದ ನೀರಿನಲ್ಲಿ ದಡದ ಮೇಲಿರುವ ಮರಗಿಡಗಳ ಪ್ರತಿಬಿಂಬ ಪ್ರತಿಫಲನವಾಗುತ್ತಿರುತ್ತದೆ. ಹಾಗೆ ಶರಣ ಸಂಬಂಧ. ಒಂದು ಸಣ್ಣ ಬೀಜದಲ್ಲಿ ಮುಂದೆ ಹೆಮ್ಮರವಾಗಿ ಬೆಳೆಯುವ ಸಂಭಾವ್ಯ ಶಕ್ತಿ ಅಡಗಿರುತ್ತದೆ. ಹಾಗೆ ಶರಣ ಸಂಬಂಧ. ಸ್ಪೋಟಕ ವಸ್ತುವೊಂದರಿಂದ ಭಾರೀ ಶಬ್ದ ಹೊರಹೊಮ್ಮವ ಮುನ್ನ ಅದರಲ್ಲಿ ನಿಶ್ಶಬ್ದ ನೆಲೆಸಿರುತ್ತದೆ. ಹಾಗೆ ಶರಣ ಸಂಬಂಧ. ಕತ್ತಲೆ-ಬೆಳಕು, ತತ್ತಿ-ಪಕ್ಷಿ, ಚಿಪ್ಪು-ಮುತ್ತು, ಸಾಗರ-ಶಶಿ, ಜಗತ್ತು-ಆಕಾಶಗಳ ಸಂಬಂಧದಂತೆ ಶರಣ-ದೈವ ಸಂಬಂಧ ಎಂದು ವಚನ ಸಾಹಿತ್ಯದ ದ್ವಿತೀಯ ಅಲ್ಲಮ ಎಂದೇ ಗೌರವಿಸಲಾಗುವ ಎಡೆಯೂರು ಸಿದ್ದಲಿಂಗೇಶ್ವರರು ಅಲ್ಲಮನ ಈ ವಚನದ ವಿಸ್ತರಿತ ಭಾಗವೆಂಬಂತೆ ತಮ್ಮ ವಚನದಲ್ಲಿ ಹೇಳಿದ್ದಾರೆ.
ಪದ ಪ್ರಯೋಗಾರ್ಥ:
ಶಬ್ದದೊಳಗಣ ನಿಶ್ಶಬ್ದದಂತೆ. ಶಬ್ದದೊಳಗೆ ನಿಶ್ಶಬ್ದವೋ? ನಿಶ್ಶಬ್ದದೊಳಗೆ ಶಬ್ದವೋ? ಶಬ್ದವಾಗಿ ಹೊಮ್ಮಿದ ನಿಶ್ಶಬ್ದ ಶಬ್ದಸ್ಫೋಟದ ನಂತರ ಮತ್ತೆ ನಿಶ್ಶಬ್ದದಲ್ಲಿ ನೆಲೆಯಾಗುವ ಪರಿಯನ್ನು ವಚನದಲ್ಲಿ ಅದ್ಭುತವಾದ ಉಪಮೆಯನ್ನಾಗಿಸಲಾಗಿದೆ. ಶಬ್ದದೊಳಗಣ ನಿಶ್ಶಬ್ದ ಎಂಬುದು ಅಲ್ಲಮನ ಬೆರಗುಗೊಳಿಸುವ ಬೆಡಗಿನ ಕಲ್ಪನೆ. ಶಬ್ದ ನಿಶ್ಶಬ್ದಗಳ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಕಳೆದ ಶತಮಾನದಲ್ಲಿ ಜಗತ್ತಿನಾದ್ಯಂತ ಆಧ್ಯಾತ್ಮಿಕ, ವೈಜ್ಞಾನಿಕ, ಸಾಹಿತ್ಯಕ ಚಿಂತನೆಗಳು ನಡೆದಿವೆ. Sounds of Silense ಎಂಬ ಶೀರ್ಷಿಕೆಯಡಿ ಇದರ ವಿವರಗಳು ಅಂತರ್ಜಾಲದಲ್ಲಿ ಸಿಗುತ್ತವೆ. 1964ರಲ್ಲಿ ಇದೇ ಶೀರ್ಷಿಕೆಯಲ್ಲಿ ಅಮೆರಿಕಾದಲ್ಲಿ ರಚನೆಯಾದ ಇಂಗ್ಲಿಷ್ ಗೀತೆಯೊಂದು ಜಗತ್ತಿನಾದ್ಯಂತ ಜನಪ್ರಿಯವಾಗಿತ್ತು. ಹನ್ನೆರಡನೇ ಶತಮಾನದಲ್ಲೇ ಶಬ್ದ ನಿಶ್ಶಬ್ದಗಳ ಪರಿಣಾಮದ ನಿಷ್ಕರ್ಷೆ ಮಾಡಿ ಅಲ್ಲಮ ತನ್ನ ವಚನದಲ್ಲಿ ಪ್ರಯೋಗಿಸಿದ “ಶಬ್ದದೊಳಗಣ ನಿಶ್ಶಬ್ದ” ಅತ್ಯಂತ ಅನನ್ಯವಾದದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




