ಅವಳ ಕಣ್ಣೋಟ | ‘ಅರುವಿ’- ಉಸಿರುಗಟ್ಟುವ ನೋವು, ಉರಿಯುವ ಸಿಟ್ಟು

Date:

ಚಿತ್ರದ ಮತ್ತೊಂದು ಮುಖ್ಯ ಚರ್ಚೆ ಕ್ಷಮೆಯ ಕುರಿತದ್ದು. ಅರುವಿ ತನ್ನನ್ನು ಶೋಷಿಸಿದ ಪುರುಷರನ್ನು ಎದುರಿಸುತ್ತಾಳೆ. ಆದರೆ ಮುಂದೆ ಚಿತ್ರ ಅವರ ಪಶ್ಚಾತ್ತಾಪ ಮತ್ತು ಮಾನವೀಯ ಮುಖಗಳನ್ನು ತೋರಿಸಲು ಪ್ರಯತ್ನಿಸುತ್ತದೆ. ಇಲ್ಲಿ ನಿರ್ದೇಶಕರ ಉದ್ದೇಶ ಮನುಷ್ಯರೊಳಗಿನ ಒಳ್ಳೆಯತನವನ್ನು ಗುರುತಿಸುವುದಾಗಿರಬಹುದು. ಆದರೆ ಲೈಂಗಿಕ ಹಿಂಸೆ ಮಾಡಿದವರನ್ನು ಸಹಾನುಭೂತಿಯಿಂದ ನೋಡುವಾಗ ಅವರ ಕೃತ್ಯದ ಗಂಭೀರತೆ ಮರೆಯಾಗುವ ಅಪಾಯವಿದೆ.

- Advertisement -

ಮಹಿಳೆಯೊಬ್ಬಳು ನೋವಿನಲ್ಲಿದ್ದಾಗ ಆಕೆಯ ಬಗ್ಗೆ ಅನುಕಂಪ ತೋರಿಸುವ ಸಮಾಜ, ಅದೇ ಮಹಿಳೆ ತನಗಾದ ಅನ್ಯಾಯವನ್ನು ಪ್ರಶ್ನಿಸಿದಾಗ ಯಾಕೆ ಸಹಿಸಿಕೊಳ್ಳುವುದಿಲ್ಲ? ಆಕೆ ಅತ್ತರೆ ಸಮಾಧಾನ ಮಾಡುತ್ತದೆ. ಕೋಪ ಮಾಡಿಕೊಂಡರೆ ಅಪರಾಧಿಯಂತೆ ನೋಡುತ್ತದೆ. ತನ್ನ ಮೇಲಾದ ಹಿಂಸೆಯನ್ನು ಕ್ಷಮಿಸಿದರೆ ದೊಡ್ಡ ಗುಣ ಅಂತ ಹೊಗಳುತ್ತದೆ. ಆದರೆ ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ಆಕೆಯ ನಡತೆಯನ್ನೇ ಪ್ರಶ್ನಿಸುತ್ತದೆ. ಮಹಿಳೆಯ ಬದುಕಿನ ಸುತ್ತ ಇರೋ ಇಂಥ ವಿರೋಧಾಭಾಸಗಳನ್ನು ತೆರೆದಿಡುವ ಚಿತ್ರ ತಮಿಳಿನ ‘ಅರುವಿ’.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಅರುಣ್ ಪ್ರಭು ಪುರುಷೋತ್ತಮನ್ ನಿರ್ದೇಶನದ ‘ಅರುವಿ’ 2017ರಲ್ಲಿ ಬಿಡುಗಡೆಯಾದ ಚಿತ್ರ. ಅದಿತಿ ಬಾಲನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮೇಲ್ನೋಟಕ್ಕೆ ಎಚ್‌ಐವಿ ಸೋಂಕಿಗೆ ಒಳಗಾದ ಯುವತಿಯೊಬ್ಬಳ ಬದುಕಿನ ಕಥೆಯಂತೆ ಕಂಡರೂ, ಕುಟುಂಬ, ಮಹಿಳೆಯ ದೇಹ, ಲೈಂಗಿಕ ಹಿಂಸೆ, ಸಮಾಜದ ನೈತಿಕತೆ, ಮಾಧ್ಯಮಗಳ ವ್ಯಾಪಾರೀಕರಣ ಮತ್ತು ಮನುಷ್ಯ ಸಂಬಂಧಗಳ ಬೂಟಾಟಿಕೆಯನ್ನು ಚಿತ್ರ ಪ್ರಶ್ನಿಸುತ್ತದೆ. ಆದರೆ, ಚಿತ್ರ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕಂತೇನಿಲ್ಲ. ಅದರೊಳಗಿನ ಕೆಲವು ನಿಲುವುಗಳನ್ನೂ ಮಹಿಳಾವಾದಿ ದೃಷ್ಟಿಯಿಂದ ಪ್ರಶ್ನಿಸಬೇಕಾಗುತ್ತದೆ.

ಅರುವಿ ಪ್ರೀತಿಯ ವಾತಾವರಣದಲ್ಲಿ ಬೆಳೆದ ಯುವತಿ. ತಂದೆಯ ಮುದ್ದು, ತಾಯಿಯ ಆರೈಕೆ, ಸ್ನೇಹಿತರ ಒಡನಾಟದಲ್ಲಿ ಆಕೆಯ ಬಾಲ್ಯ ಕಳೆಯುತ್ತದೆ. ಬದುಕಿನ ಬಗ್ಗೆ ಕನಸುಗಳಿರುವ, ನಗುವ, ಪ್ರೀತಿಸುವ ಸಾಮಾನ್ಯ ಯುವತಿ ಆಕೆ. ಆದರೆ ತನಗೆ ಎಚ್‌ಐವಿ ಸೋಂಕು ತಗುಲಿದೆ ಅನ್ನೋದು ಗೊತ್ತಾದಾಗ ಆಕೆಯ ಬದುಕೇ ಬದಲಾಗುತ್ತದೆ. ಅದುವರೆಗೆ ಪ್ರೀತಿಸುತ್ತಿದ್ದ ಕುಟುಂಬವೇ ಆಕೆಯನ್ನು ದೂರ ಮಾಡುತ್ತದೆ. ಅದರಲ್ಲೂ ತಂದೆಯ ತಿರಸ್ಕಾರ ಆಕೆಯನ್ನು ಕಂಗೆಡಿಸುತ್ತದೆ.

ಇಲ್ಲಿ ಕುಟುಂಬದೊಳಗಿನ ಪ್ರೀತಿ ಎಷ್ಟೊಂದು ಷರತ್ತುಗಳಿಗೆ ಒಳಪಟ್ಟಿರುತ್ತದೆ ಅನ್ನೋದನ್ನು ಚಿತ್ರ ತೋರಿಸುತ್ತದೆ. ಮಗಳ ಆರೋಗ್ಯಕ್ಕಿಂತ ಆಕೆಯ ನಡತೆಯ ಬಗ್ಗೆ ಅನುಮಾನಪಡುವ ತಂದೆಯ ವರ್ತನೆ ನಮ್ಮ ಸಮಾಜಕ್ಕೆ ಹೊಸದೇನಲ್ಲ. ಮಹಿಳೆಯೊಬ್ಬಳಿಗೆ ಎಚ್‌ಐವಿ ಸೋಂಕು ಇದೆ ಅಂದರೆ, ಆಕೆಗೆ ಚಿಕಿತ್ಸೆ ಮತ್ತು ಆರೈಕೆ ಕೊಡೋದಕ್ಕಿಂತ ಮೊದಲು ಸೋಂಕು ಹೇಗೆ ತಗುಲಿತು ಅಂತ ವಿಚಾರಿಸುವ, ಅದನ್ನು ಆಕೆಯ ಚಾರಿತ್ರ್ಯದ ಜೊತೆ ಜೋಡಿಸುವ ಮನಸ್ಥಿತಿ ನಮ್ಮಲ್ಲಿದೆ. ಮಹಿಳೆಯ ದೇಹದ ಮೇಲೆ ಕುಟುಂಬಕ್ಕಿರೋ ಹಿಡಿತವನ್ನು ಈ ಘಟನೆ ಬಯಲಿಗೆಳೆಯುತ್ತದೆ. ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ಮಗಳ ಬದುಕನ್ನೇ ನಿರಾಕರಿಸುವ ಕ್ರೌರ್ಯ ಇಲ್ಲಿ ಕಾಣಿಸುತ್ತದೆ.

ಮನೆಯಿಂದ ಹೊರಬಂದ ಅರುವಿಗೆ ಹೊರಗಿನ ಜಗತ್ತೂ ಸುರಕ್ಷಿತವಾಗಿರೋದಿಲ್ಲ. ಆಕೆಯ ಅಸಹಾಯಕ ಪರಿಸ್ಥಿತಿಯನ್ನು ಮೂವರು ಪುರುಷರು ದುರುಪಯೋಗಪಡಿಸಿಕೊಳ್ಳುತ್ತಾರೆ. ನೆರವು ಮತ್ತು ನಂಬಿಕೆಯ ನಿರೀಕ್ಷೆಯಲ್ಲಿರೋ ಮಹಿಳೆಯನ್ನು ಶೋಷಿಸುವ ಈ ಘಟನೆಗಳು ಕೇವಲ ವ್ಯಕ್ತಿಗಳ ತಪ್ಪನ್ನು ಮಾತ್ರ ತೋರಿಸೋದಿಲ್ಲ. ಮಹಿಳೆಯೊಬ್ಬಳು ಆರ್ಥಿಕವಾಗಿ, ಸಾಮಾಜಿಕವಾಗಿ ಅಸಹಾಯಕಳಾದಾಗ ಆಕೆಯ ಪರಿಸ್ಥಿತಿಯನ್ನೇ ಬಳಸಿಕೊಳ್ಳುವ ಪುರುಷಾಧಿಕಾರದ ಮುಖವನ್ನೂ ಬಯಲಿಗೆಳೆಯುತ್ತವೆ.

ಅರುವಿಯ ಮೇಲಾದ ಅನ್ಯಾಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವ ಪ್ರಯತ್ನದಲ್ಲಿ ಎಮಿಲಿ ಆಕೆಗೆ ನೆರವಾಗುತ್ತಾಳೆ. ಇಬ್ಬರೂ ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರು. ಅವರು ದೂರದರ್ಶನದ ಕಾರ್ಯಕ್ರಮವೊಂದನ್ನು ಸಂಪರ್ಕಿಸುತ್ತಾರೆ. ಆದರೆ ಅಲ್ಲಿ ನ್ಯಾಯಕ್ಕಿಂತ ಕಾರ್ಯಕ್ರಮದ ಜನಪ್ರಿಯತೆಯೇ ಮುಖ್ಯವಾಗಿರುತ್ತದೆ. ಮಹಿಳೆಯರ ಕಣ್ಣೀರು, ಕುಟುಂಬಗಳ ಜಗಳ, ವೈಯಕ್ತಿಕ ಬದುಕಿನ ಸಂಕಟಗಳನ್ನು ಮನರಂಜನೆಯ ಸರಕಾಗಿಸಿಕೊಳ್ಳುವ ಮಾಧ್ಯಮಗಳ ಮುಖವನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಕಾರ್ಯಕ್ರಮದ ನಿರೂಪಕಿ ಶೋಭಾ ಪಾರ್ಥಸಾರಥಿ ಮತ್ತು ನಿರ್ಮಾಣ ತಂಡದ ವರ್ತನೆ ಇದಕ್ಕೆ ಉದಾಹರಣೆ. ನ್ಯಾಯ ಕೇಳಲು ಬಂದ ಮಹಿಳೆಯೇ ಅಲ್ಲಿ ಮತ್ತೊಮ್ಮೆ ಸಾರ್ವಜನಿಕ ವಿಚಾರಣೆಗೆ ಒಳಗಾಗುತ್ತಾಳೆ.

ಆದರೆ ಮಾಧ್ಯಮಗಳ ಈ ಕ್ರೌರ್ಯವನ್ನು ನಿರೂಪಕಿಯೊಬ್ಬಳ ಅಹಂಕಾರ ಅಥವಾ ಅಸೂಕ್ಷ್ಮ ವರ್ತನೆಗೆ ಮಾತ್ರ ಸೀಮಿತಗೊಳಿಸೋಕೆ ಆಗೋದಿಲ್ಲ. ಕಾರ್ಯಕ್ರಮ ರೂಪಿಸುವವರು, ಅದರ ಮೂಲಕ ಹಣ ಗಳಿಸುವವರು, ಇಂಥ ಕಾರ್ಯಕ್ರಮಗಳನ್ನು ನೋಡಿ ಆನಂದಿಸುವ ಪ್ರೇಕ್ಷಕರು ಎಲ್ಲರೂ ಈ ವ್ಯವಸ್ಥೆಯ ಭಾಗವಾಗಿದ್ದಾರೆ. ಚಿತ್ರದಲ್ಲಿ ನಿರೂಪಕಿಯನ್ನು ಕೆಲವು ಕಡೆ ಅತಿಯಾಗಿ ಹಾಸ್ಯಾಸ್ಪದವಾಗಿ ಚಿತ್ರಿಸಿರುವುದೂ ಗಮನಿಸಬೇಕಾದ ಸಂಗತಿ. ಮಾಧ್ಯಮಗಳ ಬೂಟಾಟಿಕೆಯನ್ನು ಪ್ರಶ್ನಿಸುವಾಗ ಮಹಿಳಾ ನಿರೂಪಕಿಯನ್ನೇ ಮುಖ್ಯ ಖಳನಾಯಕಿಯನ್ನಾಗಿ ನಿಲ್ಲಿಸುವುದು ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ವ್ಯಕ್ತಿಯ ವರ್ತನೆಯನ್ನು ಟೀಕಿಸುವುದರ ಜೊತೆಗೆ, ಆ ವರ್ತನೆಗೆ ಕಾರಣವಾಗಿರೋ ವ್ಯವಸ್ಥೆಯನ್ನೂ ಪ್ರಶ್ನಿಸೋದು ಮುಖ್ಯ.

aruvi

ಚಿತ್ರದ ಪ್ರಮುಖ ದೃಶ್ಯವೊಂದರಲ್ಲಿ ಅರುವಿ ತನಗೆ ಎಚ್‌ಐವಿ ಸೋಂಕು ಇದೆ ಅನ್ನೋದನ್ನು ಬಹಿರಂಗಪಡಿಸುತ್ತಾಳೆ. ಅಲ್ಲಿಯವರೆಗೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತಿದ್ದ ಪುರುಷರು ಈ ವಿಷಯ ಗೊತ್ತಾದ ಕೂಡಲೇ ಆತಂಕಗೊಳ್ಳುತ್ತಾರೆ. ತಮ್ಮಿಂದ ಮಹಿಳೆಗೆ ಆಗಿರೋ ಹಿಂಸೆಗಿಂತ ತಮಗೆ ಸೋಂಕು ತಗುಲಿರಬಹುದೆಂಬ ಭಯವೇ ಅವರನ್ನು ಹೆಚ್ಚು ಕಾಡುತ್ತದೆ. ಈ ದೃಶ್ಯ ಸಮಾಜದ ಸ್ವಾರ್ಥವನ್ನು ತೀಕ್ಷ್ಣವಾಗಿ ತೋರಿಸುತ್ತದೆ. ತಮ್ಮ ತಪ್ಪಿನ ಪರಿಣಾಮ ಎದುರಿಸಬೇಕಾದ ಸಂದರ್ಭ ಬಂದಾಗ ಮಾತ್ರ ತಮ್ಮ ಸುರಕ್ಷತೆಯ ಬಗ್ಗೆ ಯೋಚಿಸುವ ಮನಸ್ಥಿತಿ ಇಲ್ಲಿ ಬಯಲಾಗುತ್ತದೆ.

ಆದರೆ ಇಲ್ಲಿ ಚಿತ್ರದ ಮತ್ತೊಂದು ಮಿತಿಯೂ ಕಾಣಿಸುತ್ತದೆ. ಅರುವಿಗೆ ಸೋಂಕು ತಗುಲಿದ ಸಂದರ್ಭವನ್ನು ಎಳನೀರಿಗೆ ಸಂಬಂಧಿಸಿದ ಘಟನೆಯೊಂದಿಗೆ ಜೋಡಿಸಲಾಗಿದೆ. ಚಿತ್ರದ ನಿರೂಪಣೆಯಲ್ಲಿ ಎಳನೀರು ಮಾರುವ ವ್ಯಕ್ತಿಯ ರಕ್ತ ಅರುವಿಯ ಬಾಯಿಯ ಗಾಯಕ್ಕೆ ತಾಗುವ ಪ್ರಸಂಗ ಬರುತ್ತದೆ. ಸೋಂಕಿಗೆ ಲೈಂಗಿಕ ಸಂಬಂಧವೇ ಕಾರಣವಲ್ಲ ಅನ್ನೋದನ್ನು ಒತ್ತಿಹೇಳುವ ಈ ನಿರೂಪಣೆ, ಮಹಿಳೆಯ ಮುಗ್ಧತೆಯನ್ನು ಸಾಬೀತುಪಡಿಸುವ ಪ್ರಯತ್ನದಂತೆ ಕಾಣುತ್ತದೆ.

ವೈದ್ಯಕೀಯವಾಗಿ ನೋಡಿದರೆ, ಸಾಮಾನ್ಯವಾಗಿ ಆಹಾರ ಅಥವಾ ಪಾನೀಯ ಹಂಚಿಕೊಳ್ಳುವುದರಿಂದ ಎಚ್‌ಐವಿ ಹರಡುವುದಿಲ್ಲ. ಚಿತ್ರದಲ್ಲಿನ ಪ್ರಸಂಗದಲ್ಲಿ ರಕ್ತದ ಸಂಪರ್ಕದ ಬಗ್ಗೆ ತೋರಿಸಿದ್ದರೂ, ಅದನ್ನು ಎಚ್‌ಐವಿ ಹರಡುವ ಸಾಮಾನ್ಯ ವಿಧಾನ ಅಂತ ಅರ್ಥ ಮಾಡಿಕೊಳ್ಳಬಾರದು. ಪರಿಣಾಮಕಾರಿ ಚಿಕಿತ್ಸೆಯಿಂದ ಎಚ್‌ಐವಿ ಸೋಂಕಿನೊಂದಿಗೆ ದೀರ್ಘಕಾಲ ಆರೋಗ್ಯಕರವಾಗಿ ಬದುಕಲು ಸಾಧ್ಯವಿದೆ. ಸೋಂಕಿನ ಬಗ್ಗೆ ಸಮಾಜದಲ್ಲಿರೋ ಭಯ ಮತ್ತು ಕಳಂಕವನ್ನು ಪ್ರಶ್ನಿಸುವಾಗ, ಸೋಂಕಿನೊಂದಿಗೆ ಬದುಕುವ ಸಾಧ್ಯತೆಗಳಿಗೂ ಚಿತ್ರ ಇನ್ನಷ್ಟು ಜಾಗ ಕೊಡಬಹುದಿತ್ತು.

ಇದಕ್ಕಿಂತ ಮುಖ್ಯವಾದ ಪ್ರಶ್ನೆಯೊಂದಿದೆ. ಒಬ್ಬ ಮಹಿಳೆಗೆ ಲೈಂಗಿಕ ಸಂಪರ್ಕದಿಂದ ಎಚ್‌ಐವಿ ಸೋಂಕು ತಗುಲಿದ್ದರೂ ಆಕೆಯ ಘನತೆ ಕಡಿಮೆಯಾಗೋದಿಲ್ಲ. ಆಕೆಗೆ ನ್ಯಾಯ ಸಿಗಬೇಕಾದರೆ ಆಕೆ ಲೈಂಗಿಕವಾಗಿ ಮುಗ್ಧಳಾಗಿರಬೇಕಿಲ್ಲ. ಮಹಿಳೆಯ ಬದುಕನ್ನು ಒಳ್ಳೆಯವಳು, ಕೆಟ್ಟವಳು ಅನ್ನೋ ಚೌಕಟ್ಟಿನಲ್ಲಿ ಅಳೆಯುವ ಸಮಾಜದ ನಿಲುವನ್ನು ಪ್ರಶ್ನಿಸುವ ಚಿತ್ರವೇ ಮಹಿಳೆಯ ಮುಗ್ಧತೆಯನ್ನು ಸಾಬೀತುಪಡಿಸುವ ಅಗತ್ಯವಿದೆಯೇನೋ ಅನ್ನೋ ರೀತಿಯಲ್ಲಿ ನಿರೂಪಿಸಿರುವುದು ಅದರ ಮಿತಿಯಾಗಿದೆ.

ಅರುವಿಯ ಬದುಕಿನಲ್ಲಿ ಎಮಿಲಿಯ ಪಾತ್ರ ವಿಶೇಷವಾದದ್ದು. ಸಮಾಜದ ತಿರಸ್ಕಾರ ಎದುರಿಸುವ ಟ್ರಾನ್ಸ್‌ಜೆಂಡರ್ ಮಹಿಳೆಯಾದ ಎಮಿಲಿ, ಅರುವಿಗೆ ಜೊತೆಯಾಗುತ್ತಾಳೆ. ಹೆತ್ತ ಕುಟುಂಬವೇ ಕೈಬಿಟ್ಟಾಗ ರಕ್ತಸಂಬಂಧವಿಲ್ಲದ ಎಮಿಲಿ ಆಕೆಗೆ ಆಸರೆಯಾಗುತ್ತಾಳೆ. ಕುಟುಂಬ ಅಂದರೆ ಕೇವಲ ರಕ್ತಸಂಬಂಧವಲ್ಲ, ಪರಸ್ಪರ ಕಾಳಜಿ ಮತ್ತು ಗೌರವದಿಂದಲೂ ಸಂಬಂಧಗಳನ್ನು ಕಟ್ಟಿಕೊಳ್ಳಬಹುದು ಅನ್ನೋದನ್ನು ಇವರ ಸ್ನೇಹ ತೋರಿಸುತ್ತದೆ. ಎಮಿಲಿಯಾಗಿ ಅಂಜಲಿ ವರದನ್ ಅವರ ಅಭಿನಯ ಗಮನ ಸೆಳೆಯುತ್ತದೆ.

ಆದರೆ ಎಮಿಲಿಯ ಪಾತ್ರದ ನಿರೂಪಣೆಯಲ್ಲಿಯೂ ಕೆಲವು ಅಸೂಕ್ಷ್ಮತೆಗಳಿವೆ. ಆಕೆಯ ಮೇಲಿನ ಹಿಂಸೆಯನ್ನು ಕೆಲವು ಸಂದರ್ಭಗಳಲ್ಲಿ ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಟ್ರಾನ್ಸ್‌ಜೆಂಡರ್ ಮಹಿಳೆಯೊಬ್ಬಳು ಲೈಂಗಿಕ ಹಿಂಸೆಗೆ ಒಳಗಾಗುವುದರ ಬಗ್ಗೆ ವ್ಯಕ್ತವಾಗುವ ಅಚ್ಚರಿ ಮತ್ತು ಹಾಸ್ಯ, ಆ ಸಮುದಾಯ ಎದುರಿಸುವ ಹಿಂಸೆಯ ಗಂಭೀರತೆಯನ್ನು ಕಡೆಗಣಿಸುತ್ತದೆ. ಎಮಿಲಿಯನ್ನು ಅರುವಿಯ ಸ್ನೇಹಿತೆಯಾಗಿ ಗೌರವದಿಂದ ತೋರಿಸಿರುವ ನಿರ್ದೇಶಕರು, ಆಕೆಯ ಸ್ವಂತ ನೋವು ಮತ್ತು ಬದುಕಿಗೂ ಇನ್ನಷ್ಟು ಜಾಗ ಕೊಡಬಹುದಿತ್ತು. ಅರುವಿಗೆ ಆಸರೆಯಾಗುವ ಪಾತ್ರವಾಗಿ ಮಾತ್ರವಲ್ಲದೆ, ತನ್ನದೇ ಆದ ಅನುಭವಗಳು ಮತ್ತು ಹೋರಾಟಗಳಿರೋ ವ್ಯಕ್ತಿಯಾಗಿ ಎಮಿಲಿಯನ್ನು ಕಟ್ಟಿಕೊಡಬಹುದಿತ್ತು.

ಚಿತ್ರದ ಮತ್ತೊಂದು ಮುಖ್ಯ ಚರ್ಚೆ ಕ್ಷಮೆಯ ಕುರಿತದ್ದು. ಅರುವಿ ತನ್ನನ್ನು ಶೋಷಿಸಿದ ಪುರುಷರನ್ನು ಎದುರಿಸುತ್ತಾಳೆ. ಆದರೆ ಮುಂದೆ ಚಿತ್ರ ಅವರ ಪಶ್ಚಾತ್ತಾಪ ಮತ್ತು ಮಾನವೀಯ ಮುಖಗಳನ್ನು ತೋರಿಸಲು ಪ್ರಯತ್ನಿಸುತ್ತದೆ. ಇಲ್ಲಿ ನಿರ್ದೇಶಕರ ಉದ್ದೇಶ ಮನುಷ್ಯರೊಳಗಿನ ಒಳ್ಳೆಯತನವನ್ನು ಗುರುತಿಸುವುದಾಗಿರಬಹುದು. ಆದರೆ ಲೈಂಗಿಕ ಹಿಂಸೆ ಮಾಡಿದವರನ್ನು ಸಹಾನುಭೂತಿಯಿಂದ ನೋಡುವಾಗ ಅವರ ಕೃತ್ಯದ ಗಂಭೀರತೆ ಮರೆಯಾಗುವ ಅಪಾಯವಿದೆ. ಒಬ್ಬ ವ್ಯಕ್ತಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡೋದನ್ನು ತೋರಿಸುವುದಕ್ಕೂ, ಆತ ಮಾಡಿದ ಹಿಂಸೆಯ ಜವಾಬ್ದಾರಿಯನ್ನು ಕಡಿಮೆ ಮಾಡುವುದಕ್ಕೂ ವ್ಯತ್ಯಾಸವಿದೆ.

ಮಹಿಳೆಯರು ಎಲ್ಲವನ್ನೂ ಸಹಿಸಬೇಕು, ಕ್ಷಮಿಸಬೇಕು, ತಮ್ಮ ನೋವಿಗಿಂತ ಇತರರ ನೋವಿಗೆ ಹೆಚ್ಚು ಮಹತ್ವ ಕೊಡಬೇಕು ಅನ್ನೋ ನಿರೀಕ್ಷೆ ಸಮಾಜದಲ್ಲಿ ಮೊದಲಿನಿಂದಲೂ ಇದೆ. ಅರುವಿಯ ಕ್ಷಮೆಯನ್ನು ಆಕೆಯ ದೊಡ್ಡತನವಾಗಿ ಚಿತ್ರಿಸುವಾಗ ಈ ನಿರೀಕ್ಷೆಯನ್ನು ಮತ್ತೊಮ್ಮೆ ಬಲಪಡಿಸಿದಂತಾಗುತ್ತದೆ. ಕ್ಷಮಿಸೋದು ಮಹಿಳೆಯ ಆಯ್ಕೆಯಾಗಿರಬಹುದು. ಆದರೆ ಕ್ಷಮಿಸದಿರುವ ಹಕ್ಕೂ ಆಕೆಗೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಕ್ಷಮೆ ಮತ್ತು ನ್ಯಾಯ ಒಂದೇ ಅಲ್ಲ. ಪಶ್ಚಾತ್ತಾಪ ವ್ಯಕ್ತಪಡಿಸಿದ ಮಾತ್ರಕ್ಕೆ ಮಾಡಿದ ಅನ್ಯಾಯ ಸರಿಯಾಗೋದಿಲ್ಲ.

ಚಿತ್ರದ ಕಥೆ ಮತ್ತು ಚಿತ್ರಕಥೆಯಲ್ಲಿ ನಿರ್ದೇಶಕ ಅರುಣ್ ಪ್ರಭು ಪುರುಷೋತ್ತಮನ್ ಹೊಸತನ ತೋರಿದ್ದಾರೆ. ಕಥೆಯನ್ನು ಆರಂಭದಿಂದ ಅಂತ್ಯದವರೆಗೆ ನೇರವಾಗಿ ಹೇಳದೆ, ಬೇರೆಬೇರೆ ಕಾಲಘಟ್ಟಗಳ ಮೂಲಕ ಅರುವಿಯ ಬದುಕನ್ನು ತೆರೆದಿಡುತ್ತಾರೆ. ಆರಂಭದಲ್ಲಿ ಅಪರಾಧಿಯಂತೆ ಕಾಣುವ ಅರುವಿಯ ಹಿಂದಿನ ಬದುಕು ಗೊತ್ತಾಗುತ್ತಿದ್ದಂತೆ ಪ್ರೇಕ್ಷಕರ ನಿಲುವು ಬದಲಾಗುತ್ತದೆ. ಆಕೆಯ ವರ್ತನೆಯ ಹಿಂದಿರೋ ನೋವು ಮತ್ತು ಅನುಭವಗಳನ್ನು ನಿಧಾನವಾಗಿ ತೆರೆದಿಡುವ ವಿಧಾನ ಚಿತ್ರಕಥೆಯ ಪ್ರಮುಖ ಶಕ್ತಿ. ಗಂಭೀರವಾದ ಕಥೆಯ ನಡುವೆಯೂ ಹಾಸ್ಯಕ್ಕೆ ಜಾಗವಿದೆ. ಆದರೆ ದೂರದರ್ಶನದ ಸ್ಟುಡಿಯೊದಲ್ಲಿ ನಡೆಯುವ ಕೆಲವು ದೃಶ್ಯಗಳು ಅನಗತ್ಯವಾಗಿ ಉದ್ದವಾಗಿವೆ. ಕೆಲವು ಸಂಭಾಷಣೆಗಳು ಪಾತ್ರಗಳ ಸಹಜ ಮಾತುಗಳಿಗಿಂತ ನಿರ್ದೇಶಕರು ಸಮಾಜಕ್ಕೆ ಹೇಳಬೇಕೆಂದಿರುವ ಸಂದೇಶಗಳಂತೆ ಕೇಳಿಸುತ್ತವೆ.

ಶೆಲ್ಲಿ ಕ್ಯಾಲಿಸ್ಟ್ ಅವರ ಛಾಯಾಗ್ರಹಣ ಚಿತ್ರದ ಮತ್ತೊಂದು ಶಕ್ತಿ. ಅರುವಿಯ ಬಾಲ್ಯದ ಪ್ರಕೃತಿ ದೃಶ್ಯಗಳು, ಕುಟುಂಬದ ಆತ್ಮೀಯ ವಾತಾವರಣ, ನಂತರದ ನಗರ ಬದುಕಿನ ಒಂಟಿತನ ಮತ್ತು ದೂರದರ್ಶನದ ಸ್ಟುಡಿಯೊದ ಗೊಂದಲಗಳನ್ನು ಕ್ಯಾಮೆರಾ ಪರಿಣಾಮಕಾರಿಯಾಗಿ ಸೆರೆಹಿಡಿದಿದೆ. ಕಥೆಯ ವಾತಾವರಣಕ್ಕೆ ತಕ್ಕಂತೆ ದೃಶ್ಯಗಳ ಸ್ವರೂಪವೂ ಬದಲಾಗುತ್ತದೆ. ದೃಶ್ಯಗಳನ್ನು ಅನಗತ್ಯವಾಗಿ ಸುಂದರಗೊಳಿಸದೆ, ಕಥೆಯ ಭಾವನೆಗಳಿಗೆ ಹೊಂದುವಂತೆ ಚಿತ್ರೀಕರಿಸಿರುವುದು ವಿಶೇಷ. ರೇಮಂಡ್ ಡೆರಿಕ್ ಕ್ರಾಸ್ಟಾ ಅವರ ಸಂಕಲನ ಕಥೆಯ ಬೇರೆಬೇರೆ ಕಾಲಘಟ್ಟಗಳನ್ನು ಜೋಡಿಸಲು ನೆರವಾಗಿದೆ.

ಬಿಂದು ಮಾಲಿನಿ ಮತ್ತು ವೇದಾಂತ್ ಭಾರದ್ವಾಜ್ ಅವರ ಸಂಗೀತ, ‘ಮೇರ್ಕು ಕರೈಯಿಲ್’ ಹಾಡು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಅರುವಿಯ ಸಂತೋಷ, ಒಂಟಿತನ ಮತ್ತು ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಕಥೆಯ ಓಟಕ್ಕೆ ಅಡ್ಡಿಯಾಗದೆ, ಕೆಲವು ದೃಶ್ಯಗಳಲ್ಲಿ ಸಂಭಾಷಣೆಗಳಿಗಿಂತಲೂ ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸುವ ಸಂಗೀತ ಚಿತ್ರದ ಪ್ರಮುಖ ಶಕ್ತಿಯಾಗಿದೆ.

ಅರುವಿಯಾಗಿ ಅದಿತಿ ಬಾಲನ್ ಅವರ ಅಭಿನಯ ಚಿತ್ರದ ಬಹುದೊಡ್ಡ ಶಕ್ತಿ. ಮುಗ್ಧತೆ, ಕೋಪ, ನೋವು, ಹಾಸ್ಯ ಮತ್ತು ಪ್ರತಿಭಟನೆಯನ್ನು ಅವರು ಸಹಜವಾಗಿ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ದೂರದರ್ಶನದ ಸ್ಟುಡಿಯೊದಲ್ಲಿ ಆಕೆಯ ಮುಖಭಾವ ಮತ್ತು ಮಾತುಗಳು ಗಮನ ಸೆಳೆಯುತ್ತವೆ. ಅರುವಿಯನ್ನು ಕೇವಲ ಅಸಹಾಯಕ ಮಹಿಳೆಯಾಗಿ ಉಳಿಸದೆ, ತನ್ನ ಬದುಕಿನ ಬಗ್ಗೆ ಮಾತನಾಡುವ ಮತ್ತು ಅನ್ಯಾಯವನ್ನು ಪ್ರಶ್ನಿಸುವ ವ್ಯಕ್ತಿಯಾಗಿ ಕಟ್ಟಿಕೊಟ್ಟಿರುವುದು ಚಿತ್ರದ ಸಾಧನೆ. ಆಕೆಯ ಅಭಿನಯದಿಂದಾಗಿ ಪಾತ್ರದ ನೋವು ಪ್ರೇಕ್ಷಕರಿಗೆ ತಲುಪುತ್ತದೆ. ಅದೇ ಸಮಯದಲ್ಲಿ ಆಕೆಯ ಕೋಪಕ್ಕೂ ಅರ್ಥ ಸಿಗುತ್ತದೆ.

ಆದರೆ ಚಿತ್ರದ ಕೊನೆಯ ಭಾಗದಲ್ಲಿ ಪ್ರತಿಭಟಿಸುವ ಅರುವಿಗಿಂತ ಎಲ್ಲರನ್ನೂ ಪ್ರೀತಿಸುವ, ಕ್ಷಮಿಸುವ ಅರುವಿಗೆ ಹೆಚ್ಚಿನ ಮಹತ್ವ ಸಿಗುತ್ತದೆ. ಆಕೆಯನ್ನು ತಿರಸ್ಕರಿಸಿದವರ ಪಶ್ಚಾತ್ತಾಪ ಮತ್ತು ಆಕೆಯ ದುರಂತ ಪ್ರೇಕ್ಷಕರ ಕಣ್ಣೀರಿಗೆ ಕಾರಣವಾಗುತ್ತವೆ. ಇಲ್ಲಿ ಒಂದು ಮುಖ್ಯ ಸಂಗತಿ ಮರೆಯಬಾರದು. ಅರುವಿಗೆ ಬದುಕಿರುವಾಗ ಬೇಕಾಗಿದ್ದದ್ದು ಪ್ರೀತಿ, ಆರೈಕೆ, ಚಿಕಿತ್ಸೆ ಮತ್ತು ಗೌರವ. ಆಕೆಯನ್ನು ದೂರ ಮಾಡಿದವರು ಕೊನೆಯಲ್ಲಿ ಕಣ್ಣೀರು ಸುರಿಸಿದ ಮಾತ್ರಕ್ಕೆ ಆಕೆಗೆ ಆಗಿರೋ ಅನ್ಯಾಯ ಸರಿಯಾಗೋದಿಲ್ಲ. ಆಕೆಯ ನೋವಿಗೆ ಕಣ್ಣೀರು ಸುರಿಸುವುದಕ್ಕಿಂತ, ಆಕೆಯ ಬದುಕನ್ನು ಗೌರವಿಸಿದ್ದರೆ ಅದೇ ನಿಜವಾದ ಮಾನವೀಯತೆಯಾಗುತ್ತಿತ್ತು.

aruvi 1

‘ಅರುವಿ’ ಹಲವು ಕಾರಣಗಳಿಂದ ಗಮನಾರ್ಹ ಚಿತ್ರ. ಮಹಿಳೆಯನ್ನು ಕೇವಲ ಪ್ರೇಮದ ವಸ್ತುವಾಗಿ ಅಥವಾ ತ್ಯಾಗಮೂರ್ತಿಯಾಗಿ ತೋರಿಸದೆ, ಆಕೆಯ ಕೋಪಕ್ಕೂ ಪ್ರತಿಭಟನೆಗೂ ಜಾಗ ನೀಡಿದೆ. ಕುಟುಂಬ, ಮಾಧ್ಯಮ, ಪುರುಷಾಧಿಕಾರ ಮತ್ತು ಸಮಾಜದ ನೈತಿಕತೆಯನ್ನು ಪ್ರಶ್ನಿಸಿದೆ. ಅದೇ ಸಮಯದಲ್ಲಿ ಮಹಿಳೆಯ ಮುಗ್ಧತೆಯನ್ನು ಒತ್ತಿಹೇಳುವುದು, ಲೈಂಗಿಕ ಹಿಂಸೆ ಮಾಡಿದವರನ್ನು ಮಾನವೀಯಗೊಳಿಸುವುದು, ಟ್ರಾನ್ಸ್‌ಜೆಂಡರ್ ಮಹಿಳೆಯ ಅನುಭವವನ್ನು ಕೆಲವು ಕಡೆ ಹಾಸ್ಯಕ್ಕೆ ಬಳಸಿಕೊಳ್ಳುವುದು ಮತ್ತು ಎಚ್‌ಐವಿ ಸೋಂಕನ್ನು ದುರಂತದೊಂದಿಗೆ ಬೆಸೆದು ತೋರಿಸುವುದು ಚಿತ್ರದ ಮಿತಿಗಳಾಗಿವೆ. ಈ ಮಿತಿಗಳಿದ್ದರೂ ಮಹಿಳೆಯ ಬದುಕು ಮತ್ತು ಘನತೆಯ ಬಗ್ಗೆ ಪ್ರೇಕ್ಷಕರನ್ನು ಯೋಚಿಸುವಂತೆ ಮಾಡುವ ಶಕ್ತಿ ಚಿತ್ರಕ್ಕಿದೆ.

ಅರುವಿಯ ಬದುಕು ನಮ್ಮನ್ನು ಕಾಡುವುದು ಆಕೆ ಅನುಭವಿಸಿದ ನೋವಿನಿಂದ ಮಾತ್ರವಲ್ಲ. ಆಕೆಯನ್ನು ಪ್ರೀತಿಸುತ್ತೇವೆ ಅನ್ನುವವರೇ ಆಕೆಯ ಬದುಕನ್ನು ನಿರಾಕರಿಸಿದ ರೀತಿಯಿಂದಲೂ ಹೌದು. ಆಕೆಯ ಕೋಪವನ್ನು ಅರ್ಥ ಮಾಡಿಕೊಳ್ಳದೆ, ಆಕೆಯ ಕ್ಷಮೆಯನ್ನು ಮಾತ್ರ ಮೆಚ್ಚುವ ಸಮಾಜದ ನಿಲುವಿನಿಂದಲೂ ಹೌದು.

ಮಹಿಳೆಯೊಬ್ಬಳಿಗೆ ನ್ಯಾಯ ಸಿಗಲು ಆಕೆ ಮುಗ್ಧಳಾಗಿರಬೇಕಿಲ್ಲ. ಪ್ರೀತಿಗೆ ಅರ್ಹಳಾಗಲು ಎಲ್ಲವನ್ನೂ ಸಹಿಸಬೇಕಿಲ್ಲ. ತನ್ನ ಮೇಲಾದ ಹಿಂಸೆಯನ್ನು ಕ್ಷಮಿಸಬೇಕೆಂಬ ಒತ್ತಾಯವೂ ಇರಬಾರದು. ಆಕೆಯ ನೋವಿಗೆ ಕಣ್ಣೀರು ಸುರಿಸುವುದಕ್ಕಿಂತ ಬದುಕಿರುವಾಗಲೇ ಆಕೆಯ ಘನತೆ, ಸ್ವಾತಂತ್ರ್ಯ ಮತ್ತು ಆಯ್ಕೆಗಳನ್ನು ಗೌರವಿಸುವುದು ಮುಖ್ಯ. ‘ಅರುವಿ’ ನಮ್ಮ ಮುಂದಿಡುವ ಬಹುದೊಡ್ಡ ಸವಾಲು ಇದೇ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಮೆರಾ ಆಫ್ ಆಗಿದೆ ಎಂದುಕೊಂಡು ಇಸ್ರೇಲ್ ನೀತಿ ಟೀಕೆ; ಲೈವ್ ಪ್ರಸಾರ ತಿಳಿದು ದಂಗಾದ ನಟಿ!

ದೇಶದ ನೀತಿಗಳ ಬಗ್ಗೆ ಸ್ವತಃ ಇಸ್ರೇಲ್‌ನಲ್ಲೇ ವಿರೋಧಿ ಧ್ವನಿಗಳು ಕೇಳಿಬರುತ್ತಿರುವುದು ತಿಳಿದೇ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...