ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ 'ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ' ಎಂದು ಹೇಳಿಕೊಂಡರೂ, 47 ಲಕ್ಷ ಮತದಾರರ ಹೆಸರು ಕೈಬಿಟ್ಟ ವಿವಾದ, ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ಪದೇ ಪದೇ ವಿಸ್ತರಣೆಯಾದ ಪರಿಷ್ಕರಣಾ ಗಡುವಿನ ನಡುವೆ ಈ ನಿರ್ಧಾರ ಹೊರಬಿದ್ದಿರುವುದು ಕಾಕತಾಳೀಯವಲ್ಲ ಎಂಬುದು ಸ್ಪಷ್ಟ.
ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಅತ್ಯಂತ ನಿರ್ಣಾಯಕ ಮತ್ತು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲೇ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅಶೋಕ್ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ದಿಢೀರ್ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು (MHA) ನವೆಂಬರ್ 19ರಂದು ಆದೇಶ ಹೊರಡಿಸಿದೆ. AGMUT ಕೇಡರ್‌ನ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ದೆಹಲಿಯಿಂದ ಜಮ್ಮು-ಕಾಶ್ಮೀರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿದೆ. ಅದರಲ್ಲಿ ಅಶೋಕ್ ಕುಮಾರ್ ಅವರ ಹೆಸರೂ ಸೇರಿದೆ.
2006ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅಶೋಕ್ ಕುಮಾರ್ ಅವರು 2026ರ ಫೆಬ್ರವರಿಯಲ್ಲಿ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೇವಲ ಒಂಬತ್ತು ತಿಂಗಳ ಅಲ್ಪಾವಧಿಯಲ್ಲಿಯೇ ಅವರನ್ನು ವರ್ಗಾವಣೆ ಮಾಡಿರುವುದು ಈಗ ದೆಹಲಿಯ ಆಡಳಿತಾತ್ಮಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ, ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಈ ಬದಲಾವಣೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವರ್ಗಾವಣೆಯ ಹಿಂದಿನ ಪ್ರಮುಖ ಕಾರಣಗಳೇನು?
ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಜೂನ್ 30ರಂದು ದೆಹಲಿಯಲ್ಲಿ ಎಸ್‌ಐಆರ್ ಅಭಿಯಾನ ಆರಂಭವಾಗಿದೆ. ಪರಿಷ್ಕರಣೆಗೂ ಮುನ್ನ ದೆಹಲಿಯಲ್ಲಿ ಸುಮಾರು 1.45 ಕೋಟಿ ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್ 31ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಕೇವಲ 97.5 ಲಕ್ಷ ಮತದಾರರ ಹೆಸರುಗಳು ಮಾತ್ರ ಉಳಿದುಕೊಂಡಿದೆ. ಅಂದರೆ ಬರೋಬ್ಬರಿ 47.56 ಲಕ್ಷ ಮತದಾರರ ಹೆಸರುಗಳನ್ನು ‘ಗೈರುಹಾಜರಿ, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರು ಮತ್ತು ನಕಲಿ ಮತದಾರರು’ ಎಂಬ ವಿಭಾಗಗಳ ಅಡಿಯಲ್ಲಿ ಕೈಬಿಡಲಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ
ಕರಡು ಪಟ್ಟಿಯಿಂದ ಏಕಾಏಕಿ 47 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಅಳಿಸಿಹಾಕಿರುವುದು ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು ಮತ್ತು ಈ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರ ಮರುಪರಿಶೀಲನೆ ನಡೆಸಲು ಮತ್ತು ಅವರಿಗೆ ಮತ್ತೊಮ್ಮೆ ಹೆಸರು ಸೇರಿಸಲು ಅವಕಾಶ ನೀಡಲು ದೆಹಲಿ ಸಿಇಒ ಕಚೇರಿಯು ವಿಶೇಷ ಅಭಿಯಾನವನ್ನು ಆರಂಭಿಸಿತ್ತು. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಹಲವು ಬಾರಿ ವಿಸ್ತರಿಸಿ ನವೆಂಬರ್ 25ರವರೆಗೆ ನಿಗದಿಪಡಿಸಲಾಗಿದ್ದು, ಡಿಸೆಂಬರ್ 22ರಂದು ಅಂತಿಮ ಪಟ್ಟಿ ಪ್ರಕಟವಾಗಬೇಕಿದೆ. ಇಂತಹ ಅತ್ಯಂತ ಸಂವೇದನಾಶೀಲ ಹಂತದಲ್ಲಿಯೇ CEO ವರ್ಗಾವಣೆಯಾಗಿದೆ.
ಮತ್ತೊಂದೆಡೆ, ಕೇಂದ್ರ ಗೃಹ ಸಚಿವಾಲಯದ ಆದೇಶದ ಪ್ರಕಾರ ಅಶೋಕ್ ಕುಮಾರ್ ಅವರೊಂದಿಗೆ 2000ನೇ ಬ್ಯಾಚ್‌ನ ದಿಲ್‌ರಾಜ್ ಕೌರ್ ಮತ್ತು 2002ನೇ ಬ್ಯಾಚ್‌ನ ನಿಖಿಲ್ ಕುಮಾರ್ ಅವರನ್ನೂ ದೆಹಲಿಯಿಂದ ಜಮ್ಮು-ಕಾಶ್ಮೀರಕ್ಕೆ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಮಾತ್ರ ಇದು AGMUT ಕೇಡರ್‌ನಲ್ಲಿ ನಡೆಯುವ ಸಾಮಾನ್ಯ ಆಡಳಿತಾತ್ಮಕ ಪುನಾರಚನೆಯ ಭಾಗವಾಗಿದೆ ಎಂದು ಹೇಳಿಕೊಂಡಿದೆ.
ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ ‘ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ’ ಎಂದು ಹೇಳಿಕೊಂಡರೂ, 47 ಲಕ್ಷ ಮತದಾರರ ಹೆಸರು ಕೈಬಿಟ್ಟ ವಿವಾದ, ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ಪದೇ ಪದೇ ವಿಸ್ತರಣೆಯಾದ ಪರಿಷ್ಕರಣಾ ಗಡುವಿನ ನಡುವೆ ಈ ನಿರ್ಧಾರ ಹೊರಬಿದ್ದಿರುವುದು ಕಾಕತಾಳೀಯವಲ್ಲ ಎಂಬುದು ಸ್ಪಷ್ಟ. ಅಂತಿಮ ಪಟ್ಟಿ ಪ್ರಕಟಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ವರ್ಗಾಯಿಸಿರುವುದು ಆಡಳಿತಾತ್ಮಕ ಅಸ್ಥಿರತೆಯನ್ನು ತೋರಿಸುತ್ತದೆ ಮತ್ತು ತಪ್ಪುಗಳಿಗೆ ಹೊಣೆಗಾರಿಕೆಯನ್ನು ತಪ್ಪಿಸುವ ತಂತ್ರವಾಗಿದೆ ಎಂಬ ಆರೋಪವಿದೆ.
ದೆಹಲಿ ಸಿಇಒ ಅಶೋಕ್ ಕುಮಾರ್ ಅವರ ವರ್ಗಾವಣೆಯ ಕುರಿತು ವಿಪಕ್ಷಗಳು ಪ್ರತ್ಯೇಕವಾಗಿ ಒಬ್ಬ ಅಧಿಕಾರಿಯ ವರ್ಗಾವಣೆಗಿಂತ ಹೆಚ್ಚಾಗಿ, ಅವರ ಅವಧಿಯಲ್ಲಿ ನಡೆದ 47.56 ಲಕ್ಷ ಮತದಾರರ ಹೆಸರು ಕೈಬಿಟ್ಟ ಪ್ರಕ್ರಿಯೆ ಮತ್ತು ನಕಲಿ ಅರ್ಜಿಗಳ ಹಾವಳಿಯನ್ನು ಗುರಿಯಾಗಿಸಿಕೊಂಡಿವೆ. ಮತದಾರರ ಪಟ್ಟಿ ಪರಿಷ್ಕರಣೆಯ ಗೊಂದಲಗಳನ್ನು ಬಗೆಹರಿಸುವ ಬದಲು ಅಧಿಕಾರಿಗಳನ್ನು ವರ್ಗಾಯಿಸುವ ಮೂಲಕ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆಯೇ?



