ಇಟಲಿಯಲ್ಲಿ ಮೋದಿಯವರು ಮೆಲೊನಿ ಅವರೊಂದಿಗೆ ಓಡಾಡುವ, ಚಾಕೊಲೆಟ್ ಕೊಟ್ಟು ನಗುವ, ಭಾರತದಲ್ಲಿ ದಟ್ಟ ಕಾಡುಗಳ ಸವರಿ ಹಾಕಲು ಅನುಮತಿ ನೀಡಿ ಇಟಲಿಯಲ್ಲಿ ಗಿಡ ನೆಡುವ, ಬಾಲ್ಕನಿಯಲ್ಲಿ ನಿಂತು ದೂರದಲ್ಲಿ ಕಾಣುವ ಚರ್ಚ್ ವೀಕ್ಷಣೆ ಮಾಡುವ ವಿಡಿಯೋಗಳು ನಾರ್ವೆಯ ಪತ್ರಕರ್ತೆಯ ಪ್ರಶ್ನೆಯ ಕಾವನ್ನು ತಣಿಸುವ ಸ್ಟಂಟ್ ರೀತಿ ಕಾಣಿಸಿದರೆ ಅಚ್ಚರಿಯಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಪಂಚರಾಜ್ಯಗಳ ಚುನಾವಣೆ ಮುಗಿಸಿ ಫಲಿತಾಂಶದ ನಂತರ ಮೂರು ರಾಜ್ಯಗಳ ವಿಜಯೋತ್ಸವ, ಸರ್ಕಾರ ರಚನೆಯ ಮಹತ್ವದ ಜವಾಬ್ದಾರಿ ಮುಗಿಸಿ ಯಥಾಪ್ರಕಾರ ವಿದೇಶ ಪ್ರವಾಸ ಮುಗಿಸಿ ಬಂದಿದ್ದಾರೆ. ವಿದೇಶ ಪ್ರವಾಸ ಹೊರಡುವ ಮುನ್ನ ದೇಶದ ಜನರಿಗೆ ಇಂಧನ ಬೆಲೆ ಏರಿಕೆಯ ಉಡುಗೊರೆ ಕೊಟ್ಟಿದ್ದಲ್ಲದೇ, ಇಂಧನ, ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂಬ ಉಪದೇಶ ಕೊಟ್ಟಿದ್ರು. ಅದರ ಜೊತೆಗೆ ಡಾಲರ್ ಎದುರು ತೀವ್ರ ಕುಸಿತ ಕಂಡಿರುವ ನೂರರ ಗಡಿ ಸಮೀಪಿಸುತ್ತಿರುವ ರೂಪಾಯಿ ಮೌಲ್ಯವನ್ನು ಮೇಲೆತ್ತಲು ದೇಶವಾಸಿಗಳು ಒಂದು ವರ್ಷ ಕಾಲ ಮದುವೆಗೂ ಚಿನ್ನ ಖರೀದಿಸಬೇಡಿ ಎಂಬ ಬಿಟ್ಟಿ ಸಲಹೆ ಕೊಟ್ಟು ʼಊರ್ ಮೇಲೆ ಊರ್ ಬಿದ್ರೂ ಪರ್ವಾಗಿಲ್ಲ ನಂಗೇನು..?ʼ ಎಂಬಂತೆ ಹೊರಟು ಬಿಟ್ಟಿದ್ದರು.
ನಾರ್ವೆಯಿಂದ ಇಟಲಿಗೆ ಹೋದ ಪ್ರಧಾನಿ ಇಟಲಿ ಪ್ರಧಾನಿ ಜಾರ್ಜಿಯ ಮೆಲೊನಿ ಜೊತೆಗೆ ಮಾಡಿರುವ ರೀಲ್ಸ್, ಫೋಟೋ ಶೂಟ್ ದೇಶದಲ್ಲಿ ಭಾರೀ ಚರ್ಚೆ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ದೇಶದ ಜನರನ್ನು ಸಂಕಷ್ಟಕ್ಕೆ ದೂಡಿ ವಿದೇಶ ಸುತ್ತುತ್ತಾ ರೀಲ್ಸ್ ಮಾಡ್ತಾ ಮಜವಾಗಿದ್ದಾರೆ ಎಂದು ವಿಪಕ್ಷಗಳು ಟೀಕಿಸಿದ್ರೆ, “ಪ್ರಧಾನಿಗಳು ಕಾಂಗ್ರೆಸ್ ನಾಯಕರಂತೆ ವಿದೇಶಕ್ಕೆ ಮಜಾ ಮಾಡಲು ಹೋಗಿಲ್ಲ, ಎರಡು ದೇಶಗಳ ರಾಜತಾಂತ್ರಿಕ ಸಂಬಂಧ ವೃದ್ಧಿಸುವ ಉದ್ದೇಶದಿಂದ ಹೋಗಿದ್ದಾರೆ” ಎಂದು ಬಿಜೆಪಿ ನಾಯಕರು ಸಮರ್ಥನೆಗಿಳಿದಿದ್ದಾರೆ. ಮೆಲೊನಿ ಅವರಿಗೆ ಭಾರತದ ಪಾರ್ಲೆ ಕಂಪನಿಯ ಮೆಲೋಡಿ ಚಾಕಲೇಟ್ ಪ್ಯಾಕ್ ಕೊಡುವ ರೀಲ್ಸ್ ಭಾರೀ ವ್ಯಂಗ್ಯ, ಟ್ರೋಲ್‌ಗೆ ಕಾರಣವಾಗಿದೆ. ನಾರ್ವೆಯಲ್ಲಿ ಹೋದ ಮಾನವನ್ನು ಇಟಲಿಯಲ್ಲಿ ಮರಳಿ ಪಡೆಯಲು ಮೋದಿಯವರ ಪಿಆರ್ ಟೀಂ ಭಾರೀ ಸರ್ಕಸ್ ಮಾಡಿದಂತಿದೆ. ಇಟಲಿಯಲ್ಲಿ ಮೋದಿಯವರು ಮೆಲೊನಿ ಅವರೊಂದಿಗೆ ಓಡಾಡುವ, ಚಾಕೊಲೆಟ್ ಕೊಟ್ಟು ನಗುವ, ಭಾರತದಲ್ಲಿ ದಟ್ಟ ಕಾಡುಗಳ ಸವರಿ ಹಾಕಲು ಅನುಮತಿ ನೀಡಿ, ಇಟಲಿಯಲ್ಲಿ ಗಿಡ ನೆಡುವ, ಬಾಲ್ಕನಿಯಲ್ಲಿ ನಿಂತು ದೂರದಲ್ಲಿ ಕಾಣುವ ಚರ್ಚ್ ವೀಕ್ಷಣೆ ಮಾಡುವ ವಿಡಿಯೋಗಳು ನಾರ್ವೆಯ ಪತ್ರಕರ್ತೆಯ ಪ್ರಶ್ನೆಯ ಕಾವನ್ನು ತಣಿಸುವ ಸ್ಟಂಟ್ ರೀತಿ ಕಾಣಿಸಿದರೆ ಅಚ್ಚರಿಯಿಲ್ಲ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಈ ಹನ್ನೆರಡು ವರ್ಷಗಳಲ್ಲಿ ಬಹುತೇಕ ಚುನಾವಣಾ ಪ್ರಚಾರದಲ್ಲಿ ನಿರತರಾಗುತ್ತಾರೆ. ಅದು ಬಿಟ್ಟರೆ ಸದಾ ವಿದೇಶ ಪ್ರವಾಸದಲ್ಲಿರುತ್ತಾರೆ. ತಮ್ಮ ಆಪ್ತ ಗೆಳೆಯ ಗೌತಮ್ ಅದಾನಿಗಾಗಿ ಹಲವು ದೇಶಗಳಲ್ಲಿ ಉದ್ಯಮ ವಿಸ್ತರಣೆಗೆ ವೇದಿಕೆ ಸೃಷ್ಟಿಸಿಕೊಡುತ್ತಿದ್ದಾರೆ. ಕೆಲವು ಪ್ರವಾಸದಲ್ಲಿ ಅದಾನಿಯವರೇ ಮೋದಿಯವರ ವಿಮಾನದಲ್ಲಿಯೇ ಪ್ರಯಾಣಿಸಿದ್ದೂ ಇದೆ. ಮೋದಿಯವರು ಹೋಗಿ ಬಂದ ದೇಶದಲ್ಲಿ ಅದಾನಿಯವರ ಪರವಾಗಿ ಒಪ್ಪಂದ ಮಾಡಿಕೊಂಡು ಬರುತ್ತಾರೆ ಎಂಬ ಆರೋಪದಲ್ಲಿ ಹುರುಳಿದೆ.
ವಿದೇಶ ಪ್ರವಾಸದಲ್ಲಿ ಮೋದಿಯವರು ನಡೆದುಕೊಳ್ಳುತ್ತಿರುವ ರೀತಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಅಷ್ಟೇ ಅಲ್ಲ ವಿದೇಶಿ ನಾಯಕರನ್ನು ಅವರಿಗೆ ಇಷ್ಟವಿಲ್ಲದಿದ್ರೂ ತಬ್ಬಿಕೊಳ್ಳುವುದು, ಅಸಹಜವಾಗಿ ಕೈ ಕುಲುಕುವುದು ಕಾರಣವೇ ಇಲ್ಲದೆ ನಗುತ್ತಲೇ ಇರುವುದು. ಒಂದೇ ಒಂದು ವಾಕ್ಯವನ್ನೂ ಆಡದಿರುವ ಮೋದಿ ಶೋಮ್ಯಾನ್ ಎಂದೇ ಗೇಲಿಗೆ ಒಳಗಾಗುತ್ತಿದ್ದಾರೆ. ಟ್ರಂಪ್ ಜೊತೆಗಿನ ಅವರ ಭೇಟಿಗಳು, ಟ್ರಂಪ್ ಮಾತಿಗೆ ಮರು ಮಾತಿಲ್ಲದೇ ಪೆಚ್ಚು ಮೋರೆ ಹಾಕಿ ಕೂತ ದೃಶ್ಯಗಳನ್ನು ʼಟ್ರಂಪ್ ಮುಂದೆ ಮೊಣಕಾಲೂರಿದ ಭಾರತದ ರಾಜತಾಂತ್ರಿಕತೆʼ ಎಂದೇ ವಿಶ್ಲೇಷಿಸಲಾಗಿತ್ತು. ನಂತರ ಇಸ್ರೇಲ್‌ಗೆ ಭೇಟಿ ನೀಡಿದ ಮೂರೇ ದಿನಕ್ಕೆ ಇಸ್ರೇಲ್- ಇರಾನ್ ಯುದ್ಧ ಆರಂಭವಾಗಿದ್ದು, ಇರಾನ್ ಪರಮೋಚ್ಛ ನಾಯಕ ಖೊಮೆನಿ ಹತ್ಯೆಯ ಬಗ್ಗೆ ಮೌನ, ಯುದ್ಧದ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದಿದ್ದುದು ಎಲ್ಲವೂ ಮೋದಿಯವರ ಬಂಡವಾಳ ಬಯಲು ಮಾಡಿದೆ. ಇದೀಗ ಇಟಲಿಯಲ್ಲಿ ಮೋದಿಯವರ ಪಿಆರ್ ಸ್ಟಂಟ್‌ಗಳು ಟ್ರೋಲ್ ಗೆ ವಸ್ತುವಾಗಿದೆ. ಮೆಲೊನಿ ಅವರಿಗೆ ಮೆಲೊಡಿ ಚಾಕಲೇಟ್ ನೀಡಿದ್ದನ್ನು ಗೋದಿ ಮಾಧ್ಯಮಗಳು ಮೆಲೊನಿ-ಮೋದಿ ಸೇರಿ ಮೆಲೊಡಿ ಆಗಿದೆ ಎಂದು ಲಜ್ಜೆಬಿಟ್ಟು ಬಣ್ಣಿಸುತ್ತಿರುವುದು ಎಲ್ಲವೂ ಪ್ರಧಾನಿ ಸ್ಥಾನದ ಘನತೆ ಕಳೆದಿದೆ.
ಪ್ರಧಾನಿಯಾಗಿ ಮೂರನೇ ಅವಧಿಗೆ ಪೀಠ ಏರಿರುವ ಮೋದಿಯವರು ಹೇಗಾದರೂ ಮಾಡಿ ಹಠ ಬಿಡದ ತ್ರಿವಿಕ್ರಮನಂತೆ ವಿಪಕ್ಷಗಳ ನಾಯಕರನ್ನು ಇಡಿ, ಸಿಬಿಐ ಮೂಲಕ ಹಣಿದು, ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೆಳೆದು, ಚುನಾವಣಾ ಆಯೋಗವನ್ನೇ ಖರೀದಿಸಿ ವೋಟ್ ಕಳ್ಳತನ ಮಾಡಿ ರಾಜ್ಯ ರಾಜ್ಯಗಳನ್ನು ಗೆಲ್ಲುತ್ತಲೇ ಸಾಗಿದ್ದಾರೆ. ಇದೀಗ ಮತ್ತೂ ಒಂದೆ ಹೆಜ್ಜೆ ಮುಂದೆ ಹೋಗಿ ಎಸ್‌ಐಆರ್ ಎಂಬ ಮಂತ್ರದಂಡದ ಮೂಲಕ ಮುಸ್ಲಿಮರು, ಬಿಜೆಪಿಯೇತರ ಪಕ್ಷಗಳ ಮತದಾರರನ್ನು ಪಟ್ಟಿಯಿಂದಲೇ ಹೊರದಬ್ಬುವ ಮೂಲಕ ಬಿಹಾರ, ಪಶ್ಚಿಮ ಬಂಗಾಳವನ್ನು ಗೆದ್ದು ಬೀಗಿದ್ದಾರೆ. ಇದು ಮೋದಿಯವರ ಎಲ್ಲ ಆಡಳಿತ ವೈಫಲ್ಯಗಳನ್ನು ಮರೆಸುವಂತೆ ದೇಶದ ಜನರನ್ನು ದಂಗಾಗಿಸಿದೆ. ತಮ್ಮ ವಿರೋಧಿಗಳಿಗೆ ಹೊಟ್ಟೆ ಕಿಚ್ಚಾಗುವಂತೆ ಮಾಡುವ ಪಣ ತೊಟ್ಟಂತೆ ಮೋದಿಯವರು ವಿದೇಶ ಪ್ರವಾಸಕ್ಕೆ ಹೋಗಿ ಪೆಕರು ಪೆಕರಾಗಿ ನಗುತ್ತಾ ಫೋಟೋ ಶೂಟ್ ಮಾಡಿಸಿಕೊಂಡು ಮುಜುಗರ ಎಂಬ ಪದವೇ ನಾಚುವಂತೆ ನಡೆದುಕೊಳ್ಳುತ್ತಿದ್ದಾರೆ.
ದ್ವಿಪಕ್ಷೀಯ ಸಂಬಂಧ ವೃದ್ಧಿಸಲು, ವಾಣಿಜ್ಯ ವ್ಯವಹಾರ ಮಾತುಕತೆ ನಡೆಸುವ ಉದ್ದೇಶದಿಂದ ವಿದೇಶ ಪ್ರವಾಸಕ್ಕೆ ಹೋದರೂ, ಭಾಷಾ ಸಮಸ್ಯೆಯಿಂದ ಮಾತು ಕಡಿಮೆ ಮಾಡಿ ಸುಮ್ಮನೆ ನಾಯಕರ ಕೈ ಕುಲುಕಿ ನಗುತ್ತಾ ನಿಂತಿದ್ದರೂ ಅವರ ಪಿ ಆರ್ ತಂಡ ಮಾತ್ರ ತಮ್ಮ ಯಜಮಾನನನ್ನು ವಿಶ್ವದ ಅಗ್ರಗಣ್ಯ ನಾಯಕ ಎಂದು ಬಿಂಬಿಸುವ ವಿಡಿಯೋ, ಫೋಟೋ ಶೂಟ್ ಬಿಡುಗಡೆ ಮಾಡಿ ಪ್ರಚಾರ ಮಾಡುತ್ತಿದೆ. ದೇಶದಲ್ಲಿ ಎಲ್ಲೇ ಹೋದರೂ, ಯಾವುದೇ ಯೋಜನೆ ಉದ್ಘಾಟನೆ, ದೇವರ ದರ್ಶನ, ರೈಲು ಉದ್ಘಾಟನೆ, ರಸ್ತೆ ಉದ್ಘಾಟನೆ ಏನೇ ಇರಲಿ ಮೋದಿಯವರು ಒಂಟಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ಫೋಟೋಗಳು ಯಥೇಚ್ಛವಾಗಿ ಸಿಗುತ್ತವೆ. ಅಧಿಕಾರಿಯೂ ಇರಲ್ಲ, ಸಂಬಂಧಿಸಿದ ಇಲಾಖೆಯ ಸಚಿವರೂ ಇರುವುದಿಲ್ಲ.
ಸ್ವತಂತ್ರ ಭಾರತದಲ್ಲಿ ಹಲವು ಪಕ್ಷಗಳು, ಪ್ರಧಾನಿಗಳು ದೇಶವನ್ನು ಮುನ್ನಡೆಸಿದ್ದಾರೆ. ಆದರೆ, ಮೋದಿಯವರಂತೆ ಏಕವ್ಯಕ್ತಿ ಕೇಂದ್ರಿತ ಸರ್ಕಾರ ಇರಲಿಲ್ಲ. ಏಕ ಚಕ್ರಾಧಿಪತ್ಯದ ಭ್ರಮೆಯಲ್ಲಿ ತೇಲಾಡಿದವರು ಯಾರೂ ಇಲ್ಲ. ಬೇರೆ ಪ್ರಧಾನಿಗಳಷ್ಟು ಸುಶಿಕ್ಷಿತ, ಮುತ್ಸದ್ದಿ ಅಲ್ಲದಿದ್ದರೂ ಆರೆಸ್ಸೆಸ್ ಕೃಪೆಯಿಂದಾಗಿ ಮೂರು ದಶಕದಿಂದ ಉನ್ನತ ಅಧಿಕಾರ ಅನುಭವಿಸುತ್ತಿರುವ ಮೋದಿ ಅವರಿಗೆ ದೇಶವಾಸಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಬಡವರ ಜೀವ ಹಿಂಡುವ ಬೆಲೆ ಏರಿಕೆ ತಡೆಯಲಿ. ಶಿಕ್ಷಿತ ಯುವಜನರಿಗೆ ಉದ್ಯೋಗ ಸೃಷ್ಟಿಸಲಿ. ಅಲ್ಪಸಂಖ್ಯಾತರ ಮೇಲಿನ ಸರ್ಕಾರಿ ಪ್ರೇರಿತ ದೌರ್ಜನ್ಯ ನಿಲ್ಲಿಸಲಿ. ಅದು ಬಿಟ್ಟು ತನ್ನನ್ನೇ ವೈಭವೀಕರಿಸುತ್ತ ದಿಕ್ಕು ದೆಸೆ ಇಲ್ಲದಂತೆ ಅಧಿಕಾರ ನಡೆಸಿದರೆ ದೇಶದ ಚರಿತ್ರೆಯಲ್ಲಿ ಮೋದಿ ವಿಶ್ವ ನಾಯಕ ಅಲ್ಲ ʼವಿಶ್ವ ಖಳನಾಯಕʼ ಎನಿಸುವುದರಲ್ಲಿ ಸಂಶಯವಿಲ್ಲ.




