ತಮಿಳುನಾಡು ರಾಜಕೀಯದ ದಶಕಗಳ ಸಾಂಪ್ರದಾಯಿಕ ಪದ್ಧತಿಯನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಮುರಿದಿದೆ. ಹೊಸ ಅಲೆ ಎಬ್ಬಿಸಿದೆ. ಈಗ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆಯಲ್ಲೂ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಜಕೀಯ ಸಮೀಕರಣದ ಜೊತೆಗೆ, ತಳಮಟ್ಟದ ಸಾಮಾಜಿಕ ನ್ಯಾಯದ ನೆಲೆಯಲ್ಲೂ ವಿಜಯ್ ತಮ್ಮ ಸಂಪುಟವನ್ನು ಅತ್ಯಂತ ಸಮತೋಲಿತವಾಗಿ ರೂಪಿಸಿದ್ದಾರೆ.
ತಮ್ಮ ಸರ್ಕಾರದಲ್ಲಿನ ಮಿತ್ರಪಕ್ಷಗಳಾದ ಐಯುಎಂಎಲ್ ಮತ್ತು ವಿಸಿಕೆ ಶಾಸಕರ ಸೇರ್ಪಡೆಯೊಂದಿಗೆ ವಿಜಯ್ ತಮ್ಮ ಸಂಪುಟ ಸದಸ್ಯರ ಸಂಖ್ಯೆಯನ್ನು 35ಕ್ಕೆ ಏರಿಸಿದ್ದಾರೆ. ಸಾಂವಿಧಾನಿಕವಾಗಿ ತಮಿಳುನಾಡು ಹೊಂದಬಹುದಾದ ಗರಿಷ್ಠ ಮಿತಿಗೆ ಅನುಗುಣವಾಗಿ, ಪೂರ್ಣ ಪ್ರಮಾಣದ ಬಲಿಷ್ಠ ಸಂಪುಟ ರಚಿಸಿದ್ದಾರೆ.
ವಿಜಯ್ ತಮ್ಮ ಸಂಪುಟದಲ್ಲಿ ಶೋಷಿತ ಮತ್ತು ತಳ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ಮತ್ತು ಅವಕಾಶಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಅವರು ಪೆರಿಯಾರ್ ಮತ್ತು ಅಂಬೇಡ್ಕರ್ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅದೇ ರೀತಿಯಲ್ಲಿ, ವಿಜಯ್ ಅವರು ತಮ್ಮ ಸಂಪುಟದಲ್ಲಿ ಪ್ರಭಾವಿ ದಲಿತ ನಾಯಕ ವನ್ನಿ ಅರಸು ಸೇರಿದಂತೆ ಒಟ್ಟು 8 ಮಂದಿ ದಲಿತರಿಗೆ ಸ್ಥಾನ ನೀಡಿದ್ದಾರೆ.
ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ದಲಿತ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಮತ್ತು ಪ್ರಮುಖ ಖಾತೆಗಳನ್ನು ನೀಡಿರುವುದು ಇದೇ ಮೊದಲು ಎನ್ನಲಾಗಿದೆ.
ಸಾಂಪ್ರದಾಯಿಕವಾಗಿ ತಮಿಳುನಾಡು ಬ್ರಾಹ್ಮಣ್ಯ ವಿರೋಧಿ ರಾಜಕಾರಣದ ಇತಿಹಾಸ ಹೊಂದಿದೆ. ಅಂತಹ ನೆಲದಲ್ಲಿ, ಕೇವಲ ಹಿಂದುಳಿದ ವರ್ಗಗಳಷ್ಟೇ ಅಲ್ಲದೆ, ಸಾಮಾಜಿಕವಾಗಿ ಎಲ್ಲ ಜಾತಿ ಸಮೀಕರಣವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸಿಎಂ ವಿಜಯ್ ಅವರು ಬ್ರಾಹ್ಮಣ ಸಮುದಾಯಕ್ಕೆ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪಿ. ವೆಂಕಟರಾಮನ್ ಮತ್ತು ಎಸ್. ರಮೇಶ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದಾರೆ.
ವಿಜಯ್ ಸಂಪುಟದ ಅತ್ಯಂತ ಆಕರ್ಷಕ ಮತ್ತು ವಿಶೇಷ ಅಂಶವೆಂದರೆ, ಅದು ಹಳೆಯ ರಾಜಕೀಯ ಮುಖಗಳನ್ನು ಬದಿಗೊತ್ತಿ ಕಿರಿಯ ಯುವ ಪಡೆಗೆ ಮಣೆ ಹಾಕಿರುವುದು. ಇಡೀ ಸಂಪುಟದಲ್ಲಿರುವ ಒಟ್ಟು ಸಚಿವರ ಪೈಕಿ 11 ಸಚಿವರು 40 ವರ್ಷ ವಯಸ್ಸಿಗಿಂತ ಒಳಗಿನವರಾಗಿದ್ದಾರೆ. ಈ ಯುವ ಶಕ್ತಿಯು ಆಡಳಿತಕ್ಕೆ ಹೊಸ ವೇಗ, ತಂತ್ರಜ್ಞಾನ ಆಧಾರಿತ ಚಿಂತನೆ ಹಾಗೂ ಚುರುಕುತನವನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಲೇಖನ ಓದಿದ್ದೀರಾ?: ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಜಿರಳೆ ಪಕ್ಷ ಹುಟ್ಟಿದ್ದೇಕೆ?
ವಿಜಯ್ ತಮ್ಮ ಸಂಪುಟದಲ್ಲಿ 4 ಮಂದಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಆ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿ ಕೇವಲ ಭಾಷಣಗಳಲ್ಲಿ ಮಾತ್ರವೇ ಮಹಿಳಾ ಪ್ರಾತಿನಿಧ್ಯ ಮತ್ತು ಲಿಂಗ ಸಮಾನತೆ ಕುರಿತು ಮಾತನಾಡುವ ಪಕ್ಷಗಳಿಗೆ ಪ್ರಾಯೋಗಿಕ ಸಂದೇಶ ನೀಡಿದ್ದಾರೆ. ಎಸ್. ಕಮಲಿ, ಎಸ್. ಕೀರ್ತನಾ, ಸಿ. ವಿಜಯಲಕ್ಷ್ಮಿ ಹಾಗೂ ಕೆ. ಜಗದೀಶ್ವರಿ ನೂತನ ಸಚಿವೆಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ, ಕೀರ್ತನಾ ಮತ್ತು ಕಮಲಿ ಇಬ್ಬರೂ 30 ವರ್ಷದೊಳಗಿನ ಯುವತಿಯರಾಗಿದ್ದು, ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸಚಿವೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಳ್ಳುವ ಭಾಗವಾಗಿ, ಮಿತ್ರಪಕ್ಷವಾದ ಐಯುಎಂಎಲ್‌ನ ಶಾಸಕ ಎ.ಎಂ. ಶಾಜಹಾನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ಲೀಗ್ ಪಕ್ಷದ ನಾಯಕರೊಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ಇದೇ ಮೊದಲು.
“ನೂತನ ಸಂಪುಟವು ಕೇವಲ ರಾಜಕೀಯ ಅಧಿಕಾರ ಹಂಚಿಕೆಯಲ್ಲ. ಬದಲಿಗೆ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಹಾಗೂ ಉನ್ನತ ವರ್ಗ ಸೇರಿದಂತೆ ಸಮಾಜದ ಪ್ರತಿಯೊಂದು ಸ್ತರವನ್ನೂ ಸಮಾನವಾಗಿ ಒಳಗೊಂಡಿರುವ ಒಂದು ಸಾಮಾಜಿಕ ಪ್ರಯೋಗ” ಎಂದು ಟಿವಿಕೆ ಹೇಳಿಕೊಂಡಿದೆ.


