ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?

Date:

ಟ್ರಂಪ್‌ ಕಾರ್ಯ ವಿಧಾನ ಮತ್ತು ಶೈಲಿಯನ್ನು ಮೋದಿ ತಿಳಿದುಕೊಂಡಿದ್ದರೆ, ರಿಚರ್ಡ್ ನಿಕ್ಸನ್ ಅವರನ್ನು ಇಂದಿರಾ ಗಾಂಧಿ ಎದುರಿಸಿದಂತೆ ಮೋದಿ ಕೂಡ ಟ್ರಂಪ್‌ರನ್ನು ಎದುರಿಸಬೇಕು. ಆದರೆ, ಈ ಪರಿಸ್ಥಿತಿಯಲ್ಲಿ ಟ್ರಂಪ್‌ ವಿರುದ್ಧ ನಿಲ್ಲುವ ಧೈರ್ಯ ಮೋದಿಗಿದೆಯೇ?  

ಒಬ್ಬ- ಅಂತಾರಾಷ್ಟ್ರೀಯ ಪ್ರವಾಸಿಗ, ಪುಕ್ಕಟ್ಟೆ ಪ್ರಚಾರ ಪಡೆಯುವಾತ, ದೇಶದಲ್ಲಿ ತಾನೇ ಸಾರ್ವಭೌಮನೆಂದು ಬೊಬ್ಬೆಹೊಡೆಯುವಾತ. ಮತ್ತೊಬ್ಬ– ಜಗತ್ತಿಗೆ ತಾನೇ ಅತಿ ಶ್ರೇಷ್ಠ, ತನ್ನ ಅಣತಿಯಲ್ಲೇ ಎಲ್ಲವೂ ಇದೆ/ಇರಬೇಕು, ತಾನು ಹೇಳಿದ್ದೇ ಆಗಬೇಕು, ಎಲ್ಲರೂ ತನ್ನ ಮಾತನ್ನು ಶಿರಸಾ ಪಾಲಿಸಬೇಕು ಎನ್ನುವಾತ. ಈ ಇಬ್ಬರದ್ದೂ ಒಂದು ಕಾಲದಲ್ಲಿ ಭಲೇ ಜೋಡಿ, ‘ನಾವಿಬ್ಬರೂ, ನಮ್ಮದೇ ಎಲ್ಲವೂ’ ಎಂಬ ಧೋರಣೆ ಹೊಂದಿದ್ದರು. ಈಗ ಈ ಜೋಡಿಯಲ್ಲಿ ಒಬ್ಬರು ಮತ್ತೊಬ್ಬರ ಬಲೆಗೆ ಬಿದ್ದು, ಹೊರಬರಲಾರದೆ ತಿಣುಕಾಡುತ್ತಿದ್ದಾರೆ. ಇದು ಮೋದಿ-ಟ್ರಂಪ್‌ ಜೋಡಿಯ ಕಥೆ-ವ್ಯಥೆ.

- Advertisement -

ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ, ಭಾರತದ ವಿರುದ್ಧ ನಿರಂತರ ಕಿಡಿಕಾರುತ್ತಲೇ ಇದ್ದಾರೆ. ಪ್ರಧಾನಿ ಮೋದಿ ಅವರನ್ನು ಅವಮಾನಿಸುತ್ತಲೇ ಬಂದಿದ್ದಾರೆ. ಮೊದಲಿಗೆ, ಭಾರತದ ಮೇಲಿನ ಸುಂಕವನ್ನು 25%ಗೆ ಟ್ರಂಪ್ ಏರಿಸಿದರು. ಬಳಿಕ, ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸದಂತೆ ತಾಕೀತು ಮಾಡಿದರು. ಭಾರತ ಬಗ್ಗದಿದ್ದಾಗ, 50% ತೆರಿಗೆ ಹೇರಿದರು. ಈಗ, 500% ಸುಂಕ ವಿಧಿಸುವ ಮಸೂದೆಯನ್ನು ರೂಪಿಸಿದ್ದಾರೆ. ಇದೆಲ್ಲವೂ ಸಂಭವಿಸಿದ್ದು, ವಿದೇಶಾಂಗ ನೀತಿಯ ಕಾರಣಕ್ಕಲ್ಲ, ಟ್ರಂಪ್ ‘ಈಗೋ’ವನ್ನು ಮೋದಿ ತಣಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ಎಂಬುದು ಈಗ ಬಟಾಬಯಲಾಗಿದೆ. ಟ್ರಂಪ್‌ಗೆ ಮೋದಿ ವೈಯಕ್ತಿಕವಾಗಿ ಕರೆ ಮಾಡದ ಕಾರಣಕ್ಕೆ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ರದ್ದಾಗಿದೆ/ಸ್ಥಗಿತಗೊಂಡಿದೆ ಎಂದು ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

2025ರ ಜೂನ್‌ನಲ್ಲಿ ಭಾರತ-ಅಮೆರಿಕ ನಡುವೆ ‘ಬೈಲ್ಯಾಟರಲ್ ಟ್ರೇಡ್ ಅಗ್ರಿಮೆಂಟ್’ (ಟ್ಯಾರಿಫ್‌ ಒಪ್ಪಂದ) ಮುನ್ನೆಲೆಯಲ್ಲಿತ್ತು. ಒಪ್ಪಂದಕ್ಕಾಗಿ ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲದ ಮಾತುಕತೆಗಳನ್ನು ನಡೆದಿದ್ದವು. ಆದರೆ, ಒಪ್ಪಂದವು ಅಂತಿಮಗೊಳ್ಳಲೇ ಇಲ್ಲ. ಕಾರಣ, ಮೋದಿ ಅವರು ವೈಯಕ್ತಿಕವಾಗಿ ಟ್ರಂಪ್‌ಗೆ ಕರೆ ಮಾಡದೆ ಇರುವುದೇ ಕಾರಣವೆಂದು ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ಜನವರಿ 9ರಂದು ಕಾರ್ಯಕ್ರಮವೊಂದರಲ್ಲಿ ಭಾರತ-ಅಮೆರಿಕ ಟ್ಯಾರಿಫ್‌ ಒಪ್ಪಂದದ ಕುರಿತು ಲುಟ್ನಿಕ್ ವಿವರಿಸಿದರು. ”ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ದೀರ್ಘಕಾಲದಿಂದ ಬಾಕಿ ಉಳಿದಿದೆ. ಇದು ಒಪ್ಪಂದದಲ್ಲಿನ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಅಲ್ಲ, ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರೊಂದಿಗೆ ನೇರವಾಗಿ ಮಾತನಾಡಲು ನಿರಾಕರಿಸಿದ್ದರಿಂದ ಒಪ್ಪಂದ ಕಾರ್ಯರೂಪಕ್ಕೆ ಬರಲಿಲ್ಲ” ಎಂದಿದ್ದಾರೆ.

”ಟ್ರಂಪ್‌ಗೆ ಮೋದಿ ಕರೆ ಮಾಡಬೇಕಾಗಿತ್ತು. ಮಾತುಕತೆಗಳನ್ನು ಅಂತಿಮಗೊಳಿಸಲು ಭಾರತಕ್ಕೆ ಸ್ಪಷ್ಟವಾಗಿ ‘ಮೂರು ಶುಕ್ರವಾರ’ಗಳ ಸಮಯ ನೀಡಲಾಗಿತ್ತು. ನಾವು ಯುಕೆಗೆ ‘ಎರಡು ಶುಕ್ರವಾರ’ಗಳ ಗಡುವು ನೀಡಿದ್ದೆವು. ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಟ್ರಂಪ್‌ಗೆ ನೇರವಾಗಿ ಕರೆ ಮಾಡಿದರು. ಮಾತುಕತೆಗಳು ಮುಕ್ತಾಯಗೊಂಡವು. ಒಪ್ಪಂದವನ್ನು ಘೋಷಿಸಲಾಯಿತು. ಆದರೆ, ಮೋದಿ ಕರೆ ಮಾಡಲೇ ಇಲ್ಲ. ಪರಿಣಾಮ, ನಾವು ಇಂಡೋನೇಷ್ಯಾ, ಫಿಲಿಪೈನ್ಸ್ ಹಾಗೂ ವಿಯೆಟ್ನಾಂ ಜೊತೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡೆವು. ಈ ಎಲ್ಲ ರಾಷ್ಟ್ರಗಳಿಗಿಂತ ಮೊದಲ ಆದ್ಯತೆಯನ್ನು ನಾವು ಭಾರತಕ್ಕೆ ನೀಡಿದ್ದೆವು” ಎಂದು ಹೇಳಿದ್ದಾರೆ.

ಲುಟ್ನಿಕ್ ಹೇಳಿಕೆಗಳು ಬರುವುದಕ್ಕೂ ಮುಂಚೆ, ಈ ಒಪ್ಪಂದ ಸ್ಥಗಿತದ ಕುರಿತು ಭಾರತೀಯರ ಭಾವನೆ ಬೇರೆಯೇ ಇತ್ತು. ಭಾರತದಲ್ಲಿನ ಕೃಷಿ ಮಾರುಕಟ್ಟೆಗೆ ಅಮೆರಿಕ ಬೃಹತ್ ಪ್ರಮಾಣದಲ್ಲಿ ಪ್ರವೇಶಿಸಲು ಯತ್ನಿಸುತ್ತಿದೆ. ಅಮೆರಿಕಗೆ ಪ್ರವೇಶ ನೀಡಲು ಭಾರತ ಸಿದ್ದವಾಗಿಲ್ಲ. ಆ ಕಾರಣಕ್ಕಾಗಿಯೇ, ಈ ಒಪ್ಪಂದ ಸ್ಥಗಿತಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ, ಮೋದಿ ಅವರು ಟ್ರಂಪ್ ಅವರ ‘ಈಗೋ’ಗೆ ನೀರೆರೆಯದ ಕಾರಣಕ್ಕೆ, ಒಪ್ಪಂದ ಪ್ರಸ್ತಾಪದಲ್ಲಿಯೇ ಕೊನೆಗೊಂಡಿದೆ ಎಂಬುದು ಈಗ ಬಹಿರಂಗವಾಗಿದೆ.

ಈ ಮೋದಿ-ಟ್ರಂಪ್‌ ಸ್ನೇಹ ಟ್ರಂಪ್ ಮೊದಲ ಅವಧಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗ, ‘ಆಪ್ತಮಿತ್ರ’ರಂತಿತ್ತು. ಆದರೆ, ಎರಡನೇ ಅವಧಿಗೆ ಟ್ರಂಪ್ ಅಧ್ಯಕ್ಷರಾಗುತ್ತಲೇ, ಈ ಇಬ್ಬರ ಸ್ನೇಹ ಹಳಸಿದ ಹಿಟ್ಟಾಗಿದೆ. ಟ್ರಂಪ್‌ – ಯಾರಾದರೂ ತಮಗೆ ಕರೆ ಮಾಡದಿದ್ದರೆ ಅಥವಾ ತಮ್ಮ ಕರೆಗೆ ತ್ವರಿತವಾಗಿ ಉತ್ತರಿಸದಿದ್ದರೆ, ಆ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳು, ಕಾರ್ಯತಂತ್ರದ ಸಂಬಂಧಗಳನ್ನೇ ತೊರೆಯುವಷ್ಟು ಅಹಂಕಾರಿಯಾಗಿದ್ದಾರೆ.

ಈ ಅಹಂಕಾರಿ ಟ್ರಂಪ್‌ ಮತ್ತು ಸ್ವ-ಘೋಷಿತ ವಿಶ್ವಗುರು ಮೋದಿ ಅವರ ಸ್ನೇಹದ ಮೊದಲ ಇಟ್ಟಿಗೆ ಕಳಚಿ ಬಿದ್ದದ್ದೇ, 2024ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ. ಆಗ ತಮ್ಮ ಪರವಾಗಿ ಮೋದಿ ಪ್ರಚಾರಕ್ಕೆ ಬರುತ್ತಾರೆಂದು ಟ್ರಂಪ್ ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಅಮೆರಿಕಗೆ ಭೇಟಿ ನೀಡಿದ್ದ ಮೋದಿ, ಟ್ರಂಪ್ ಎಡೆಗೆ ಸುಳಿಯಲೂ ಇಲ್ಲ. ಮೊದಲ ಬಾರಿಗೆ ಟ್ರಂಪ್‌ ‘ಈಗೋ’ವನ್ನು ಮೋದಿ ಕೆಣಕಿದಂತಾಯಿತು.

ಭಾರತ-ಪಾಕ್‌ ಯುದ್ಧವನ್ನು ತಾನೇ ನಿಲ್ಲಿಸಿದೆನೆಂದು ಟ್ರಂಪ್‌ ಪದೇ-ಪದೇ ಹೇಳಿಕೊಳ್ಳುತ್ತಿದ್ದಾರೆ. ಅವರ ಹೇಳಿಕೆಯನ್ನು ಪಾಕಿಸ್ತಾನ ಸಮ್ಮತಿಸಿದರೆ, ಭಾರತ ನಿರಾಕರಿಸಿತು. ಮೋದಿ ಅವರಂತೂ ತುಟಿ ಬಿಚ್ಚಲೇ ಇಲ್ಲ. ಜೊತೆಗೆ, ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಪಾಕ್ ಪ್ರಸ್ತಾಪಿಸಿತು. ಭಾರತವೂ ಪ್ರಸ್ತಾಪ ಇಡುತ್ತದೆಂದು ಟ್ರಂಪ್ ನಿರೀಕ್ಷಿಸಿದ್ದರು. ಆದರೆ, ಅದಾಗಲಿಲ್ಲ. ಮತ್ತೆ ಟ್ರಂಪ್‌ ‘ಈಗೋ’ಗೆ ಘಾಸಿಯಾಯಿತು.

ಮುಂದುವರೆದು, ಅಮೆರಿಕ ಮೇಲಿನ ಸುಂಕವನ್ನು ಕಡಿಮೆ (ಶೂನ್ಯ) ಮಾಡಬೇಕೆಂದು ಟ್ರಂಪ್ ಬಯಸಿದ್ದರು. ಆದರೆ, ಭಾರತವು ಸರಾಸರಿ 10-12% ತೆರಿಗೆಯನ್ನು ಮುಂದುವರೆಸಿದೆ. ಇದರಿಂದ, ಕುಪಿತಗೊಂಡ ಟ್ರಂಪ್, ಭಾರತದ ಮೇಲೆ 25% ಸುಂಕ ಹೇರಿದರು. ಭಾರತ ಜಗ್ಗಲಿಲ್ಲ! ಮುಖ್ಯವಾಗಿ, ಖಂಡಿಸಲೂ ಇಲ್ಲ.

ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ರಷ್ಯಾ ವಿರುದ್ಧ ನಿಲುವು ತೆಗೆದುಕೊಳ್ಳಬೇಕು, ರಷ್ಯಾ ಜೊತೆಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಬೇಕು, ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಬೇಕೆಂದು ಟ್ರಂಪ್ ಭಾರತವನ್ನು ಒತ್ತಾಯಿಸಿದರು. ಆದರೆ, ಟ್ರಂಪ್‌ ಮಾತನ್ನು ಮೋದಿ ಕೇಳಲಿಲ್ಲ. ಬದಲಾಗಿ, ಸಸ್ತಾ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಇತರ ರಾಷ್ಟ್ರಗಳಿಗೆ ಮಾರಾಟ ಮಾಡಲಾರಂಭಿಸಿತು.

ಭಾರತದ ಈ ನಡೆ, ಟ್ರಂಪ್‌ ಅವರನ್ನು ಮತ್ತಷ್ಟು-ಮಗದಷ್ಟು ಕ್ರುದ್ಧರನ್ನಾಗಿಸಿತು. ಪರಿಣಾಮ, 25% ಇದ್ದ ಸುಂಕಕ್ಕೆ 25% ದಂಡವೆಂದು 50%ಗೆ ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ, ಮೋದಿ ಅವರಿಗೆ ಟ್ರಂಪ್ 4 ಬಾರಿ ಕರೆಮಾಡಿದ್ದಾಗಿಯೂ, ಮೋದಿ ಪ್ರತಿಕ್ರಿಯಿಸಲಿಲ್ಲವೆಂದೂ ಟ್ರಂಪ್ ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?

ಈ ಎಲ್ಲ ಬೆಳವಣಿಗೆಗಳು ನಡೆದಿರುವುದು, ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ಒಪ್ಪಂದಗಳು, ಸಂಬಂಧಗಳ ಕಾರಣಕ್ಕಾಗಿ ಎಂದು ಈವರೆಗೆ ಭಾವಿಸಲಾಗಿತ್ತು. ಆದರೆ, ಲುಟ್ನಿಕ್‌ ಅವರ ಹೇಳಿಕೆಯು ಈ ಭಾವನೆಯನ್ನು ಬದಲಿಸಿದೆ. ಈ ಬೆಳವಣಿಗೆಗೆ ಮೂಲ ಕಾರಣ, ಟ್ರಂಪ್-ಮೋದಿಯ ಸ್ನೇಹ ಸಂಬಂಧದಲ್ಲಿ ಬಿರುಕು ಎಂಬುದನ್ನು ಲುಟ್ನಿಕ್ ಅವರ ಮಾತುಗಳು ಸ್ಪಷ್ಟಪಡಿಸಿವೆ. ತಮ್ಮ ವಿರುದ್ಧ ಟ್ರಂಪ್ ಅತಿರೇಖದ ಕಠಿಣ ಧೋರಣೆ ತಡೆಯುವುದಿಲ್ಲವೆಂದು ಭಾವಿಸಿದ್ದ ಮೋದಿ ಈಗ ದಿಗ್ಭ್ರಾಂತರಾಗಿದ್ದಾರೆ. ಟ್ರಂಪ್‌ ಅವರನ್ನು ಎದುರಿಸಲಾಗಿದೆ ಅಡಗಿಕೊಂಡಿದ್ದಾರೆ.

ಟ್ರಂಪ್‌ ತಮ್ಮ ಅಹಂಕಾರವನ್ನು ತಣಿಸಿಕೊಳ್ಳಲು ವ್ಯಾಪಾರ ನೀತಿ ಮತ್ತು ಒಪ್ಪಂದಗಳನ್ನು ಸಾಧನಗಳಾಗಿ ಬಳಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಎಂದಿಗೂ ಇತ್ತು. ಆದರೆ, ಮೋದಿ ಅವರಿಗೆ ಅದರ ಅರಿವು ಇದ್ದಂತಿಲ್ಲ. ಆದ್ದರಿಂದಲೇ, ಅಮೆರಿಕದ ಸುಂಕದ ಹೇರಿಕೆಯನ್ನು ಭಾರತ ಎದುರಿಸುವಂತಾಗಿದೆ. ಸುಂಕದ ಹೊಡೆತಗಳಿಂದ ಭಾರತವು ಮೀನುಗಾರಿಕೆ, ಉಡುಪುಗಳು, ರತ್ನಗಳು ಹಾಗೂ ಆಭರಣಗಳ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಭಾರತ-ಪಾಕ್ ಸಂಘರ್ಷದ ಬಳಿಕ, ಟ್ರಂಪ್ ಈಗೋಗೆ ನೀರೆರೆದ ಪಾಕಿಸ್ತಾನವು ಅಮೆರಿಕಗೆ ಹತ್ತಿರವಾಗಿದೆ.

ಆದಾಗ್ಯೂ, ಮೋದಿ ಅವರು ಟ್ರಂಪ್‌ಗೆ 8 ಬಾರಿ ಕರೆ ಮಾಡಿದ್ದಾರೆಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಹೇಳಿದ್ದಾರೆ. ಬಹುಶಃ ಟ್ರಂಪ್ ಬಯಸಿದ್ದಾಗ ಮೋದಿ ಕರೆ ಮಾಡದೇ, ಮತ್ತಾವುದೋ ಸಮಯದಲ್ಲಿ ಕರೆ ಮಾಡಿದ್ದೂ ಟ್ರಂಪ್‌ ಅಹಂಕಾರವನ್ನು ತಣಿಸಿಲ್ಲವೆಂದು ಕಾಣುತ್ತದೆ.

ಈಗಲಾದರೂ, ಟ್ರಂಪ್‌ ಕಾರ್ಯ ವಿಧಾನ ಮತ್ತು ಶೈಲಿಯನ್ನು ಮೋದಿ ತಿಳಿದುಕೊಂಡಿದ್ದರೆ, ರಿಚರ್ಡ್ ನಿಕ್ಸನ್ ಅವರನ್ನು ಇಂದಿರಾ ಗಾಂಧಿ ಎದುರಿಸಿದಂತೆ ಮೋದಿ ಕೂಡ ಟ್ರಂಪ್‌ರನ್ನು ಎದುರಿಸಬೇಕು. ಆದರೆ, ಮೋದಿ ಅಷ್ಟು ಧೈರ್ಯ ಮಾಡಲಾರರು. ಜೊತೆಗೆ, ಈ ಹಿಂದೆ ಇಂದಿರಾ ಗಾಂಧಿ ಅವರೊಂದಿಗೆ ಸೋವಿಯತ್ ಒಕ್ಕೂಟ ಬಲವಾಗಿ ನಿಂತಿತ್ತು. ಈಗ, ಮೋದಿ ಅವರು ನೆರೆಯ ಎಲ್ಲ ರಾಷ್ಟ್ರಗಳೊಂದಿಗೆ ವೈರತ್ವ ಕಟ್ಟಿಕೊಂಡಿದ್ದಾರೆ. ಭಾರತ-ಚೀನಾ, ಭಾರತ-ರಷ್ಯಾ ಸಂಬಂಧಗಳೂ ಹೇಳಿಕೊಳ್ಳುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್‌ ವಿರುದ್ಧ ನಿಲ್ಲುವ ಧೈರ್ಯ ಮೋದಿ ಅವರಿಗೆ ಬಾರದು. ಆದ್ದರಿಂದ, ಟ್ರಂಪ್ ಜೊತೆ ವ್ಯವಹರಿಸಲು ಜಗತ್ತು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಅಂತೆಯೇ, ಮೋದಿ ಕೂಡ ಭಾರತಹಿತದ ಮಾರ್ಗವನ್ನು ಹುಡುಕಬೇಕಾಗುತ್ತದೆ. ಆದರೆ ಟ್ರಂಪ್ ಹಗೆಯ ನೀರು ಮೋದಿ ಮೂಗಿನ ಮಟ್ಟ ದಾಟಿ ಮೇಲೆ ಬಂದಂತಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...