ಅಧಿಕಾರಸ್ಥರ ಮಕ್ಕಳು ಅರ್ಹತೆ ಇಲ್ಲದಿದ್ದರೂ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವುದು; ಅವರನ್ನು ಅಧಿಕಾರದ ಕುರ್ಚಿಗಳ ಮೇಲೆ ಕೂರಿಸುವವರ ಬಡವರ ಮಕ್ಕಳು ಬೀದಿಯಲ್ಲಿದ್ದು ಭವಿಷ್ಯವನ್ನು ಬರಿದು ಮಾಡಿಕೊಳ್ಳುವುದು- ಇದು ಅಮೃತಕಾಲದತ್ತ ಹೆಜ್ಜೆ ಹಾಕುತ್ತಿರುವ ಭಾರತದ ಎರಡು ಚಿತ್ರಗಳು.
ವಿಶ್ವ ಕ್ರಿಕೆಟ್‌ನ ಆಡಳಿತ ಚುಕ್ಕಾಣಿ ಮತ್ತೊಮ್ಮೆ ಭಾರತದ ಜಯ್ ಶಾ ಅವರ ಕೈಗೆ ಬಂದಿದೆ. ನವೆಂಬರ್ 16, 2026ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಸಭೆಯಲ್ಲಿ, ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಜಯ್ ಶಾ ಅವರನ್ನು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಜಯ್ ಶಾ ಅವರ ತಂದೆ ಅಮಿತ್ ಶಾ ಭಾರತ ಸರ್ಕಾರದ ಗೃಹ ಸಚಿವರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ, ಜಯ್ ಶಾ ಅವರ ಆಯ್ಕೆಯನ್ನು ವ್ಯಕ್ತಿಕೇಂದ್ರಿತವಾಗಿ ನೋಡಿ, ರಾಜಕೀಯಗೊಳಿಸಬಾರದು. ಅದೇ ರೀತಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ಅದು ಪ್ರಜಾಸತ್ತಾತ್ಮಕ ಆಯ್ಕೆ ಎಂದೂ ಹೇಳಲಾಗದು.
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ; ವಾರ್ಷಿಕ 6,400 ಕೋಟಿ ಆದಾಯವಿರುವ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ ಹೇಗೆ ಬಂದರು, ಆಯ್ಕೆ ಪ್ರಕ್ರಿಯೆ ಎಷ್ಟು ಪಾರದರ್ಶಕವಾಗಿತ್ತು ಮತ್ತು ಕಳೆದ ಎರಡು ವರ್ಷಗಳ ಅವರ ಆಡಳಿತ, ಎಷ್ಟರಮಟ್ಟಿಗೆ ದಕ್ಷತೆಯಿಂದ ಕೂಡಿತ್ತು ಎಂಬುದೂ ಮುಖ್ಯವಾಗುತ್ತದೆ. ವ್ಯಕ್ತಿಯ ಅರ್ಹತೆ ಮತ್ತು ಸಂಸ್ಥೆಯ ಪ್ರಜಾಸತ್ತಾತ್ಮಕತೆ- ಎರಡನ್ನೂ ತುಲನೆ ಮಾಡಬೇಕಾಗುತ್ತದೆ.
ಇಲ್ಲಿ ಮುಖ್ಯವಾಗುವುದು ವ್ಯಕ್ತಿಗಿಂತ ವ್ಯವಸ್ಥೆ. ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ, ಅಧಿಕಾರದ ಹಂಚಿಕೆ, ಸಂಸ್ಥೆಯ ಸ್ವಾಯತ್ತತೆ ಮತ್ತು ಸದಸ್ಯ ರಾಷ್ಟ್ರಗಳ ಪ್ರಾತಿನಿಧ್ಯ- ಈ ಮಾನದಂಡಗಳ ಹಿನ್ನೆಲೆಯಲ್ಲಿ ಜಯ್ ಶಾ ಅವರ ಮರುನೇಮಕವನ್ನು ವಿಶ್ಲೇಷಿಸುವ ಅಗತ್ಯವಿದೆ. ಇವುಗಳ ನಡುವೆಯೇ ಅಂತರ್ಜಲದಂತೆ ಹರಿಯುವ ರಾಜಕೀಯ ಹಸ್ತಕ್ಷೇಪವನ್ನೂ ಅರಿಯಬೇಕಾಗಿದೆ.
ಏಕೆಂದರೆ, ಕ್ರಿಕೆಟ್ ಎನ್ನುವುದು ಭಾರತದ ಮಟ್ಟಿಗೆ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಭಾರತೀಯರಲ್ಲಿ ಕ್ರಿಕೆಟ್ ಧರ್ಮವಾಗಿದೆ. ರಾಷ್ಟ್ರೀಯತೆಯೊಂದಿಗೆ ತಳಕು ಹಾಕಿಕೊಂಡಿದೆ. ಅಪಾರ ಹಣ ಮತ್ತು ಖ್ಯಾತಿ ತರುವ ಆಟವಾಗಿ ಪರಿವರ್ತನೆ ಹೊಂದಿದೆ. ಆಟದೊಂದಿಗೆ ರಾಜಕಾರಣ ಮತ್ತು ಆರ್ಥಿಕತೆಯೂ ಬೆಸೆದುಕೊಂಡಿದೆ.
ಇದನ್ನು ಓದಿದ್ದೀರಾ?: ಪ್ರಶ್ನೆ ಕೇಳುವ ಪತ್ರಕರ್ತರಿಗೆ ವೀಸಾ ರದ್ದು; ಮೋದಿ ಸರ್ಕಾರಕ್ಕೆ ಇಷ್ಟೊಂದು ಭಯವೇಕೆ?
ಹಾಗೆಯೇ ಕ್ರಿಕೆಟ್ ಪ್ರೇಕ್ಷಕರ ಬಹುದೊಡ್ಡ ಭಾಗ ಭಾರತದಲ್ಲಿದೆ. ಪ್ರಸಾರದ ಹಕ್ಕುಗಳು, ಜಾಹೀರಾತು, ಪ್ರಾಯೋಜಕತ್ವ ಮತ್ತು ವಾಣಿಜ್ಯ ವಹಿವಾಟುಗಳ ದೃಷ್ಟಿಯಿಂದ ಭಾರತೀಯ ಕ್ರಿಕೆಟ್ ಮಾರುಕಟ್ಟೆ ಅತ್ಯಂತ ಮಹತ್ವದ್ದಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಂದಿರುವ ಆರ್ಥಿಕ ಶಕ್ತಿ ವಿಶ್ವ ಕ್ರಿಕೆಟ್‌ನ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಹೊಂದಿದೆ.
ಇದು ಅತಿಶಯೋಕ್ತಿಯೇನಲ್ಲ. ಬಹಳ ದೊಡ್ಡ ಮಾರುಕಟ್ಟೆ ಹೊಂದಿರುವ ದೇಶಕ್ಕೆ ಹೆಚ್ಚಿನ ಪ್ರಭಾವ ಇರುವುದು ಸಹಜ. ಆದರೆ ಆ ಪ್ರಭಾವವು ಜಾಗತಿಕ ಸಂಸ್ಥೆಯ ಆಡಳಿತದ ಮೇಲೆ ಎಷ್ಟರಮಟ್ಟಿಗೆ ನಿಯಂತ್ರಣ ಸಾಧಿಸುತ್ತದೆ ಎಂಬುದು ಮುಖ್ಯವಾಗುತ್ತದೆ. ಹಾಗೆಯೇ ಅಪ್ಪನ ರಾಜಕೀಯ ಪ್ರಭಾವದಿಂದಲೇ ಆ ಜಾಗತಿಕ ಸಂಸ್ಥೆಯ ಅತ್ಯುನ್ನತ ಹುದ್ದೆ ದಕ್ಕಿದೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕುತ್ತದೆ.
ಐಸಿಸಿ ಎಂಬುದು ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ಒಳಗೊಂಡಿರುವ ಜಾಗತಿಕ ಸಂಸ್ಥೆ. ಹೀಗಾಗಿ ಅದರ ನಿರ್ಧಾರಗಳು ಭಾರತ ಸೇರಿದಂತೆ ಎಲ್ಲ ಸದಸ್ಯ ರಾಷ್ಟ್ರಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಿರಬೇಕು. ನೇಪಾಳ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್ ಮತ್ತು ಇತರ ಸಣ್ಣ ಕ್ರಿಕೆಟ್ ರಾಷ್ಟ್ರಗಳಿಗೂ ಬೆಳೆಯುವ ಅವಕಾಶವಿರಬೇಕು. ಮೂಲಸೌಕರ್ಯ, ತರಬೇತಿ, ಆರ್ಥಿಕ ನೆರವು ಮತ್ತು ಪ್ರಮುಖ ಪಂದ್ಯಾವಳಿಗಳಲ್ಲಿ ನಿರಂತರ ಅವಕಾಶ ಕಲ್ಪಿಸಬೇಕು. ಆದರೆ, ಆರ್ಥಿಕವಾಗಿ ಬಲಿಷ್ಠವಾಗಿರುವ ರಾಷ್ಟ್ರಗಳ ಹಿತಾಸಕ್ತಿಯೇ ನಿರ್ಣಾಯಕವಾದರೆ, ಸಣ್ಣ ಕ್ರಿಕೆಟ್ ರಾಷ್ಟ್ರಗಳ ಬೆಳವಣಿಗೆ ಮತ್ತು ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಅಪಾಯವಿದೆ. ಕ್ರಿಕೆಟ್‌ನ ಆರ್ಥಿಕ ಶಕ್ತಿ ಕೆಲವೇ ದೇಶಗಳ ಕೈಯಲ್ಲಿ ಕೇಂದ್ರೀಕೃತವಾದರೆ ಅದರ ಆಶಯ ದುರ್ಬಲವಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ನ ಸ್ವರೂಪವೂ ಬದಲಾಗುತ್ತಿದೆ. ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಮತ್ತು ಟಿ20 ಮಾದರಿಗಳ ನಡುವಿನ ಸಮತೋಲನದ ಪ್ರಶ್ನೆ ಒಂದೆಡೆಯಾದರೆ, ಐಪಿಎಲ್‌ನಂತಹ ಲೀಗ್ ಮ್ಯಾಚ್‌ಗಳ ವಾಣಿಜ್ಯ ಪ್ರಭಾವ ಮತ್ತೊಂದೆಡೆ ಇದೆ. ಹಾಗೆಯೇ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ರಾಷ್ಟ್ರಗಳು ಕ್ರಿಕೆಟ್‌ನ ವಾಣಿಜ್ಯ ವ್ಯವಸ್ಥೆಯಲ್ಲಿ ಪ್ರಬಲ ಸ್ಥಾನ ಹೊಂದಿವೆ. ಹಾಗೆಯೇ ಜಾಗತಿಕ ಮಟ್ಟದ ಕ್ರಿಕೆಟ್‌ನಿಂದ ಅಪಾರ ಪ್ರಮಾಣದ ಆದಾಯ ಸೃಷ್ಟಿಯಾಗುತ್ತಿದೆ.
ಆದರೆ ಆ ಆದಾಯದ ಹಂಚಿಕೆ ಹೇಗಿದೆ? ಅದರ ಲಾಭ ಎಲ್ಲ ರಾಷ್ಟ್ರಗಳಿಗೂ ತಲುಪುತ್ತಿದೆಯೇ? ಕ್ರಿಕೆಟ್‌ನ ವಾಣಿಜ್ಯ ಮೌಲ್ಯ ಹೆಚ್ಚಿಸುವುದೇ ಐಸಿಸಿಯ ಪ್ರಮುಖ ಆದ್ಯತೆಯಾಗಿದೆಯೇ ಅಥವಾ ಕ್ರಿಕೆಟ್ ಆಟದ ಜಾಗತಿಕ ಬೆಳವಣಿಗೆಯೇ ಅದರ ಮುಖ್ಯ ಗುರಿಯಾಗಿದೆಯೇ? ಈ ಪ್ರಶ್ನೆಗಳೂ ಮುಖ್ಯವಾಗುತ್ತವೆ.
ಇನ್ನು ಜಯ್ ಶಾ ಅವರ ಕ್ರಿಕೆಟ್ ಆಡಳಿತದ ಅನುಭವದತ್ತ ನೋಡಿದರೆ, 2019ರಲ್ಲಿ ಬಿಜೆಪಿ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ, ಅಮಿತ್ ಶಾ ಗೃಹ ಸಚಿವರಾದರು. ಅದೇ ಸಂದರ್ಭದಲ್ಲಿ ಅವರ ಮಗ ಜಯ್ ಶಾ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಕಾರ್ಯದರ್ಶಿಯಾದರು. ನಂತರ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು. ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದ, ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಕ್ರಿಕೆಟ್‌ನ ಜಾಗತಿಕ ವಿಸ್ತರಣೆಯಂತಹ ಬೆಳವಣಿಗೆಗಳಲ್ಲಿ ಭಾಗಿಯಾದರು. ಆಗ ಅವರ ವಯಸ್ಸು 30ರ ಆಸುಪಾಸು.
ಇಂತಹ ವ್ಯಕ್ತಿ, ತಮ್ಮ 35 ವಯಸ್ಸಿಗೆ ಜಾಗತಿಕ ಮಟ್ಟದ ಕ್ರೀಡಾ ಸಂಸ್ಥೆಯೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ನಿಜಕ್ಕೂ ಗೌರವದ ಸಂಗತಿ. ಆದರೆ ಭಾರತದ ಕ್ರಿಕೆಟ್ ಕಲಿಗಳಾದ ಗವಾಸ್ಕರ್, ರವಿಶಾಸ್ತ್ರಿ, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಧೋನಿಗಳಂತಹ ಹಿರಿಯ ಆಟಗಾರರು ಜಯ್ ಶಾ ಮುಂದೆ ನಡುಬಗ್ಗಿಸಿ ನಿಲ್ಲುವುದು ಕ್ರೀಡೆಗೆ ಕಳಂಕ ತರುವುದಿಲ್ಲವೇ?
ಜಯ್ ಶಾ ನಿಜಕ್ಕೂ ಒಬ್ಬ ಕ್ರಿಕೆಟ್ ಪಟುವಾಗಿದ್ದರೆ, ಈ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಮತ್ತು ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಅವರು ಎಂದೂ ಬ್ಯಾಟ್ ಹಿಡಿಯದ, ಮೈದಾನದಲ್ಲಿ ಬಿದ್ದು ಎದ್ದು ಮೈ ಕೈ ನೋಯಿಸಿಕೊಳ್ಳದ, ಒಂದೇ ಒಂದು ಪಂದ್ಯವನ್ನೂ ಆಡದ, ಕ್ರಿಕೆಟ್ ಬಗ್ಗೆ ಏನೂ ಅರಿಯದ ಕೂಸು. ಆ ಕೂಸು, ದೇಶದ ಗೃಹ ಸಚಿವರ ಪುತ್ರ ಎಂಬ ಕಾರಣಕ್ಕಾಗಿಯೇ ಅವಕಾಶಗಳು ಸೃಷ್ಟಿಯಾಗುತ್ತವೆ. ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುತ್ತಾರೆ.
ಇದನ್ನು ಓದಿದ್ದೀರಾ?: ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!
ಇದೇ ಸಮಯದಲ್ಲಿ, ಹಗಲೂರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೀಟ್ ಪರೀಕ್ಷೆಗಾಗಿ ಓದುವ, ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದಕ್ಕೆ ಹತಾಶರಾಗಿ ಬೀದಿಗಿಳಿಯುವ ಯುವಸಮೂಹವಿದೆ. ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಕೇಸ್ ದಾಖಲಿಸಿಕೊಂಡು ಕೋರ್ಟು-ಕಚೇರಿ ಅಲೆಯುತ್ತಿರುವವರೂ ಇದ್ದಾರೆ. ಹಾಗೆಯೇ ಕಷ್ಟಪಟ್ಟು ಓದಿದರೂ ನೌಕರಿ ಸಿಗದ ಕೋಟ್ಯಂತರ ನಿರುದ್ಯೋಗಿಗಳಿದ್ದಾರೆ.
ಮತ್ತೊಂದು ಮಗ್ಗುಲಲ್ಲಿ, ಸಂಘಪರಿವಾರ ಮತ್ತು ಬಿಜೆಪಿ ನಾಯಕರ ಧರ್ಮ ದ್ವೇಷದ ಭಾಷಣಕ್ಕೆ ಮರುಳಾಗಿ ಕೈಗೆ ತಲವಾರ್ ತೆಗೆದುಕೊಳ್ಳುವ, ರಸ್ತೆಗಿಳಿದು ದೊಂಬಿ ಎಬ್ಬಿಸುವ, ಪೊಲೀಸರ ಲಾಠಿ ಏಟು ತಿಂದು, ಕೋರ್ಟು-ಕಚೇರಿ ಅಲೆಯುವ ಯುವಸಮೂಹವೂ ಇದೆ.
ಅಧಿಕಾರಸ್ಥರ ಮಕ್ಕಳು ಅರ್ಹತೆ ಇಲ್ಲದಿದ್ದರೂ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವುದು; ಅವರನ್ನು ಅಧಿಕಾರದ ಕುರ್ಚಿಗಳ ಮೇಲೆ ಕೂರಿಸುವವರ ಬಡವರ ಮಕ್ಕಳು ಬೀದಿಯಲ್ಲಿದ್ದು ಭವಿಷ್ಯವನ್ನು ಬರಿದು ಮಾಡಿಕೊಳ್ಳುವುದು- ಇದು ಅಮೃತಕಾಲದತ್ತ ಹೆಜ್ಜೆ ಹಾಕುತ್ತಿರುವ ಭಾರತದ ಎರಡು ಚಿತ್ರಗಳು.



