ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯ- ಎದೆ ಸೆಟೆಸಿ ಸೆಣಸುವುದೊಂದೇ ದಾರಿ

Date:

ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ನ  (ಐಪಿಐ) 2022ರ ಏಪ್ರಿಲ್- ಸೆಪ್ಟಂಬರ್ ಅವಧಿ ವರದಿಯ ಪ್ರಕಾರ ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸಾಚಾರ, ಸೆನ್ಸರ್‌ಶಿಪ್, ಕಾನೂನು ಕಿರುಕುಳ, ದಸ್ತಗಿರಿಗಳನ್ನು ಎದುರಿಸಿದ್ದಾರೆ


ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಪಟ್ಟಿಯಲ್ಲಿ ಭಾರತದ ಸ್ಥಾನ 180ರ ಪೈಕಿ 161ಕ್ಕೆ ಕುಸಿದಿದೆ. ತಾಲಿಬಾನಿಗಳು ಆಡಳಿತ ನಡೆಸುತ್ತಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಕೆಳಗೆ!  ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ನಮಗಿಂತ ಮುಂದಿವೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಸ್ಥಾನಗಳು ಈ ವರ್ಷ ಅನುಕ್ರಮವಾಗಿ 150 ಮತ್ತು 152.

‘ಸರಹದ್ದುರಹಿತ ವರದಿಗಾರರು’ (Reporters without Borders) ಎಂಬ ಸಂಸ್ಥೆಯ 2023ರ ವರ್ಷದ ಆವೃತ್ತಿಯಲ್ಲಿ ಈ ಆಘಾತಕಾರಿ ಸಂಗತಿ ಹೊರಬಿದ್ದಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದೇ ಈ ಸಂಗತಿ ಬಯಲಾಗಿದೆ.

ಜಟ್ಟಿ ಸೋತರೂ ಮೀಸೆ ಮಣ್ಣಾಗಲಿಲ್ಲ ಎಂದು ಭಾರತ ಹೇಳಿಕೊಳ್ಳಬಹುದು. ಯಾಕೆಂದರೆ ಬಾಂಗ್ಲಾದೇಶ (163), ತುರ್ಕಿ (165), ಸೌದಿ ಅರೇಬಿಯಾ (170), ಇರಾನ್ (177), ಚೀನಾ (179) ಹಾಗೂ ಉತ್ತರ ಕೊರಿಯಾ (180) ಈ ಪಟ್ಟಿಯ ತಳದಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಭಾರತ ಸತತವಾಗಿ ಈ ಸೂಚ್ಯಂಕ ಪಟ್ಟಿಯಲ್ಲಿ ಕುಸಿಯುತ್ತಲೇ ನಡೆದಿದೆ.

ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ನ  (ಐಪಿಐ) 2022ರ ಏಪ್ರಿಲ್- ಸೆಪ್ಟಂಬರ್ ಅವಧಿ ವರದಿಯ ಪ್ರಕಾರ ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸಾಚಾರ, ಸೆನ್ಸರ್‌ಶಿಪ್, ಕಾನೂನು ಕಿರುಕುಳ, ದಸ್ತಗಿರಿಗಳನ್ನು ಎದುರಿಸಿದ್ದಾರೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಬೆಂಬಲಿಗರು ದಾಳಿಗಳು ಮತ್ತು ದಮನಕಾರಿ ಕಾನೂನುಗಳನ್ನು ಬಳಸಿ ಸ್ವತಂತ್ರ ಮೀಡಿಯಾದ ಬಾಯಿ ಹೊಲಿದಿದ್ದಾರೆ.

ಪತ್ರಕರ್ತರ ವಿರುದ್ಧ ಹಿಂಸಾಚಾರ, ರಾಜಕೀಯ ಪಕ್ಷಪಾತಿ ಮೀಡಿಯಾ, ಕೆಲವೇ ಸಂಸ್ಥೆಗಳ ಕೈಯಲ್ಲಿ ಹೆಪ್ಪುಗಟ್ಟಿರುವ ಮೀಡಿಯಾ ಒಡೆತನ ಮುಂತಾದ ಅನಿಷ್ಟಗಳು ಭಾರತದ ಪತ್ರಿಕಾ ಸ್ವಾತಂತ್ರ್ಯವನ್ನು ಕಾಡಿವೆ. ವಿಶ್ವದ ಅತಿ ದೊಡ್ಡ ಜನತಾಂತ್ರಿಕ ವ್ಯವಸ್ಥೆಯ ಮೀಡಿಯಾ ಬಿಕ್ಕಟ್ಟಿಗೆ ಸಿಲುಕಿರುವುದಕ್ಕೆ ಕನ್ನಡಿ ಹಿಡಿದಿವೆ.

 2014ರಿಂದ ಭಾರತವು ಹಿಂದೂ ಬಲಪಂಥೀಯ ರಾಷ್ಟ್ರವಾದಿಯ ಸಾಕಾರ ಎನಿಸಿರುವ ಭಾಜಪದ ನಾಯಕ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿದೆ ಎಂದೂ ‘ಸರಹದ್ದುರಹಿತ ವರದಿಗಾರರು’ ಸಂಸ್ಥೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. ಹಿಂದಿ ಪತ್ರಿಕಾ ಓದುಗ ಸಮೂಹದ ಮುಕ್ಕಾಲು ಭಾಗವನ್ನು ಕೇವಲ ನಾಲ್ಕೇ ಹಿಂದಿ ಪತ್ರಿಕೆಗಳು ನಿಯಂತ್ರಿಸುತ್ತಿವೆ. ಸರ್ಕಾರವನ್ನು ಟೀಕಿಸುವ ವಿಮರ್ಶಿಸುವ ಪತ್ರಕರ್ತರ ಮೇಲೆ ದೇಶದ್ರೋಹ, ಕ್ರಿಮಿನಲ್ ಮಾನಹಾನಿ, ರಾಷ್ಟ್ರೀಯ ಸುರಕ್ಷತೆ, ನ್ಯಾಯಾಂಗನಿಂದನೆ ನೆಪದಲ್ಲಿ ಮೊಕದ್ದಮೆಗಳನ್ನು ಹೂಡಿ ದೇಶವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ.

ಭಾರತದ ಸುದ್ದಿಮನೆಗಳಲ್ಲಿ ಬಹುತ್ವಕ್ಕೆ ಅವಕಾಶವೇ ಇಲ್ಲ, ಬಹುತೇಕ ಹಿಂದೂ ಬಲಿಷ್ಠ ಜಾತಿಗಳವರು ಮತ್ತು ಪುರುಷರೇ ಸುದ್ದಿಮನೆಗಳನ್ನು ಆಳುತ್ತಿದ್ದಾರೆ. ಬಹುತ್ವದ ಈ ಕೊರತೆಯಿಂದ ಉಂಟಾಗುವ ಪೂರ್ವಗ್ರಹ ಈ ಮೀಡಿಯಾ ಸಂಸ್ಥೆಗಳ ಹೂರಣದಲ್ಲಿ ಪ್ರತಿಫಲಿಸುತ್ತಿದೆ. ವರ್ಷಕ್ಕೆ ಕನಿಷ್ಠ ಮೂರರಿಂದ- ನಾಲ್ಕು ಮಂದಿ ಪತ್ರಕರ್ತರು ತಮ್ಮ ವೃತ್ತಿ ಸಂಬಂಧಿತ ವಿಷಯಗಳಲ್ಲಿ ಹತ್ಯೆಗೀಡಾಗುತ್ತಿದ್ದಾರೆ.

ವಸಾಹತುಶಾಹಿ ವಿರೋಧಿ ಆಂದೋಲನದ ಉತ್ಪನ್ನವಾಗಿರುವ ಭಾರತೀಯ ಮಾಧ್ಯಮವನ್ನು ಸಾಕಷ್ಟು ಪ್ರಗತಿಪರ ಎಂದೇ ಕಾಣಲಾಗುತ್ತಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದು ಬಿಜೆಪಿ ಮತ್ತು ಮೀಡಿಯಾ ಮಾಲೀಕ ಕುಟುಂಬಗಳ ನಡುವೆ  ಹೊಂದಾಣಿಕೆಯನ್ನು ಏರ್ಪಡಿಸಿದರು. ಈ ಮಾತಿಗೆ ಬಹುದೊಡ್ಡ ಉದಾಹರಣೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಉದ್ಯಮ ಸಮೂಹ 70 ಮೀಡಿಯಾ ಸಂಸ್ಥೆಗಳನ್ನು ಹೊಂದಿದೆ. 80 ಕೋಟಿ ಭಾರತೀಯರು ಈ ಮೀಡಿಯಾ ಸಂಸ್ಥೆಗಳ ಹೂರಣವನ್ನು ನೋಡುತ್ತಾರೆ. ಮುಕೇಶ್ ಅಂಬಾನಿ ಮೋದಿಯವರ ಆಪ್ತಮಿತ್ರ. ಮೋದಿಯವರ ಮತ್ತೊಬ್ಬ ಭಾರೀ ಉದ್ಯಮಿ ಮಿತ್ರ ಗೌತಮ್ ಅಡಾನಿಯವರು 2022ರಲ್ಲಿ ಎನ್.ಡಿ.ಟಿವಿ ಚಾನೆಲ್ಲನ್ನು ಸ್ವಾಧೀನಪಡಿಸಿಕೊಂಡರು. ಅಲ್ಲಿಗೆ ಭಾರತೀಯ ಮುಖ್ಯವಾಹಿನಿ ಮೀಡಿಯಾದಲ್ಲಿನ ಬಹುತ್ವ ಕೊನೆಗೊಂಡಿತು.

ಪತ್ರಕರ್ತರನ್ನು ಮೋದಿಯವರು ಬಹುಕಾಲದಿಂದಲೂ ಕಟುವಾಗಿ ಕಾಣುತ್ತಿದ್ದರು. ಪತ್ರಕರ್ತರು ಮಧ್ಯವರ್ತಿಗಳ ಪಾತ್ರ ವಹಿಸಿ  ತಮ್ಮ ಮತ್ತು ಬೆಂಬಲಿಗರ ನಡುವಣ ಸಂಬಂಧವನ್ನು ಮಲಿನಗೊಳಿಸುತ್ತಿದ್ದಾರೆಂಬುದು ಅವರ ಅಭಿಮತವಾಗಿತ್ತು. ಪ್ರಭುತ್ವವನ್ನು ತೀವ್ರವಾಗಿ ವಿಮರ್ಶಿಸುವ ಭಾರತೀಯ ಪತ್ರಕರ್ತರನ್ನು ಮೋದಿ ಭಕ್ತರು ಕಿರುಕುಳ ಮತ್ತು ದಾಳಿಗಳ ಆಂದೋಲನಗಳಿಗೆ ಗುರಿ ಮಾಡುತ್ತಿದ್ದಾರೆ ಎಂಬ ಈ ವರದಿಯ ಅಂಶಗಳು ಕಳವಳಕಾರಿ.

ಸರಹದ್ದುರಹಿತ ವರದಿಗಾರರು ಎಂಬುದು ವಿದೇಶಿ ಸ್ವಯಂಸೇವಾ ಸಂಸ್ಥೆಯಾಗಿದ್ದು ಅದರ ವರದಿ ತನಗೆ ಸಮ್ಮತವಿಲ್ಲವೆಂದು ಮೋದಿ ಸರ್ಕಾರ ತಿರಸ್ಕರಿಸಿದೆಯಂತೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಭಾರತ ಮತ್ತಷ್ಟು ಕುಸಿಯುವ ಸೂಚನೆಗಳೇ ದಟ್ಟವಾಗಿವೆ. ಬಗ್ಗಿದರೆ ಬಾರಿಸುವುದೇ ನಿಶ್ಚಿತವಾದಾಗ ಎದೆ ಸೆಟೆಸಿ ಸೆಣೆಸುವುದೊಂದೇ ದಾರಿ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸರ್ಕಾರಿ ಅನುದಾನಿತ ಉತ್ಸವಗಳೆಲ್ಲ ಸರಳಗೊಳ್ಳಲಿ

ಈಗಾಗಲೇ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ...

‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ

ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ...

’ಈ ದಿನ’ ಸಂಪಾದಕೀಯ| 2029ರ ಕನಸಿಗೆ ಈಗಲೇ ‘ಟೋಪಿ’ ಹೊಲಿದ ಮೋದಿ ಮಂತ್ರವಾದಿ

ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ...

ಈ ದಿನ ಸಂಪಾದಕೀಯ | ಅರ್ಚಕರಾಗಿ ದಲಿತರು, ಮಹಿಳೆಯರ ನೇಮಕ ಕ್ರಾಂತಿಕಾರಿ ಹೆಜ್ಜೆಯೇ? ದೇಶ ಬದಲಾಯಿತೇ?

1972ರಿಂದ 2023ರವರೆಗಿನ ನಿರಂತರ ಹೋರಾಟದಿಂದ; ದೇವಸ್ಥಾನಗಳಲ್ಲಿ ಅರ್ಚಕರಾಗಿ ದಲಿತರು ಮತ್ತು ಮಹಿಳೆಯರ...