ಈ ದಿನ ಸಂಪಾದಕೀಯ | ಬರಪೀಡಿತ ಜಿಲ್ಲೆಯ ಜನರ ಜಲಾಗ್ರಹದ ಕೂಗು ಕೇಳಿಸುವುದೇ ಸರ್ಕಾರಕ್ಕೆ?

Date:

24 ಸಾವಿರ ಕೋಟಿಯ ಎತ್ತಿನಹೊಳೆ, 6 ಸಾವಿರ ಕೋಟಿಯ ತ್ಯಾಜ್ಯ ಸಂಸ್ಕರಿತ ನೀರಿನ ವ್ಯಾಲಿ ಯೋಜನೆ- ಎರಡರಿಂದಲೂ ಬರಪೀಡಿತ ಜಿಲ್ಲೆಗಳ ಜನರ ನೀರಿನ ಬವಣೆ ನೀಗಿಲ್ಲ. ಎರಡೂ ಯೋಜನೆಗಳ ಹೊಣೆ ಹೊರುವವರು ಯಾರು? ಈ ಕುರಿತು ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ಜಲಾಗ್ರಹ ಹೋರಾಟಗಾರರ ಒಕ್ಕೊರಲಿನ ಆಗ್ರಹವಾಗಿದೆ.

ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನ ಜನವರಿ 17ರಂದು ಕೋಲಾರದಲ್ಲಿ ‘ಜಲಾಗ್ರಹ ಸಮಾವೇಶ’ವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶದ ಮುಖ್ಯ ಬೇಡಿಕೆ- ಶುದ್ಧ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ. ಹಾಗೆಯೇ ಇಲ್ಲಿಯವರೆಗೆ ಸರ್ಕಾರ ಕೈಗೆತ್ತಿಕೊಂಡ ಯೋಜನೆಗಳ ವೈಫಲ್ಯ ಕುರಿತು ತನಿಖೆಯ ಆಗ್ರಹವಾಗಿದೆ.

- Advertisement -

ಮೇಲಿನ ಮೂರು ಜಿಲ್ಲೆಗಳಲ್ಲಿ ನದಿ ನಾಲೆಗಳಿಲ್ಲ, ಕೆರೆ ಕುಂಟೆಗಳೂ ಬತ್ತಿಹೋಗಿವೆ. ಹಾಗಾಗಿ ಶುದ್ಧ ಕುಡಿಯುವ ನೀರು ಸಿಗದಾಗಿದೆ. ಮಳೆಯಾಶ್ರಿತ ಬೇಸಾಯ ನಂಬಿ ಬದುಕುವ ರೈತರು ಮಳೆಯೊಂದಿಗೆ ಜೂಜಾಟಕ್ಕಿಳಿಯಬೇಕಾಗಿದೆ. ಆರ್ಥಿಕವಾಗಿ ಕೊಂಚ ಸದೃಢರಾದ ರೈತರು ಕೊಳವೆಬಾವಿ ಕೊರೆಸಲು ಮುಂದಾದರೆ, ಕನಿಷ್ಠ 1500 ಅಡಿ ಆಳದವರೆಗೆ ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಅಂತರ್ಜಲ ಪಾತಾಳಕ್ಕೆ ಕುಸಿದಿರುವ ಈ ದಿಕ್ಕೆಟ್ಟ ದಿನಗಳಲ್ಲಿ, ನೀರು ಸಿಗಬಹುದು, ಸಿಗದಿರಲೂಬಹುದು. ಸಿಕ್ಕರೆ ಎಲ್ಲಿಯವರೆಗೆ ಎಂಬ ಬಗ್ಗೆ ಗ್ಯಾರಂಟಿ ಇಲ್ಲ. ಅದನ್ನೂ ಮೀರಿ ಅಕಸ್ಮಾತ್ ಸಿಕ್ಕರೆ ಆ ನೀರು ಕೃಷಿಗೂ-ಕುಡಿಯುವುದಕ್ಕೂ ಯೋಗ್ಯವಲ್ಲ. ಏಕೆಂದರೆ, 1500 ಅಡಿ ಆಳದಲ್ಲಿ ಸಿಗುವ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಗಳ ಜೊತೆಗೆ ಅಪಾಯಕಾರಿ ಯುರೇನಿಯಂ ಪತ್ತೆಯಾಗಿದೆ. ಇದು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಅಧ್ಯಯನದಿಂದ ದೃಢಪಟ್ಟಿದೆ. ಈ ನೀರಿನಿಂದ ಬೆಳೆಯುವ ಬೆಳೆಗಳು ವಿಷಪೂರಿತವಾಗಿದ್ದು, ಇದನ್ನು ಬಳಸುವ ಜನ ಮತ್ತು ಜಾನುವಾರುಗಳು ಮಾರಣಾಂತಿಕ ಖಾಯಿಲೆಗಳು ತುತ್ತಾಗುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಸೋಮನಾಥ ಮಂದಿರ ಮರುನಿರ್ಮಾಣವನ್ನು ವಿರೋಧಿಸಿದ್ದರೇ ನೆಹರೂ? ಆ ಕಾಲಮಾನ ಯಾವುದು?

ದಿನದಿಂದ ದಿನಕ್ಕೆ ಬಯಲು ಸೀಮೆಯ ಜನರ ಶುದ್ಧ ಕುಡಿಯುವ ನೀರಿನ ದಾಹ ಏರುತ್ತಲೇ ಇದೆ. ಸಮಸ್ಯೆಯೂ ಬಿಗಡಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಜಿಲ್ಲೆಗಳ ಜನರ ದಾಹ ಇಂಗಿಸಲು ಮುಂದಾಗಬೇಕಾದ್ದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಜಂಜಾಟದಲ್ಲಿರುವ ಜನರ ನೆರವಿಗೆ ನಿಲ್ಲಬೇಕಾದ್ದು ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ, ಜನರ ನೆರವಿಗೆ ನಿಲ್ಲುವುದನ್ನೇ ನೆಪವಾಗಿಸಿಕೊಳ್ಳುವ ಅಧಿಕಾರಸ್ಥರು ಬೃಹತ್‌ ಯೋಜನೆಗಳಿಗೆ ಕೈಹಾಕುತ್ತಾರೆ. ಕೋಟ್ಯಂತರ ರೂಪಾಯಿಗಳ ಕಾಮಗಾರಿಯ ಕನಸು ಕಾಣುತ್ತಾರೆ. 

ಅಂತಹ ಕನಸಿನ ಬೃಹತ್ ಯೋಜನೆಯೇ ಎತ್ತಿನಹೊಳೆ ಯೋಜನೆ. ಏಳು ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಸುಮಾರು 527 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಿತ್ತು ಎತ್ತಿನಹೊಳೆ ಯೋಜನೆ. 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಯಮ್ಮನವರು, ‘ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಸಿಗಲಿದೆ. ಮುಂದಿನ ಎರಡು ವರ್ಷದಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಯಲಿದೆ’ ಎಂದಿದ್ದರು.

ಅದಾಗಿ ಇಂದಿಗೆ 11 ವರ್ಷಗಳು ಕಳೆದುಹೋಗಿವೆ. ಭರದಿಂದ ಕಾಮಗಾರಿ ನಡೆದಿದೆ. ಅದಕ್ಕಾಗಿ ಆಡಳಿತ ಯಂತ್ರಾಂಗ ವಿನಿಯೋಗವಾಗಿದೆ. ಅದರ ನೆಪದಲ್ಲಿ ಪಶ್ಚಿಮಘಟ್ಟ ನಾಶವಾಗಿದೆ. ಅಂದಾಜುವೆಚ್ಚ 24ರಿಂದ 36 ಸಾವಿರ ಕೋಟಿಗೆ ಜಿಗಿದಿದೆ. ಮತ್ತೊಮ್ಮೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಎತ್ತಿನಹೊಳೆಯಿಂದ ಎತ್ತುವ ನೀರು 24 ಟಿಎಂಸಿಯಿಂದ 8.4 ಟಿಎಂಸಿಗೆ ಇಳಿದಿದೆ. ಕೇವಲ 5 ಟಿಎಂಸಿ ನೀರು ಮಾತ್ರ ಲಭ್ಯವಾಗಿದೆ. ಅದು ಹಾಸನ ದಾಟಿ ತುಮಕೂರಿನತನಕವೂ ಹರಿಯದಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಯುವ ಸೂಚನೆಯೂ ಇಲ್ಲವಾಗಿದೆ.

ಹಾಗಾದರೆ, ಈ ಮೂರು ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ನೀಗುವುದು ಹೇಗೆ? ಸರ್ಕಾರ ಮತ್ತೊಂದು ಯೋಜನೆ- ತ್ಯಾಜ್ಯ ನೀರು ಸಂಸ್ಕರಣಕ್ಕೆ ಕೈಹಾಕಿತು. ಕೋಲಾರಕ್ಕೆ ಕೆಸಿ ವ್ಯಾಲಿ, ಚಿಕ್ಕಬಳ್ಳಾಪುರಕ್ಕೆ ಎಚ್ಎನ್ ವ್ಯಾಲಿ, ಬೆಂಗಳೂರು ಗ್ರಾಮಾಂತರಕ್ಕೆ ವೃಷಭಾವತಿ ವ್ಯಾಲಿ. ಮೂರು ಜಿಲ್ಲೆಯ ಅಂತರ್ಜಲ ಮರುಪೂರಣ ಮಾಡುವ ನೆಪದಲ್ಲಿ ಬೆಂಗಳೂರು ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ 200 ಕೆರೆಗಳಿಗೆ ಹರಿಸುವ ಯೋಜನೆ ರೂಪಿಸಿತು. ಅದಕ್ಕಾಗಿ 6 ಸಾವಿರ ಕೋಟಿ ಖರ್ಚು ಮಾಡಲಾಯಿತು. ಲಗುಬಗೆಯಿಂದ ಕಾಮಗಾರಿ ಕೈಗೆತ್ತಿಕೊಂಡು ಮಾಡಿ ಮುಗಿಸಿದ್ದೂ ಆಯಿತು. ನೀರೂ ಕೂಡ ಹರಿಯಿತು. ಆದರೆ, ಆ ಸಂಸ್ಕರಿತ ನೀರು ಕುಡಿಯುವುದು ಹೋಗಲಿ, ಬೆಳೆಗಳಿಗೆ ಬಳಸಲೂ ಯೋಗ್ಯವಿಲ್ಲದಾಯಿತು. ಕೊಳವೆಬಾವಿ ನೀರನ್ನೂ ಕಲುಷಿತಗೊಳಿಸಿತು.

ನೀರಿನ ದಾಹದಿಂದ ಬರಗೆಟ್ಟ ಬಯಲುನಾಡಿಗೆ ಸಂಜೀವಿನಿ ಆಗಬೇಕಿದ್ದ ವ್ಯಾಲಿ ಯೋಜನೆಗಳು ಈಗ ನಿಧಾನವಾಗಿ ವಿಷ ಉಣಿಸುತ್ತಿವೆ. ಅರೆ ಸಂಸ್ಕರಿತ ನೀರಿನಿಂದ ಬೆಳೆದ ತರಕಾರಿ ಜನರ ಒಡಲು ಸೇರಿ ಆತಂಕ ಸೃಷ್ಟಿಸುತ್ತಿದೆ. ‘ಈಗ ಬೆಳೆಯುತ್ತಿರುವ ತರಕಾರಿ, ಸೊಪ್ಪಿನ ರುಚಿ, ಬಣ್ಣ ಬದಲಾಗಿದೆ. ಮೊದಲಿನ ಗುಣಮಟ್ಟ ಕಾಯ್ದುಕೊಳ್ಳಲು ಆಗುತ್ತಿಲ್ಲ. ವರ್ತಕರು ಇದೇ ಕಾರಣ ನೀಡಿ ಖರೀದಿಸಲು ಹಿಂಜರಿಯುತ್ತಿದ್ದಾರೆ. ಏನು ಮಾಡುವುದು ತೋಚುತ್ತಿಲ್ಲ…’ ಎನ್ನುವುದು ರೈತರ ಅಳಲಾಗಿದೆ.

ಅಂತರ್ಜಲ ಮರುಪೂರಣಕ್ಕಾಗಿ ಮಹಾನಗರಗಳ ಕೊಳಚೆ ನೀರು ಬಳಸಿಕೊಳ್ಳುವ ಬಗ್ಗೆ 2013ರಲ್ಲಿಯೇ ಕೇಂದ್ರ ಸರ್ಕಾರ ದೇಶಕ್ಕೆ ಅನ್ವಯವಾಗುವ ನಿಯಮ ರೂಪಿಸಿದೆ. ಆ ಮಾನದಂಡದ ಪ್ರಕಾರ ಚರಂಡಿಯ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿಯೇ ಕೆರೆಗಳಿಗೆ ಹರಿಸಬೇಕು. ಹಾಗಾದರೆ ಮಾತ್ರ ಪ್ರಾಣಿ, ಪಕ್ಷಿಗಳು, ಮನುಷ್ಯನಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇಲ್ಲದಿದ್ದರೆ ಅರೆ ಸಂಸ್ಕರಿತ ನೀರು ಅಂತರ್ಜಲಕ್ಕೆ ಆಪತ್ತು ತರಲಿದೆ ಎಂದು ಎಚ್ಚರಿಸಲಾಗಿದೆ. ಈ ಬಗ್ಗೆ ಶಾಶ್ವತ ನೀರಾವರಿ ಹೋರಾಟಗಾರರು, ವಿಜ್ಞಾನಿಗಳು, ವೈದ್ಯರು, ಪರಿಸರವಾದಿಗಳು ಈ ಯೋಜನೆಯ ಆರಂಭದಲ್ಲಿಯೇ ಎಚ್ಚರಿಸಿದ್ದರು. ವಿವಿಧ ಸಂಸ್ಥೆಗಳು ವೈಜ್ಞಾನಿಕ ವರದಿಗಳನ್ನು ಸಹ ಸರ್ಕಾರಕ್ಕೆ ಸಲ್ಲಿಸಿದ್ದವು.

ಆದರೆ, ಕಾಮಗಾರಿಯ ಧಾವಂತಕ್ಕೆ ಬಿದ್ದ ಅಧಿಕಾರಸ್ಥ ರಾಜಕಾರಣಿಗಳು-ಅಧಿಕಾರಿಗಳು-ಗುತ್ತಿಗೆದಾರರು ಆ ಮಾನದಂಡಗಳನ್ನು ಮೂಲೆಗೆಸೆದರು. ಕಾಮಗಾರಿ ಮುಗಿಸಿ ಅದ್ದೂರಿ ಸಮಾರಂಭವೇರ್ಪಡಿಸಿ, ನೀರು ಕೊಟ್ಟಿದ್ದೇವೆ ಎಂದು ಕೊಚ್ಚಿಕೊಂಡರು. ಇದರಿಂದಾದ ದುಷ್ಪರಿಣಾಮಗಳನ್ನು ಅಧ್ಯಯನ ನಡೆಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯರೆಡ್ಡಿ ನ್ಯಾಯಾಲಯದ ಮೊರೆ ಹೋದರು. ಈ ಭಾಗದ ಜನರು ವಿವಿಧ ರೀತಿಯಲ್ಲಿ ಹೋರಾಟ, ಪ್ರತಿಭಟನೆ, ಪಾದಯಾತ್ರೆ ನಡೆಸುತ್ತಲೇ ಬಂದಿದ್ದಾರೆ. ಆದರೆ, ಇವರ ಕೂಗು ಇಂದಿಗೂ ಸರ್ಕಾರಕ್ಕೆ ಕೇಳಿಸಿಲ್ಲ.

ಇದನ್ನು ಓದಿದ್ದೀರಾ?: ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?

ಅತ್ತ 24 ಸಾವಿರ ಕೋಟಿಯ ಎತ್ತಿನಹೊಳೆ ಯೋಜನೆ, ಇತ್ತ 6 ಸಾವಿರ ಕೋಟಿಯ ತ್ಯಾಜ್ಯ ಸಂಸ್ಕರಿತ ನೀರಿನ ವ್ಯಾಲಿ ಯೋಜನೆ- ಎರಡರಿಂದಲೂ ಈ ಭಾಗದ ಜನರ ನೀರಿನ ಬವಣೆ ನೀಗಿಲ್ಲ. ಯೋಜನೆ ಆರಂಭಿಸುವಾಗ ಈ ಭಾಗದ ಜನರಲ್ಲಿದ್ದ ಆತಂಕ ಈಗ ದೃಢಪಟ್ಟಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳುಗಳ ಮೇಲೆ ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದೆ.

ಎರಡೂ ಯೋಜನೆಗಳ ಹೊಣೆ ಹೊರುವವರು ಯಾರು? ಈ ಕುರಿತು ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ಜಲಾಗ್ರಹ ಹೋರಾಟಗಾರರ ಒಕ್ಕೊರಲಿನ ಆಗ್ರಹವಾಗಿದೆ. ಹಾಗೆಯೇ ಬಹುದಿನಗಳ ಕೃಷ್ಣಾ ನದಿಯ ನಮ್ಮ ಪಾಲಿನ ನೀರನ್ನು ಕೃಷ್ಣಾ-ಪೆನ್ನಾರ್ ಜೋಡಿಸುವ ಮೂಲಕ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸಬಹುದೆಂಬ ಸಲಹೆಯನ್ನೂ ನೀಡಿದೆ. ಈ ಸಲಹೆ-ಆಗ್ರಹ ನ್ಯಾಯಯುತವಾಗಿದೆ. ನಾಡಿನ ಜನತೆ ಈ ಹೋರಾಟದ ಬೆನ್ನಿಗೆ ನಿಂತು ಬೆಂಬಲಿಸಬೇಕಾಗಿದೆ.  

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...