ಈ ದಿನ ಸಂಪಾದಕೀಯ | ಅಭಿವೃದ್ಧಿಗಾಗಿ ಬಾಯಾರಿದ ರಾಜ್ಯ; ಹೊಸ ಪರ್ವಕ್ಕೆ ನಾಂದಿ ಹಾಡಲಿ ಕಾಂಗ್ರೆಸ್    

Date:

ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆಯಂಥ ನೂರೆಂಟು ಸಮಸ್ಯೆಗಳು ರಾಜ್ಯದ ಜನರನ್ನು ಕಾಡುತ್ತಿವೆ. ಇಂಥ ಸಂಕೀರ್ಣ, ಸಂಕಟದ ಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತಿರುವ ಕಾಂಗ್ರೆಸ್‌, ಜನರ ಭರವಸೆಯನ್ನು ಉಳಿಸಿಕೊಂಡು, ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಬೇಕಿದೆ.  

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಹೆಸರು ಬಹುತೇಕ ಅಂತಿಮಗೊಂಡಿದೆ. ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರ ಆಯ್ಕೆಯನ್ನು ಘೋಷಣೆ ಮಾಡುವುದೊಂದು ಬಾಕಿ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎನ್ನುವುದು ರಾಜ್ಯದ ಬಹುತೇಕ ಮತದಾರರ ಮನದಾಸೆಯೂ ಆಗಿತ್ತು. ಸದ್ಯಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಇರುವವರ ಪೈಕಿ ಮುಖ್ಯಮಂತ್ರಿ ಆಗಲು ಎಲ್ಲ ರೀತಿಯಲ್ಲೂ ಅರ್ಹ ವ್ಯಕ್ತಿ ಸಿದ್ದರಾಮಯ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುದೀರ್ಘ ರಾಜಕೀಯ ಜೀವನ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿದ್ದು ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಅವರ ಬೆನ್ನಿಗಿದೆ. ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಡಿ ಕೆ ಶಿವಕುಮಾರ್ ಷರತ್ತು ಇಟ್ಟಿದ್ದಾರೆನ್ನುವ ಮಾತು ಕೇಳಿಬರುತ್ತಿದೆ. ಸಿದ್ದರಾಮಯ್ಯ, ಖರ್ಗೆ ಯಾರೇ ಮುಖ್ಯಮಂತ್ರಿಯಾದರೂ ಅವರ ಮುಂದಿನ ಹಾದಿ ಸವಾಲಿನದ್ದಾಗಿದೆ.         

2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ನಂಥ ಯೋಜನೆಗಳಿಂದ ಜನರ ಒಲವು ಗಳಿಸಿದ್ದರು. ಹಾಗೆಯೇ ಹಲವು ವಿವಾದಗಳಿಗೂ ಕಾರಣರಾದರು. ಅರ್ಕಾವತಿ ರೀಡೂ ಹಗರಣ ಸೇರಿದಂತೆ ಹಲವು ಆರೋಪಗಳು ಬಂದವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮುಖ್ಯಮಂತ್ರಿ ಅವಧಿಯಲ್ಲಿ ತೆಗೆದುಕೊಂಡ ಅತ್ಯಂತ ವಿವಾದಾಸ್ಪದ ನಿರ್ಧಾರ ಲೋಕಾಯುಕ್ತ ಸಂಸ್ಥೆಯನ್ನು ಬರಖಾಸ್ತು ಮಾಡಿ, ಎಸಿಬಿ ರಚನೆ ಮಾಡಿದ್ದು. 2022ರಲ್ಲಿ ಹೈಕೋರ್ಟ್ ಎಸಿಬಿ ರಚನೆಯನ್ನು ರದ್ದು ಮಾಡಿ, ಲೋಕಾಯುಕ್ತಕ್ಕೆ ಮರುಜೀವ ನೀಡಿತ್ತು. ಲೋಕಾಯುಕ್ತದಂಥ ಸಾಂವಿಧಾನಿಕ ಸಂಸ್ಥೆಗಳ ಘನತೆ ಮತ್ತು ಮೌಲ್ಯವನ್ನು ಉಳಿಸುವುದು ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಬೇಕಿದೆ.

2013ರಲ್ಲಿ ರಾಜ್ಯದಲ್ಲಿ ಇದ್ದ ಪರಿಸ್ಥಿತಿಗೂ 2023ರಲ್ಲಿ ಇರುವ ಪರಿಸ್ಥಿತಿಗೂ ಅಪಾರ ವ್ಯತ್ಯಾಸವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮೇರೆ ಮೀರಿತ್ತು. ಗುತ್ತಿಗೆದಾರರಂಥವರು ಬೀದಿಗೆ ಬಂದು ಪ್ರತಿಭಟನೆ ಮಾಡಿದರು. ಕೆಲವರು ಆತ್ಮಹತ್ಯೆ ಮಾಡಿಕೊಂಡರು. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿತು. ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕುಖ್ಯಾತಿ ಗಳಿಸಿತ್ತು. ಇವೆಲ್ಲದರಿಂದ ಬೇಸತ್ತ ಜನ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಇದು ಕಾಂಗ್ರೆಸ್‌ ಗೆಲುವು ಎನ್ನುವದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಸೋಲು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ ಸುತ್ತಲಿನ ಮಂತ್ರಿಗಳು, ಪ್ರಭಾವಿಗಳು ಭ್ರಷ್ಟಾಚಾರ ಮಾಡದಂತೆ ತಡೆಯುವುದು ಮುಂದಿನ ಮುಖ್ಯಮಂತ್ರಿಯ ಮಟ್ಟಿಗೆ ಅತಿ ದೊಡ್ಡ ಸವಾಲಾಗಲಿದೆ. ಜೊತೆಗೆ ಆಕಾಶಕ್ಕೇರಿ ಕೂತಿರುವ ದಿನಬಳಕೆಯ ವಸ್ತುಗಳ ಬೆಲೆಯನ್ನು ಆದಷ್ಟು ಕಡಿಮೆ ಮಾಡುವುದು ಕೂಡ ಮುಂಬರುವ ಕಾಂಗ್ರೆಸ್ ಸರ್ಕಾರದ ಮುಂದಿರುವ ಮುಖ್ಯ ಸವಾಲು. ಇವೆರಡನ್ನು ಮುಂದಿನ ಮುಖ್ಯಮಂತ್ರಿ ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಆ ಸರ್ಕಾರದ ಯಶಸ್ಸು ನಿಂತಿದೆ.         

ಈ ಸುದ್ದಿ ಓದಿದ್ದೀರಾ: ಸಿದ್ದರಾಮಯ್ಯ ಸಿಎಂ, ಶಿವಕುಮಾರ್ ಡಿಸಿಎಂ: ಘೋಷಣೆಯೊಂದೇ ಬಾಕಿ   

ನಮ್ಮಲ್ಲಿ ಪ್ರತಿಯೊಬ್ಬ ಜನನಾಯಕನಿಗೂ ಜಾತಿಯೊಂದು ಇರುತ್ತದೆ ಮತ್ತು ಆ ಜನನಾಯಕ ಅಧಿಕಾರಕ್ಕೆ ಬಂದರೆ ಆತನ ಜಾತಿಯವರು ಆತನನ್ನು ಸುತ್ತುವರೆಯುತ್ತಾರೆ. ಇದು ಒಂದು ಪರಂಪರೆಯೇ ಆಗಿಬಿಟ್ಟಿದೆ. ಕಾಂಗ್ರೆಸ್ ಮುಖಂಡರು, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿಗಳಾಗುವವರು, ಈ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಿದೆ. ನಾಯಕನಾದವನು ಕಠೋರ ಜಾತ್ಯತೀತವಾದಿಯಾಗಿರಬೇಕಾದದ್ದು ಸದ್ಯದ ಅಗತ್ಯವಾಗಿದೆ.  

ಸಿದ್ದರಾಮಯ್ಯ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಆಕಸ್ಮಿಕವಾಗಿ ಅಕ್ಷರ ಕಲಿತು, ಅಷ್ಟೇ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವರು. ಸಿದ್ದರಾಮಯ್ಯನವರಿಗೆ ಅವರ ಆರಂಭ ಕಾಲದಲ್ಲಿ ಸಾರ್ವಜನಿಕ ಜೀವನದ ತಾಲೀಮು ನೀಡಿದವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿ. ಕನ್ನಡ ಚಳವಳಿ, ರೈತ ಸಂಘಗಳ ಸಖ್ಯದಲ್ಲಿ ಜನಪರ ರಾಜಕಾರಣದ ಅರಿವು ಪಡೆದ, ತಾತ್ವಿಕತೆ ರೂಪಿಸಿಕೊಂಡ ಸಿದ್ದರಾಮಯ್ಯ, ತಮ್ಮ ರಾಜಕೀಯ ಜೀವನದುದ್ದಕ್ಕೂ ಅದನ್ನು ಕಾಪಾಡಿಕೊಂಡರು. ತಮಗೆ ಅಧಿಕಾರ ಸಿಕ್ಕ ಸಂದರ್ಭಗಳಲ್ಲೆಲ್ಲ ಅದನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರು.

ಇಷ್ಟಾದರೂ 2018ರ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಬಹುಮತ ನೀಡಿ ಅಧಿಕಾರಕ್ಕೆ ತಂದಿರಲಿಲ್ಲ ಎನ್ನುವುದನ್ನು ಆ ಪಕ್ಷ ಸದಾ ಮನಸ್ಸಿನಲ್ಲಿಟ್ಟುಕೊಂಡಿರಬೇಕು.

ಸದ್ಯ ಕನ್ನಡ ನಾಡು, ಭಾಷೆ, ಇಲ್ಲಿನ ಸಂಪನ್ಮೂಲಗಳು, ಜನಸಂಸ್ಕೃತಿ, ಉದ್ಯಮಗಳು ಎಲ್ಲಕ್ಕೂ ಕಂಟಕ ಬಂದೊದಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದೊದಗಿದ್ದು, ರಾಜ್ಯಗಳ ಅಧಿಕಾರ ಮೊಟಕಾಗುತ್ತಿದೆ. ಅಭಿವೃದ್ಧಿಯಲ್ಲೂ ರಾಜ್ಯ ಹಿಂದುಳಿದಿದೆ. ನಿರುದ್ಯೋಗ ಹೆಚ್ಚಾಗುತ್ತಿದೆ; ರೈತರ ಸಾವಿನ ಲೆಕ್ಕ ಇಡುವ ಪರಿಪಾಠವನ್ನೇ ಸರ್ಕಾರಗಳು ಕೈಬಿಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದೊದಗಿದ ನಂತರ ಅಲ್ಲಿನ ಜನರ ಬದುಕು ದಿಕ್ಕಾಪಾಲಾಗಿದೆ. ಟ್ರಾಫಿಕ್, ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರು ಬಡವರ ಪಾಲಿಗೆ ನರಕವಾಗಿದೆ. ಇಂಥ ಸಂಕೀರ್ಣ, ಸಂಕಟದ ಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತಿರುವ ಕಾಂಗ್ರೆಸ್‌, ಜನರ ಭರವಸೆಯನ್ನು ಉಳಿಸಿಕೊಂಡು, ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಬೇಕಿದೆ.  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...