ಕೇಂದ್ರ ಸರ್ಕಾರದ ‘ರಗಳೆ’ | ವಿದ್ಯಾರ್ಥಿ ವೇತನಕ್ಕೆ ‘ಕಡ್ಡಾಯ ಬಯೋಮೆಟ್ರಿಕ್’ ಆದೇಶ; ವಿದ್ಯಾರ್ಥಿಗಳು ಸುಸ್ತು!

Date:

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ ಪೈಕಿ 'ನಕಲಿ'ಗಳು ಇದ್ದಾರೆಂದು ಶಂಕೆ ವ್ಯಕ್ತಪಡಿಸಿ 'ಬಯೋ ಮೆಟ್ರಿಕ್ ಕಡ್ಡಾಯ' ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ 'ಸರ್ವರ್ ಸಮಸ್ಯೆ' ಕೂಡ ತಟ್ಟಿದೆ. ಇದರಿಂದ ವಿದ್ಯಾರ್ಥಿಗಳು ತರಗತಿ ಬಿಟ್ಟು ಸಿಎಸ್‌ಸಿ ಕೇಂದ್ರಗಳಲ್ಲಿ 'ಕ್ಯೂ'ನಲ್ಲಿ ನಿಲ್ಲುವಂತಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಉಲ್ಲೇಖಿಸಿ, 1ರಿಂದ 8 ನೇ ತರಗತಿಯವರೆಗಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಕಳೆದ ವರ್ಷ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಇದು ಸಾಕಷ್ಟೂ ಚರ್ಚೆಗೂ ಗ್ರಾಸವಾಗಿತ್ತು.

ಪ್ರೀ ಮೆಟ್ರಿಕ್‌ನ ಯೋಜನೆಯಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ಮುಂದುವರಿಯಲಿದೆ ಎಂದೂ ಕೂಡ ಅಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ, ‘ಬಯೋ ಮೆಟ್ರಿಕ್ ಕಡ್ಡಾಯ’ ಮಾಡಿ ಆದೇಶ ಹೊರಡಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಪ್ರೀ-ಮೆಟ್ರಿಕ್(9 -10ನೇ ತರಗತಿ) ಮತ್ತು ಪೋಸ್ಟ್‌ ಮೆಟ್ರಿಕ್, ಮೆರಿಟ್ ಕಂ ಮೀನ್ಸ್ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ ಪೈಕಿ ‘ನಕಲಿ’ಗಳು ಇದ್ದಾರೆಂದು ಶಂಕೆ ವ್ಯಕ್ತಪಡಿಸಿ ‘ಬಯೋ ಮೆಟ್ರಿಕ್ ಕಡ್ಡಾಯ’ ಮಾಡುವಂತೆ ಮತ್ತೆ ಆದೇಶ ಹೊರಡಿಸಿದೆ.

‘ಬಯೋ ಮೆಟ್ರಿಕ್ ಕಡ್ಡಾಯ’ ಮಾಡುವಂತೆ ಆದೇಶ

ಕಳೆದ ಆಗಸ್ಟ್ 8ರಂದು ಆದೇಶ ಹೊರಡಿಸಿರುವ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ‘ವಿದ್ಯಾರ್ಥಿ ವೇತನ ಯೋಜನೆಗಳ ಅಡಿಯಲ್ಲಿ ವೇತನವನ್ನು ವಿತರಿಸಲು, 2022-23 ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಭೌತಿಕ ಪರಿಶೀಲನೆಗಳನ್ನು ನಡೆಸಲಾಯಿತು. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER) ಪರಿಶೀಲನೆ ನಡೆಸಿತ್ತು. ಈ ವೇಳೆ ಕೆಲವೊಂದು ಸಂಸ್ಥೆಗಳು ಹಾಗೂ ಫಲಾನುಭವಿಗಳ ದೃಢೀಕರಣದಲ್ಲಿ ವಿವಿಧ ವ್ಯತ್ಯಾಸಗಳು ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಆಧಾರಿತ ಬಯೋ-ಮೆಟ್ರಿಕ್ ದೃಢೀಕರಣ ಮಾಡಿ, ಸಲ್ಲಿಸಲಾಗಿದ್ದ ಹಳೆಯ ಅರ್ಜಿಯನ್ನು ‘ಅಪ್‌ಡೇಟ್’ ಮಾಡಬೇಕು’ ಎಂದು ತಿಳಿಸಿದೆ.

ಈ ಆದೇಶದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಂದು ವಿದ್ಯಾರ್ಥಿಗಳ ಸಹಿತ ಸಂಸ್ಥೆಯ ಪ್ರಾಂಶುಪಾಲರು ಅಥವಾ ಜವಾಬ್ದಾರರೂ ಕೂಡ ಬಯೋ ಮೆಟ್ರಿಕ್ ನೀಡಬೇಕಿದೆ.

ಬಯೋ ಮೆಟ್ರಿಕ್ ಮಾಡುವ ಕಾರ್ಯವನ್ನು ಸಿಎಸ್‌ಸಿ ಕೇಂದ್ರಗಳಿಗೆ(ಕಾಮನ್ ಸರ್ವಿಸ್ ಸೆಂಟರ್) ಏಜೆಂಟ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೇ, ಆಗಸ್ಟ್ 20ರೊಳಗೆ ಮುಗಿಸುವಂತೆಯೂ ಸೂಚನೆ ನೀಡಲಾಗಿದೆ. ಆದರೆ ‘ಸರ್ವರ್’ ಸಮಸ್ಯೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಹೈರಾಣಾಗಿಸಿದೆ.

ಬೆಳಗಾವಿಯ ಖಾನಾಪುರದಲ್ಲಿ ಸರ್ವರ್ ಸಮಸ್ಯೆಯಿಂದ ಕ್ಯೂ ನಲ್ಲಿರುವ ವಿದ್ಯಾರ್ಥಿಗಳು

ವಿದ್ಯಾರ್ಥಿ ವೇತನ ಪಡೆಯಲಿಕ್ಕೆಂದು ತರಗತಿಗಳನ್ನು ತೊರೆದು ಸಿಎಸ್‌ಸಿ ಕೇಂದ್ರಗಳತ್ತ ತೆರಳುತ್ತಿರುವ ವಿದ್ಯಾರ್ಥಿಗಳು ಸರ್ವರ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ‘ಈಗ ಸರಿಯಾಗಬಹುದು, ಮತ್ತೆ ಆಗಬಹುದು’ ಕ್ಯೂನಲ್ಲಿ ಕಾದು ನಿಂತು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಈ ಹೊಸ ಆದೇಶಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಜೊತೆಗೆ ವಿಪರ್ಯಾಸ ಏನೆಂದರೆ, ವಿದ್ಯಾರ್ಥಿಗಳು ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವ ವೇಳೆ ಶಾಲೆಯ ಸಿಬ್ಬಂದಿ ಅಥವಾ ಪ್ರಾಂಶುಪಾಲರು ಸ್ಥಳದಲ್ಲೇ ಹಾಜರಿರಬೇಕು ಎಂಬುದು.

ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಜೊತೆಗೆ ಬೇಸರ ವ್ಯಕ್ತಪಡಿಸಿದ ಹೆಸರು ಹೇಳಲಿಚ್ಛಿಸದ ವೈದ್ಯಕೀಯ ವಿದ್ಯಾರ್ಥಿಯೋರ್ವರು, ‘ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿ ಅದಾಗಲೇ ವರ್ಷವಾಗುತ್ತಾ ಬಂತು. ಇನ್ನೂ ಸ್ಕಾಲರ್‌ಶಿಪ್ ಬಂದಿಲ್ಲ. ಈಗ ನೋಡಿದ್ರೆ ಅರ್ಜಿ ಹಾಕಿದವರಲ್ಲಿ ನಕಲಿಗಳು ಇದ್ದಾರೆಂದು ಕೇಂದ್ರ ಸರ್ಕಾರಕ್ಕೆ ಅನುಮಾನ ಬಂದಿದೆ ಅಂತೆ. ಅದಕ್ಕಾಗಿ ಬಯೋಮೆಟ್ರಿಕ್ ನೀಡಬೇಕಂತೆ. ನಾವು ಅರ್ಜಿ ಸಲ್ಲಿಸುವಾಗಲೇ ಆಧಾರ್ ಕಾರ್ಡ್‌ ಸಹಿತ ಎಲ್ಲ ವಿವರಗಳನ್ನು ಕೊಟ್ಟಿದ್ದೇವೆ. ಈಗ ಮತ್ತೆ ಹೊಸ ಆದೇಶ ಹೊರಡಿಸಿರುವುದು ಸರಿಯಲ್ಲ’ ಎಂದರು.

‘ಹೇಗೂ ಪ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ ರದ್ದು ಮಾಡಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮನಸ್ಸಿಲ್ಲದಿದ್ದರೆ, ಈ ವರ್ಷ ರದ್ದು ಮಾಡಿದ್ದೇವೆ ಎಂದು ಘೋಷಿಸಲಿ. ಸರ್ವರ್ ಸಮಸ್ಯೆಯಿಂದ ಕ್ಯೂನಲ್ಲಿ ನಿಲ್ಲುವುದಾದರೂ ತಪ್ಪಬಹುದಲ್ವಾ. ಈ ರೀತಿಯ ಶೋಷಣೆ ವಿದ್ಯಾರ್ಥಿಗಳಿಗೆ ಯಾಕೆ ನೀಡುತ್ತೆ’ ಎಂದು ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿ ಪ್ರಶ್ನಿಸಿದರು.

ಈ ಬಗ್ಗೆ ಈ ದಿನ.ಕಾಮ್ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಜೀಲಾನಿ ಅವರನ್ನು ಸಂಪರ್ಕಿಸಿತು. ‘ಎನ್‌ಎಸ್‌ಪಿ ವೆಬ್‌ಸೈಟ್‌ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದು ರಾಜ್ಯಗಳ ನಿಯಂತ್ರಣದಲ್ಲಿ ಇಲ್ಲ. ಕೇಂದ್ರದ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ 18 ಸಾವಿರ ಸಂಸ್ಥೆಗಳ ಬಯೋ ಮೆಟ್ರಿಕ್ ಕೆಲಸ ಮುಗಿದಿದೆ. ವಿದ್ಯಾರ್ಥಿಗಳದ್ದು ಕೂಡ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಸರ್ವರ್ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ‘ಹೌದು. ಇದು ದೇಶಾದ್ಯಂತ ನಡೆಯುತ್ತಿರುವ ಕೆಲಸವಾಗಿರುವುದರಿಂದ ಸರ್ವರ್ ಸಮಸ್ಯೆಯುಂಟಾಗುತ್ತಿದೆ. ಇದು ನಮ್ಮ ಗಮನಕ್ಕೂ ಬಂದಿದೆ. ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಅದಕ್ಕಾಗಿಯೇ ರಾಜ್ಯದ ತಾಂತ್ರಿಕ ತಂಡ ದೆಹಲಿಯಲ್ಲಿರುವ ಕಚೇರಿಯ ಜೊತೆಗೆ ಸಂಪರ್ಕದಲ್ಲಿದೆ. ಕೇಂದ್ರ ಸರ್ಕಾರದ ಆದೇಶವಾಗಿರುವುದರಿಂದ ಬಯೋ ಮೆಟ್ರಿಕ್ ಮಾಡುವಂತೆ ಎಲ್ಲ ಜಿಲ್ಲೆಯ ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಹಾಗೂ ಮಾಹಿತಿ ಕೇಂದ್ರಗಳಿಗೆ ಮಾಹಿತಿ ತಲುಪಿಸಿದ್ದೇವೆ. ಕೆಲವೊಂದು ಸಂಸ್ಥೆಗಳಿಗೆ ತೆರಳಿ ಇಲಾಖೆಯ ಅಧಿಕಾರಿಗಳು ಅಲ್ಲೇ ಶಿಬಿರ ಕೈಗೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಷ್ಟವಾಗುವುದನ್ನು ತಪ್ಪಿಸಿದ್ದಾರೆ’ ಎಂದು ಮಾಹಿತಿ ತಿಳಿಸಿದರು.

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶ

ಈ ನಡುವೆ ‘ನಕಲಿ ಅರ್ಜಿಗಳನ್ನು ಪತ್ತೆ ಮಾಡಲಿಕ್ಕಾಗಿ ಬಯೋ ಮೆಟ್ರಿಕ್ ಅಪ್‌ಡೇಟ್ ಕಡ್ಡಾಯ ಮಾಡಲಾಗಿದೆ. ಅಪ್‌ಡೇಟ್ ಮಾಡದಿದ್ದರೆ ಯಾವುದೇ ರೀತಿಯ ವಿದ್ಯಾರ್ಥಿ ವೇತನದ ಹಣ ಸಿಗುವುದಿಲ್ಲ’ ಎಂಬ ಸಂದೇಶ ಕೂಡ ವಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಹೀಗಾಗಿ, ಸಹಜವಾಗಿಯೇ ಈಗಾಗಲೇ ಅರ್ಹ ಫಲಾನುಭವಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.

ಹಿಂಸಾಚಾರ

‘ಇದು ಏನೂ ಇಲ್ಲ. ಡ್ಯಾನ್ಸ್ ಮಾಡಲು ತಿಳಿಯದವ ನೆಲ ಸರಿ ಇಲ್ಲ ಅಂತಾನಲ್ಲ ಹಾಗೆ ಇದು ಕೂಡ. ಕೇಂದ್ರ ಸರ್ಕಾರಕ್ಕೆ ನಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಮನಸ್ಸಿಲ್ಲ ಅಂತ ಕಾಣುತ್ತೆ. ಅದಕ್ಕಾಗಿ ಇದೆಲ್ಲ ನೆಪವಷ್ಟೇ. ಇವರು ಬೆಟ್ಟ ಅಗೆದು ಇಲಿ ಹುಡುಕಲು ಹೊರಟಿದ್ದಾರೆ’ ಎಂದು ಪೋಷಕರೊಬ್ಬರು ಸರ್ಕಾರದ ಈ ಹೊಸ ಆದೇಶದ ವಿರುದ್ಧ ಆಕ್ರೋಶ ಹೊರಹಾಕಿದರು.

ಸದ್ಯ ಬಯೋ ಮೆಟ್ರಿಕ್ ಅಪ್‌ಡೇಟ್ ಮಾಡಲು ಆಗಸ್ಟ್ 20ಕ್ಕೆ ಕೊನೆಯ ದಿನವೆಂದು ಸರ್ಕಾರ ತಿಳಿಸಿದೆ. ಹೀಗಾಗಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಬಯೋ ಮೆಟ್ರಿಕ್‌ಗಾಗಿ ತರಗತಿ ಬಿಟ್ಟು ‘ಕ್ಯೂ’ನಲ್ಲಿ ನಿಲ್ಲುವಂತಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ : ಕೆ.ಫಣಿರಾಜ್

ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ...

ರಾಯಚೂರು | ಕುರಿಗೆ ನೀರು ಕುಡಿಸಲು ನದಿಗೆ ತೆರಳಿದ್ದ ಬಾಲಕನ್ನು ಹೊತ್ತೊಯ್ದ ಮೊಸಳೆ

ಕೃಷ್ಣ ನದಿಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಬಾಲಕನ ಮೇಲೆ...

ಕೊಪ್ಪಳ | ಬಂಡವಾಳಶಾಹಿಗಳಿಂದ ಭೂಮಿ ಉಳಿಸಬೇಕಿದೆ: ರಾಕೇಶ್ ಟಿಕಾಯತ್

ಉದ್ಯಮಿಗಳಿಗೆ ರೈತರ ಜಮೀನು ಕಡಿಮೆ ದರದಲ್ಲಿ ಖರೀದಿಸಿ ಬಡಜನರ ಹೊಟ್ಟೆಗೆ ಬಟ್ಟೆ...

ಬೆಂಗಳೂರು | ಐಸಿಯುನಲ್ಲಿದ್ದ ರೋಗಿಗೆ ರಕ್ತ ಬರುವ ಹಾಗೆ ಥಳಿಸಿದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ...