ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಎಂದು ಆಗ್ರಹಿಸಿ ಬಾಗಲಕೋಟೆ ಕುರಿ ಸಂಗೋಪನೆ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಕುರಿಗಳ ಸಮೇತ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು. ಪಿಕೆಪಿಎಸ್, ವಿವಿಧ ಸಹಕಾರ ಸಂಘಗಳು ಹಾಗೂ ನೇಕಾರರ ಸಹಕಾರ ಸಂಘಗಳಿಗೆ ನೀಡುತ್ತಿರುವ ಮಾದರಿಯಲ್ಲಿ ಕುರಿ ಸಂಗೋಪನೆ ಸಹಕಾರ ಸಂಘಗಳಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕುರಿಗಾಯಿ ಹೋರಾಟ ಸಮಿತಿ ಯುವ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ಕುರಿ ಸಂಗೋಪನೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಈ ಕ್ಷೇತ್ರವನ್ನು ಅವಲಂಬಿಸಿರುವ ಸಹಕಾರ ಸಂಘಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಪಿಕೆಪಿಎಸ್ ಸೇರಿದಂತೆ ಇತರೆ ಸಹಕಾರ ಸಂಘಗಳಿಗೆ ನೀಡುವ ರೀತಿಯಲ್ಲೇ ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.
ಸೆ.22ರಂದು ನಡೆಯಲಿರುವ ಡಿಸಿಸಿ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕುರಿ ಸಂಗೋಪನೆ ಸಂಘಗಳಿಗೆ ಸಾಲ ನೀಡುವ ಕುರಿತು ನಿರ್ಣಯ ಕೈಗೊಂಡು ಠರಾವು ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಹಕಾರ ಸಂಘಗಳ ಷೇರು ವಂತಿಗೆಯನ್ನು ₹25 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದ್ದು, ಇದರಿಂದ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಈಗಿರುವ ₹10 ಸಾವಿರ ಷೇರು ವಂತಿಗೆಯನ್ನೇ ಮುಂದುವರಿಸಬೇಕು. ಸಂಘಗಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ವಂತಿಗೆ ಹೆಚ್ಚಿಸಿದರೆ ಸಣ್ಣ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ತೊಂದರೆಯಾಗಲಿದೆ ಎಂದು ಅವರು ಹೇಳಿದರು.
ಕುರಿ ಸಾಕಾಣಿಕೆದಾರರ ಬದುಕಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾಲಿಂಗ ಮಾಯಣ್ಣವರ, ಶಿವಲಿಂಗ ನಿಂಗನೂರ, ಈರಣ್ಣ ಹಳೆಗೌಡರ, ಸಂಜೀವ ಹಾಡಕರ, ಮಲ್ಲಪ್ಪ ಸಿಂಗಡಿ, ಮಹೇಶ ಬೆಂಕಿ, ವೀರಣ್ಣ ಹಳೇಗೌಡ, ಡಿ.ಬಿ. ಸಿದ್ದಾಪುರ, ಪರಪ್ಪ ವಗ್ಗ, ಕರೆಪ್ಪ ಬುಜಿಂಗ, ಭೀಮಪ್ಪ ಕೇದಾರಿ, ಮಾಳು ಆಲಕನೂರ, ಮೌಲಾ ಪೆಂಡಾರಿ, ರಮೇಶ ಹಿರಕನ್ನವರ, ಮಣಿಗೆಪ್ಪ ಕುಂಚನೂರ, ಮಹಾಲಿಂಗಪ್ಪ ಮುಧೋಳ, ಬಸವರಾಜ ತೆಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು




