ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ದೂರು ನೀಡಿದ್ದಕ್ಕೆ ಡಿಡಿಪಿಐ ಮಲ್ಲಿಕಾರ್ಜುನ ಅವರು ತಮ್ಮ ಮೇಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಚನ್ನಬಸವ ಅರೋಲಿ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಬಿಸಿಯೂಟ, ಮೊಟ್ಟೆ, ಹಾಲು ಹಾಗೂ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿ ಎರಡು ವರ್ಷ ಕಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಕುರಿತು ಡಿಡಿಪಿಐ ಕಚೇರಿಗೆ ತೆರಳಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಸಂದರ್ಭದಲ್ಲಿ, ತಮ್ಮ ವಿರುದ್ಧವೇ ಆರೋಪಗಳನ್ನು ಮಾಡಿ ಬೆದರಿಕೆ ಹಾಕಲಾಗಿದೆ. ಗ್ರಾಮದ ಶಾಲೆಯ ಹಿತದೃಷ್ಟಿಯಿಂದ ದೂರು ನೀಡಿದ್ದರೂ, ದುರುದ್ದೇಶದಿಂದ ದೂರು ನೀಡುತ್ತಿದ್ದೇನೆ ಎಂದು ಆರೋಪಿಸಿ ಒತ್ತಡ ಹೇರಲಾಗಿದೆ ಎಂದು ಹೇಳಿದರು.
ಪ್ರಕರಣದ ವಿಚಾರಣೆ ವೇಳೆ ಸಂಬಂಧವಿಲ್ಲದ ವ್ಯಕ್ತಿಗಳನ್ನು ಕರೆಸಿ, ತಮ್ಮನ್ನು ಏಕವಚನದಲ್ಲಿ ನಿಂದಿಸಿ ಎಲ್ಲರ ಎದುರು ಅವಮಾನಿಸಲಾಗಿದೆ. ತಾನು ದಲಿತ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ಚನ್ನಬಸವ ಅರೋಲಿ ಆರೋಪಿಸಿದರು.
ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಡಿಡಿಪಿಐ ಮಲ್ಲಿಕಾರ್ಜುನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಮಯಕ್ಕೆ ಬಾರದ ಬಸ್; ಶಾಲಾ ವಿದ್ಯಾರ್ಥಿಗಳ ಪರದಾಟ
ಅಧಿಕಾರಿಗಳು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರೂ, ದಲಿತ ದೂರುದಾರರೊಂದಿಗೆ ಈ ರೀತಿಯ ವರ್ತನೆ ತೋರಿರುವುದು ವಿಷಾದನೀಯ ಎಂದು ಅವರು ಹೇಳಿದರು.




