ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ನೈರ್ಮಲ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಸುರಿದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ಕಾಮಗಾರಿ ವಿಳಂಬ ಹಾಗೂ ನಿರ್ವಹಣೆಯ ನಿರ್ಲಕ್ಷ್ಯದಿಂದಾಗಿ ಶೌಚಾಲಯಗಳು ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ವಿಶೇಷವಾಗಿ ಸಂತೆ, ಬಸ್ ನಿಲ್ದಾಣ ಹಾಗೂ ಧಾರ್ಮಿಕ ಕ್ಷೇತ್ರಗಳಂತಹ ಜನಸಂದಣಿ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಮಾಡುವ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ ಜಾರಿಗೊಳಿಸಿದರೂ ಅದು ನಿರೀಕ್ಷಿತ ಯಶಸ್ಸು ಕಾಣದೆ ನನೆಗುದಿಗೆ ಬೀಳುವಂತಾಗಿದೆ.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ 2023-24ನೇ ಸಾಲಿನ ರಾಜ್ಯ ಬಜೆಟ್ ಘೋಷಣೆಯಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 400 ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಪ್ರತಿ ಹೈಟೆಕ್ ಶೌಚಾಲಯಕ್ಕೆ ₹25 ಲಕ್ಷದಂತೆ ಒಟ್ಟು ₹100 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಯೋಜನೆಗೆ ಹಣ ಮಂಜೂರಾಗಿ 3 ವರ್ಷವಾಗುತ್ತಿದ್ದರೂ ಅರ್ಧದಷ್ಟು ನೈರ್ಮಲ್ಯ ಸಂಕೀರ್ಣ ಘಟಕಗಳು ಪೂರ್ಣಗೊಂಡಿಲ್ಲ. ಶೌಚಾಲಯ ನಿರ್ಮಾಣದ ಉದ್ದೇಶ ಈಡೇರದೆ, ಗ್ರಾಮೀಣ ಭಾಗದ ಜನರು ಇಂದಿಗೂ ಬಯಲು ಶೌಚವನ್ನು ಅವಲಂಬಿಸುವ ಪರಿಸ್ಥಿತಿ ಮುಂದುವರಿದಿದೆ.
ರಾಜ್ಯದ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಿಸುವ ಗುರಿಯೊಂದಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು. ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವೆಂದೂ ಘೋಷಿಸಲಾಗಿತ್ತು. ಆದಾಗ್ಯೂ, ಇಂದಿಗೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಜನರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸುತ್ತಿರುವುದು ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಯ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗುತ್ತಿದೆ.

ಗೃಹ ಶೌಚಾಲಯ ನಿರ್ಮಿಸಲು ಸ್ಥಳಾವಕಾಶವಿಲ್ಲದ ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ, ಆರೋಗ್ಯ ಹಾಗೂ ಪ್ರತ್ಯೇಕ ಶೌಚ ಸೌಲಭ್ಯ ಒದಗಿಸುವುದು ಸಮುದಾಯ ನೈರ್ಮಲ್ಯ ಸಂಕೀರ್ಣಗಳ ಪ್ರಮುಖ ಉದ್ದೇಶ. ಅಧಿಕಾರಿಗಳ ನಿರ್ಲಕ್ಷ್ಯ, ಕಾಮಗಾರಿಗಳ ವಿಳಂಬ, ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಕೊರತೆಯಿಂದಾಗಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದೇ ಇರುವುದು ಆಡಳಿತ ವ್ಯವಸ್ಥೆ ವೈಫಲ್ಯ ಎದ್ದು ಕಾಣುತ್ತಿದೆ.
ಅನುದಾನ ಖರ್ಚಾದರೂ ಕೆಲ ಕಾಮಗಾರಿಗಳು ಪೂರ್ಣಗೊಳ್ಳದಿರುವುದು, ಕೆಲವು ಕಡೆ ಅರ್ಧಕ್ಕೆ ನಿಂತಿರುವುದು ಹಾಗೂ ಪೂರ್ಣಗೊಂಡಿರುವ ಕಟ್ಟಡಗಳೂ ಜನರ ಬಳಕೆಗೆ ಲಭ್ಯವಾಗದಿರುವುದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.
ಯಾವ ಜಿಲ್ಲೆಗೆ ಎಷ್ಟು ಶೌಚಾಲಯಗಳು?
ಕಲ್ಯಾಣ ಕರ್ನಾಟಕ ಭಾಗದ ಬೀದರ್ (60), ಕಲಬುರಗಿ (80), ಬಳ್ಳಾರಿ (50), ರಾಯಚೂರು (60), ಕೊಪ್ಪಳ (50), ಯಾದಗಿರಿ (50) ಹಾಗೂ ವಿಜಯನಗರ (50) ಜಿಲ್ಲೆಗಳಲ್ಲಿ ಒಟ್ಟು 400 ಸಮುದಾಯ ಸಂಕೀರ್ಣ ಘಟಕ ಶೌಚಾಲಯಗಳನ್ನು ಆಯಾ ತಾಲ್ಲೂಕು ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ನಿರ್ಮಿಸುವ ಗುರಿ ಇದೆ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಯೋಜನೆಯ ಅನುದಾನ ದುರ್ಬಳಕೆ ಆಗುತ್ತಿರುವ ಬಗ್ಗೆ ಆರೋಪವೂ ಕೇಳಿ ಬಂದಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 2026ರ ಮೇ ಅಂತ್ಯದ ವೇಳೆಗೆ ಏಳು ಜಿಲ್ಲೆಗಳಲ್ಲಿ ಒಟ್ಟು 400 ಕಾಮಗಾರಿಗಳ ಪೈಕಿ ಕೇವಲ 90 ಮಾತ್ರ ಪೂರ್ಣಗೊಂಡಿದ್ದವು. ಪೂರ್ಣಗೊಂಡ ಕಾಮಗಾರಿಗಳಲ್ಲಿ 54 ಘಟಕಗಳನ್ನು ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಕೆಆರ್‌ಐಡಿಎಲ್ ಇಲಾಖೆ ನೀಡಿದ ವರದಿಯ ಅಂಕಿ-ಅಂಶಗಳು ಹೇಳುತ್ತಿವೆ. ಇನ್ನೊಂದೆಡೆ, 55 ಕಡೆಗಳಲ್ಲಿ ಜಾಗದ ಸಮಸ್ಯೆ ಎದುರಾಗಿದ್ದು, 25 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.
ಬೀದರ್‌ನಲ್ಲಿ ₹11.31 ಕೋಟಿ ಖರ್ಚಾದರೂ 26 ಮಾತ್ರ ಪೂರ್ಣ
ಬೀದರ್ ಜಿಲ್ಲೆಗೆ ಮಂಜೂರಾಗಿರುವ 60 ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳ ಪೈಕಿ 2026ರ ಆಗಸ್ಟ್‌ನಲ್ಲಿ ಲಭ್ಯವಾದ ಜಿಲ್ಲಾ ಕೆಆರ್‌ಐಡಿಎಲ್ ಮಾಹಿತಿಯ ಪ್ರಕಾರ, 26 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 30 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದ 4 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಇನ್ನು ನಿರ್ಮಾಣಗೊಂಡಿರುವ ಶೌಚಾಲಯಗಳು ಜನರ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ, ಜನರಿಗೆ ಅನುಕೂಲ ಇಲ್ಲದೇ ಇರುವುದರಿಂದ ಜನಪಯೋಗವಿಲ್ಲದ ಈ ಯೋಜನೆ ಹಳ್ಳ ಹಿಡಿದಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಬೀದರ್ ಜಿಲ್ಲೆಗೆ ಮಂಜೂರಾಗಿರುವ ಒಟ್ಟು ₹15 ಕೋಟಿ ಅನುದಾನದಲ್ಲಿ 13.20 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ₹11.31 ಕೋಟಿ ಈಗಾಗಲೇ ವೆಚ್ಚವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇಷ್ಟೊಂದು ಮೊತ್ತ ಖರ್ಚಾಗಿದ್ದರೂ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಪೂರ್ಣಗೊಂಡಿರುವ ಕೆಲವು ಘಟಕಗಳನ್ನೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ಹಸ್ತಾಂತರವಾಗಿಲ್ಲ. ಕೆಲವೆಡೆ ನಿರ್ಜನ ಪ್ರದೇಶದಲ್ಲಿ, ಗುಡಿ, ಗುಂಡಾರ ಸುತ್ತಮುತ್ತಲು ಅರೆಬರೆ ನಿರ್ಮಿಸಿ ಬಿಲ್ ಮಂಜೂರು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಅನುಷ್ಠಾನಗೊಳಿಸುತ್ತಿದೆ. ಸಾಮಾನ್ಯವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ವರ್ಷಗಟ್ಟಲೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು? ಅನುದಾನದ ಕೊರತೆಯಿದೆಯೇ ಅಥವಾ ಅನುಷ್ಠಾನ ವ್ಯವಸ್ಥೆಯಲ್ಲೇ ಲೋಪವಿದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಈ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿ ಪರಿಶೀಲನೆ ನಡೆಸದಿರುವುದೇ ಈ ವಿಳಂಬಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಪದ್ಧತಿಯನ್ನು ಸಂಪೂರ್ಣವಾಗಿ ನಿವಾರಿಸಿ, ಗ್ರಾಮಗಳನ್ನು ಸ್ವಚ್ಛವಾಗಿಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವುದು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಮುದಾಯ ನೈರ್ಮಲ್ಯ ಸಂಕೀರ್ಣಗಳ ನಿರ್ಮಾಣದ ಪ್ರತಿ ಘಟಕಕ್ಕೆ ₹25 ಲಕ್ಷದ ಅನುದಾನ ಒದಗಿಸುತ್ತಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಿಂದ ₹2.10 ಲಕ್ಷ ಹಾಗೂ 15ನೇ ಹಣಕಾಸು ಆಯೋಗದ ಅನುದಾನದಿಂದ ₹0.90 ಲಕ್ಷ ಹಾಗೂ 15ನೇ ಹಣಕಾಸು ಯೋಜನೆಯಿಂದ ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಜಿಲ್ಲಾ ಪಂಚಾಯಿತಿಯಿಂದ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ವ್ಯವಸ್ಥೆಯೂ ಇದೆ.
ಶೌಚಾಲಯದ ವಿನ್ಯಾಸ ಹೇಗಿರಬೇಕು?
ಯೋಜನೆಯ ಉದ್ದೇಶದ ಪ್ರಕಾರ, ಒಂದು ಸಮುದಾಯ ನೈರ್ಮಲ್ಯ ಸಂಕೀರ್ಣವನ್ನು ಸುಮಾರು 600 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಬೇಕಾಗಿದೆ. ಕಟ್ಟಡದಲ್ಲಿ ನೀರಿನ ಸಂಪರ್ಕ, ವಿದ್ಯುತ್ ದೀಪಗಳು ಹಾಗೂ ರಾತ್ರಿ ವೇಳೆಯೂ ಬಳಕೆಗೆ ಅನುಕೂಲವಾಗುವ ವ್ಯವಸ್ಥೆ ಇರಬೇಕು. ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿಯೂ ಬಳಕೆಗೆ ಅನುಕೂಲವಾಗಲು ಇನ್ವರ್ಟರ್ ವ್ಯವಸ್ಥೆಯನ್ನೂ ಕಲ್ಪಿಸುವ ಉದ್ದೇಶವಿದೆ.
ಹೈಟೆಕ್ ಶೌಚಾಲಯದಲ್ಲಿ ಒಟ್ಟು 11 ಶೌಚ ಕೋಣೆ, ಅವುಗಳಲ್ಲಿ 10 ಭಾರತೀಯ ಮಾದರಿ ಹಾಗೂ ಒಂದು ಪಾಶ್ಚಾತ್ಯ ಮಾದರಿ ಶೌಚ ವ್ಯವಸ್ಥೆ ಇರಬೇಕು. ಅಂಗವಿಕಲರಿಗೂ ಅನುಕೂಲವಾಗುವ ಸೌಲಭ್ಯ ಕಲ್ಪಿಸುವುದು, ಕೈತೊಳೆಯಲು ವಾಶ್‌ಬೇಸಿನ್ ಅಳವಡಿಸುವುದು ಹಾಗೂ ಕಟ್ಟಡದ ಮುಂಭಾಗದಲ್ಲಿ ಬಟ್ಟೆ ತೊಳೆಯಲು ಎರಡು ಕಟ್ಟೆಗಳನ್ನು ನಿರ್ಮಿಸುವುದು ಯೋಜನೆಯ ಭಾಗವಾಗಿದೆ.
ಸಮುದಾಯ ಶೌಚಾಲಯ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸಿದ ಹಲವು ಕಡೆಗಳಲ್ಲಿ ನೀರಿನ ಸಂಪರ್ಕ, ವಿದ್ಯುತ್, ಟೈಲ್ಸ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳು ನೀಡಿದ ದಾಖಲೆಗಳಲ್ಲಿ ನಮೂದಿಸಿದ್ದರೂ ಸ್ಥಳದಲ್ಲಿ ಅಪೂರ್ಣ ಕಾಮಗಾರಿ ಇರುವುದು ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದಿದೆ. ಇನ್ನೊಂದು ಅಚ್ಚರಿ ಸಂಗತಿ ಎಂದರೆ ₹25 ಲಕ್ಷದ ಅನುದಾನದಲ್ಲಿ ಒಂದು ಸುಸಜ್ಜಿತ ಮನೆ ಕಟ್ಟಬಹುದು. ಆದರೆ ಈ ಮಾಮೂಲಿ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕ ನಿರ್ಮಾಣಕ್ಕೆ ₹25 ಅನುದಾನ ಬೇಕಾ? ನಿಜಕ್ಕೂ ಅಷ್ಟೊಂದು ಖರ್ಚು ಆಗಿದೆಯಾ? ಎಂಬ ಅನುಮಾನ ಕಾಡದೇ ಇರದು.
ಶಿಸ್ತು ಕ್ರಮಕ್ಕೆ ಶಿಫಾರಸು; ವರದಿಯಲ್ಲಿ ಏನಿದೆ?
ಸಮುದಾಯ ನೈರ್ಮಲ್ಯ ಸಂಕೀರ್ಣಗಳ ಕಾಮಗಾರಿಗಳು ಪೂರ್ಣಗೊಳ್ಳದ ಕುರಿತು ‘ಈದಿನ.ಕಾಮ್’ 2026ರ ಜನವರಿ 3ರಂದು ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಜನವರಿ 13ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಂದಿನ ಸಿಇಒ ಗಿರೀಶ ಬದೋಲೆ ಅವರು ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.
ನಂತರ ಜಿಲ್ಲಾ ಪಂಚಾಯಿತಿ ಸಿಇಒ ಅವರು 2026ರ ಫೆಬ್ರವರಿ 16ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.ಕೆಆರ್‌ಐಡಿಎಲ್ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ, ಉದಾಸೀನತೆ ಮತ್ತು ನಿಷ್ಕಾಳಜಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಇಒ ಅವರು ಶಿಫಾರಸು ಮಾಡಿದ್ದರು.
ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ನಮೂದಿಸಿದ್ದರೂ, ಸ್ಥಳ ಪರಿಶೀಲನೆಯಲ್ಲಿ ಹಲವು ಕಾಮಗಾರಿಗಳು ಅಪೂರ್ಣವಾಗಿರುವುದು ಹಾಗೂ ಕೆಲವು ಕಟ್ಟಡಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯಿರುವುದು ಕಂಡುಬಂದಿದೆ ಎಂದು ಸಿಇಒ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕಾಮಗಾರಿಗಳ ಪ್ರಗತಿ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದಿರುವುದು ಮತ್ತು ವಾಸ್ತವಾಂಶಗಳನ್ನು ಮರೆಮಾಚಿರುವ ಪೂರ್ಣ ಅಂಶಗಳನ್ನು ಅಂದಿನ ಸಿಇಒ ಗಿರೀಶ ಬದೋಲೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಶಿಫಾರಸ್ಸು ಪತ್ರ ಸಲ್ಲಿಕೆಯಾದ ಬಳಿಕ KRIDL ಇಲಾಖೆಯ ಮುಖ್ಯ ಅಧಿಕಾರಿಯೊಬ್ಬರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿರುವುದನ್ನು ಹೊರತುಪಡಿಸಿ, ಶಿಫಾರಸಿನ ಮೇರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ಕಾಮಗಾರಿಗಳೂ ಪೂರ್ಣಗೊಳಿಸಿ ಜನರ ಬಳಕೆಗೂ ಲಭ್ಯವಾಗಿಲ್ಲ. ಹೀಗಾಗಿ, ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸುವುದು ಮತ್ತು ಯೋಜನೆಯ ಪ್ರಗತಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.

“ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಸಮುದಾಯ ನೈರ್ಮಲ್ಯ ಸಂಕೀರ್ಣಗಳ ಕಾಮಗಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಪೂರ್ಣಗೊಂಡಿಲ್ಲ. ಈ ಯೋಜನೆಗೆ ನಿಗದಿಪಡಿಸಿರುವ ₹100 ಕೋಟಿ ಅನುದಾನದ ಬಳಕೆ ಮತ್ತು ಕಾಮಗಾರಿಗಳ ಅನುಷ್ಠಾನದ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಲಾಗಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಪ್ರೇಮನಾಥ ಗಾಂವಕಾರ್ ಆಗ್ರಹಿಸಿದ್ದಾರೆ.
ಸಮುದಾಯ ನೈರ್ಮಲ್ಯ ಸಂಕೀರ್ಣಗಳ ನಿರ್ಮಾಣದ ಮುಖ್ಯ ಉದ್ದೇಶ ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ ಶೌಚ ಸೌಲಭ್ಯ ಒದಗಿಸುವುದು. ಆದರೆ, ಕೋಟ್ಯಂತರ ರೂಪಾಯಿ ಅನುದಾನ ಬಳಕೆಯಾದರೂ ಶೌಚಾಲಯಗಳು ಪೂರ್ಣಗೊಳ್ಳದೆ ಅಥವಾ ಬಳಕೆಗೆ ಬಾರದೆ ಉಳಿದರೆ ಯೋಜನೆಯ ಮೂಲ ಆಶಯವೇ ವಿಫಲವಾದಂತೆ ಅಲ್ಲವೇ? ಕಾಮಗಾರಿಗೆ ಅಗತ್ಯ ಅನುದಾನ ಇದ್ದರೂ ಇಂತಹ ವಿಳಂಬ ನೀತಿ ಯಾಕೆ? ಯೋಜನೆಗಳು ಈ ರೀತಿ ಅನುಷ್ಠಾನಗೊಂಡರೆ ಬಯಲು ಬಹಿರ್ದೆಸೆ ಮುಕ್ತವಾಗಲು ಸಾಧ್ಯವೇ ಎಂಬುದು ಪ್ರಜ್ಞಾವಂತರ ಪ್ರಶ್ನೆ.
ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಿಲ್ಲಾವಾರು ಕಾಮಗಾರಿಗಳ ಸ್ಥಿತಿಯನ್ನು ಸ್ಥಳ ಪರಿಶೀಲನೆಯ ಮೂಲಕ ದೃಢಪಡಿಸುವುದು, ವೆಚ್ಚದ ಲೆಕ್ಕಪರಿಶೋಧನೆ ನಡೆಸುವುದು, ಅಪೂರ್ಣ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಹಾಗೂ ಪೂರ್ಣಗೊಂಡ ಘಟಕಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಅನುದಾನದ ಬಳಕೆ, ಕಾಮಗಾರಿಗಳ ಗುಣಮಟ್ಟ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ಸರ್ಕಾರ ಪಾರದರ್ಶಕ ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರ ಹಣ ಪೋಲಾಗದಂತೆ ತಡೆಯಬಹುದು.
ಈ ಬಗ್ಗೆ ಮಾಹಿತಿಗಾಗಿ ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠಲರಾವ್ ಅವರಿಗೆ ʼಈದಿನʼ ಸಂಪರ್ಕಿಸಿತು, ಅವರು ಕರೆ ಸ್ವೀಕರಿಸಲಿಲ್ಲ.
ಇದನ್ನೂ ಓದಿ : SIR | ಬೀದರ್ ಜಿಲ್ಲಾದ್ಯಂತ ಮತದಾರರ ಹೆಸರು ತೆಗೆಸಲು 6,101 ಫಾರಂ-7 ಅರ್ಜಿ ಸಲ್ಲಿಕೆ!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




