ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ ಹಾಗೂ ಮಾದಕ ವ್ಯಸನಗಳಂತಹ ದುಶ್ಚಟಗಳನ್ನು ತೊರೆದು ಆರೋಗ್ಯಕರ, ನೆಮ್ಮದಿಯ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಕರೆ ನೀಡಿದರು.
ಶನಿವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ (ಬೆಂಗಳೂರು), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶ್ರೀ ವಿಜಯಮಹಾಂತ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪೂಜ್ಯ ಮಹಾಂತ ಅಪ್ಪನವರು ಸಾರಿದ ಮಾನವೀಯ ಸಂದೇಶವನ್ನು ಸ್ಮರಿಸಿದ ಅವರು, “ನಮಗೆ ನಿಮ್ಮ ಆಸ್ತಿ-ಪಾಸ್ತಿ ಅಥವಾ ಹಣ ಬೇಡ, ನಿಮ್ಮಲ್ಲಿರುವ ದುಷ್ಟಚಟಗಳನ್ನು ನಮಗೆ ನೀಡಿ; ನೀವು ಸುಖಮಯ ಜೀವನ ನಡೆಸಿ” ಎಂಬ ಶ್ರೀಗಳ ಸಂದೇಶ ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿದೆ. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಸಮಾಜದಲ್ಲಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ವ್ಯಸನಮುಕ್ತ ಸಮಾಜದ ರಾಯಭಾರಿಗಳಾಗಬೇಕು” ಕರೆ ನೀಡಿದರು.
“ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲ, ಕುಟುಂಬದ ನೆಮ್ಮದಿ ಹಾಳಾಗಿ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಹಾಗೂ ಅಪರಾಧ ಕೃತ್ಯಗಳು ಸಾರ್ವಜನಿಕರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, “ಸಮಾಜದಲ್ಲಿ ಹೆಚ್ಚುತ್ತಿರುವ ದುಶ್ಚಟಗಳನ್ನು ತಡೆಗಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದುಶ್ಚಟಗಳಿಂದ ಬಳಲುತ್ತಿರುವವರಿಗೆ ಯುವಕರು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಸುಸಂಸ್ಕೃತ ಹಾಗೂ ಆರ್ಥಿಕವಾಗಿ ಸಬಲ ನಾಗರಿಕರಾಗಿ ಬೆಳೆಯಬೇಕು” ಎಂದು ಸಲಹೆ ನೀಡಿದರು.
ಸರ್ಕಾರವು ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಟ್ಟಡಗಳ 100 ಮೀಟರ್ ವ್ಯಾಪ್ತಿಯನ್ನು ತಂಬಾಕು ಮತ್ತು ಮಾದಕ ವಸ್ತುಗಳ ಮಾರಾಟ ನಿಷೇಧಿತ ಪ್ರದೇಶಗಳೆಂದು ಘೋಷಿಸಿದ್ದು, ಈ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಹೇಳಿದರು. ವ್ಯಸನಪೀಡಿತರನ್ನು ವ್ಯಸನದಿಂದ ಮುಕ್ತಗೊಳಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಸಾಹಿತಿ ಹಾಗೂ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಮಾಣಿಕ ನೇಳಗೆ ಉಪನ್ಯಾಸ ನೀಡಿ, “ಗೌತಮ ಬುದ್ಧ ಹಾಗೂ ಜಗಜ್ಯೋತಿ ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದಂತೆ, ಆಧುನಿಕ ಕಾಲದಲ್ಲಿ ಸಮಾಜದಲ್ಲಿದ್ದ ದುಶ್ಚಟಗಳನ್ನು ನಿರ್ಮೂಲನೆ ಮಾಡಲು ಡಾ.ಮಹಾಂತ ಅಪ್ಪನವರು ಅಪಾರ ಸೇವೆ ಸಲ್ಲಿಸಿದ್ದಾರೆ” ಎಂದು ಹೇಳಿದರು.
1972ರ ಭೀಕರ ಬರಗಾಲದ ಸಂದರ್ಭದಲ್ಲಿ ಇಳಕಲ್ ಮಠದ ವತಿಯಿಂದ ಉಚಿತ ಗಂಜಿ ಕೇಂದ್ರಗಳನ್ನು ಆರಂಭಿಸಿ ಸಾವಿರಾರು ಜನರಿಗೆ ಆಸರೆಯಾಗಿದ್ದ ಅವರ ಮಾನವೀಯ ಸೇವೆಯನ್ನು ಸ್ಮರಿಸಿದರು. ಹುನಗುಂದದಲ್ಲಿ ಮದ್ಯಪಾನದಿಂದ ಭಕ್ತನೊಬ್ಬ ಮೃತಪಟ್ಟ ಘಟನೆಯ ನಂತರ ಆರಂಭಿಸಿದ “ಮಹಾಂತ ಜೋಳಿಗೆ” ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಜನರಿಂದ ಮದ್ಯಪಾನ, ಗುಟ್ಕಾ ಸೇರಿದಂತೆ ವಿವಿಧ ದುಶ್ಚಟಗಳನ್ನು ಬಿಡಿಸುವಂತೆ ಪ್ರಮಾಣ ಮಾಡಿಸಿದ ಕಾರ್ಯವನ್ನು ಅವರು ವಿವರಿಸಿದರು.
ಇದನ್ನೂ ಓದಿ : ಬೀದರ್ | ಕರ್ತವ್ಯ ಲೋಪ: ಡಿ.ದೇವರಾಜ ಅರಸು ನಿಗಮ ಅಧಿಕಾರಿ ಅಮಾನತು
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೋಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.




