ಕರ್ತವ್ಯ ಲೋಪ ಆರೋಪದ ಮೇಲೆ ಬೀದರ್‌ನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ರಮೇಶ್ ಹೆಗ್ಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಎ.ಯಾದವ್ ಅವರ ದೂರಿನ ವಿಚಾರಣೆ ನಡೆಸಿದ ವೇಳೆ, ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಯಾದ ಭಾಲ್ಕಿ ವಿಧಾನಸಭಾ ಕ್ಷೇತ್ರದ ಫಲಾನುಭವಿಯ ಕೊಳವೆಬಾವಿಯನ್ನು ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕೊರೆಸಿರುವುದು ಹಾಗೂ ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ನಿಗಮದ ಸಾಲ ಸೌಲಭ್ಯ ಒದಗಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಎ. ಯಾದವ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಭಾಲ್ಕಿ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಾಯಕ ಅಭಿವೃದ್ಧಿ ಅಧಿಕಾರಿ ರಮೇಶ್ ಹಗ್ಗಿ ಅವರು ಎಸಗಿದ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಕೂಡ ಸಲ್ಲಿಸಿದ್ದರು.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾಗಿದ್ದ ಅರುಣಾ ಅನುರಾಜ್ ಅವರ ಕೊಳವೆಬಾವಿಯನ್ನು ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕೊರೆಸಿದ್ದು, 2022-23ನೇ ಸಾಲಿನ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಒಂದೇ ಕುಟುಂಬದ ಮೂವರಾದ ಪ್ರೇಮಲಾ ಬಸವರಾಜ ಕುಂಬಾರ, ಬಸವರಾಜ ವೀರಭದ್ರಪ್ಪ ಕುಂಬಾರ ಹಾಗೂ ಶ್ವೇತಾ ಬಸವರಾಜ ಕುಂಬಾರ ಅವರಿಗೆ ಸಾಲ ಮಂಜೂರು ಮಾಡಿ, ರಮೇಶ್ ಹೆಗ್ಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿದ್ದರು.
ಇದನ್ನೂ ಓದಿ : ಬಸವಕಲ್ಯಾಣ| ಪತ್ರಕರ್ತರಿಗೆ ಸಾಮಾಜಿಕ ಕಾಳಜಿ ಮುಖ್ಯ : ರಶ್ಮಿ ಎಸ್.
ತಮ್ಮ ದೂರಿನ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆದಿದೆ. ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ರಮೇಶ್ ಹೆಗ್ಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಎ.ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




