ಉಡುಪಿ ನಗರದ ಲಯನ್ಸ್ ಸರ್ಕಲ್ ಸಮೀಪ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಮಂಜುನಾಥ್ ಕೊಳ (ಲಕ್ಷ್ಮೀ ಮಲ್ಪೆ ಕೊಳ) ಅವರು ಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ ಸುಮಾರು 1.15ರ ವೇಳೆಗೆ ಉಡುಪಿ-ಕಿನ್ನಿಮುಲ್ಕಿ ಸಾರ್ವಜನಿಕ ರಸ್ತೆಯ ಲಯನ್ಸ್ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯತ್ತ ಸಂಚರಿಸುತ್ತಿದ್ದ ಖಾಸಗಿ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಲಕ್ಷ್ಮೀ ಅವರು ರಸ್ತೆಗೆ ಬಿದ್ದಿದ್ದು, ಬಸ್‌ನ ಹಿಂಭಾಗದ ಎಡ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಅವರನ್ನು ತಕ್ಷಣವೇ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮಧ್ಯಾಹ್ನ 1.46ಕ್ಕೆ ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ಸಂಬಂಧ ಬಸ್ ಚಾಲಕ ರವೀಂದ್ರ ವಿರುದ್ಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 106(1)ರ ಅನ್ವಯ ಪ್ರಕರಣ ದಾಖಲಾಗಿದೆ. ಅಪಘಾತದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ನೆರವಾದರು. ಈ ಕಾರ್ಯದಲ್ಲಿ ಮಹಮ್ಮದ್ ಸಲೀಂ ಅಸಾದಿ ಸಹ ಸಹಕರಿಸಿ ಮಾನವೀಯತೆ ಮೆರೆದರು. ಘಟನಾ ಸ್ಥಳಕ್ಕೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಉಪನಿರೀಕ್ಷಕ ಮಹೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಾನೂನು ಪ್ರಕ್ರಿಯೆ ಕೈಗೊಂಡರು.
ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಲಯನ್ಸ್ ಸರ್ಕಲ್‌ನಲ್ಲಿ ನಡೆದ ಈ ದುರಂತ ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪಾದಚಾರಿಗಳು ರಸ್ತೆ ದಾಟುವಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಷ್ಟು ಮುಖ್ಯವೋ, ವಾಹನ ಚಾಲಕರು ಜನನಿಬಿಡ ಪ್ರದೇಶಗಳಲ್ಲಿ ವೇಗವನ್ನು ನಿಯಂತ್ರಿಸಿಕೊಂಡು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅಷ್ಟೇ ಅಗತ್ಯವಾಗಿದೆ.
ಅಪಘಾತಗಳನ್ನು ತಡೆಯಲು ಪಾದಚಾರಿ ದಾಟು ಮಾರ್ಗಗಳ ಸಮರ್ಪಕ ಬಳಕೆ, ಚಾಲಕರಿಂದ ವೇಗ ನಿಯಂತ್ರಣ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ. ಕ್ಷಣಮಾತ್ರದ ಅಜಾಗರೂಕತೆ ಅಮೂಲ್ಯ ಜೀವವನ್ನು ಕಸಿದುಕೊಳ್ಳಬಹುದು ಎಂಬುದನ್ನು ಈ ದುರಂತ ಮತ್ತೊಮ್ಮೆ ನೆನಪಿಸಿದೆ.

ಲಕ್ಷ್ಮೀ ಮಂಜುನಾಥ್ ನಿಧನಕ್ಕೆ ರಾಜಕೀಯ ವಲಯದ ಸಂತಾಪ; ವಿಜಯೇಂದ್ರ ಸೇರಿ ಹಲವು ಗಣ್ಯರಿಂದ ಶ್ರದ್ಧಾಂಜಲಿ
ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಉಡುಪಿ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮೀ ಮಂಜುನಾಥ್ ಅವರ ನಿಧನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂತಾಪ ಸಂದೇಶದಲ್ಲಿ, ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಜನಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಲಕ್ಷ್ಮೀ ಮಂಜುನಾಥ್ ಅವರ ಅಗಲುವಿಕೆ ಪಕ್ಷಕ್ಕೆ ಮಾತ್ರವಲ್ಲ, ಉಡುಪಿಯ ಜನರಿಗೂ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು, ಧಾರ್ಮಿಕ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಲಕ್ಷ್ಮೀ ಮಂಜುನಾಥ್ ಅವರು ಬಿಜೆಪಿ ಮಹಿಳಾ ಮೋರ್ಚಾದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಅಗಲುವಿಕೆ ಪಕ್ಷಕ್ಕೂ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಪತಿ ಬಿಜೆಪಿ ಮುಖಂಡ ಮಂಜುನಾಥ್ ಕೊಳ, ಪುತ್ರರು ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿ. ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಜನಪ್ರತಿನಿಧಿಗಳು ಲಕ್ಷ್ಮೀ ಮಂಜುನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು, ಕೊಳ ವಾರ್ಡಿನ ಸದಸ್ಯೆ ಹಾಗೂ ಮಾಜಿ ಉಪಾಧ್ಯಕ್ಷೆಯಾಗಿದ್ದ ಲಕ್ಷ್ಮೀ ಮಂಜುನಾಥ್ ಅವರ ರಸ್ತೆ ಅಪಘಾತದ ನಿಧನದ ಸುದ್ದಿ ಅತ್ಯಂತ ಬೇಸರ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಅವರೂ ಸಂತಾಪ ಸೂಚಿಸಿ, ಲಕ್ಷ್ಮೀ ಮಂಜುನಾಥ್ ಅವರ ಅಕಾಲಿಕ ಅಗಲುವಿಕೆ ದುಃಖದ ಸಂಗತಿಯಾಗಿದ್ದು, ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.






