ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನವೆಂಬರ್ 14 ಮತ್ತು 15ರಂದು ನಗರದಲ್ಲಿ ನಡೆಯಲಿರುವ ಬೀದರ್ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರಲು ಉದ್ದೇಶಿಸಿರುವ ಸ್ಮರಣ ಸಂಚಿಕೆಗೆ ಜಿಲ್ಲೆಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕದ ಕಿರೀಟಪ್ರಾಯವಾಗಿರುವ ಬೀದರ್ ಜಿಲ್ಲೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ. ಬಸವಾದಿ ಶರಣರ ಸಮಾನತೆ, ಸಹೋದರತ್ವ ಮತ್ತು ಭಾತೃತ್ವದ ಆಶಯಗಳು, ವಚನ ಸಾಹಿತ್ಯದ ಪರಂಪರೆ, ಜಗತ್ಪ್ರಸಿದ್ಧ ಬಿದರಿ ಕಲೆ ಹಾಗೂ ವಿವಿಧ ಅರಸು ಮನೆತನಗಳ ಆಡಳಿತದ ಇತಿಹಾಸ ಜಿಲ್ಲೆಯ ವೈಶಿಷ್ಟ್ಯಗಳಾಗಿವೆ. ವಿವಿಧ ಜಾತಿ, ಭಾಷೆಗಳ ಜನರು ಸೌಹಾರ್ದತೆಯಿಂದ ಬದುಕುತ್ತಿರುವುದು ಈ ನೆಲದ ಭಾವೈಕ್ಯತೆಯ ಪ್ರತೀಕವಾಗಿದೆ.
ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೀಗ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಜ್ಜಾಗಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಬಸವರಾಜ ಬಲ್ಲೂರ ವಹಿಸಲಿದ್ದು, ನವೆಂಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ನಗರದ ರಂಗಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಸಮ್ಮೇಳನದ ಸಾಂಸ್ಕೃತಿಕ ದಾಖಲೆಯಾಗಿ ಸ್ಮರಣ ಸಂಚಿಕೆ ಪ್ರಕಟಿಸಲು ನಿರ್ಧರಿಸಲಾಗಿದ್ದು, ಆಸಕ್ತ ಸಾಹಿತಿಗಳು, ವಿದ್ವಾಂಸರು ಹಾಗೂ ಲೇಖಕರು ಬೀದರ್ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಗರಿಷ್ಠ ಮೂರು ಪುಟಗಳ ಮಿತಿಯಲ್ಲಿ ಲೇಖನಗಳನ್ನು ಕಳುಹಿಸಬಹುದು.
ನುಡಿ ಅಥವಾ ಯುನಿಕೋಡ್‌ನಲ್ಲಿ ಟೈಪ್ ಮಾಡಿದ ಲೇಖನಗಳನ್ನು ನವೆಂಬರ್ 4ರೊಳಗಾಗಿ [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಮೊದಲು ಸ್ವೀಕೃತವಾದ ಲೇಖನಗಳಿಗೆ ಆದ್ಯತೆ ನೀಡಲಾಗುವುದು. ಲೇಖನಗಳ ಆಯ್ಕೆಗೆ ಸಂಬಂಧಿಸಿದಂತೆ ಸಂಪಾದಕ ಮಂಡಳಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ 9980398744, 9242422127 ಹಾಗೂ 9900759567 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಸ್ಮರಣ ಸಂಚಿಕೆಯ ಸಂಪಾದಕರಾದ ಡಾ. ಈಶ್ವರಯ್ಯ ಕೊಡಂಬಲ್, ಶಿವಕುಮಾರ ಕಟ್ಟೆ, ದೇವೇಂದ್ರ ಕರಂಜೆ ಹಾಗೂ ಜಗನ್ನಾಥ ಕಮಲಾಪುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೀದರ್ ಜಿಲ್ಲೆಯ ಇಬ್ಬರು ಕಲಾ ಸಾಧಕರಿಗೆ ರಾಜೋತ್ಸವ ಪ್ರಶಸ್ತಿ




