ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಕ್ನೋದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಚುನಾವಣಾ ಸಮರವನ್ನು “ವಿಕಾಸ ಮತ್ತು ವಿನಾಶ” ಹಾಗೂ “ರಾಷ್ಟ್ರವಾದ ಮತ್ತು ಜಾತಿವಾದ” ನಡುವಿನ ಹೋರಾಟ ಎಂದ ಬಿಜೆಪಿ, ರಾಮಮಂದಿರ ನಿರ್ಮಾಣದ ವಿಚಾರವನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಏನಿದು ಏಕರೂಪ ನಾಗರಿಕ ಸಂಹಿತೆ (UCC)?
ಎಂದರೆ ದೇಶದ ಎಲ್ಲ ಧರ್ಮಗಳ ಜನರಿಗೆ ವೈಯಕ್ತಿಕ ಮತ್ತು ಕೌಟುಂಬಿಕ ವಿಚಾರಗಳಲ್ಲಿ ಒಂದೇ ರೀತಿಯ ಕಾನೂನು ಅನ್ವಯಿಸುವ ವ್ಯವಸ್ಥೆ. ಸದ್ಯ ಭಾರತದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕು, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂತಹ ಕೆಲವು ವೈಯಕ್ತಿಕ ವಿಚಾರಗಳಿಗೆ ಧರ್ಮಾಧಾರಿತ ಪ್ರತ್ಯೇಕ ಕಾನೂನುಗಳಿವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳ ಜನರಿಗೆ ಬೇರೆಬೇರೆ ವೈಯಕ್ತಿಕ ಕಾನೂನುಗಳು ಅನ್ವಯಿಸುತ್ತವೆ. ಆದರೆ UCC ಜಾರಿಯಾದರೆ ಈ ವೈಯಕ್ತಿಕ ವಿಚಾರಗಳಲ್ಲಿ ಧರ್ಮದ ಆಧಾರದ ಮೇಲೆ ಬೇರೆಬೇರೆ ನಿಯಮಗಳ ಬದಲಿಗೆ ಎಲ್ಲರಿಗೂ ಅನ್ವಯಿಸುವ ಸಾಮಾನ್ಯ ಕಾನೂನು ಜಾರಿಗೆ ಬರುತ್ತದೆ. ಹೀಗಾಗಿಯೇ ಈ ಸಂಹಿತೆ ಜಾರಿಗೆ ತರುವುದು ಬಿಜೆಪಿಯ ಬಹುಕಾಲದ ಚುನಾವಣಾ ಭರವಸೆ ಮತ್ತು ಅಜೆಂಡಾಗಳಲ್ಲೊಂದು.
ಆದರೆ, ಈ ಯುಸಿಸಿ ಕುರಿತು ದೇಶಾದ್ಯಂತ ನಾಗರಿಕರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಿವಿಧ ಧಾರ್ಮಿಕ-ಸಾಮಾಜಿಕ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿ ಹೋರಾಟಗಳನ್ನು ನಡೆಸುತ್ತಿವೆ. ಭಾರತವು ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಸಮ್ಮಿಲನವಾಗಿದೆ. ಏಕರೂಪ ಕಾನೂನು ತರುವುದರಿಂದ ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯಗಳು ಮತ್ತು ಪ್ರಾದೇಶಿಕ ಸಂಸ್ಕೃತಿಗಳ ಆಚರಣೆಗಳಿಗೆ ಧಕ್ಕೆಯಾಗಬಹುದು ಎಂಬ ಭಯ ನಾಗರಿಕರಲ್ಲಿದೆ. ಭಾರತ ಸಂವಿಧಾನದ ವಿಧಿ 25 ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಯುಸಿಸಿಯಿಂದ ಈ ಧಾರ್ಮಿಕ ಹಕ್ಕುಗಳ ಮೇಲೆ ಹಸ್ತಕ್ಷೇಪವಾಗುತ್ತದೆ ಎಂಬುದು ನಾಗರಿಕ ಸಂಘಟನೆಗಳ ಆತಂಕ. ಅದೇ ರೀತಿ ವಿಚ್ಛೇದನ ಅಥವಾ ಆಸ್ತಿ ಹಕ್ಕುಗಳಂತಹ ವಿಷಯಗಳಲ್ಲಿ ಸುಧಾರಣೆಗಳು ಆಯಾ ಧರ್ಮಗಳ ಒಳಗಿನಿಂದಲೇ ಬರಬೇಕೇ ಹೊರತು, ಮೇಲಿಂದ ಹೇರಲ್ಪಡಬಾರದು ಎಂಬುದು ಅನೇಕ ಮಾನವ ಹಕ್ಕುಗಳ ಹೋರಾಟಗಾರರ ಅಭಿಪ್ರಾಯ.
ಇದನ್ನೂ ಓದಿ: UCC ಜಾರಿಗೆ ಸಕಾಲ ಎಂದ ಸುಪ್ರೀಂ; ಬಾಣಲೆಯಿಂದ ಬೆಂಕಿಗೆ ಮುಸ್ಲಿಂ ಮಹಿಳೆಯರ ಹಕ್ಕುಗಳು?
ಮತ್ತೊಂದೆಡೆ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರವು ಯುಸಿಸಿಯಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂಬ ಬಲವಾದ ಟೀಕೆಗಳು ಕೇಳಿಬರುತ್ತಿವೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದಿರುವುದು ಮತ್ತು ರಾಮಮಂದಿರ ಲೂಟಿಯಂತಹ ಸಮಸ್ಯೆಗಳಿಂದ ಯುವಜನತೆ ಹಾಗೂ ಸಾಮಾನ್ಯ ನಾಗರಿಕರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಸಮಾಜವಾದಿ ಪಾರ್ಟಿ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಜನವಿರೋಧಿ ನೀತಿಗಳನ್ನು ಮತ್ತು ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಈ ಸಾರ್ವಜನಿಕ ಆಕ್ರೋಶವೇ ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.




