ನಗರಗಳ ಬೆಳವಣಿಗೆಯೇ ಗ್ರಾಮೀಣಾಭಿವೃದ್ಧಿಗೆ ಶಕ್ತಿ: ಸಿಎಂ ಡಿ ಕೆ ಶಿವಕುಮಾರ್

Date:

“ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಗ್ರಾಮೀಣ ಬದುಕು ಸಮೃದ್ಧವಾಗಬೇಕು. ಇದೇ ನಮ್ಮ ಅಭಿವೃದ್ಧಿಯ ಚಿಂತನೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.

- Advertisement -

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ರ ವರದಿ ಬಿಡುಗಡೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ನಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಒಂದು ದಿನ ಇರಬಹುದು, ಒಂದು ವರ್ಷ ಅಥವಾ ಐದು ವರ್ಷ ಇರಬಹುದು. ಜನರು ಎಷ್ಟು ದಿನ ಆಶೀರ್ವಾದ ಮಾಡುತ್ತಾರೆ ಎಂಬುದು ಬೇರೆ ವಿಚಾರ. ಆದರೆ, ನಾವು ಮುಂದಿನ ಪೀಳಿಗೆಗಾಗಿ ಹಾಕಿಕೊಡುವ ಅಭಿವೃದ್ಧಿಯ ಅಡಿಪಾಯ ಶಾಶ್ವತವಾಗಿರಬೇಕು. ಮನೆ ನಿರ್ಮಿಸುವ ಮುನ್ನ ಮಾಸ್ಟರ್ಪ್ಲಾನ್ ಸಿದ್ಧಪಡಿಸುವಂತೆ, ಕರ್ನಾಟಕವನ್ನು ಕಟ್ಟಲು ದೂರದೃಷ್ಟಿಯ ಯೋಜನೆ ಅಗತ್ಯ” ಎಂದು ಹೇಳಿದರು.

ಸಮೃದ್ಧ ಕರ್ನಾಟಕ, ಉದ್ಯಮ ಕರ್ನಾಟಕ, ಸಂಚಾರಿ ಕರ್ನಾಟಕ ಹಾಗೂ ಪ್ರತಿಭಾ ಕರ್ನಾಟಕದ ಆಶಯದೊಂದಿಗೆ ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಅಭಿವೃದ್ಧಿ ಅವಕಾಶ ಕಲ್ಪಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಏಳು ಪ್ರಮುಖ ಆದ್ಯತೆಗಳನ್ನು ಆಧರಿಸಿ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗುತ್ತಿದೆ” ಎಂದರು.

ನಗರಗಳ ಆರ್ಥಿಕ ಶಕ್ತಿ ಹಳ್ಳಿಗಳಿಗೂ ನೆರವು

“ನಾನು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಅದಕ್ಕೂ ಮೊದಲು ಬಂಗಾರಪ್ಪ ಅವರ ಕಾಲದಲ್ಲಿಯೇ ಸಚಿವನಾಗಿದ್ದೆ. ಆಗ ನನಗಿದ್ದ ಅನುಭವಕ್ಕೂ ಈಗಿನ ದೀರ್ಘ ರಾಜಕೀಯ ಅನುಭವದ ನಂತರ ಮೂಡಿರುವ ಚಿಂತನೆಗೂ ವ್ಯತ್ಯಾಸವಿದೆ. ನಗರಗಳು ಬಲಿಷ್ಠವಾಗಿದ್ದರೆ ಮಾತ್ರ ಗ್ರಾಮೀಣ ಪ್ರದೇಶಗಳನ್ನು ಬಲಪಡಿಸಲು ಸಾಧ್ಯ ಎಂಬುದನ್ನು ಅನುಭವದಿಂದ ಅರಿತಿದ್ದೇನೆ” ಎಂದು ತಿಳಿಸಿದರು.

“ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳಲ್ಲಿಯೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ನಗರಗಳಿಂದ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಜನರ ಬದುಕಿನ ಸುಧಾರಣೆಗೂ ಬಳಸುವಂತಾಗಬೇಕು. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ, ಪಟ್ಟಣಗಳು ಬೆಳೆದರೆ ಹಳ್ಳಿಗಳ ಬದುಕು ಸುಧಾರಿಸುತ್ತದೆ ಎಂಬ ದೃಢ ನಂಬಿಕೆ ನನ್ನದು” ಎಂದು ಹೇಳಿದರು.

2047ರ ಕರ್ನಾಟಕಕ್ಕೆ ದೂರದೃಷ್ಟಿಯ ನೀಲನಕ್ಷೆ

“ಅಭಿವೃದ್ಧಿಯನ್ನು ಕೇವಲ ಆರ್ಥಿಕ ಅಂಕಿ-ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ. ಜನರಿಗೆ ಉದ್ಯೋಗ, ಉತ್ತಮ ರಸ್ತೆ, ಗುಣಮಟ್ಟದ ಆಸ್ಪತ್ರೆ, ಶಿಕ್ಷಣ ಮತ್ತು ಸಮೃದ್ಧ ಬದುಕು ದೊರೆಯಬೇಕು. ಇಡೀ ಕರ್ನಾಟಕ ಸಮಗ್ರವಾಗಿ ಬೆಳೆಯಬೇಕು. ಇದೇ ನಮ್ಮ ಗುರಿ” ಎಂದು ತಿಳಿಸಿದರು.

“2047ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದನ್ನು ಈಗಲೇ ಕಲ್ಪಿಸಿಕೊಂಡು ಅದಕ್ಕೆ ಅಗತ್ಯವಾದ ಮಾರ್ಗಸೂಚಿ ಸಿದ್ಧಪಡಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ನಗರಗಳು, ಉತ್ತಮ ರಸ್ತೆಗಳು ಮತ್ತು ಉತ್ತಮ ಜೀವನಮಟ್ಟ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಯೋಜನೆ ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಯೋಜನೆಯ ಸಿದ್ಧತೆಯಲ್ಲಿ ಸಹಕಾರ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ ಅವರು, ಕಡಿಮೆ ಅವಧಿಯಲ್ಲಿ ಯೋಜನೆಯನ್ನು ಈ ಹಂತಕ್ಕೆ ತಂದಿರುವುದು ಸಂತಸ ತಂದಿದೆ” ಎಂದರು.

ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆ ನಿರೀಕ್ಷೆ

“ರಾಜ್ಯದ ಜನಸಂಖ್ಯೆ ಪ್ರಸ್ತುತ ಸುಮಾರು 6.9 ಕೋಟಿ ಇದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ರಾಜ್ಯದ ಜನಸಂಖ್ಯೆಯಲ್ಲಿ ಶೇ.46ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿದೆ. ಈ ಬದಲಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಗರಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಸಮಗ್ರ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗಿದೆ” ಎಂದು ವಿವರಿಸಿದರು.

“ನಗರೀಕರಣ ಎಂದರೆ ಕೇವಲ ಬೆಂಗಳೂರು ಅಥವಾ ನಗರಗಳ ಅಭಿವೃದ್ಧಿಯಲ್ಲ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಯೋಜಿತ ಬೆಳವಣಿಗೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ವಿಸ್ತರಣೆ ಹಾಗೂ ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಆರ್ಥಿಕ ಸಂಪರ್ಕ ಬಲಪಡಿಸುವುದು ಇದರ ಉದ್ದೇಶವಾಗಿದೆ” ಎಂದು ಹೇಳಿದರು.

“ಉತ್ತಮ ಶಿಕ್ಷಣ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿ ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಬರುತ್ತಿದ್ದಾರೆ. ಆದರೆ, ಎಲ್ಲ ನಗರಗಳಲ್ಲೂ ಉದ್ಯೋಗಾವಕಾಶ ಮತ್ತು ಮೂಲಸೌಕರ್ಯ ಸಮರ್ಪಕವಾಗಿ ವಿಸ್ತರಣೆಯಾಗದಿದ್ದರೆ ಸಂಚಾರ ದಟ್ಟಣೆ, ವಸತಿ ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ. ಹೀಗಾಗಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳನ್ನೂ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಯೋಜಿತವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೆಚ್ಚುತ್ತಿರುವುದಕ್ಕೆ ಶಿಕ್ಷಣ ಮತ್ತು ಉದ್ಯೋಗವೇ ಪ್ರಮುಖ ಕಾರಣಗಳಾಗಿವೆ. ನಾನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದವನು. ನಮ್ಮ ತಂದೆ-ತಾಯಿ ನನಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿಗೆ ಕರೆತಂದು ಸೇರಿಸಿದರು. ಚುನಾವಣೆ ಸಂದರ್ಭ ಹೊರತುಪಡಿಸಿ ವರ್ಷಕ್ಕೆ ಮೂರು-ನಾಲ್ಕು ದಿನವೂ ಹಳ್ಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಮಕ್ಕಳಿಗಾಗಲಿ, ಪತ್ನಿಗಾಗಲಿ ಹಳ್ಳಿಯ ಬದುಕು ಹೇಗಿರುತ್ತದೆ ಎಂಬುದೇ ಗೊತ್ತಿಲ್ಲ. ಇದು ನನ್ನೊಬ್ಬನ ಪರಿಸ್ಥಿತಿಯಲ್ಲ, ಬಹುತೇಕ ಕುಟುಂಬಗಳ ಸ್ಥಿತಿಯೂ ಇದೇ ಆಗಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.

“ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಕಾರಣಕ್ಕೆ ಬಡ ಕುಟುಂಬಗಳೂ ನಗರಗಳತ್ತ ಮುಖ ಮಾಡುತ್ತಿವೆ. ಮನೆ, ಆಸ್ತಿ ಸೇರಿದಂತೆ ಇತರ ಅಗತ್ಯಗಳಿಗಿಂತ ಮಕ್ಕಳಿಗೆ ಒಳ್ಳೆಯ ಶಾಲೆ, ಉತ್ತಮ ಶಿಕ್ಷಣ ಕೊಡಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ಬಟ್ಟೆ, ಶೂ ಕೊಡಿಸಿ ಒಳ್ಳೆಯ ಶಾಲೆಗೆ ಕಳುಹಿಸಬೇಕು ಎಂಬುದು ಅವರ ಆಸೆಯಾಗಿರುತ್ತದೆ. ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುವ ಚಾಲಕರು ಸೇರಿದಂತೆ ಸಾಮಾನ್ಯ ಕಾರ್ಮಿಕರಲ್ಲೂ ಇದೇ ಕನಸಿದೆ” ಎಂದು ಹೇಳಿದರು.

ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕು

“ಹಳ್ಳಿಗಳಿಂದ ಜನರು ನಗರಗಳಿಗೆ ಬರುವುದು ಮುಖ್ಯವಾಗಿ ಎರಡು ಕಾರಣಕ್ಕೆ. ಒಂದು ಶಿಕ್ಷಣ, ಮತ್ತೊಂದು ಉದ್ಯೋಗ. ಎಲ್ಲರೂ ಬೆಂಗಳೂರಿಗೆ ಬಂದರೆ ನಗರದ ಜನಸಂಖ್ಯೆ ಹೆಚ್ಚುತ್ತದೆ. ಅದರೊಂದಿಗೆ ಸಮಸ್ಯೆಗಳೂ ಹೆಚ್ಚುತ್ತವೆ. ಹೀಗಾಗಿ ಜನರು ತಮ್ಮ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಿಸಬೇಕು” ಎಂದು ಹೇಳಿದರು.

“ಬೆಂಗಳೂರು ಸುತ್ತಮುತ್ತಲಿನ ಕೋಲಾರ, ತುಮಕೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಜನರೂ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಕೆಲವು ಪ್ರದೇಶಗಳ ಜನಸಂಖ್ಯೆಯ ಗಮನಾರ್ಹ ಭಾಗ ನಗರಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ ಪ್ರಾದೇಶಿಕ ಮಟ್ಟದಲ್ಲಿಯೇ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ” ಎಂದರು.

70 ಲಕ್ಷದಿಂದ 1.40 ಕೋಟಿಗೆ ಜನಸಂಖ್ಯೆ

“ನಾನು ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ ಸುಮಾರು 70 ಲಕ್ಷ ಇತ್ತು. ಆಗ ನಗರದ ವ್ಯಾಪ್ತಿ ಹೆಬ್ಬಾಳ ಫ್ಲೈಓವರ್, ರಾಜರಾಜೇಶ್ವರಿ ನಗರ ಸೇರಿದಂತೆ ಸೀಮಿತ ಪ್ರದೇಶಗಳವರೆಗೆ ಇತ್ತು. ಈಗ ನಗರ ವ್ಯಾಪ್ತಿ ವಿಸ್ತರಿಸಿದ್ದು, ಜನಸಂಖ್ಯೆ ಸುಮಾರು 1.40 ಕೋಟಿಗೆ ಏರಿಕೆಯಾಗಿದೆ. ವಾಹನಗಳ ಸಂಖ್ಯೆಯೂ ಸುಮಾರು 1.35 ಕೋಟಿಯಷ್ಟಾಗಿದೆ” ಎಂದು ವಿವರಿಸಿದರು.

“ಬೆಂಗಳೂರಿನ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗಿದ್ದರೂ ಅದಕ್ಕೆ ತಕ್ಕಂತೆ ರಸ್ತೆ ಸೇರಿದಂತೆ ಮೂಲಸೌಕರ್ಯ ವಿಸ್ತರಣೆಯಾಗಿಲ್ಲ. ಇಡೀ ರಾಜ್ಯದ ಲೆಕ್ಕದಲ್ಲಿ ರಸ್ತೆ ಪ್ರಮಾಣ ಶೇ.8ರಷ್ಟಿದೆ. ಸಾಮಾನ್ಯವಾಗಿ ಶೇ.18ರಷ್ಟು ರಸ್ತೆ ಪ್ರಮಾಣ ಇರಬೇಕೆಂಬ ಹೋಲಿಕೆಯನ್ನು ಗಮನದಲ್ಲಿಟ್ಟುಕೊಂಡರೆ ಮೂಲಸೌಕರ್ಯ ವಿಸ್ತರಣೆಯ ಅಗತ್ಯ ಎಷ್ಟಿದೆ ಎಂಬುದು ತಿಳಿಯುತ್ತದೆ” ಎಂದರು.

ಬೆಂಗಳೂರು ಗಳಿಸಿದ ಸಂಪನ್ಮೂಲ ಗ್ರಾಮೀಣಾಭಿವೃದ್ಧಿಗೂ ಬಳಕೆ

“ಬೆಂಗಳೂರು ಇಡೀ ರಾಜ್ಯದ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳು ರಾಜ್ಯಕ್ಕೆ ಹೆಚ್ಚಿನ ಆದಾಯ ತರುತ್ತಿವೆ. ಆದಾಯ ತೆರಿಗೆ, ಜಿಎಸ್‌ಟಿ ಸೇರಿದಂತೆ ವಿವಿಧ ಮೂಲಗಳಿಂದ ನಗರ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಬಳಸಬೇಕಿದೆ” ಎಂದು ಹೇಳಿದರು.

“ಬೆಂಗಳೂರು ಮತ್ತು ನಗರ ಪ್ರದೇಶಗಳು ಆರ್ಥಿಕವಾಗಿ ಬೆಳೆಯುವುದರಿಂದ ಇಡೀ ರಾಜ್ಯಕ್ಕೆ ಅನುಕೂಲವಾಗಬೇಕು. ನಗರಗಳ ಮೂಲಕ ಬರುವ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಬೇಕಾಗುತ್ತದೆ. ನಗರ ಪ್ರದೇಶದ ಜನರು ತಾವು ತೆರಿಗೆ ಕಟ್ಟುತ್ತಿದ್ದೇವೆ, ನಮಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಂದು ಕೇಳುವುದು ಸಹಜ. ಐಟಿ, ಬಿಟಿ ಸೇರಿದಂತೆ ವಿವಿಧ ಉದ್ಯಮಗಳ ಅಗತ್ಯಗಳನ್ನೂ ಗಮನದಲ್ಲಿಟ್ಟುಕೊಂಡು ಸಮತೋಲಿತ ಅಭಿವೃದ್ಧಿ ಸಾಧಿಸಬೇಕು” ಎಂದರು.

12 ಸಾವಿರ ಮೆಗಾವಾಟ್ ವಿದ್ಯುತ್ ಸಾಮರ್ಥ್ಯ ಸೇರ್ಪಡೆ

“ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಸವಾಲುಗಳಿದ್ದವು. ಈ ಖಾತೆ ವಹಿಸಿಕೊಂಡು ಕೆಟ್ಟ ಹೆಸರು ತಂದುಕೊಳ್ಳುತ್ತೀಯಾ ಎಂದು ಹಲವರು ಎಚ್ಚರಿಸಿದ್ದರು. ಆದರೆ, ಸವಾಲನ್ನು ಸ್ವೀಕರಿಸಿ ಏನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಜವಾಬ್ದಾರಿ ತೆಗೆದುಕೊಂಡೆ. ಆಗ ಸುಮಾರು 12 ಸಾವಿರ ಮೆಗಾವಾಟ್ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು” ಎಂದು ಹೇಳಿದರು.

“ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಪಾವಗಡದಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ಗುತ್ತಿಗೆ ಮಾದರಿಯಲ್ಲಿ ಪಡೆದು ಬೃಹತ್ ಸೋಲಾರ್ ಪಾರ್ಕ್ ನಿರ್ಮಿಸಲಾಯಿತು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜಮೀನಿನ ಮೇಲಿನ ಮಾಲೀಕತ್ವವನ್ನು ಉಳಿಸಿಕೊಂಡೇ ಯೋಜನೆ ಅನುಷ್ಠಾನಗೊಳಿಸಲಾಯಿತು” ಎಂದು ವಿವರಿಸಿದರು.

“ಪಾವಗಡದ ರೈತರು ತಮ್ಮ ಜಮೀನನ್ನು ಕಳೆದುಕೊಂಡಿಲ್ಲ. ಜಮೀನು ಅವರ ಬಳಿಯೇ ಇದೆ. ಸರಕಾರಕ್ಕೆ ವಿದ್ಯುತ್ ದೊರೆಯುತ್ತಿದೆ, ರೈತರಿಗೂ ಗುತ್ತಿಗೆ ಆದಾಯ ಸಿಗುತ್ತಿದೆ. ಇದರಿಂದ ರೈತರಿಗೂ ಅನುಕೂಲವಾಗಿದೆ” ಎಂದರು.

ಪ್ರತಿ ವರ್ಷ ಶೇ.10-12ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಳ

“ಕರ್ನಾಟಕದಲ್ಲಿ ಪ್ರತಿ ವರ್ಷ ವಿದ್ಯುತ್ ಬೇಡಿಕೆ ಶೇ.10ರಿಂದ 12ರಷ್ಟು ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಪ್ರತಿ ಯೂನಿಟ್‌ಗೆ 30 ರೂ. ಹಾಗೂ ಕೇರಳದಲ್ಲಿ 24 ರೂ. ದರದಲ್ಲಿ ವಿದ್ಯುತ್ ಖರೀದಿಸಿರುವುದನ್ನು ಉಲ್ಲೇಖಿಸಿದ ಅವರು, ಗರಿಷ್ಠ ಬೇಡಿಕೆಯ ಸಂದರ್ಭದಲ್ಲಿ ವಿದ್ಯುತ್ ಲಭ್ಯತೆ ಮತ್ತು ಖರೀದಿ ವೆಚ್ಚದ ಸವಾಲುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದರು.

“ಅಧಿಕಾರಿಗಳಿಗೆ ಸರಕಾರ ನೀಡಿರುವ ಅಧಿಕಾರ ಮತ್ತು ಜವಾಬ್ದಾರಿ ಕೇವಲ ಉದ್ಯೋಗವಲ್ಲ, ಸಮಾಜಕ್ಕೆ ಕೊಡುಗೆ ನೀಡುವ ಅವಕಾಶ. ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು, ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರ ಕೈಗೊಳ್ಳಬೇಕು. ಜನರು ಸಮಸ್ಯೆ ಹೊತ್ತು ನಿಮ್ಮ ಬಳಿಗೆ ಬಂದಾಗ, ದೇವಸ್ಥಾನಕ್ಕೆ ಹೋಗಿ ನೆಮ್ಮದಿ ಪಡೆದು ಹೊರಬಂದ ಅನುಭವದಂತೆ ಪರಿಹಾರ ಕಂಡುಕೊಂಡು ಸಂತೋಷದಿಂದ ಹಿಂದಿರುಗುವ ವಾತಾವರಣ ನಿರ್ಮಿಸಬೇಕು” ಎಂದು ಅಧಿಕಾರಿಗಳಿಗೆ ಕರೆ ನೀಡಿದರು.

“ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ಕೊಡುತ್ತಾನೆ. ನಿಮಗೆ ಸರಕಾರಿ ನೌಕರಿ, ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಅವಕಾಶದಲ್ಲಿ ದೇಶಕ್ಕೆ, ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಪ್ರಜ್ಞೆ ಇರಲಿ. ನಿಮ್ಮ ಆತ್ಮಸಾಕ್ಷಿ ಒಪ್ಪುವ ಮತ್ತು ಸಮಾಜ ಒಪ್ಪುವ ನಿರ್ಧಾರಗಳನ್ನು ಕೈಗೊಳ್ಳಿ” ಎಂದು ಸಲಹೆ ನೀಡಿದರು.

ಜನರು ನಿಮ್ಮ ಬಳಿಗೆ ಬರುವುದು ಸಮಸ್ಯೆ ಪರಿಹಾರಕ್ಕಾಗಿ

“ಸರಕಾರಿ ಕೆಲಸ ದೇವರ ಕೆಲಸ ಎಂಬ ತತ್ವವನ್ನು ಪ್ರತಿಯೊಬ್ಬ ಅಧಿಕಾರಿಯೂ ಪಾಲಿಸಬೇಕು. ಜನರು ಅಧಿಕಾರಿಗಳ ಬಳಿ ಬರುವುದು ಸಮಸ್ಯೆಗಳಿದ್ದಾಗ ಮಾತ್ರ. 30-35 ವರ್ಷಗಳ ಸೇವಾವಧಿಯಲ್ಲಿ ಸಾವಿರಾರು ಜನರಿಗೆ ನೆರವಾಗುವ ಅವಕಾಶ ಅಧಿಕಾರಿಗಳಿಗಿದೆ. ದೇವಸ್ಥಾನಕ್ಕೆ ಹೋಗುವ ಭಕ್ತರು ಆರೋಗ್ಯ, ಉದ್ಯೋಗ, ನೆಮ್ಮದಿ ಕೇಳುವಂತೆ, ಸರಕಾರಿ ಕಚೇರಿಗೆ ಬರುವ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸುತ್ತಾರೆ” ಎಂದರು.

“ನಿಮ್ಮ ಬಳಿ ಬಂದ ವ್ಯಕ್ತಿಯ ಪರಿಸ್ಥಿತಿಯಲ್ಲಿ ನೀವೇ ಇದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಯೋಚಿಸಿ ತೀರ್ಮಾನ ಕೈಗೊಳ್ಳಿ. ನಿಮ್ಮಿಂದ ಹೊರಗೆ ಹೋದಾಗ ಆ ವ್ಯಕ್ತಿಗೆ ನೆಮ್ಮದಿ ಸಿಗಬೇಕು. ರಾಜಕಾರಣಿಗಳು ಸಾವಿರ ಮಾತುಗಳನ್ನು ಆಡಬಹುದು. ಆದರೆ ಜನರು ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ” ಎಂದರು.

ನಗರವಾರು ಕೈಗಾರಿಕೆ, ಉದ್ಯೋಗಕ್ಕೆ ಆದ್ಯತೆ

“ಪ್ರತಿಯೊಂದು ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಬೆಳೆಸುವ ಉದ್ದೇಶವಿದೆ. ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಆಧಾರಿತ ಉಕ್ಕು ಉದ್ಯಮಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆ ಸೇರಿದಂತೆ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ” ಎಂದು ವಿವರಿಸಿದರು.

“ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ಸುಮಾರು 300 ಕಿ.ಮೀ. ಉದ್ದದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕರಾವಳಿ ನಿಯಂತ್ರಣ ವಲಯ (ಸಿಆರ್ಝೆಡ್) ನಿಯಮಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಈ ವಿಚಾರದಲ್ಲಿ ಕೆಲವು ಸಡಿಲಿಕೆಗಳಿಗೂ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ” ಎಂದರು.

ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ

“ಕರ್ನಾಟಕದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹಣ್ಣು, ತರಕಾರಿ, ಹೂವು ಸೇರಿದಂತೆ ಹಲವು ಉತ್ಪನ್ನಗಳು ವಿಮಾನ ನಿಲ್ದಾಣದ ಮೂಲಕ ರಫ್ತಾಗುತ್ತಿವೆ. ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯ ಜತೆಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತಿಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು” ಎಂದು ಹೇಳಿದರು.

“ರೇಷ್ಮೆ ಉದ್ಯಮದ ಸಾಮರ್ಥ್ಯವನ್ನು ವಿವರಿಸಿದ ಅವರು, ಮೈಸೂರು ರೇಷ್ಮೆಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಗುಣಮಟ್ಟದ ರೇಷ್ಮೆ ಉತ್ಪನ್ನಗಳನ್ನು ಖರೀದಿಸಲು ಜನರು ಕಾಯುವ ಪರಿಸ್ಥಿತಿಯಿದೆ. ಚೀನಾದಿಂದ ರೇಷ್ಮೆ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಲೆಯಲ್ಲಿಯೂ ಏರಿಕೆಯಾಗಿದೆ. ರಾಮನಗರ, ಚನ್ನಪಟ್ಟಣ, ಕೊಳ್ಳೇಗಾಲ, ಕೋಲಾರ ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲಿಯೂ ರೇಷ್ಮೆ ಕೃಷಿ ವಿಸ್ತರಣೆಯಾಗುತ್ತಿದೆ” ಎಂದರು.

“ಕೃಷಿ, ತೋಟಗಾರಿಕೆ, ಹತ್ತಿ, ಮೆಣಸಿನಕಾಯಿ, ಮಸಾಲೆ ಪದಾರ್ಥ, ಕಾಫಿ ಸೇರಿದಂತೆ ಎಲ್ಲ ಉತ್ಪನ್ನಗಳಿಗೂ ಜಾಗತಿಕ ಮಾರುಕಟ್ಟೆ ಕಲ್ಪಿಸಬೇಕು. ಇದಕ್ಕೆ ಸೂಕ್ತ ಸಂಗ್ರಹಣೆ, ಸಂಸ್ಕರಣೆ, ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು ಅಗತ್ಯ” ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳ: ನವೆಂಬರ್ 1ರಿಂದಲೇ ಜಾರಿ

ರಾಜ್ಯದ ಹಾಲು ಗ್ರಾಹಕರಿಗೆ ರಾಜ್ಯ ಸರ್ಕಾರವು ಬೆಲೆ ಏರಿಕೆಯ ಹೊರ ಹೇರಿದೆ....

ಹಾಸನ | ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಹಾಸನಾಂಬ ಉತ್ಸವ 

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ...

ಹಾಸನ | ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭ 

ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ...

ಕಬ್ಬಿಗೆ ಬೆಂಬಲ ಬೆಲೆ: ಬೆಂಗಳೂರಿನಲ್ಲಿ ಕೇಂದ್ರ ತಜ್ಞರ ಸಮಿತಿಗೆ ಕಬ್ಬು ಬೆಳೆಗಾರರ ಅಹವಾಲು

ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ...