ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿಯ ಸಾಲಾಪೂರ ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಮದುರ್ಗ ವತಿಯಿಂದ ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ ಗುರ್ಲಾಪೂರದಲ್ಲಿ ಕಬ್ಬು ಬೆಳೆಗಾರರ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಶಶಿಕಾಂತ ಗುರೂಜಿ ಅವರು 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. ಈ ಗಡುವಿನೊಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ದೇಸಾಯಿ, ತಾಲೂಕು ಅಧ್ಯಕ್ಷ ಸುರೇಶ ಗುಂಜೇರಿ, ಕಾರ್ಯದರ್ಶಿ ಈರಣ್ಣ ರಾಜನಾಳ, ಗೌರವಾಧ್ಯಕ್ಷ ಮಾದೇವ ತೆವಟ್ಟಗಿ, ರಮೇಶ ಗುಡಿಯನ್ನವರ, ಪ್ರಭು ವರ್ಚಗಲ್ಲ, ಲಕ್ಷ್ಮಣ ಸುರಪೂರ, ಹನುಮಂತ ಟುಬಾಕಿ, ರಮೇಶ ಸಂಗನ್ನವರ, ನಿಂಗನಗೌಡ ಪಾಟೀಲ, ದುಂಡನೆಯ ನಂದಿ, ವೆಂಕಟೇಶ ಕೆಂಚರಡ್ಡಿ ಸೇರಿದಂತೆ ರೈತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.



