ಬೀದರ್ ಜಿಲ್ಲೆಯ ಚಿಂತಾಕಿಯಲ್ಲಿ 46 ಡಿಗ್ರಿ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ವರದಿಯಾದ ಪ್ರದೇಶ ಇದಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ ಎಸ್ ದಿವಾಕರ ತಿಳಿಸಿದ್ದಾರೆ.
“ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಬೆಂಗಳೂರು ನಗರದಲ್ಲಿ 38 ಡಿಗ್ರಿ ಉಷ್ಣಾಂಶ ವರದಿಯಾಗಿದೆ. ಗರಿಷ್ಠ ಉಷ್ಣತೆಯ ತೀವ್ರತೆಯ ಕುರಿತ ಆತಂಕಕ್ಕಿಂತ ಎಷ್ಟು ಹೊತ್ತಿನವರೆಗೂ ಈ ಉಷ್ಣಾಂಶ ಹೀಗೆಯೇ ಮುಂದುವರೆಯಲಿದೆ ಎಂಬ ಅಂಶ ಕಳವಳಕ್ಕೆ ಕಾರಣವಾಗಿದೆ” ಎಂದಿದ್ದಾರೆ.
“ಬೀದರ್ ಹಾಗೂ ರಾಯಚೂರಿನಲ್ಲಿ ಮಧ್ಯಾಹ್ನ 2.15ರ ಸುಮಾರಿಗೆ ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬರುತ್ತದೆ. ಕೆಲಹೊತ್ತಿನ ಬಳಿಕ ಉಷ್ಣಾಂಶದಲ್ಲಿ ಇಳಿಕೆಯಾಗುತ್ತದೆ. ಆದರೀಗ ಈ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಇನ್ನೂ ಕೆಲ ಪ್ರದೇಶಗಳಲ್ಲಿ 7 ಗಂಟೆಯವರೆಗೂ ತಾಪದ ತೀವ್ರತೆಯಲ್ಲಿ ಇಳಿಕೆಯಾಗದಿರುವುದು ಆತಂಕದ ವಿಷಯ” ಎಂದು ದಿವಾಕರ್ ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ? ಬಿಸಿಲಿನ ತಾಪಕ್ಕೆ ಮನರೇಗಾ ಕಾರ್ಮಿಕರ ಸಾವು: ಕೆಲಸದ ಸಮಯ ಪರಿಷ್ಕರಣೆ ಕೂಲಿ ಕಾರ್ಮಿಕರಿಗೆ ಅನ್ವಯಿಸುವುದಿಲ್ಲವೇ?
“ಕನಿಷ್ಟ ಉಷ್ಣಾಂಶವನ್ನು ಗರಿಷ್ಠ ಉಷ್ಣಾಂಶ ಪ್ರಭಾವಿಸುತ್ತದೆ. ರಾತ್ರಿ ವೇಳೆಯಲ್ಲಿ ದಾಖಲಾಗುವ ತಾಪಮಾನದಲ್ಲಿ ಗರಿಷ್ಠ ಉಷ್ಣಾಂಶದ ಪಾತ್ರ ನಿರ್ಣಾಯಕ. ಬೆಂಗಳೂರಿನಲ್ಲಿ ಕಳೆದ 29 ದಿನಗಳಿಂದ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಷ ದಾಖಲಾಗಿದೆ. ರಾತ್ರಿ ಹೊತ್ತಿನಲ್ಲೂ ತಾಪಮಾನ ಇಳಿಕೆಯಾಗದಿರುವುದು ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ” ಎಂದಿದ್ದಾರೆ.




