ಬೀದರ್ ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ ಆಮ್ ಆದ್ಮಿ ಪಕ್ಷದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದ್ದು, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಫುಲಾರಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳು ರಚಿಸಲಾಗಿದ್ದು, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಕೈಗೊಂಡಿರುವ ಸಾಧನೆಗಳನ್ನು ಜನರ ಮುಂದಿಡುವ ಕೆಲಸ ಮಾಡಲಾಗುವುದು” ಎಂದರು.
ಪಡಿತರ ಚೀಟಿಗೆ ಇ-ಕೆವೈಸಿ ಜೋಡಣೆ ಪ್ರಕ್ರಿಯೆಗೆ ಸರ್ಕಾರ ಕೊನೆಯ ದಿನಾಂಕ ಸೆ.30 ವರೆಗೆ ವಿಧಿಸಿದೆ. ಆದರೆ ಇ-ಕೆವೈಸಿಗೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಕೆಲವೆಡೆ ಇಂಟರ್ನೆಟ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜನರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರಕ್ರಿಯೆಯಿಂದ ಜನರು ದೈನಂದಿನ ಕೆಲಸ ಕಾರ್ಯಗಳು ಬಿಟ್ಟು ತೀವ್ರ ತೊಂದರೆಯಾಗುತ್ತಿದೆ. ಹೀಗಾಗೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ನೀಡಿರುವ ಕೊನೆಯ ದಿನಾಂಕ ಸರ್ಕಾರ ಕೂಡಲೇ ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕಕ್ಕೆ ನೂತನ ರಾಜ್ಯ ಉಪಾಧ್ಯಕ್ಷರಾಗಿ ನೇಮಕರಾದ ಸೈಯದ್ ಜಮೀಲ್ ಖಾದ್ರಿ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಸರ್ಕಾರ ಕೇವಲ ಉಚಿತ ಪಡಿತರ ಅಕ್ಕಿ ನೀಡುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ, ಬದಲಿಗೆ ಪ್ರತಿಯೊಬ್ಬರಿಗೂ ಗುಣಮಟ್ಟದ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗುವಂತೆ ಅಗತ್ಯ ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯದಲ್ಲಿ ಬರದ ಛಾಯೆ ಆವರಿಸಿ ಸೋಯಾಬೀನ್, ತೊಗರಿ, ಉದ್ದು, ಹೆಸರು ಸೇರಿದಂತೆ ಇತರೆ ಬೆಳೆ ಹಾನಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಖಾಸಗಿ ಶಾಲೆಗಳಲ್ಲಿ ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿಯಾಗದೆ ಸ್ಥಳೀಯ ಯುವಕರು ನಿರುದ್ಯೋಗದಿಂದ ತತ್ತರಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಪ್ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಪಾಟೀಲ ಮಾತನಾಡಿ, “ರಾಜ್ಯದಲ್ಲಿ ಗುಣಮಟ್ಟದ ಉಚಿತ ಶಿಕ್ಷಣ, ಆರೋಗ್ಯ ಸೇರಿದಂತೆ ಜನೋಪಯೋಗಿ ಅಭಿವೃದ್ಧಿಗಾಗಿ ಆಪ್ ಕೆಲಸ ಮಾಡಲಿದೆ. ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣಕ್ಕಾಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಫಲಿತಾಂಶ ಸುಧಾರಣೆಗೆ ಕೈಜೋಡಿಸಲಾಗುವುದು. ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕಕ್ಕೆ ಜಿಲ್ಲೆಯವರಾದ ಸೈಯದ್ ಜಮೀಲ್ ಖಾದ್ರಿ ನೇಮಕದಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಬಂದಂತಾಗಿದೆ” ಎಂದರು.
ಇದನ್ನೂ ಓದಿ : ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಡಿ ಜಾವಿದ್, ನಗರ ಘಟಕದ ಅಧ್ಯಕ್ಷ ರಾಜಶೇಖರ.ಜಿ, ಯುವ ಘಟಕದ ಜಿಲ್ಲಾಧ್ಯಕ್ಷ ವೆಂಕಟೇಶ, ಪಕ್ಷದ ಪದಾಧಿಕಾರಿಗಳಾದ ಸುಕುಮಾರ ಚಿಲ್ಲರ್ಗೆ, ವಿಠಲ ತುಕಾರಾಮ, ಡಿ.ಕೆ.ಯೋಹನ, ಬಸವರಾಜ ಸ್ವಾಮಿ, ಕಂಟೆಪ್ಪ ಗುಪ್ತಾ ಮತ್ತಿತರರಿದ್ದರು.
ಇದನ್ನೂ ಓದಿ : ಶೇಖ್ ಹಸೀನಾ ಪಕ್ಷದ 7 ನಾಯಕರಿಗೆ ಮರಣದಂಡನೆ




