ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಮಾಜಿ ಪೀಠಾಧಿಪತಿ ವಚನಾನಂದ ಶ್ರೀ ವಿರುದ್ಧ ಬಾಲಕನ ಮೇಲಿನ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಬಾಲಕನ ತಾಯಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತೀಚೆಗೆ ಟ್ರಸ್ಟಿಗಳಿಂದ ಉಚ್ಛಾಟನೆಗೊಂಡಿದ್ದ ವಚನಾನಂದ ಶ್ರೀಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ.
ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ‘0’ ಎಫ್‌ಐಆರ್ ಅನ್ನು ಘಟನೆ ನಡೆದ ಸ್ಥಳದ ವ್ಯಾಪ್ತಿಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಪೊಲೀಸರು ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಸಂತ್ರಸ್ತ ಬಾಲಕನ ಹೇಳಿಕೆಯನ್ನೂ ಪಡೆಯಲು ಮುಂದಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾಹಿತಿ ನೀಡಿದ್ದು, “ಪ್ರಕರಣವನ್ನು ಕೃತ್ಯ ನಡೆದ ವ್ಯಾಪ್ತಿಯ ಹರಿಹರ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಈಗಾಗಲೇ ಆರಂಭವಾಗಿದೆ” ಎಂದು ತಿಳಿಸಿದ್ದಾರೆ. ಪೀಠದಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಆರೋಪದಡಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಇತ್ತೀಚೆಗೆ ವಚನಾನಂದ ಶ್ರೀಯನ್ನು ಪೀಠಾಧಿಪತಿ ಸ್ಥಾನದಿಂದ ಪದಚ್ಯುತಿಗೊಳಿಸಿತ್ತು. ಮತ್ತೊಂದೆಡೆ, ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಿಬಿಐ ತನಿಖೆಗೆ ವಹಿಸಿ: ಎಸ್‌ಎಫ್‌ಐ ಆಗ್ರಹ
ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಗುರುಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.





