ನಗರದ ಪ್ರತಿಷ್ಠಿತ ಮಾರುಕಟ್ಟೆ ಪ್ರದೇಶದಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಜಾಲವೊಂದು ಪತ್ತೆಯಾಗಿದ್ದು,ಪ್ರಮುಖ ಬ್ರ್ಯಾಂಡ್‌ನ ಹೆಸರಿನಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಬೆಂಗಳೂರಿನ ಅನ್ವೇಷ್ ಐಪಿಆರ್ ಸರ್ವಿಸಸ್ ಸಂಸ್ಥೆಯ ಡೆಪ್ಯುಟಿ ಮ್ಯಾನೇಜರ್ ಆಗಿರುವ ಶ್ರೀನಿವಾಸ ಎಸ್.ಅವರು ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.ಚಿಂತಾಮಣಿಯ ಎಂ.ಜಿ.ರಸ್ತೆಯಲ್ಲಿರುವ ಕುಮಾರ್ ಟ್ರೇಡರ್ಸ್ಎಂಬ ಮಳಿಗೆಯಲ್ಲಿ ಐಟಿಸಿ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಸ್ಥೆಯು ಪರಿಶೀಲನೆ ನಡೆಸಿತ್ತು.
ಪರಿಶೀಲನೆಯ ವೇಳೆ ಸದರಿ ಮಳಿಗೆಯಲ್ಲಿ ನಕಲಿ ಸಿಗರೇಟ್ ಉತ್ಪನ್ನಗಳನ್ನು ದಾಸ್ತಾನು ಮಾಡಿರುವುದು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.ಈ ಕೃತ್ಯವು ಕಂಪನಿಯ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದ್ದು, ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವಂಚಿಸುವ ಯತ್ನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ..? ಕೋಲಾರ | ಸಮಾಜ ಕಲ್ಯಾಣ ಇಲಾಖೆ ಜೆಡಿ ಶ್ರೀನಿವಾಸನ್ ನಿಯೋಜನೆ ರದ್ದುಗೊಳಿಸಲು ದಲಿತ ಸಂಘಟನೆಗಳಿಂದ ಎಂಎಲ್ಸಿಗೆ ಮನವಿ
ಈ ಅಕ್ರಮ ಚಟುವಟಿಕೆಯಿಂದಾಗಿ ಅಸಲಿ ಕಂಪನಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತಿದೆ.ಗ್ರಾಹಕರು ಸಹ ಮೋಸಹೋಗುತ್ತಿದ್ದಾರೆ.ಆದ್ದರಿಂದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು,ನಕಲಿ ಮಾಲುಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಎಂದು ಶ್ರೀನಿವಾಸ ಎಸ್. ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.




