ವೈದ್ಯಕೀಯ ಕಾಲೇಜು ಸೀಟು ಆಯ್ಕೆ ಪ್ರಕ್ರಿಯೆಯ ನೀಟ್ ಯುಜಿ 2026 ರ ಬೃಹತ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 03 ಮೇ 2026ರ ನೀಟ್ (NEET) ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ದಾವಣಗೆರೆ ಜಿಲ್ಲಾ ಘಟಕದ ಕಾರ್ಯಕರ್ತರು ಮಾನ್ಯ ರಾಜ್ಯಪಾಲರಿಗೆ ದಾವಣಗೆರೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಸಂಘಟನೆ ಮುಖಂಡರು “ಭಾರತ ವಿದ್ಯಾರ್ಥಿ ಫೆಡರೇಷನ್(SFI) ದಾವಣಗೆರೆ ಜಿಲ್ಲಾ ಸಂಚಲನ ಸಮಿತಿಯು ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲು ಕಾರಣವಾದ ನೀಟ್ ಯುಜಿ 2026 ಪರೀಕ್ಷೆಯ ಪ್ರಮುಖ ಪ್ರಶ್ನೆಪತ್ರಿಕೆಯು ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಸೋರಿಕೆಯಾಗಿದ್ದು, ಇದು ಕೇಂದ್ರ ಸರ್ಕಾರ ಮತ್ತು ಪರೀಕ್ಷಾ ಏಜೆನ್ಸಿಗಳ ಅಜಾಗರೂಕತೆ ಹಾಗೂ ವೈಫಲ್ಯವಾಗಿದ್ದು, ಖಂಡಿಸುತ್ತದೆ” ಎಂದು ಆಗ್ರಹಿಸಿದರು.

“ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಆರಂಭದಿಂದಲೂ ಪರೀಕ್ಷೆಗಳ ದುರುಪಯೋಗಕ್ಕೆ ಕುಖ್ಯಾತವಾಗಿದ್ದು ಇದು ಮುಂದುವರಿಸಿಕೊಳ್ಳುತ್ತಲೇ ಬಂದು 2026ರ ಪರೀಕ್ಷೆಗಳ ನಿರ್ವಹಣೆಯಲ್ಲಿ ತನ್ನ ಅಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರದಿಗಳ ಪ್ರಕಾರ, ಒಟ್ಟು 720 ಅಂಕಗಳಿಗೆ ನಡೆದ ಪರೀಕ್ಷೆಯನ್ನು ಸುಮಾರು 600 ಅಂಕಗಳಿಗೆ ರಾಜಿ ಮಾಡಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗಿದೆ ಎನ್ನಲಾಗಿದ್ದು, ಇದು ಪರೀಕ್ಷೆಯ ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿದ್ದ 180 ಪ್ರಶ್ನೆಗಳಲ್ಲಿ ಸುಮಾರು 15 ಪ್ರಶ್ನೆಗಳು ಸಂಭಾವ್ಯ “ಗೆಸ್ ಪೇಪರ್” ಹೆಸರಿನಲ್ಲಿ ಮುಂಚಿತವಾಗಿ ಹಂಚಿಕೆಯಾಗಿದ್ದರೆ, ರಸಾಯನಶಾಸ್ತ್ರ ವಿಭಾಗದ ಸುಮಾರು 120 ಪ್ರಶ್ನೆಗಳು ಅಕ್ಷರಶಃ ಸೋರಿಕೆಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ ಎಂದು ತಿಳಿಸಿದೆ.
ಪ್ರತಿಷ್ಠಿತ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳಿಗೆ ಕೇಂದ್ರ ಸರ್ಕಾರದ ಕೇಂದ್ರೀಕರಣ ನೀತಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳ ವೈವಿಧ್ಯಮಯ ಅಗತ್ಯಗಳನ್ನು ನಿರ್ಲಕ್ಷಿಸಿ ಪರೀಕ್ಷಾ ವ್ಯವಸ್ಥೆಯನ್ನು ಕೇಂದ್ರೀಕರಿಸಿರುವುದರಿಂದ ಎನ್‌ಟಿಎ ಪರೀಕ್ಷೆಗಳಲ್ಲಿ ಲೋಪ, ಭ್ರಷ್ಟಾಚಾರ ಮತ್ತು ಪರೀಕ್ಷಾ ಮಾಫಿಯಾಗಳ ಹೆಚ್ಚಳ ಕಂಡುಬಂದಿದೆ ಎಂದು ಟೀಕಿಸಿದ್ದಾರೆ.
“ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಎಸ್‌ಎಫ್‌ಐ ಆಗ್ರಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾನಸಿಕ ಮತ್ತು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಳೆಯ ಸಿಂಚನಕ್ಕೆ ರೈತರ ಹರ್ಷ; ಬಿರುಗಾಳಿಗೆ ಬಾಳೆ ಅಡಿಕೆ ಹಾನಿ
“ಕೇಂದ್ರ ಸರ್ಕಾರ ತನ್ನ “ಅವೈಜ್ಞಾನಿಕ” ಪರೀಕ್ಷಾ ಕೇಂದ್ರೀಕರಣ ನೀತಿಯನ್ನು ಮರುಪರಿಶೀಲಿಸಿ, ಎನ್‌ಟಿಎಯ ಪ್ರಸ್ತುತ ಪರೀಕ್ಷಾ ನೀತಿಯನ್ನು ರದ್ದುಗೊಳಿಸಬೇಕು. ಎಲ್ಲೆಡೆ ಮರುಪರಿಶೀಲನೆ ನಡೆಸಿ ಎಲ್ಲೆಲ್ಲಿ ಸೋರಿಕೆಯಾಗಿದೆಯೋ ಅಲ್ಲಿ ಮಾತ್ರ ಪರೀಕ್ಷೆ ನಡೆಸುವ ಬಗ್ಗೆ ಪರಿಶೀಲಿಸಬೇಕು” ಎಂದು ಎಸ್‌ಎಫ್‌ಐ ದಾವಣಗೆರೆ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ವೇಳೆ ಜಿಲ್ಲಾ ಮುಖಂಡ ಸಂಜುನಾಯ್ಕ, ಜಿಲ್ಲಾ ಸಂಚಾಲಕ ಅನಂತರಾಜು, ಅಪ್ಪು, ಬಸವರಾಜ್, ಶರತ್, ದಯಾನಂದ, ಸಂತೋಷ್, ರಾಹುಲ್ ಸೇರಿದಂತೆ ಇತರರು ಹಾಜರಿದ್ದರು.




